ಅಡುಗೆ ಮಾಡೋ ಕಷ್ಟಸುಖ

ಅಡುಗೆ ಯನ್ನು ತಿನ್ನುವವರ ಅಥವಾ ಊಟ ಮಾಡುವವರ ಮೇಲೆ ಪ್ರೀತಿ ಮತ್ತು ತಾನು ಮಾಡುವ ಅಡುಗೆ ಯ ಮೇಲೆ ಪ್ರೀತಿ ಇದ್ದಾಗ ಅಡುಗೆ ರುಚಿ ಆಗದೇ ಇರಲು ಹೇಗೆ ಸಾಧ್ಯ?

  • ಡಾ.ಅಜಕ್ಕಳ ಗಿರೀಶ ಭಟ್ಟ
  • ಅಂಕಣ: ಗಿರಿಲಹರಿ

ಹೆಚ್ಚು ಕಡಿಮೆ ಎಲ್ಲಾ ಟಿವಿ ವಾಹಿನಿಗಳಲ್ಲಿ ಅಡಿಗೆ ಕಾರ್ಯಕ್ರಮ ಇದ್ದೇ ಇರುತ್ತದೆ. ನನಗೆ ಟಿವಿಯಲ್ಲಿ ಅಡುಗೆ ಮಾಡುವುದನ್ನು ನೋಡಲು ಅಂಥ ಆಸಕ್ತಿಯಿಲ್ಲ. ಯಾಕೆಂದರೆ ನನಗೆ ಗೊತ್ತಿರುವ ಅಡುಗೆ ಮಾಡಲಿಕ್ಕೇ ನನಗೆ ಪುರುಸೊತ್ತಾಗುವುದಿಲ್ಲ. ಇನ್ನು ಹೊಸ ಹೊಸತನ್ನು ಯಾಕೆ ನೋಡಬೇಕು? ಆದರೂ ವಾಹಿನಿಗಳನ್ನು ಬದಲಾಯಿಸುವಾಗ ಅಪರೂಪಕ್ಕೆ ಅಡಿಗೆ ಕಾರ್ಯಕ್ರಮಗಳು ಕಣ್ಣಿಗೆ ಬೀಳುತ್ತವೆ. ಅಂಥ ಕಾರ್ಯಕ್ರಮಗಳನ್ನು ನೋಡುವಾಗ ನನಗೆ ಕುತೂಹಲವುಂಟಾಗುವುದು ಅಲ್ಲಿ ತಯಾರಿಸಿದ ರುಚಿಕಟ್ಟಾದ ಪದಾರ್ಥಗಳನ್ನು ಕೊನೆಗೆ ತಿನ್ನುವುದು ಯಾರು ಅಂತ. ವಾಹಿನಿಗಳ ಸ್ಟುಡಿಯೋದಲ್ಲಿ ಇರುವವರಿಗೆಲ್ಲ ಸಿಗುತ್ತದಾ? ಇರುವವರಿಗೆಲ್ಲ ಕೊಡುವಷ್ಟು ಪ್ರಮಾಣ ಇರುವುದೂ ಇಲ್ಲ. ಅಥವಾ ಆ ತಿಂಡಿತಿನಿಸುಗಳೆಲ್ಲ ಒಂದು ಚಮಚದಷ್ಟು ಅಥವಾ ಅರ್ಧ ಚಮಚದಷ್ಟು ಮಾತ್ರ ತಿಂದು ಬಾಯಿ ಚಪ್ಪರಿಸಿ ತೋರಿಸುತ್ತಾ ವೀಕ್ಷಕರಿಗೆ ಆಸೆ ಹುಟ್ಟಿಸುವಷ್ಟು ನಿಜವಾಗಿ ರುಚಿಯಗಿರುತ್ತದೆಯೇ? ವೀಕ್ಷಕರಿಗೆ ಏನಿದ್ದರೂ ಟಿವಿ ತಿಂಡಿತಿನಿಸುಗಳಿಂದ ನೇತ್ರೇಂದ್ರಿಯ ಸುಖ ಮಾತ್ರ.

ಅಡುಗೆ ಎನ್ನುವುದು ಹೆಂಗಸರ ಕಾರ್ಯಕ್ಷೇತ್ರ ಎಂದು ಸಾಮಾನ್ಯವಾಗಿ ಈ ಕಾಲದಲ್ಲೂ ಬಹಳ ಮಂದಿ ನಂಬಿದ್ದಾರೆ. ಎಲ್ಲರೂ ನೆನಪಿಸಿಕೊಳ್ಳುವಂತೆ ಪುರಾಣಗಳಲ್ಲಿ ಭೀಮ ನಳ ಮುಂತಾದ ಗಂಡಸರೇ ಒಳ್ಳೆ ಅಡಿಗೆಯವರು. ಅಥವಾ ಹೀಗೂ ಇರಬಹುದು : ಆಗಲೂ ಒಳ್ಳೆಯ ಅಡುಗೆ ಯವರು ಹೆಂಗಸರೇ ಇದ್ದಿರಬಹುದು. ಹೆಂಗಸರೆಲ್ಲ ಸಹಜವಾಗಿಯೇ ಒಳ್ಳೆ ಅಡುಗೆ ಮಾಡುತ್ತಿದ್ದುದರಿಂದ ಅದನ್ನು ಪ್ರತ್ಯೇಕವಾಗಿ ಹೇಳಲಿಕ್ಕೇನುಂಟು? ಗಂಡಸರಲ್ಲಿ ಎಲ್ಲೋ ಒಬ್ಬಿಬ್ಬರು, ಭೀಮನೋ ನಳನೋ ಇಂಥವರು ಮಾತ್ರ ಒಳ್ಳೆ ಅಡುಗೆ ಮಾಡುತ್ತಿದ್ದುದರಿಂದ ಅವರಿಗೆ ಕೀರ್ತಿ ಬಂದಿರಬೇಕು. ಏನೇ ಇರಲಿ ರನ್ನನ ದುರ್ಯೋಧನ ಸಟ್ಟುಗ ಹಿಡಿದ ಭೀಮನನ್ನು, ಪುಟ್ಟಂ ಸಟ್ಟುಗಮಂ ಕೊಂಡಟ್ಟಾರಿಸಿ ಬೋನಮಿಟ್ಟು ಬಂದೆಯೋ ಎಂದು ಅಣಕಿಸುತ್ತಾನೆ ಎನ್ನುವುದನ್ನು ಗಮನಿಸಿದರೆ ಹಿಂದೆಯೂ ಗಂಡಿಗೆ ಸಟ್ಟುಗ ಹಿಡಿಯುವುದು ಅವಮಾನಕರ ಎನ್ನುವ ಭಾವನೆ ಇದ್ದಿರಬೇಕು.

ನಾನಂತೂ ಅಡುಗೆ ಮಡುವುದು ಗಂಡಸರಿಗೆ ಅವಮಾನಕರ ಎಂದು ಭಾವಿಸಿದವನಲ್ಲ. ಹಾಗಂತ ನಾನು ಆ ಕೆಲಸವನ್ನು ಬಹಳ ಮಾಡುತ್ತೇನೆಂದಲ್ಲ. ಮನೆಯಲ್ಲಿ ಒಬ್ಬನೇ ಇದ್ದಾಗ ಧೈರ್ಯವಾಗಿ ಬೇಕಾದಂತೆ ರುಚಿರುಚಿಯಾದ ಅಡಿಗೆ ಮಾಡುತ್ತೇನೆ. ಆದರೆ, ಮನೆಯಲ್ಲಿ ಎಲ್ಲರೂ ಇದ್ದಾಗ ನನ್ನ ಅಡುಗೆ ರುಚಿಕಟ್ಟಾಗುವ ಬದಲು ರುಚಿಯೇ ಕಟ್ ಆಗುತ್ತದೆ ಅನ್ನುವ ಕಾರಣಕ್ಕೆ ನನಗೆ ಅವಕಾಶ ನಿರಾಕರಣೆಯಾಗುತ್ತದೆ.

ನಾನು ಬ್ರಹ್ಮಚಾರಿಯಾಗಿದ್ದ ಕಾಲದಲ್ಲಿ ನಾವು ಒಂದಿಬ್ಬರು ಸ್ನೇಹಿತರು ಸೇರಿ ಸ್ವಯಂಪಾಕ ಮಾಡುತ್ತಿದ್ದಾಗ ವಿಶೇಷ ಭಕ್ಷ್ಯ ಭೋಜ್ಯಗಳನ್ನು ತಯಾರಿಸುತ್ತಿದ್ದೆವು. ಅಡುಗೆ ಯನ್ನು ಶೀಘ್ರವಾಗಿ ಮಾಡಿ ಮುಗಿಸಲು ನಾವು ಕೆಲವು ಕ್ರಮ ಕೈಗೊಳ್ಳುತ್ತಿದ್ದೆವು. ಉದಾ: ಸ್ಟೌವಿನ ಒಂದು ಒಲೆಯಲ್ಲಿ ಸ್ವಲ್ಪ ಕಡಿಮೆ ನೀರು ಹಾಕಿ ಅನ್ನ ಬೇಯಲಿಕ್ಕಿಟ್ಟರೆ ಇನ್ನೊಂದರಲ್ಲಿ ಬರೀ ನೀರು ಕುದಿಯಲಿಕ್ಕಿಟ್ಟು ಅದು ಕುದಿದಾಗ ಇದಕ್ಕೆ ಸೇರಿಸುವುದು. ಸಾಂಬಾರು ಮಾಡುವುದಾದರೆ, ತರಕಾರಿ ಹೆಚ್ಚಲು ಆರಂಭಿಸುವಾಗಲೇ ಒಲೆಯಲ್ಲಿ ನೀರು ಕುದಿಯಲು ಇಡುವುದು. ಉಪಿಟ್ಟಿಗೆ ನೀರುಳ್ಳಿ ಹೆಚ್ಚಲು ಆರಂಭಿಸುವಾಗಲೇ ಬಾಣಲೆಯಲ್ಲಿ ಒಗ್ಗರಣೆ ಆರಂಭಿಸುವುದು ಇತ್ಯಾದಿ.

ಅಗೋರಾ ದೋಸೆ ಮಾತ್ರ ನಮ್ಮ ವಿಶೇಷ ತಿಂಡಿಯಾಗಿತ್ತು. ಅಕ್ಕಿ ಹುಡಿ, ಗೋಧಿ ಹುಡಿ ಮತ್ತು ರಾಗಿ ಹುಡಿ ಸೇರಿಸಿ ಕರಡಿಸಿ ಮಾಡಿದ ದೋಸೆಯೇ ಅಗೋರಾ ದೋಸೆ. ಇದು ಕಾವಲಿಯಿಂದ ಏಳವುದಿಲ್ಲ ಎನ್ನುವ ಸಮಸ್ಯೆಯೇ ಇಲ್ಲ. ಕೆಲವೊಮ್ಮೆ ಅಗೋರಾರ ದೋಸೆ ಮಾಡುವುದೂ ಇತ್ತು. ಅಂದರೆ ಇದಕ್ಕೆ ರವೆ ಒಂದು ಸೇರ್ಪಡೆ. ಅಗೋರಾ ಅಥವಾ ಅಗೋರಾರ ದೋಸೆಯ ರುಚಿ ಹೆಚ್ಚಿಸಲು ನೀರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು, ಕರಿಬೇವು ಹೀಗೆ ವಿವಿಧ ಕಸಕಡ್ಡಿಗಳನ್ನು ಸೇರಿಸಬಹುದು.

ಬಹುತರಕಾರಿಗಳ ಪಲಾವ್ ನಾವು ಮಾಡುತ್ತಿದ್ದುದು ಕೂಡ ಬಹಳ ರುಚಿಯಾಗುತ್ತಿತ್ತು. ಇದನ್ನು ನೀವೂ ಮಾಡಬಹುದು. ಹೀಗೆ ಮಾಡಿ; ಯಥಾಪ್ರಕಾರ ಬೆಳ್ತಿಗೆ ಅನ್ನ ಬೇಯಲಿಕ್ಕಿಡಿರಿ. ಬಾಣಲೆಯಲ್ಲಿ ತೆಂಗಿನೆಣ್ಣೆ ಅಥವಾ ಇತರ ಯಾವುದಾದರೂ ಅಡಿಗೆ ಎಣ್ಣೆ ಮೂರು ನಾಲ್ಕು ಚಮಚದಷ್ಟು ಹಾಕಿ ಸ್ಟೌ ಹೊತ್ತಿಸಿರಿ. ಸಾಸಿವೆ, ಉದ್ದಿನ ಬೇಳೆ, ಒಣಮೆಣಸು, ಜೀರಿಗೆ, ನೆಲಗಡಲೆ, ಗೋಡಂಬಿ, ಒಣದ್ರಾಕ್ಷಿ ಇವುಗಳಲ್ಲಿ ಯಾವುದೆಲ್ಲ ಲಭ್ಯವಿದೆಯೋ ಅದನ್ನೆಲ್ಲ ಹಾಕಿರಿ. ಆಗಾಗ ಸೌಟಲ್ಲಿ ಕಲಕುತ್ತಿರಿ. ನಾಲ್ಕೈದು ನೀರುಳ್ಳಿ ದೊಡ್ಡದೊಡ್ಡದಾಗಿ ತುಂಡುಮಾಡಿ ಸಾಸಿವೆ ಸಿಡಿಮಿಡಿಗೊಳ್ಳುವಾಗ ಹಾಕಿರಿ. ಈಗ ಯಾವೆಲ್ಲ ತರಕಾರಿ ಇದೆ ನೋಡಿ: ಬೀನ್ಸ್, ಕಾರೆಟ್, ಬೀಟುರೂಟ್, ಬಟಾಟೆ, ಕ್ಯಾಪ್ಸಿಕಮ್ ಇವನ್ನಲ್ಲ ಯಥಾಶಕ್ತಿ ತುಂಡರಿಸಿ ಸೇರಿಸಿ. ಅರಶಿನ ಹುಡಿ, ಮೆಣಸಿನ ಹುಡಿ, ಸ್ವಲ್ಪ ನೀರು ಸೇರಿಸಿ. ಉಪ್ಪು ಹಾಕಿ. ಹುಣಿಸೆ ಹುಳಿ ಕರಡಿಸಿ ಸೇರಿಸಿ. ಸ್ವಲ್ಪ ತೆಂಗಿನ ಕಾಯಿ ತುರಿ ಸೇರಿಸಿ. ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿ ಸೇರಿಸಿ. ಅತ್ತ ನಿಮ್ಮ ಅನ್ನ ತಯಾರಾಗಿದ್ದರೆ ಈ ಬಾಣಲೆಯ ಅರೋಮ ವ್ಯಾಪಿಸುತ್ತಿದ್ದರೆ, ಬಾಣಲೆಗೆ ಅನ್ನವನ್ನು ಹಾಕಿ ಮಿಶ್ರ ಮಾಡಿ. ಪಲಾವ್ ರೆಡಿ. ಗರಮ್ ಮಸಾಲೆ, ಪಲಾವ್ ಪೌಡರ್ ಎಲ್ಲ ಹಾಕಲಿಕ್ಕಿಲ್ಲವೋ ಅಂತ ಕೇಳಬೇಡಿ. ಇದು ಗರಮ್ ಆಗಿದೋ ಅಂತ ನೋಡಿ ಹೇಳಿ.

ಹೋಟೆಲುಗಳಲ್ಲಿ ಅಡಿಗೆಯವರು ಉಪ್ಪು ಖಾರ ಹುಳಿ ಇತ್ಯಾದಿಗಳನ್ನು ಅಡಿಗೆಯ ನಡುನಡುವೆ ಪರೀಕ್ಷಿಸಿ ತಿದ್ದಿಕೊಳ್ಳುವ ಅವಕಾಶಗಳುಂಟು. ಆದರೆ ಬ್ರಾಹ್ಮಣರ ಮದುವೆ ಇತ್ಯಾದಿ ಸಮಾರಂಭಗಳಲ್ಲಿ  ಅಡುಗೆ ತಯಾರಿಸುವವರ ಕಷ್ಟ ಬೇರೆ ಥರ. ಅವರು ಯಾವುದನ್ನೂ ರುಚಿ ನೊಡುವಂತಿಲ್ಲ. ಹೀಗಾಗಿ ಸಾರಿಗೆ ಉಪ್ಪು ಹಾಕಲು ಮರೆತಿದ್ದರೆ ಅದು ಗೊತ್ತಾಗುವುದು ಪಂಕ್ತಿಗಳಲ್ಲಿ ಬಡಿಸಿದ ನಂತರವೇ. ಆನ ಎಷ್ಟಾಗಿದೆ ಮತ್ತು ಅಡುಗೆ ಹೇಗಿತ್ತು ಅನ್ನುವುದು, ಹಿಂದೆಲ್ಲ ಮದುವೆ ಇತ್ಯಾದಿಗಳಿಗೆ ಹಾಜರಾಗಿ ಮನೆಗೆ ಬಂದವರಲ್ಲಿ ಮನೆಯಲ್ಲಿಯೇ ಉಳಿದಿದ್ದ ಹಿರಿಯರು ಸಾಮಾನ್ಯವಾಗಿ ಕೇಳುವ ಎರಡು ಪ್ರಶ್ನೆಗಳು. ಸಮಾರಂಭಗಳಲ್ಲಿ ಅಡುಗೆ ರುಚಿಯಾಗವುದು ಮಾಡಿಸದವನ ಪ್ರತಿಷ್ಠೆಯ ಪ್ರಶ್ನೆಯೂ ಹೌದು.

ಯಾವ ಅಡುಗೆ ಮಾಡಿದರೂ ಯಾರು ಅಡಿಗೆ ಮಾಡಿದರೂ ಮಾಡಿದ ಅಡಿಗೆಗೆ ಒಂದು ಇಂಗ್ರೇಡಿಯೆಂಟ್ ಸೇರಿಸಲೇಬೇಕು ಎಂದು ತುಂಬ ಮಂದಿ ಅನುಭವಿಗಳು ಹೇಳುವುದನ್ನು ಕೇಳಿದ್ದೇವೆ. ಪ್ರೀತಿ ಎನ್ನುವುದೇ ಆ ಇಂಗ್ರೇಡಿಯೆಂಟ್. ಅಡುಗೆ ಯನ್ನು ತಿನ್ನುವವರ ಅಥವಾ ಊಟ ಮಾಡುವವರ ಮೇಲೆ ಪ್ರೀತಿ ಮತ್ತು ತಾನು ಮಾಡುವ ಅಡುಗೆ ಯ ಮೇಲೆ ಪ್ರೀತಿ ಇದ್ದಾಗ ಅಡುಗೆ ರುಚಿ ಆಗದೇ ಇರಲು ಹೇಗೆ ಸಾಧ್ಯ?

About the Author

Dr. Ajakkala Girish Bhat
ವೃತ್ತಿಯಲ್ಲಿಕನ್ನಡ ಬೋಧಕ. ಬಂಟ್ವಾಳ ಸರಕಾರಿ ಪದವಿ ಕಾಲೇಜು ಪ್ರಾಂಶುಪಾಲ. ಇಂಗ್ಲಿಷನ್ನುಪಳಗಿಸೋಣ, ಬುದ್ಧಿಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ, ಅಸತ್ಯ ಅಥವಾ ಸತ್ಯ?, ಮುಂತಾದ ಹದಿನಾರು ಪುಸ್ತಕಗಳು ಪ್ರಕಟವಾಗಿವೆ. ವಿವಿಧ ಗೋಷ್ಠಿ, ಸಮ್ಮೇಳನಗಳಲ್ಲಿ ಪ್ರಬಂಧ, ವಿಚಾರ ಮಂಡಿಸಿದ್ದಾರೆ.

Be the first to comment on "ಅಡುಗೆ ಮಾಡೋ ಕಷ್ಟಸುಖ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*