ವಿಶೇಷ ಸೃಷ್ಟಿಗಳ ಲೋಕದಲ್ಲಿ -ಅಂಕಣ 5 : ಅಂಕಣಕಾರನಾಗಿ ಅಪರ ಬಡ್ತಿ

ಪದ್ಯಾಣ ಗೋಪಾಲಕೃಷ್ಣ (1928-1997)

ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದವರು ಪದ್ಯಾಣ ಗೋಪಾಲಕೃಷ್ಣ (1928-1997). ಪ.ಗೋ. ಎಂದೇ ಚಿರಪರಿಚಿತರಾಗಿದ್ದ ಅವರು, ಕನ್ನಡದ ಪ್ರಸಿದ್ಧ ದಿನಪತ್ರಿಕೆಗಳಲ್ಲಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಕೆಲಸ ಮಾಡಿದವರು. ನೇರ, ನಿಷ್ಠುರ ನಡೆಯ ಪ.ಗೋ. ಅವರು ಪತ್ರಕರ್ತನಾಗಿ ವೃತ್ತಿಜೀವನದುದ್ದಕ್ಕೂ ಸಿದ್ಧಾಂತ ಹಾಗೂ ಪ್ರಾಮಾಣಿಕತೆಯ ಹಾದಿ ಹಿಡಿದಿದ್ದರು. ವೃತ್ತಪತ್ರಿಕಾ ಜಗತ್ತಿನ ಎಲ್ಲ ಮುಖಗಳ ಅನುಭವವನ್ನು ವೃತ್ತಿನಿರತ ಪತ್ರಿಕೋದ್ಯೋಗಿಯಾಗಿ ಕಂಡ ನಾನಾ ಮುಖಗಳೂ, ಅನುಭವಿಸಿದ ನೋವು, ನಲಿವುಗಳನ್ನು ನಿರ್ಮೋಹದಿಂದ, ವಸ್ತುನಿಷ್ಠವಾಗಿ ಬರೆದ ವಿಶೇಷ ಸೃಷ್ಟಿಯ ಲೋಕದಲ್ಲಿ ವೃತ್ತಪತ್ರಿಕೆಗಳ ಕಾಲಂ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟ ಬರವಣಿಗೆ.  ಇದು ಪ.ಗೋ. ಆತ್ಮಕತೆಯ ಭಾಗವೂ ಹೌದು. 2005ರಲ್ಲಿ ಪುಸ್ತಕವಾಗಿಯೂ ಪ್ರಕಟಗೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯನಡ್ಕದಲ್ಲಿ ಜನಿಸಿದ ಪ.ಗೋ, ಅವರ ಈ ಕೃತಿಯನ್ನು ಬಂಟ್ವಾಳನ್ಯೂಸ್ ಓದುಗರಿಗಾಗಿ ಒದಗಿಸಿಕೊಟ್ಟವರು ಗಲ್ಫ್ ನಲ್ಲಿ ಉದ್ಯೋಗಿಯಾಗಿರುವ  ಪ.ಗೋ ಅವರ ಪುತ್ರ ಸಾಹಿತ್ಯಪ್ರೇಮಿ ಪದ್ಯಾಣ ರಾಮಚಂದ್ರ. (ಪ.ರಾಮಚಂದ್ರ).

ವಿಶೇಷ ಸೃಷ್ಟಿಗಳ ಲೋಕದಲ್ಲಿ 5ನೇ  ಕಂತು ಇಲ್ಲಿದೆ…

ಗೋಡಂಬಿ ಗಾತ್ರದ 72 ಫೊಂಟ್ ಅಕ್ಷರಗಳಲ್ಲಿ ಎದ್ದು ಕಾಣುತ್ತಿದ್ದ  ಎಂಟು ಕಾಲಂಗಳಿಗೆ ಹರಡಿದ ತಲೆಹರಹ ಮೊದಲನೆ ಸಾಲಿನದು. ಅನಂತರದ ಸಾಲುಗಳ ಅಕ್ಷರಗಳು ಕ್ರಮಾಗತವಾಗಿ ಸಣ್ಣಗಾತ್ರದವು.
 ಅವುಗಳ ಕೆಳಗೆ, 20 ಫೊಂಟ್ ಅಕ್ಷರಗಳಲ್ಲಿ ನಾಲ್ಕು ಕಾಲಂ ವಿಸ್ತಾರವಾಗಿ, ವರದಿಯ ಮುಖ್ಯಾಂಶಗಳೆಲ್ಲಾ ಅಡಕಗೊಂಡಿದ್ದ ಒಂದು ವಾಕ್ಯವೃಂದ (ಪಾರಾಗ್ರಾಫ್ ಎನ್ನಬಹುದೆ?)
 ಅನಂತರ, ಚುಟುಕಾಗಿಯೇ ನಿರೂಪಿಸಿದ್ದ ಭಾಷಣದ ಆಯ್ದ ವಾಕ್ಯಗಳು.
 ಅವುಗಳನ್ನೊಳಗೊಂಡ ಅಂದು ಸಂಜೆಯ ವಿಶ್ವಕರ್ನಾಟಕ, ಆಳುವ ಸರಕಾರವನ್ನು ಧೈರ್ಯವಾಗಿ ಟೀಕಿಸಿದ್ದ ಎಂ.ವಿ.ಯವರ ನುಡಿಗಳಿಂದಾಗಿ, ಹಲವರ ಗಮನವನ್ನು ವಿಶೇಷವಾಗಿ ಸೆಳೆದಿತ್ತು.
 ಸರಕಾರವನ್ನು ಅಷ್ಟು ಕಟುವಾಗಿ – ಅದೂ ಮುಖ್ಯಮಂತ್ರಿಯವರ ಎದುರಿಗೇ- ಟೀಕಿಸುವ ಕ್ರಮ ಆಗಿನ್ನೂ ಆರಂಭವಾಗಿರಲಿಲ್ಲ.
 ನನ್ನ ವರದಿ ಅಷ್ಟೊಂದು ಪ್ರಾಮುಖ್ಯವಾಗಿ ಪ್ರಕಟವಾಗಬಹುದೆಂಬ ಕಲ್ಪನೆಯೂ ಇದ್ದಿರದ ನಾನು, ಪತ್ರಿಕೆಯ ಪ್ರತಿಯನ್ನು ಕಂಡಾಗ ಒಮ್ಮೆಲೇ ಉಬ್ಬಿಹೋದೆ. ಆದರೆ ಮರುಕ್ಷಣದಲ್ಲಿ-
 ಬರೆದು ಮುಗಿಸುತ್ತಿದ್ದ ಹಾಗೆ ಹಾಳೆಗಳನ್ನು ನನ್ನಿಂದ ಸೆಳೆದುಕೊಂಡು, ಪರಿಶೀಲಿಸಿ,ತಿದ್ದಿ ಮುಂದಕ್ಕೆ ಕಳುಹಿಸುತ್ತಿದ್ದ ಕು.ವೆಂ.ರವರ ಕಾರಣಕರ್ತೃತ್ವದ ನೆನಪು ಬಂತು. ಉಬ್ಬುತ್ತಿದ್ದ ಬಲೂನ್ ಟುಸ್ ಎಂದಿತು.
 ವರದಿಯನ್ನು ತೀಡಿ,ಒಪ್ಪಗೊಳಿಸಿ, ಸಲ್ಲಬೇಕಾದ ಪ್ರಾಮುಖ್ಯತೆ ನಿರ್ಧರಿಸಿ, ನಿರ್ದಿಷ್ಟ ಕಾಲಮಿತಿಯ (ಡೆಡ್ ಲೈನ್ ಅಂದುಕೊಂಡಿದ್ದೇನೆ) ಒಳಗೆ ಅದನ್ನು ಅಚ್ಚುಕೂಟದ ಮೊಳೆಗಳ ಕೋಣೆಗೆ ತಲುಪಿಸಿದ ಸಮರ್ಥ ನಾನಲ್ಲವೆಂಬ ಸತ್ಯ ಕಣ್ಣೆದುರಿಗೆ ಮೂಡಿತು.
 ಹೆಡಿಂಗ್ ಕೊಡ್ತೀರಾ ಎಂದು ಕೇಳಿಕೊಳ್ಳುವ ಸಂದರ್ಭವೇ ಅಂದು ಬಂದಿರಲಿಲ್ಲ. ಅವರಾಗಿಯೇ ಬೇರೊಂದು ಕಾಗದದಲ್ಲಿ ಶೀರ್ಷಿಕೆ ಬರೆದು, ಮೊಳೆಗಾತ್ರ ಗುರುತಿಸಿ, ಮುಂದಾಗಿಯೇ ಕಳುಹಿಸಿದ್ದರು. ಭಾಷಣದ ವಾಕ್ಯಗಳ ಎಡೆಯಲ್ಲಿ ‘ಅಧಿಕ’ ಉತ್ಸಾಹದಿಂದ ತುರುಕಿದ್ದ ನನ್ನ ಸ್ವಂತ ಅಭಿಪ್ರಾಯದ ವಿಶೇಷಣಗಳನ್ನು ನಿರ್ದಾಕ್ಷಿಣ್ಯವಾಗಿ ಕತ್ತರಿಸಿದ್ದರು. ವರದಿಯ ಬರಹ ಕೊನೆಮುಟ್ಟುವ ಮೊದಲೇ ನನ್ನನ್ನು ತಡೆದು -ಇಷ್ಟು ಸಾಕು, ಈಗ ಹೋಗು, ಊಟ ಮಾಡಿ ಬಾ- ಎಂದು ಕಳುಹಿಸಿದ್ದರು. ಹಿಂದಿರುಗಿ ಬಂದಾಗ ಕು.ವೆಂ. ಕಚೇರಿಯಲ್ಲಿ ಕಾಣಿಸಲಿಲ್ಲ.
 ಅವರು ಎದುರಿಗೆ ಇಲ್ಲದ ಕಾರಣ, ನನ್ನ ವರದಿಯನ್ನು – ಗ್ರಾಮಾಂತರ ಸುದ್ದಿಗಳ ಪರಿಷ್ಕರಣೆಯ ಎಡೆಯಲ್ಲಿ ಆಗಾಗ – ತಿರುತಿರುಗಿ ಹಲವು ಬಾರಿ ಓದಿಕೊಂಡು ಸ್ವಯಂಶ್ಲಾಘನೆ ಮಾಡಿಕೊಳ್ಳುವ ಅವಕಾಶ ಮಾಡಿಕೊಂಡೆ.
 ಸಂಜೆಯಾಗುತ್ತಿದ್ದಂತೆ ಕಾರ್ಯಾಲಯಕ್ಕೆ ಬಂದವರೊಬ್ಬರು ಕಾಫಿಗೆ ಕರೆದಾಗ ಅವರ ಜೊತೆ ಹೋಟೆಲಿಗೆ ಹೋಗಿ ಬಂದೆ. ಆಗ, ತನ್ನ ಆಸನದಲ್ಲಿ ಕುಳಿತು ದೂರವಾಣಿಯಲ್ಲಿ ಮಾತನಾಡುತ್ತಿದ್ದ ವೆಂಕಣ್ಣನ (ಆ ಹೊತ್ತಿನಲ್ಲಿ) ಅನಿರೀಕ್ಷಿತ ದರ್ಶನವಾಯಿತು.
 “ಇನ್ನೇನೂಂತ ಅಂದುಕೊಂಡ್ರಿ? ‘ಸ್ಕೂಪ್’ ಮಾಡೋವಂಥಾ ಹುಡುಗರನ್ನೇ ನಾವು ರಿಪೋರ್ಟಿಂಗಿಗೆ ಕಳ್ಸೋದು… ಏನು? ದಿನಕ್ಕೊಂದೇ?… ಸಾಧ್ಯವಾದ್ರೆ ಮಾಡೋಣಂತೆ… ಥ್ಯಾಂಕ್ಯೂ” ಎಂದವರೇ ಫೋನ್ ಕೆಳಗಿಟ್ಟರು. ‘ಯಾರ ಫೋನ್ ವೆಂಕಣ್ಣ?’ ಎಂದುದಕ್ಕೆ -‘ಜನವಾಣಿಯ(ಸಂಪಾದಕ) ಸೋಮಯಾಜಿಯವರದು’ ಎಂಬ ಚುಟುಕು ಉತ್ತರವಿತ್ತರು. ಸಮೀಪಕ್ಕೆ ಕರೆದು –
 ಫಂಕ್ಷನ್ನಿನಲ್ಲಿ ಬೇರೆ ರಿಪೋರ್ಟರ್ ಯಾರೂ ಎಂ.ವಿ. ಮಾತ್ನಾಡೋವರೆಗೆ ನಿಲ್ನಿಲ್ಲಲ್ಲ್ವಾ? ಎಂದಾಗ ತಲೆಯಾಡಿಸಿದೆ.
 “ನೋಡು,ನೀನು ಬೇರೆಯವರ ಅಭ್ಯಾಸ ಗೊತ್ತಿಲ್ಲದ ಕಾರಣ ಕೊನೆಯವರೆಗೂ ಅಲ್ಲೇ ಉಳಿದೆ. ಹಾಗಾಗಿ ನಿನಗೊಂದು ಸ್ಕೂಪ್ ಮಾಡುವ ಅವಕಾಶ ಸಿಕ್ಕಿತು. ಆದರೆ ಯಾವಾಗಲೂ ಹಾಗೆ ಸಿಕ್ಕೋಲ್ಲ. ಆಗ, ಬೇರೆಯವರು ಯಾವ ಪಾಯಿಂಟ್ ಮಿಸ್ ಮಾಡಬಹುದೂಂತ ಲೆಕ್ಕ ಹಾಕೋದ್ರಲ್ಲೇ ನಿನ್ನ ಎನರ್ಜಿ ಎಲ್ಲಾ ವೇಸ್ಟ್ ಆಗಿರುತ್ತದೆ. ಆ ಕಡೆ ಈಕಡೆ ನೋಡಿ. ಏನಾದರೂ ಬಾಕ್ಸ್ ಐಟಮ್ ಹುಡುಕುತ್ತಾ ಕೂತುಕೊಳ್ಳೋದರಲ್ಲೂ ಸಮಯ ಹಾಳಾಗುತ್ತದೆ. ಅವೆಲ್ಲಾ ಆತುರಕ್ಕೆ ಆಗುವ ಕೆಲಸಗಳಲ್ಲ, ಅನುಭವದಿಂದಲೇ ಅಭ್ಯಾಸವಾಗುವವು. ಅದುವಲ್ಲದೆ, ರಿಪೋರ್ಟಿನಲ್ಲಿ ನಿನ್ನ ಕಮೆಂಟ್ಸ್ ಸೇರಿಸೋದೂ ತಪ್ಪು. ಅದೇನಿದ್ದರೂ ನಿನ್ನ ಮೇಲಿನವರ ಜವಾಬ್ದಾರಿ. ವಸ್ತುನಿಷ್ಟವಾಗಿ ರಿಪೋರ್ಟ್ ಮಾಡು. ಆದರೆ, ನಿನ್ನ ಶೈಲಿ ಪ್ರತ್ಯೇಕವಾಗಿರಬೇಕೆಂಬುದನ್ನು ಮರೆಯಬೇಡ.”
 “ನಿನ್ನನ್ನು ಈ ಕೂಡಲೆ ರಿಪೋರ್ಟಿಂಗಿಗೆ ಕಳಿಸುವುದಿಲ್ಲ, ಆದರೆ ಮುಂದಿನ ಕೆಲವೇ ದಿನಗಳಲ್ಲಿ ಆ ಛಾನ್ಸ್ ಸಿಗಬಹುದು” ಎಂದೆಲ್ಲ ಸಲಹೆ-ಸೂಚನೆಗಳು ಅವರಿಂದ ಆ ದಿನ ದೊರೆತವು. ಕೆಲಸದಲ್ಲಿ ಹೆಚ್ಚು ಜಾಗರೂಕತೆ ಇರಬೇಕೆಂಬ ಎಚ್ಚರಿಕೆಯೂ ಅವ್ಯಕ್ತವಾಗಿ ಅಲ್ಲಿ ಅಡಕವಾಗಿತ್ತು.
 ಅದನ್ನು ಅನಂತರದ ಕೆಲವು ದಿನಗಳಲ್ಲಿ ನೆನಪು ಮಾಡಿಕೊಳ್ಳದ ಕಾರಣ, ದೊಡ್ಡದೊಂದು ಅಚಾತುರ್ಯವೂ ಆಯಿತು. ಅನಿವಾರ್ಯವಾಗಿ ಹೊರಿಸಲಾಗಿದ್ದ ಕರಡು ತಿದ್ದುವ ಕೆಲಸ ಅಷ್ಟು ಪ್ರಾಮುಖ್ಯವಲ್ಲವೆಂದು ಭಾವಿಸಿದ್ದುದೇ ಆ ಅಚಾತುರ್ಯದ ಮೂಲವಾಗಿತ್ತು.
 ಅಂದಿನ ಮುಂಜಾನೆ ಕಚೇರಿಯಲ್ಲಿದ್ದಾಗ ಬಾರಿಸಿದ ದೂರವಾಣಿ ಗಂಟೆ ನನಗೆ ಎಚ್ಚರಿಕೆಯ ಗಂಟೆಯಾಗಬಹುದೆಂಬ ಅರಿವಿಲ್ಲದೆ-ರಿಸೀವರ್ ಎತ್ತಿ ‘ಹಲೋ’ ಎಂದೆ ರಾಗವಾಗಿ.
 ‘ವಿಶ್ವಕರ್ನಾಟಕಾನಾ ? ನೋಡಿ ಮಿನಿಸ್ಟ್ರು ಮಾತಾಡ್ತಾರೆ’ – ಎಂಬ ಸೂಚನೆಯ ಬೆನ್ನಿಗೇ “ನೋಡಪ್ಪಾ, ನಾನು ಟಿ.ಮರಿಯಪ್ಪ-ಬದುಕಿದೀನಿ-ಮಾತಾಡ್ತಾನೂ ಇದೀನಿ-ನನ್ನನ್ನ್ಯಾಕಯ್ಯಾ ನಿಮ್ಮ ಪೇಪರ್ ಕೊಂದಿದೆ?” ಎಂಬ ವಾಗ್ಬಾಣಗಳ ಬಿರುಸಿಗೆ ತತ್ತರಿಸಿ ಹೋದೆ.
 “ಏ-ಏ-ಏನಾಯ್ತು ಸಾರ್?” ಎಂದು ತೊದಲಲು ಮಾತ್ರ ಸಾಧ್ಯವಾಯಿತು.
 ಇನ್ನೇನಾಗ್ಬೇಕಾಗಿದೆ? ನಾನು ಅಸೆಂಬ್ಲೀಲಿ ಸತ್ತೋದ ಅಂತಆ ನಿಮ್ ಪೇಪರ್ ನಲ್ಲಿ ಹಾಕ್ಬಿಟ್ಟಿದ್ದೀರಲ್ಲಯ್ಯಾ ! ಮಾಡೋದು ಮಾಡ್ಬಿಟ್ಟು… ಏನಾಯಿತೂಂತ ಬೇರೆ ಕೇಳ್ತೀಯಲ್ಲ? ಯಾರಯ್ಯಾ ನೀನು ಮಾತಾಡೋದು?” ಮಂತ್ರಿಗಳು ಗುಡುಗುತ್ತಲೇ ಇದ್ದರು.
 “ನಾನೊಬ್ಬ ಸಬ್ ಎಡಿಟರ್ ಸಾರ್,” ಎಂದೆ ದೈನ್ಯದಿಂದ.
“ಸ್ಸಾರಿ…. ಹಾಳಾಗಿ ಹೋಯ್ತು. ನಿಮ್ಮ ಎಡಿಟರ್ರಿಗೆ ಹೇಳು. ‘ಮೊದಲೊಂದು ಅಪಾಲಜಿ ಪಬ್ಲಿಷ್ ಮಾಡಿ’, ‘ಆಮೇಲೆ ನನ್ಹತ್ರ ಮಾತಾಡ್ಲಿ’- ಸಚಿವ ಮಹಾಶಯರು ಫೋನ್ ಕೆಳಗಿಟ್ಟರು.
 ಅವರ ಸಿಟ್ಟಿಗೆ ಕಾರಣವಾಗಿದ್ದ ನನ್ನ ಅಪರಾಧದ ಸುಳಿವು ಸಿಕ್ಕಿತ್ತು. ಉಳಿದವರು ಕಚೇರಿಗೆ ಬರುವ ಮೊದಲೇ ಸಂಪೂರ್ಣ ಪರಿಶೀಲನೆ ಮುಗಿಸುವ ಆತುರದಿಂದ, ಹಿಂದಿನ ಸಂಜೆಯ ಪತ್ರಿಕೆಯನ್ನು ಹುಡುಕಿ, ಮೊದಲ ಪುಟವನ್ನು ಪರಿಶೀಲಿಸಿದೆ:
 ..ಪತ್ರವನ್ನು ಮಂಡಿಸುತ್ತಾ ಅರ್ಥಸಚಿವ ಮರಿಯಪ್ಪನವರು ಮಡಿದರು ಎಂಬ ಶಬ್ದಗಳು ಕಾಣಿಸಿದವು. ಒಮ್ಮೆಗೆ ಆಘಾತವಾಯಿತು.
 ವಿಧಾನಸಭೆಯ ಮಧ್ಯಾಹ್ನದವರೆಗಿನ ಕಲಾಪವನ್ನು, ಸೌಧದ ಪ್ರೆಸ್ ರೂಮಿನಿಂದ ನಾಗಯ್ಯ ಫೋನಿನಲ್ಲಿ ವರದಿ ಮಾಡಿದ್ದರು. ಫೋನ್ ಕರೆ ಸ್ವೀಕರಿಸಿ, ವರದಿಯ ವಾಕ್ಯಗಳ ಗುರುತು ಹಾಕಿಕೊಂಡ ಅನಂತರ ನಾನೇ ಬರೆದುಕೊಟ್ಟಿದ್ದೆ. ನಾಗಯ್ಯನವರು ಹೇಳಿದ್ದ ಮಾತುಗಳಲ್ಲೇ ಬಾಕ್ಸ್ ಐಟಂ ಕೂಡಾ ಬರೆದುಕೊಟ್ಟಿದ್ದೆ.
 ಅಪರಾಧ ಹೇಗೆ ಆಯಿತು ಎಂದು ಹೇಳಲಾಗದಿದ್ದರೂ – ಅಪರಾಧಿ ನಾನಲ್ಲ -ಎನ್ನುವಂತಿರಲಿಲ್ಲ.
 ನಾನು ಬರೆದಿದ್ದ ‘ನ’ಅಕ್ಷರದ ಬದಲಿಗೆ ‘ವ’ದ ಮೊಳೆ ಅಲ್ಲಿ ಮೂಡಿತ್ತೇ? ಇರಲೂ ಬಹುದು, ಇದ್ದರೂ, ಪ್ರೂಫ್ ನೋಡಿದಾಗ ಅದನ್ನು ಗಮನಿಸಲಿಲ್ಲವೆಂಬುದು ಖಂಡಿತ. ತಪ್ಪನ್ನು ಯಾರ ಹೆಗಲಿಗೂ ದಾಟಿಸುವಂತಿರಲಿಲ್ಲ, ಮುಂದೆ ಆಗಬಹುದಾದ್ದ ಊಹಿಸಿಕೊಂಡೇ ಕಂಗಾಲಾದೆ. ಜಾಗರೂಕತೆಯ ಎಚ್ಚರಿಕೆಯನ್ನು ಮರೆತಿದ್ದಕ್ಕಾಗಿ ನನ್ನನ್ನೇ ಹಳಿದುಕೊಂಡೆ.
 ಅಷ್ಟು ಹೊತ್ತಿಗೆ ಕಾರ್ಯಾಲಯಕ್ಕೆ ಬಂದು ಮುಟ್ಟಿದ್ದ ಆಪದ್ಭಾಂದವನಲ್ಲಿ (ಯಾರೆಂದು ಬೇರೆ ಹೇಳಬೇಕಾಗಿಲ್ಲವಲ್ಲ?) ತಪ್ಪಿನ ವಿವರಗಳನ್ನು ಒಪ್ಪಿಸಿದೆ. ಅವರು ಚಾಕಚಕ್ಯತೆಯಿಂದ ಸಮಸ್ಯೆಯನ್ನು ಪರಿಹರಿಸಿದ ಅನಂತರವೇ ನನ್ನ ಶ್ವಾಸಕ್ರಿಯೆ ಸರಾಗವಾದುದು. (ಮುಂದಿನ ಕೆಲವು ದಿನಗಳವರೆಗೂ- ‘ಮರಿಯಪ್ಪಾಸ್ ಮರ್ಡರರ್’- ಎಂಬ ಕುಖ್ಯಾತಿ ಕಛೇರಿಯಲ್ಲಿ ನನಗಿತ್ತು!)
 ಖ್ಯಾತಿ (?) ಉಳಿದಿದ್ದ ದಿನವಷ್ಟೂ ‘ಮಡಿ’ ಎಂಬ ಶಬ್ದದ ಮಟ್ಟಿಗೆ ತೀರಾ ಮಡಿವಂತನೇ ಆಗಿದ್ದೆ. ತೀರಿಕೊಂಡರು, ನಿಧನರಾದರು,ಕೊನೆಯುಸಿರೆಳೆದರು ಇತ್ಯಾದಿಗಳ ಸ್ಟಾಕ್ ಮುಗಿದಾಗ, ಸತ್ತುಹೋದರು ಎಂದೇ ನಿರ್ದಾಕ್ಷಿಣ್ಯವಾಗಿ ಬರೆದುಬಿಡುತ್ತಿದ್ದೆ. ಇತರತ್ತ ಮ – ಪ್ರಯೋಗವಾಗಬೇಕಾದಲ್ಲಿ ನನ್ನ ಕೊರಕಲು ಅಕ್ಷರ ಸುಂದರವಾಗಿ ತನ್ನಿಂದ ತಾನೇ ಮೂಡಿಬರುತ್ತಿತ್ತು.
 ಹೊಸಬನನ್ನು ಹುರಿದುಂಬಿಸಿ ವಹಿಸಿಕೊಟ್ಟ ಇನ್ನೊಂದು ಹೆಚ್ಚುವರಿ ಕೆಲಸದಲ್ಲೂ ಅದೇ ವರ್ಗದ- ಆದರೆ ಅಷ್ಟೊಂದು ಘೋರವಲ್ಲದ – ಮತ್ತೊಂದು ತಪ್ಪು, ನನ್ನಿಂದಾಯಿತು, ಕೆಲವು ವಾರಗಳ ಅನಂತರ.
 ಆಗ ನನಗೆ ಅಂಕಣಕಾರನಾಗಿ ಅಪರ( ಎಡಿಷನಲ್ ಎಂಬರ್ಥದಲ್ಲಿ) ಬಡ್ತಿಯಾಗಿತ್ತು. 
 
 (ಮುಂದಿನ ಭಾಗದಲ್ಲಿ)
old:

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ವಿಶೇಷ ಸೃಷ್ಟಿಗಳ ಲೋಕದಲ್ಲಿ -ಅಂಕಣ 5 : ಅಂಕಣಕಾರನಾಗಿ ಅಪರ ಬಡ್ತಿ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*