ಬಂಟ್ವಾಳನ್ಯೂಸ್ ಫಾಲೋಅಪ್: ಕುಡಿಯುವ ನೀರು ಪೋಲು ವೀಕ್ಷಿಸಿದ ಅಧಿಕಾರಿಗಳು
ಪುರಸಭೆಯ ಪೈಪ್ ಲೈನ್ ಒಡೆದು ನೀರು ರಸ್ತೆಯಲ್ಲಿ ಹರಿಯುವುದು ಅದನ್ನು ಸರಿಪಡಿಸಿದರೂ ಮತ್ತೆ ಕೆಲಸ ನಿರ್ವಹಿಸುವಾಗ ಪೈಪ್ ಲೈನ್ ಒಡೆದು ಹೋಗುವುದು ನಡೆಯುತ್ತಾ ಬಂದಿದ್ದು, ಬುಧವಾರ ರಾತ್ರಿ ಪರಿಸ್ಥಿತಿ ಹದಗೆಟ್ಟಿತ್ತು. ಪೈಪ್ ಲೈನ್ ಒಡೆದು, ರಾ.ಹೆ. ಯವರು ರಸ್ತೆ ಪಕ್ಕ ಸ್ಲ್ಯಾಬ್ ಹಾಕುವ ಕಾಮಗಾರಿಗಾಗಿ ಅಗೆದ ಗುಂಡಿ ಭರ್ತಿಯಾಗಿ ಕೃತಕ ಕೆರೆ ನಿರ್ಮಾಣವಾಯಿತು. ಸುಮಾರು 15ಕ್ಕೂ ಅಧಿಕ ಅಧಿಕೃತ ಕನೆಕ್ಷನ್ ಗಳಿಗೆ ಕುಡಿಯುವ ನೀರು ಪೂರೈಕೆಯೂ ನಿಂತು ಹೋಯಿತು. ರಸ್ತೆಯಲ್ಲಿಡೀ ನೀರಿನ ಸಾಮ್ರಾಜ್ಯವಾದರೆ, ರಸ್ತೆ ಪಕ್ಕದ ಗುಂಡಿಗಳು ತೆರೆದ ಕೋರೆ ಹೊಂಡಗಳಂತೆ ಕಂಡುಬಂದವು. ಸ್ಥಳೀಯರ ಸತತ ದೂರಿನ ಬಳಿಕ ಆಗಮಿಸಿದ ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ ಎಂ.ಎಚ್. ಸುಧಾಕರ್, ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೋ ಸಹಿತ ಅಧಿಕಾರಿಗಳಿಗೆ ಸ್ಥಳೀಯ ಪುರಸಭಾ ಸದಸ್ಯರಾದ ಎ.ಗೋವಿಂದ ಪ್ರಭು ಮತ್ತು ಭಾಸ್ಕರ ಟೈಲರ್ ಸಹಿತ ಸಾರ್ವಜನಿಕರು ಪರಿಸ್ಥಿತಿಯ ಗಂಭೀರತೆಯ ಕುರಿತು ಮನದಟ್ಟು ಮಾಡಿದರು. ಚರಂಡಿ ಸೇರುತ್ತಿರುವ ಕುಡಿಯುವ ನೀರಿನ ಪೈಪ್ ಒಡೆದು ಹೋಗಿರುವ ಕಾರಣ ಹೀಗಾಗಿದ್ದು ಸರಿಪಡಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಬಂಟ್ವಾಳ ನ್ಯೂಸ್ ಬುಧವಾರ ರಾತ್ರಿ ಈ ಸಮಸ್ಯೆ ಗಂಭೀರತೆ ಕುರಿತು ವರದಿ ಮಾಡಿತ್ತು.
Be the first to comment on "ಬಂಟ್ವಾಳನ್ಯೂಸ್ ಫಾಲೋಅಪ್: ಕುಡಿಯುವ ನೀರು ಪೋಲು ವೀಕ್ಷಿಸಿದ ಅಧಿಕಾರಿಗಳು"