ಮೊದಲ ಪ್ಯಾಂಟು ಮತ್ತು ಕಾಲೇಜು ಜೀವನಾರಂಭ

  • ಡಾ. ಅಜಕ್ಕಳ ಗಿರೀಶ ಭಟ್ಟ
  • ಅಂಕಣ: ಗಿರಿಲಹರಿ

www.bantwalnews.com

ಏ ಚಿಗುರು ಮೀಸೆ, ಒಳ್ಳೇ ಪ್ಯಾಂಟೂ ಶರ್ಟೂ ಹಾಕಿದ್ದೀರಾ, ಪ್ಯಾಂಟು ಶರ್ಟು ಜಾಡಾಮಾಲೀ ಹಾಕೂದಿಲ್ವಾ?

ಹೀಗೆ ಮತ್ತು ಇನ್ನೂ ಕೆಲವು ನುಡಿಮುತ್ತುಗಳುಳ್ಳ ಬೈಗಳನ್ನು ನಾನು ಮತ್ತು ನನ್ನೊಬ್ಬ ಗೆಳೆಯ ತಿಂದದ್ದು ಕಾಲೇಜಿಗೆ ಸೇರಿ ಕಾಲೇಜು ಆರಂಭವಾಗಿ ಮೊದಲ ದಿನವೋ ಎರಡನೇ ದಿನವೋ ಇರಬೇಕು. ಅದೇನೂ ನಮ್ಮ ಮುಗ್ಧ ಮನಸ್ಸಿನ ಮೇಲೆ ಘಾಸಿ ಮಾಡಲಿಲ್ಲ!

ನಮ್ಮ ಮನಸ್ಸು ಅಷ್ಟು ಮುಗ್ಧವೂ ಆಗಿದ್ದಿರಲಿಕ್ಕಿಲ್ಲ ಅನ್ನಿ. ಅಂತೂ ಆ ಸನ್ನಿವೇಶ ನಮಗೇನೂ ಮಾನಸಿಕವಾಗಿ ಕ್ಲೇಶವನ್ನೂ ಉಂಟುಮಾಡಲಿಲ್ಲ ಅಂತ ಈಗ ಅನಿಸುತ್ತದೆ. ಆದರೂ ಅದೊಂದು ರಮ್ಯವೇ ಅನ್ನಬಹುದಾದ ರೀತಿಯ ನೆನಪು ಮತ್ತು ಅನುಭವವಾಗಿ ನನ್ನೊಳಗೆ ಇದೆ. ಆ ಬೈಗಳು ತಿಂದ ನಾವಿಬ್ಬರುಮುಂದೆ ಹಲವು ವರ್ಷಗಳ ನಂತರವೂ ಅದನ್ನು ನೆನಪಿಸಿಕೊಂಡು ಖುಷಿಪಟ್ಟದ್ದಿದೆ.

ವಿವರಗಳನ್ನು ಹೇಳಲು ಸ್ವಲ್ಪ ಹಿಂದಿನಿಂದ ಅಂದರೆ ನಮ್ಮ ಹೈಸ್ಕೂಲ್ ದಿನಗಳಿಂದ ಆರಂಭಿಸುವುದು ಒಳ್ಳೆಯದು.

1980ರ ದಶಕದ ಮಧ್ಯಭಾಗದ ಚರಿತ್ರೆ ಇದು. ಹೈಸ್ಕೂಲಿನಲ್ಲಿ ಸುಮಾರು ಒಂಬತ್ತನೇ ತರಗತಿಗೆ ಬಂದಾಗ ನಾವು ಹೆಚ್ಚಿನ ಹುಡುಗರು ದೊಡ್ಡವರಾಗಿದ್ದುದರಿಂದ ಚಡ್ಡಿ ಹಾಕಿಕೊಂಡು ನಾಲ್ಕೈದು ಮೈಲು ದಾರಿಯಲ್ಲಿ ನಡೆದುಹೋಗುವುದು ನಮಗೆ ಒಗ್ಗುತ್ತಿರಲಿಲ್ಲ. ದೊಡ್ಡ ಚಡ್ಡಿಯ ಮೇಲಿನಿಂದ ಬಿಳಿ ಮುಂಡು ಉಟ್ಟುಕೊಂಡು ಹೋಗುತ್ತಿದ್ದೆವು.

ಚಡ್ಡಿ ಯೂನಿಫಾರಂ ಇದ್ದುದರಿಂದ ಶಾಲೆಗೆ ತಲುಪಿದ ನಂತರ ಮುಂಡು ಬಿಚ್ಚಿ ಡೆಸ್ಕಿನ ಒಳಗೆ ಇಡುತ್ತಿದ್ದೆವು. ಆಗ ನಮ್ಮ ತರಗತಿಯಲ್ಲಿ ಪ್ಯಾಂಟು ಇರುತ್ತಿದ್ದುದು ಕೆಲವೇ ಕೆಲವು ಮಂದಿಗೆ. ಅದರಲ್ಲೂ ಮುಖ್ಯವಾಗಿ ಅಣ್ಣನನ್ನೋ ಭಾವನನ್ನೋ ಫಾರಿನ್ನಿನಲ್ಲಿ ಹೊಂದಿದ್ದವರಿಗೆ. ಅವರಲ್ಲಿ ಬಣ್ಣಬಣ್ಣದ ಹೊಳೆಹೊಳೆವ ಹಾಗೂ ನೋಡಿದರೇ ಗೊತ್ತಾಗುವ ರೀತಿಯ ವಿಶಿಷ್ಟ ಫಾರಿನ್ ಅಂಗಿಗಳಿರುತ್ತಿದ್ದವು. ಹತ್ತನೇ ತರಗತಿ ಕೊನೆಗೆ ಗ್ರೂಪ್ ಪಟ ತೆಗೆವ ದಿನವಂತೂ ಅವರು ಎದ್ದು ಕಾಣುತ್ತಿದ್ದರು. ಆದರೆ ನಾವು ಗ್ರೂಪಿನಲ್ಲಿ ಹಿಂದೆ ನಿಂತು ಮುಖಾರವಿಂದವನ್ನು ಮಾತ್ರ ತೋರಿಸುತ್ತಿದ್ದುದರಿಂದ ನಾವು ಪ್ಯಾಂಟು ಹಾಕಲಿಲ್ಲವೆಂದು ಗ್ರೂಪ್ ಪಟ ನೋಡಿದ ಯಾರಿಗೂ ಗೊತ್ತಾಗುವ ಸಾಧ್ಯತೆಯಿಲ್ಲ ಅನ್ನುವುದೂ ನಮಗೆ ಗೊತ್ತ್ತಿದ್ದುದರಿಂದ ನಮ್ಮ ನೆಮ್ಮದಿಗೆ ಭಂಗವಿರಲಿಲ್ಲ.

ಹತ್ತನೇ ತರಗತಿ ಮುಗಿದಾಗ ನಮಗೆಲ್ಲ ವಿದ್ಯಾಭ್ಯಾಸದಲ್ಲಿ ಅದೊಂದು ದೊಡ್ಡ ಪಲ್ಲಟ. ಅಲ್ಲಿವರೆಗೆ ಶಾಲೆ. ಆನಂತರ ಕಾಲೇಜು. ಕಾಲೇಜಿಗೆ ಸೇರಿದ ನಂತರ ಯಾರಾದರೂ ಇವತ್ತು ಶಾಲೆಗೆ ರಜೆಯೋ? ಅಂತಲೋ ಅಥವಾ ಶಾಲೆ ಬಿಟ್ಟಿತೋ? ಎಂದು ಯಾರಾದರೂ ಕೇಳಿದರೆ ನಾನೀಗ ಶಾಲೆ ಅಲ್ಲ ಕಾಲೇಜು ಅಂತ ಮಕ್ಕಳು ಹೇಳಿಯಾರು.

ಹತ್ತನೇ ತರಗತಿ ಮುಗಿದ ನಂತರ ಕಾಲೇಜಿಗೆ ಹೋಗಬೇಕಾದರೆ ಪ್ಯಾಂಟು ಬೇಕಲ್ಲ? ರಜೆಯಲ್ಲಿ ಪುತ್ತೂರಿನ ಸಂಜೀವ ಶೆಟ್ಟರ ಅಂಗಡಿಗೆ ಹೋಗಿ ಒಳ್ಳೆಯದೇ ಅನ್ನಬಹುದಾದ ಪ್ಯಾಂಟು ಬಟ್ಟೆ ಖರೀದಿ ಮಾಡಿ ಟೈಲರಿನಲ್ಲಿ ಹೊಲಿಯಲು ಕೊಡಲು ಹೋದೆ. ಮುಂಡು ಉಟ್ಟು ಹೋಗಿದ್ದ ನನ್ನನ್ನು ನೋಡಿ ಟೈಲರು ಪ್ಯಾಂಟು ಹಾಕಿಕೊಂಡು ಬರಬೇಕಿತ್ತು, ಪ್ಯಾಂಟಿನಲ್ಲಿ ಬಂದರೆ ಅಳತೆ ತೆಗೆಯಲು ಒಳ್ಳೆದಾಗುತ್ತದೆ. ಹೀಗಾದರೆ ಫಿಟ್ಟಿಂಗ್ ಸರೀ ಬರೂದಿಲ್ಲ ಅಂತ ಹೇಳಿದ. ನಾನು ಹೆಹೆ ಅಂತ ಹುಳ್ಳಗೆ ನಕ್ಕಾಗ ಅವನಿಗೆ ಅಂದಾಜಾಗಿರಬೆಕು. ಸುರೂ ಹೊಲಿಸುವುದಾ, ತೊಂದರೆಯಿಲ್ಲ, ಮುಂಡು ಬಿಚ್ಚಿ ಅಂಗಿ ಮೇಲೆತ್ತಿ ಅಂತ ಹೇಳಿಅಳತೆ ತೆಗೆದು, ಹೇಳಿದ ಸಮಯಕ್ಕೇ ಹೊಲಿದು ಕೊಟ್ಟ. ಮನೆಗೆ ಬಂದು ಹಾಕಿ ನೋಡಿದರೆ ಅವನ ಭವಿಷ್ಯ ನಿಜವಾಗಿತ್ತು! ತೊಡೆಯೂ ಕುಂಡೆಯೂ ಭಯಂಕರ ಟೈಟು. ಆದರೂ ಅದನ್ನೇ ಮುಂದೆ ಎರಡು ವರ್ಷ ಉಪಯೋಗಿಸಿದ್ದೆ ಅನ್ನುವುದು ಬೇರೆ ಮಾತು.

ಹತ್ತನೇ ತರಗತಿ ಫಲಿತಾಂಶ ಬಂತು. ತರಗತಿಯಲ್ಲಿ ಬಹುಶಃ ಮೂರನೇ ಸ್ಥಾನ ನನಗೆ ಬಂದಿತ್ತು. ಹಾಗೆ ಹೇಳಿದರೆ ಹೆಚ್ಚು ಮರ್ಯಾದೆ ಸಿಕ್ಕೀತು. ಪರ್ಸೆಂಟೇಜು ಹೇಳಿದರೆ ಈ ಕಾಲದಲ್ಲಿ ನನ್ನ ಮರ್ಯಾದೆ  ಹೋದೀತು. ಮೇಲೆ ಹೇಳಿದ ನನ್ನ ಗೆಳೆಯನಿಗೇ ಫಸ್ಟು ಪ್ಲೇಸು. ಅಂತೂ ಪುತ್ತೂರಿನ ಫಿಲೋಮಿನಾ ಕಾಲೇಜಿಗೆ ಅರ್ಜಿ ಹಾಕಿ ಆಯಿತು. ಜೊತೆಗೆ ಇರಲಿ ಅಂತ ಸರಕಾರಿ ಜೂನಿಯರ್ ಕಾಲೇಜಿಗೂ ಅರ್ಜಿ ಹಾಕಿದ್ದೆ. ಅಂದಿನ ರೂಢಿಯಂತೆ ಫಿಲೋಮಿನಾದಿಂದ ಯೂ ಆರ್ ಪ್ರೊವಿಶನಲಿ ಸೆಲೆಕ್ಟೆಡ್.. ..ಇಂಥಾ ದಿನ ಬನ್ನಿ ಅಂತ ಪೋಸ್ಟ್ ಕಾರ್ಡ ಬಂತು. ಹೇಳಿದ ದಿನ ಹೊಸ ಪ್ಯಾಂಟು ಧರಿಸಿ ಅಪ್ಪನ ಜೊತೆ ಪ್ರಾಂಶುಪಾಲರ ಚೇಂಬರಿಗೆ ಹೋದಾಗ ಹೆಚ್ಚು ಮಾರ್ಕಿನವರು ಬೇರೆ ತುಂಬ ಮಕ್ಕಳು ಇದ್ದಾರೆ, ಸೀಟು ಕಷ್ಟ, ಬೇರೆಲ್ಲಾದರೂ ಅರ್ಜಿ ಹಾಕಿದ್ದೀಯಾ? ಅಂತ ಪ್ರಾಂಶುಪಾಲರು ಕೇಳಿದರು. ಸರಕಾರಿ ಕಾಲೇಜಿಗೆ ಅರ್ಜಿ ಹಾಕಿದ್ದೆನಾದರೂ ಇಲ್ಲ ಎಂದೆ. ಪ್ರಾಂಶುಪಾಲರು ಅವರ ಪಕ್ಕದಲ್ಲಿ ಕೂತಿದ್ದವರಲ್ಲಿ ಐ ಕ್ಯಾನ್ ಅಂಡರ್ ಸ್ಟ್ಯಾಂಡ್ ಫ್ರಂ ಸೈಕಾಲಜಿ, ಹಿ ಹ್ಯಾಸ್ ಅಪ್ಲೈಡ್ ಸಮ್ವೇರ್ ಎಲ್ಸ್ ಅಂತೇನೋ ಹೇಳಿದರು. ನಾನು ಶುದ್ಧ ಕನ್ನಡ ಮೀಡಿಯಮ್ ವಿದ್ಯಾರ್ಥಿಯಾಗಿದ್ದರೂ ಅದಾಗಲೇ ಸುಮಾರು ಆರೇಳು ವರ್ಷಗಳ ರೇಡಿಯೋ ಕಾಮೆಂಟರಿ ಅನುಭವದಿಂದಾಗಿ ಹಿಂದಿ ಮತ್ತು ಇಂಗ್ಲೀಷ್ ನನಗೆ ಅರ್ಥವಾಗುತ್ತಿತ್ತು. ಯಬ್ಬ ಇವರ ಸೈಕಾಲಜಿಯೇ! ನನಗೆ ಸೀಟು ಸಿಗಲಿಕ್ಕಿಲ್ಲ ಅಂತ ಮನಸ್ಸಿನಲ್ಲೇ ಅಂದುಕೊಂಡೆ. ಈ ಕಾಲೇಜಿನಲ್ಲಿಯೇ ಸೀಟು ಕೊಟ್ರೆ ಉಪಕಾರವಾಗುತ್ತಿತ್ತು ಅಂತೇನೋ ಅಪ್ಪ ಹೇಳಿರಬೇಕು, ಸರಿಯಾಗಿ ನೆನಪಿಲ್ಲ. ಅಂತೂ ಸಿಕ್ಕಿದರೆ ದೊಡ್ಡ ಉಪಕಾರವಾಗುತ್ತದೆಯೆಂಬ ಭಾವವನ್ನು ವ್ಯಕ್ತಪಡಿಸಿದೆವು ಅನಿಸುತ್ತದೆ. ಯಾವುದಕ್ಕೂ ಒಂದುವಾರ ಕಳೆದ ನಂತರ ಬಂದು ವಿಚಾರಿಸಿ, ನಿಘಂಟಿಲ್ಲ ಅಂತೇನೋ ಹೇಳಿ ಕಳಿಸಿದರು.

ಎರಡನೇ ಬಾರಿ ಹೋದಾಗ ಪ್ರಾಂಶುಪಾಲರು ಸೀಟು ಕೊಟ್ಟು ಫೀಸು ಕಟ್ಟಲು ಹೇಳಿದರು. ಸೀಟು ಸಿಕ್ಕಿದ ಖುಷಿಯಲ್ಲಿ ಮನೆಗೆ ಬಂದಾಗ, ಅಂದು ನಿರಾಕರಿಸಿದವರು ಇಂದು ಸುಲಭವಾಗಿ ಪ್ರವೇಶ ನೀಡಲು ಕಾರಣವೇನು ಎನ್ನುವುದನ್ನು ನನ್ನ ಅಜ್ಜಿ ಹೀಗೆ ಊಹಿಸಿದ್ದರು. ಮೊದಲ ಬಾರಿ ಪ್ಯಾಂಟು ಧರಿಸಿ ಹೋಗಿದ್ದೆ. ಈ ಬಾರಿ ಮುಂಡು ಉಟ್ಟು ಹೋದೆಯಲ್ಲ, ಅದಕ್ಕೆ ಸೀಟು ಕೊಟ್ಟಿದ್ದಾರೆ ಅಂದರು. ಅದು ಹೌದು, ಈ ಬಾರಿ ಮುಂಡು ಉಟ್ಟು ಹೋಗಿದ್ದೆ. ಅಜ್ಜಿಯ ಊಹೆ ಸರಿಯೋ ತಪ್ಪೋ ಯಾರಿಗೆ ಗೊತ್ತು? ಆದರೂ ಆ ಊಹೆಯ ಹಿಂದೆ ಅಜ್ಜಿಯ ಯಾವೆಲ್ಲ ತರ್ಕಗಳು, ಮೌಲ್ಯಗಳು ಇದ್ದಿರಬಹುದು ಅಂತೆಲ್ಲ ಊಹಿಸುತ್ತ ಕೂತರೆ ಈಗಲೂ ನನಗೆ ಹೊತ್ತು ಹೋದೀತು.

ಮತ್ತೆ ಆರಂಭ ಮಾಡಿದಲ್ಲಿಗೆ ಬರುವುದಾದರೆ, ಕಾಲೇಜು ಆರಂಭವಾದ ಮೊದಲ ದಿನವೋ ಎರಡನೇ ದಿನವೋ ಸರಿಯಾಗಿ ನೆನಪಿಲ್ಲ, ಅಂತೂ ಬೆಳಗ್ಗೆ ಕನ್ನಡ ಪಿರಿಯಡ್ ಇತ್ತು. ಸಹಜವಾಗಿಯೇ ಪಿ ಯು ಸಿ ತರಗತಿಯಲ್ಲಿ ಬೇರೆಯವರದ್ದೆಲ್ಲ ಪರಿಚಯವಾಗಿರದೇ ಇದ್ದುದರಿಂದ ನಾನು ಮತ್ತು ಹೈಸ್ಕೂಲಿನಲ್ಲಿ ನನ್ನ ಸಹಪಾಠಿಯೂ ಗೆಳೆಯನೂ ಆಗಿದ್ದವನು ಹತ್ತಿರ ಹತ್ತಿರ ಕೂತಿದ್ದೆವು. ಪ್ರಾಧ್ಯಾಪಕರು ಹಾಜರಿ ಕರೆಯುತ್ತಿದ್ದರು. ಕರೆಯುತ್ತಾ ಕರೆಯುತ್ತಾ ಕೃಷ್ಣಪ್ಪ ಅಂತ ಕರೆದರು, ಬಳಿಕ ತಿದ್ದಿಕೊಂಡು ಕೃಷ್ಣಪ್ರಭಾ ಅಂತ ಸರಿಮಾಡಿ ಕರೆದರು. ಆಗ ನನಗೂ ನನ್ನ ಈ ಗೆಳೆಯನಿಗೂ ನಗುಬಂತು. ಸಶಬ್ದವಾಗಿಯೇನೂ ನಗಲಿಲ್ಲ. ಅದು ಹಾಜರಿ ಕರೆಯುತ್ತಿದ್ದ ಪ್ರಾಧ್ಯಾಪಕರಿಗೆ ಬಹುಶಃ ಗೊತ್ತಾಗಿರಲಿಕ್ಕೂ ಇಲ್ಲ. ಸದರಿ ಕೃಷ್ಣಪ್ರಭಾ ಎಸ್‌ಸರ್ ಅಂತ ಹೇಳುವುದಕ್ಕೂ ನಾವು ತಲೆಕೆಳಗೆ ಹಾಕಿ ನಗುವುದಕ್ಕೂ ಹೊರಗೆ ವರಾಂಡಾದಲ್ಲಿ ಬೆಳಗ್ಗಿನ ರೌಂಡ್ ಬರುತ್ತಿದ್ದ (ಪಾಸ್ಡ್ ಅವೇ ಆಗುತ್ತಿದ್ದ?) ಪ್ರಾಂಶುಪಾಲರು ಕಿಟಕಿಯ ಮೂಲಕ ನಮ್ಮಿಬ್ಬರನ್ನು ನೋಡುವುದಕ್ಕೂ ಸರಿಹೋಯಿತು. ಸೀದ ಒಳಗೆ ಬಂದರು. ನಮ್ಮನ್ನು ನಿಲ್ಲಿಸಿದರು. ಯಾವ ಹೈಸ್ಕೂಲಿಂದ ಬಂದವರು ಎಂದು ಕೇಳಿದರು. ಹೇಳಿದೆವು. ಹೈಸ್ಕೂಲಿನ ಬುದ್ಧಿ ಎಲ್ಲ ಇಲ್ಲಿ ನಡೆಯುವುದಿಲ್ಲ ಅಂತ ಏನೋ ಒಂದೆರಡು ಮಾತು ಬೈದು ಹೊರಗೆ ಹೋದರು. ಪ್ರಾಂಶುಪಾಲರು ಹೋಗುವ ಮೊದಲು ನಮ್ಮನ್ನು ಕೂರಲು ಹೇಳಲಿಲ್ಲ. ಹಾಗಾಗಿ ಅರ್ಧ ನಿಮಿಷ ಆ ಬಗ್ಗೆ ಸಂದಿಗ್ಧವಾಗಿ ಕೊನೆಗೆ ಪರಸ್ಪರ ಕೈಯಲ್ಲಿ ಮುಟ್ಟಿ ಸಂಜ್ಞೆ ಮಾಡಿ ಕೂತುಕೊಂಡೆವು. ಇತ್ತ ಹಾಜರಿ ಮುಂದುವರಿಯುತ್ತಿತ್ತು. ಹಾಜರಾತಿ ಮುಗಿಯಿತು. ಪ್ರಾಧ್ಯಾಪಕರು ನೇರವಾಗಿ ಏಳೆಂಟು ಸಾಲುಗಳಷ್ಟು ಹಿಂದೆ ಕುಳಿತಿದ್ದ ನಮ್ಮ ಬಳಿ ಬಂದವರು ಏ ಚಿಗುರುಮೀಸೆ ಅನ್ನುತ್ತಾ ನನ್ನ ಗಡ್ಡ/ಗಲ್ಲಕ್ಕೆ ಕೈಹಾಕಿ ಮೇಲೆತ್ತಿ ನಿಲ್ಲುವಂತೆ ಮಾಡಿದರು. ಯಾಕೆ ಕೂತದ್ದು? ಅಂತ ತಮ್ಮದೇ ಕಂಚಿನ ಕಂಠದಲ್ಲಿ ಕೇಳಿದರು. ಅವರು ಹೋದರು ಅಂತ…-ಹೀಗೆ ಏನೋ ಮುರುಮುರು ಅಂದೆವು. ಅವರು ಹೋದ ನಂತರವೂ ನೀವು ನಿಂತಿದ್ದಿರಲ್ವೇ? ಮತ್ತೆ ಯಾಕೆ ಕುಳಿತದ್ದು? ಅಂತ ಕೇಳಿದರು. ಪ್ರಾಂಶುಪಾಲರು ಹೊರಗೆ ಹೋದ ಕೂಡಲೆ ನಾವು ಕೂರುತ್ತಿದ್ದರೆ ನಮ್ಮ ತಪ್ಪು ಸ್ವಲ್ಪ ಕಡಿಮೆಯಿರುತ್ತಿತ್ತು. ನಮ್ಮನ್ನು ತರಗತಿ ಕೋಣೆಯ ಹಿಂದೆ ಹೋಗಿ ಗೋಡೆಗೆ ಮುಖ ಮಾಡಿ ನಿಲ್ಲಲು ಹೇಳಿದರು. ಪ್ಯಾಂಟು ಶರ್ಟು ಹಾಕಿದ ಕೂಡಲೆ ದೊಡ್ಡ ಜನ ಆಗುವುದಿಲ್ಲ ಇತ್ಯಾದಿ ಸುಮಾರು ಐದಾರು ನಿಮಿಷ ಸಹಸ್ರನಾಮಾರ್ಚನೆ ಮಾಡಿ ಯಥಾಸ್ಥಾನದಲ್ಲಿ ಕೂರಿಸಿದರು. ಅವರಿಗೆ ಅಷ್ಟು ಸಿಟ್ಟು ಬಂದ ಕಾರಣವನ್ನು ಊಹಿಸುವುದು ಕಷ್ಟವಲ್ಲ. ನಾವು ನೆಗಾಡಿದ್ದು ತಪ್ಪಾಗಿರಲಿಕ್ಕಿಲ್ಲ. ಅದನ್ನು ಪ್ರಾಂಶುಪಾಲರು ನೋಡಿದ್ದು ತಪ್ಪೇ. ಅಲ್ಲದೆ ಬಂದ ಆರಂಭದ ದಿನಗಳಲ್ಲೇ ಕಂಟ್ರೋಲ್ ಮಾಡದಿದ್ರೆ ಕಷ್ಟವಾದೀತು ಅಂತಲೂ ಅವರ ಪ್ರಿಕಾಶನರಿ ಮೆಜ಼ರ್ ಇರಬಹುದು. ಅದನ್ನು ಆಗಲೇ ನಾವು ಊಹಿಸಿದ್ದೆವು ಅನಿಸುತ್ತದೆ. ಹೀಗಾಗಿ ಅವರ ಬಗ್ಗೆ ನಮಗೆ ಕಹಿಭಾವನೆಯೇನೂ ಇರಲಿಲ್ಲ. ಆದರೆ ಅವರು ಸಲಿಗೆ ನಿಡುವವರು ಅಲ್ಲವಾದ್ದರಿಂದ ಅವರಲ್ಲಿ ಪದವಿ ಮುಗಿವವರೆಗೂ ಮಾತಾಡಿದ್ದು ಅಂತ ಇರಲಿಲ್ಲ ನಾನು. ಅವರಲ್ಲಿ ಅಂತಲ್ಲ, ಪೀಯೂಸೀಯಿಂದ ಪದವಿವರೆಗಿನ ನನ್ನ ಐದು ವರ್ಷಗಳ ಕಾಲೇಜು ಜೀವನದಲ್ಲಿ ಒಂದೇ ಒಂದು ಬಾರಿಯೂ ಸ್ಟಾಫ್ ರೂಮಿನೊಳಗೆ ಹೋಗಿ ಪ್ರಾಧ್ಯಾಪಕರಲ್ಲಿ ಮತಾಡಿದ್ದೂ ಇಲ್ಲ, ಡೌಟು ಕೇಳಿದ್ದೂ ಇಲ್ಲ! ಬಹುಶಃ ನಮಗೆಲ್ಲ ಡೌಟು ಬರುತ್ತಿದ್ದುದೇ ಡೌಟು! ಮುಂದೆ ನಾನು ಕನ್ನಡ ಎಂಎ ಮುಗಿಸಿ ಒಂದು ವರ್ಷವಾದಾಗ, ಅದೇ ಕಾಲೇಜಿನಲ್ಲಿ ಹುದ್ದೆಯೊಂದು ಖಾಲಿಯಾದಾಗ ಕೇಳಲೆಂದು ಹೋಗಿದ್ದೆ. ಜಗಲಿಯಲ್ಲಿ ಅದೇ ಕನ್ನಡ ಪ್ರಾಧ್ಯಾಪಕರು ಸಿಕ್ಕಿದಾಗ ನಮಸ್ಕಾರ ಮಾಡಿದೆ. ಏನು ಮಾಡುತ್ತಿದ್ದಿ? ಎಂದು ಕೇಳಿದರು. ಬದ್ರಿಯಾ ಕಾಲೇಜಿನಲ್ಲಿ ಉಪನ್ಯಾಸಕನಾಗಿರುವ ಬಗ್ಗೆ ಹೇಳಿದೆ. ಪುಡ್ಚಿನ ಮುಳ್ಳಾಂಗಿಲ್ ಗಟ್ಟಿ ಪುಡ್ಚೊಣು ಅಂತೇನೋ ಒಂದು ಮಲೆಯಾಳಿ ಗಾದೆ ಹೇಳಿದರು. ನನಗೆ ಮಲಯಾಳ ಶಬ್ದಗಳು ಸರಿಯಾಗಿ ಗೊತ್ತಾಗಲಿಲ್ಲ. ಅರ್ಥ ಆಯಿತು. ಹಿಡಿದುಕೊಂಡದ್ದು ಮುಳ್ಳ್ಳಾದರೂ ಇನ್ನೊಂದು ಗಟ್ಟಿ ಆಧಾರ ಸಿಗುವವರೆಗೆ ಬಿಡಬಾರದು ಎಂಬರ್ಥದಲ್ಲಿ ಹೇಳಿದ್ದು ಅವರು. ಇಲ್ಲಿ ಸಿಗುತ್ತದೆ ಅಂತ ಅಲ್ಲಿ ಬಿಟ್ಟುಬಿಡಬೇಡ ಎನ್ನುತ್ತಾ ಇಲ್ಲಿ ನಿನಗೆ ಸಿಗಲಾರದು ಎನ್ನು, ಅವರಿಗಿದ್ದ ಮಾಹಿತಿಯ ಮುನ್ಸೂಚನೆಯನ್ನೂ ನೀಡಿ ಉಪಕಾರ ಮಾಡಿದರು.

ನಮಗೆ ಬೈಗಳು ಸಿಗಲು ಕಾರಣವಾದ ಹೆಸರು ಹೊತ್ತ ಡಾ. ಕೃಷ್ಣಪ್ರಭಾ(ಈಗ ನನ್ನ ಹಾಗೆ ಅಸೋಸಿಯೇಟ್ ಪ್ರೊಫೆಸರು)ಮುಂದಿನ ಬಾರಿ ಸಿಕ್ಕಿದಾಗ ಮತ್ತೆ ನೆನಪಿಸಿ ಬೈಯಬೇಕಾಗಿದೆ. ನನ್ನೊಂದಿಗೆ ಬೈಗಳು ತಿಂದ ಡಾ. ಚಂದ್ರಶೇಖರನ (ಇವನೂ ಅಸೋಸಿಯೇಟು ಪ್ರೊಫೆಸರು) ಜೊತೆ ಚಹಾ ಕುಡಿಯುತ್ತ ಇದನ್ನೆಲ್ಲ ಮತ್ತೊಮ್ಮೆ ನೆನಪು ಮಾಡಿಕೊಂಡು ನಗಬೇಕಾಗಿದೆ. ಕಾಯುತ್ತಿದ್ದೇನೆ.

About the Author

Dr. Ajakkala Girish Bhat
ವೃತ್ತಿಯಲ್ಲಿಕನ್ನಡ ಬೋಧಕ. ಬಂಟ್ವಾಳ ಸರಕಾರಿ ಪದವಿ ಕಾಲೇಜು ಪ್ರಾಂಶುಪಾಲ. ಇಂಗ್ಲಿಷನ್ನುಪಳಗಿಸೋಣ, ಬುದ್ಧಿಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ, ಅಸತ್ಯ ಅಥವಾ ಸತ್ಯ?, ಮುಂತಾದ ಹದಿನಾರು ಪುಸ್ತಕಗಳು ಪ್ರಕಟವಾಗಿವೆ. ವಿವಿಧ ಗೋಷ್ಠಿ, ಸಮ್ಮೇಳನಗಳಲ್ಲಿ ಪ್ರಬಂಧ, ವಿಚಾರ ಮಂಡಿಸಿದ್ದಾರೆ.

Be the first to comment on "ಮೊದಲ ಪ್ಯಾಂಟು ಮತ್ತು ಕಾಲೇಜು ಜೀವನಾರಂಭ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*