ಮತ-ಕಥೆ

ಕಥೆ ಸರಿಯಾಗಿ ಅರ್ಥವಾಗದವರು ನಾಡಿದ್ದು ಚುನಾವಣಾ ಫಲಿತಾಂಶ ಬಂದಾಗ ಕೊನೆಯ ಅಭ್ಯರ್ಥಿ ಪಡೆವ ಮತವನ್ನು ಲೆಕ್ಕ ಮಾಡಿರಿ.

  • ಡಾ.ಅಜಕ್ಕಳ ಗಿರೀಶ ಭಟ್
  • ಅಂಕಣ: ಗಿರಿಲಹರಿ

www.bantwalnews.com

ಜಾಹೀರಾತು

ಸುಮಾರು ಹದಿನೈದು -ಇಪ್ಪತ್ತು ವರ್ಷಗಳ ಹಿಂದೆ ಇರಬಹುದು. ಗಜಪತದಾಸರು ಅವರ ವಿಟ್ಟಲವೆಂಬ ಊರಿನಲ್ಲಿ ಅದಾಗಲೇ ತಕ್ಕಮಟ್ಟಿನ ಹೆಸರು ಮಾಡಿ ಊರಿನೊಳಗೆ ಜಗತ್ಪ್ರಸಿದ್ಧರಾಗಿದ್ದರು. ಅದಕ್ಕೆ ಕಾರಣವೆಂದರೆ ಅವರಿಗೊಂದು ಸಣ್ಣ ಹೋಟೆಲು ಇದ್ದುದು. ಮತ್ತು ಅವರಿಗೆ ಐದಾರು ಖಾಯಂ ಗಿರಾಕಿಗಳಿದ್ದುದು ಮತ್ತು ಅವರ ಬಾಕಿಯನ್ನು ಗಜಪತದಾಸರು ಅಷ್ಟೇನೂ ನಿಷ್ಠುರವಾಗಿ ವಸೂಲು ಮಾಡದೇ ಇರುತ್ತಿದ್ದುದು. ಹೆಚ್ಚು ಕಡಿಮೆ ನಮ್ಮ ಪಂಜೆ ಮಂಗೇಶರಾಯರ ಕಮಲಾಪುರದ ಹೋಟ್ಲಿನಲ್ಲಿ ಅನ್ನುವ ಕಥೆಯಲ್ಲಿ ಬರುವ ಗಿರಾಕಿಗಳಂಥ ಗಿರಾಕಿಗಳು ಅವರು ಅನ್ನಬಹುದು. ಹಾಗೆಂದು ಬಾಕಿ ವಸೂಲು ಮಾಡದೇ ಇರಲು ಗಜಪತದಾಸರು ಏನೂ ಹೆಡ್ಡರಲ್ಲ. ಈ ಖಾಯಮ್ಮಿನ ಗಿರಾಕಿಗಳಿಂದ ಅವರಿಗೆ ಒಳ್ಳೆಯ ಪ್ರಚಾರ ಸಿಗುತ್ತಿತ್ತು. ಅಷ್ಟೇ ಅಲ್ಲ; ಅವರ ಹಣ ವಸೂಲಾಗದೇ ಇರುತ್ತಿದ್ದುದು ಊರಿನ ಇತರರಿಗೆ ಗೊತ್ತಾಗುವ ಸಂಭವ ಇರಲಿಲ್ಲ. ಯಾಕೆಂದರೆ,  ಇವರು ದಿನವೂ ಅಲ್ಲಿ ಕಾಪಿ ಕುಡಿದು ಆ ಕಾಪಿ ತಿಂಡಿಯ ರುಚಿಯನ್ನು ಬಣ್ಣಿಸುತ್ತ ಮತ್ತೂ ನಾಲ್ಕೈದು ಅಂಗಡಿ ಮುಂಗಟ್ಟೆ, ಬಸ್ಸು ಸ್ಟಾಪುಗಳನ್ನು ಬಿಸಿ ಮಾಡುತ್ತಿದ್ದರು, ಅಷ್ಟೇ ಅಲ್ಲ, ರುಚಿಯಿಂದ ಖುಷಿಯಾಗಿ ನಾಲ್ಕು ರುಪಾಯಿ ಹೆಚ್ಚೇ ಕೊಟ್ಟೆವು ಅಂತಲೂ ಪ್ರಚಾರ ಮಾಡುತ್ತಿದ್ದುದರಿಂದ ಗಜಪತದಾಸರ ಹೋಟೆಲಿನ ಇಮೇಜು ದಿನೇದಿನೇ ಏರುತ್ತಿತ್ತು.

ಹೀಗಿರುವಾಗ, ಒಂದು ಬಾರಿ, ಆಗ ನಾನು ಹೇಳಿದಂತೆ ಹದಿನೈದು ಇಪ್ಪತ್ತು ವರ್ಷಗಳ ಹಿಂದೆ ಲೋಕಸಭಾ ಚುನಾವಣೆ ಬಂತು. ಈ ಗಿರಾಕಿಗಳು ಗಾಳಿ ಹಾಕಿದರು. ನೀವು ನಿಂತರೆ ಗೆದ್ದದ್ದೇ ಅಂದರು. ಗೆಲ್ಲುವುದಿಲ್ಲ ಅಂತ ಗೊತ್ತಿದ್ದರೂ ಗಜಪತಿದಾಸರಿಗೆ ಇದು ತನ್ನ ಹೋಟೆಲಿನ ಹೆಸರನ್ನು ಇನ್ನಷ್ಟು  ಪ್ರಚಾರಕ್ಕೆ ತರಲು ಒಂದು ಅವಕಾಶವಾಗಿ ಕಂಡಿತು. ಅವರಿಗೆ ಯಾವ ರಾಷ್ಟ್ರೀಯ ಅಥವಾ ರಾಜ್ಯೀಯ ಅಥವ ಸ್ಥಳೀಯ ಪಕ್ಷವೂ ಯಾವ ಕ್ಷೇತ್ರದಲ್ಲೂ ಚುನಾವಣಾ ಟಿಕೇಟನ್ನು ಕೊಡುವ ಸಂಭವ ಇರಲಿಲ್ಲ. ಅದರ ಬಗ್ಗೆ ಅವರಿಗೆ ಆಸಕ್ತಿಯೂ ಇರಲಿಲ್ಲ. ಯಾವ ಪಕ್ಷದಿಂದ ನಿಂತರೂ ಇನ್ನುಳಿದ ಪಕ್ಷಗಳತ್ತ ಒಲವಿರುವ ಗಿರಾಕಿಗಳು ತಪ್ಪಿದರೆ? ಪಕ್ಷೇತರನಾಗಿ ಎಲ್ಲರೊಂದಿಗೂ ಚೆನ್ನಾಗಿ ಇರುವುದು ಅಂತ ಅವರು ತೀರ್ಮಾನಿಸಿದರು.  ಅಂತೂ ಆ ಲೋಕಸಭಾ ಚುನಾವಣೆಯಲ್ಲಿ ನಮ್ಮ ಗಜಪತದಾಸರು ಮಾಗಳಾಪುರ ಕ್ಷೇತ್ರದಿಂದ ಸ್ಪರ್ಧಿಸಲು ತಯಾರಾದರು. ಅವರ ನಾಮಪತ್ರಕ್ಕೆ ಅನುಮೋದಕರಾಗಿ ನಾವೇ ಅಥವಾ ಸಾಕಾಗದಿದ್ದರೆ ನಮ್ಮ ಹೆಂಡಂದಿರ ಸಹಿಯನ್ನಾದರೂ ಹಾಕಿಸುತ್ತೇವೆಂದು ಈ ನಮ್ಮ ಖಾಯಂ ಗಿರಾಕಿಗಳು ಭರವಸೆ ನೀಡಿದರು.

ಜಾಹೀರಾತು

ಹೇಗಿದ್ದರೂ ವೋಟಿಗೆ ನಿಂತ ಬಳಿಕ ಅದೂ ಲೋಕಸಭಾ ಸ್ಥಾನಕ್ಕೆ ನಿಂತರೆ ಕನಿಷ್ಠ ಹತ್ತು ಸಾವಿರವಾದರೂ ಮತ ಪಡೆಯಬೇಕು ಅಂತ ಅವರ ಮನಸ್ಸು ಹೇಳುತ್ತಿತ್ತು. ಮಾಗಳಾಪುರ ಕ್ಷೇತ್ರದಲ್ಲಿ  ಏನಿಲ್ಲದಿದ್ದರೂ ಒಟ್ಟು ಹತ್ತು ಲಕ್ಷ ವೋಟಾದರೂ ಪ್ರತಿ ಚುನಾವಣೆಯಲ್ಲೂ ಪೋಲು ಆಗುತ್ತಿತ್ತು. ಪೋಲು ಆಗುತ್ತಿತ್ತು ಅಂದರೆ ಚಲಾವಣೆಯಾಗುತ್ತಿತ್ತು ಅಂತರ್ಥ. ಈಗ ಹತ್ತು ಸಾವಿರವಾದರೂ ಮತಗಳನ್ನು ಪಡೆಯುವುದು ಹೇಗೆ?

ಗಜಪತದಾಸರು ಈ ತಲೆಬಿಸಿಯಲ್ಲಿದ್ದಾಗಲೇ ನಾನು ಆ ಹೋಟೆಲಿಗೆ ಆಕಸ್ಮಿಕವಾಗಿ ಕಾಪಿ ಕುಡಿಯಲು ಹೋದದ್ದು. ವಿಟ್ಟಲವೆಂಬ ಊರು ನನ್ನದಲ್ಲವಾದರೂ ಒಂದೆರಡು ಮೂರು ತಿಂಗಳಿಗೊಮ್ಮೆ ನಾನು ವಿಟ್ಟಲಕ್ಕೆ ಹೋಗುವ ಸಂದರ್ಭ ಬರುತ್ತಿದ್ದುದರಿಂದ ನಾನೇನೂ ಅದಕ್ಕಿಂತ ಮೊದಲು ಗಜಪತದಾಸರ ಹೋಟೆಲಿಗೆ ಹೋಗಿರಲಿಲ್ಲವೆಂದಲ್ಲ. ಹೋಗಿದ್ದೆವನಾದರೂ ಮತ್ತು ಅವರನ್ನು ಗಲ್ಲಾದಲ್ಲಿ ಕುಳಿತಿದ್ದುದನ್ನು ನೋಡಿದ್ದೆನಾದರೂ ಗಿರಾಕಿಗಳಿಗೆ ಕೊಡಬೇಕಾದ ಚಿಲ್ಲರೆಯನ್ನು ಮೇಜಿನ ಮೇಲೆ ಠಣ್ಣೆಂದು ಎಸೆಯದೆ ಸೌಜನ್ಯದಿಂದ ಮತ್ತು ಗಿರಾಕಿಗಳಿಗೆ ಖುಷಿಯಾಗುವಂತೆ ವರ್ತಿಸುವವರೆಂದು ಗುರುತಿಸಿದ್ದೆನಾದರೂ ಅಂಥ ವಿಶೇಷ ಪರಿಚಯವಾಗುವ ಪ್ರಸಂಗ ಬಂದಿರಲಿಲ್ಲ. ಅಥವಾ ನನಗೆ ಅವರನ್ನು ನೋಡಿ ಗೊತ್ತಿದ್ದರೂ ಅವರಿಗೆ ನನ್ನನ್ನು ಗೊತ್ತಿರುವ ಸಂಭವ ಇರಲಿಲ್ಲ.

ಗಜಪತದಾಸರು ತಲೆಬಿಸಿಯಲ್ಲಿರುವಾಗ ಹೋಟೆಲಿಗೆ ಹೋದೆ ಅಂದೆನಲ್ಲ. ಅವರು ನಾಮಪತ್ರ ಸಲ್ಲಿಸಲು ಇನ್ನೂ ಕೆಲ ದಿನಗಳಿದ್ದವು. ಚುನಾವಣಾ ಜ್ವರ ಆರಂಭವಾಗಿತ್ತು. ಚುನಾವಣಾ ಅಧಿಸೂಚನೆ ಆಗಿನ್ನೂ ಪ್ರಕಟವಾಗಿರಲಿಲ್ಲ. ಗಜಪತದಾಸರು ಚುನಾವಣೆಗೆ ನಿಲ್ಲಲು ಅವರು ಕಾರಣರಾದದ್ದು ಮತ್ತು ಈ ನಾಲ್ಕೈದು ಮಂದಿಯ ಒಟ್ಟು ಕಾಪಿ ತಿಂಡಿ ಬಾಕಿ ವ್ಯವಹಾರವೆಲ್ಲ ನನಗೆ ಆ ದಿನ ಆದ ಪರಿಚಯದ ಕಾರಣ ಮತ್ತು ಚುನಾವಣಾ ಕಾರ್ಯತಂತ್ರದಲ್ಲಿ ನನ್ನಿಂದಾಗಿ ಗಜಪತದಾಸರಿಗೆ ಧರ್ಮಕ್ಕೇ ಹತ್ತುಸಾವಿರದಷ್ಟು ವೋಟು ಸಿಕ್ಕಿದ್ದರಿಂದ ನನ್ನ ಬಗ್ಗೆ ಅವರೆಲ್ಲರಿಗೂ ಗೌರವ ಮತ್ತು ಸಲಿಗೆ ಹೆಚ್ಚಾದ್ದರಿಂದ, ಅವರಲ್ಲೊಬ್ಬರು ಮುಂದೊಂದು ದಿನ ಹೇಳಿದ್ದರಿಂದ ಗೊತ್ತಾದದ್ದು. ಅಂತೂ ನಾನಂದು ಹೋಟೆಲಿಗೆ ತಲುಪಿದಾಗ ಗಜಪತದಾಸರು ಮತ್ತು ಗಲ್ಲಾದ ಹತ್ತಿರವೇ ಇದ್ದ ಮೇಜಿನ ಸುತ್ತ ಕೂತಿದ್ದ ಈ ನಾಲ್ಕೈದು ಮಂದಿ ನನಗೆ ಕೇಳಬಹುದೆಂಬ ಯಾವ ಮುಚ್ಚುಮರೆಯೂ ಇಲ್ಲದೆ ಮತ ಗಳಿಸಲು ಏನು ಮಾಡುವುದೆಂದು ಮಾತಾಡಿಕೊಳ್ಳುತ್ತಿದ್ದರು. ನಾನೂ ನನ್ನಷ್ಟಕ್ಕೇ ಕಡಲೆ ಅವಲಕ್ಕಿ ಮೆಲ್ಲುತ್ತಿದ್ದೆ. ನಾನು ಹಣ ಖರ್ಚು ಮಾಡುವುದಿಲ್ಲ ಅಂತ ಗಜಪತದಾಸರು ಹೇಳುತ್ತಿದ್ದರು. ಪ್ರಚಾರದ ನೆಪದಲ್ಲಿ ಅವರ ಹಣ ಹೊಡೆವ ಆಸೆ ಈ ನಾಲ್ಕೈದು ಮಂದಿಗೂ ಇದ್ದಂತೆ ನನಗೆ ಕಾಣಲಿಲ್ಲ. ಸ್ವಲ್ಪವಾದರೂ ಖರ್ಚು ಮಾಡದಿದ್ದರೆ ಹೇಗೆ ಅಂತಲೂ ಮಾತು ಬರುತ್ತಿತ್ತು. ನನಗೆ ಅವರ ಮಾತು ಕೇಳಲು ಕುತೂಹಲವಾಗಿ ಒಂದು ಪ್ಲೇಟು ಕಡಲೆ ಅವಲಕ್ಕಿ ಮುಗಿದಾಗ ಇನ್ನೊಂದು ತರಲು ಸಪ್ಲಯರನಿಗೆ ಹೇಳಿದೆ. ಅವರ ಮಾತುಕತೆಯಿಂದ ಅವರು ಮಾಗಳಾಪುರ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸುವವರೆಂದು ನನಗೆ ಅಂದಾಜಾಗಿತ್ತು.

ಜಾಹೀರಾತು

ಇವರ ಮಾತು ಕೇಳುತ್ತ ಕೇಳುತ್ತ ಕೊನೆಗೆ ಕಾಪಿ ಕುಡಿದು ಹೊರಡುತ್ತ ದುಡ್ಡು ಕೊಡುವಾಗ ತಡೆಯಲಾಗಲಿಲ್ಲ. ನಿಮ್ಮ ಹೆಸರು ಏನು ಎಂದು ಗಲ್ಲಾದಲ್ಲಿದ್ದ ಗಜಪತದಾಸರಲ್ಲಿ ಕೇಳಿದೆ. ಆಗ, ಅಂದರೆ ಕೇಳುವಾಗ ಅವರ ಹೆಸರು ಹೀಗೆ ಅಂತ ನನಗೆ ಗೊತ್ತಿರಲಿಲ್ಲ. ಅವರು ಹೇಳಿದಾಗ ಗೊತ್ತಾಯಿತು. ನಾನೊಂದು ಉಪಾಯ ಹೇಳುತ್ತೇನೆ ಅಂದೆ. ಯಾವುದಕ್ಕೆ ಅಂತ ಕೇಳಿದರು. ನೀವು ಕನಿಷ್ಠ ಹತ್ತು ಸಾವಿರ ವೋಟು ಪಡೆಯಲು ಅಂದೆ. ಏನು ಉಪಾಯ ಅಂತ ಕೇಳಿದರು. ಆ ವರ್ಷ ಮತಯಂತ್ರದ ಚುನಾವಣೆ ಅಂತ ನಿರ್ಣಯವಾಗಿದೆಯಲ್ಲ? ನಿಮ್ಮ ಹೆಸರು ಮತಯಂತ್ರದ ಮತಪತ್ರದಲ್ಲಿ  ಗಜಪತದಾಸ ಎಂದಿರಬಾರದು, ಬದಲಾಗಿ ಝೈಯೋ ಗಜಪತದಾಸ ಎಂದಿರಬೇಕು ಮತ್ತು ಇಂಗ್ಲಿಷಿನಲ್ಲಿ ಅದರ ಸ್ಪೆಲ್ಲಿಂಗು ಝೆಡ್ ವೈ ವೈ ಓ ಹೀಗೆ ಆರಂಭವಾಗಬೇಕು ಅಂದೆ. ಸಂಖ್ಯಾಶಾಸ್ತ್ರಿ ಜ್ಯೋತಿಷಿಗಳಿರುವಂತೆ ನಾನು ಒಬ್ಬ ಇಂಗ್ಲಿಷ್ ಅಕ್ಷರಶಾಸ್ತ್ರಿ ಜ್ಯೋತಿಷಿ ಎಂದು ಅವರು ಅಂದುಕೊಂಡು ನನ್ನನ್ನು ನಂಬಿದರೋ ಏನೋ? ಒಪ್ಪಿದರು.

ಚುನಾವಣೆ ನಡೆಯಿತು. ಮತಯಂತ್ರದಲ್ಲಿದ್ದ ಮೂರು ರಾಷ್ಟ್ರೀಯ ಪಕ್ಷದವರು ಮತ್ತು ಏಳು ಪಕ್ಷೇತರರ ಪೈಕಿ ಕೊನೆಯದಾಗಿ ಹೆಸರಿದ್ದ ನಮ್ಮ ಗಜಪತದಾಸರಿಗೆ ಹನ್ನೊಂದು ಸಾವಿರ ಮತಗಳು ಬಂದವು. ಇತರ ಪಕ್ಷೇತರರಿಗೆ ಬಂದ ಸರಾಸರಿ ಮತಗಳು ಮೂರುಸಾವಿರ. ಇನ್ನೂ ಒಂದು ಸ್ವಾರಸ್ಯ ಆ ವರ್ಷದ ಚುನಾವಣೆಯಲ್ಲಿ ನಡೆಯಿತು! ರಾಷ್ಟ್ರೀಯ ಪಕ್ಷವೊಂದರ ಅಭ್ಯರ್ಥಿಯಾಗಿ ಮಾಗಳಾಪುರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ, ಅಲ್ಲಿಯವರೆಗೆ ಕೇವಲ ಸೋಮನಾಥದಾಸರು ಮಾತ್ರವಾಗಿದ್ದ, ಸೋಮನಾಥದಾಸರು,  ನಾಮಪತ್ರ ಸಲ್ಲಿಸುವಾಗ ಅಬ್ಬಯ್ಯ ಸೋಮನಾಥದಾಸರಾಗಿ ನಾಮಪತ್ರ ಸಲ್ಲಿಸಿದ್ದರಿಂದ ಅವರ ಹೆಸರು ನಾಮಪತ್ರದಲ್ಲಿ ಮೊದಲಿನ ಹೆಸರಾಗಿತ್ತು. ಅವರು ಎಪ್ಪತ್ತೇಳು  ಮತಗಳ ಅಂತರದಿಂದ ಗೆದ್ದು ದಿಲ್ಲಿಗೆ ಹೋದರು. ಅವರಿಗೆ ಯಾವ ಅಕ್ಷರಶಾಸ್ತ್ರಿ ಜ್ಯೋತಿಷಿ ಸಿಕ್ಕಿದ್ದನೋ?

ಇಲ್ಲಿಗೆ ಕಥೆ ಮುಗಿಯಿತು.

ಜಾಹೀರಾತು

ಕಥೆ ಸರಿಯಾಗಿ ಅರ್ಥವಾಗದವರು ನಾಡಿದ್ದು ಚುನಾವಣಾ ಫಲಿತಾಂಶ ಬಂದಾಗ ಕೊನೆಯ ಅಭ್ಯರ್ಥಿ ಪಡೆವ ಮತವನ್ನು ಲೆಕ್ಕ ಮಾಡಿರಿ.

ಚುನಾವಣಾ ಆಯೋಗಕ್ಕೆ ಮಾತ್ರ ನಮ್ಮಂಥ ಅಕ್ಷರಶಾಸ್ತ್ರಿ ಜ್ಯೋತಿಷಿಗಳು ಇರುವ ಗುಟ್ಟನ್ನು ಮಾತ್ರ ಹೇಳಬೇಡಿ ಮಾರಾಯರೆ!!

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು

About the Author

Dr. Ajakkala Girish Bhat
ವೃತ್ತಿಯಲ್ಲಿಕನ್ನಡ ಬೋಧಕ. ಬಂಟ್ವಾಳ ಸರಕಾರಿ ಪದವಿ ಕಾಲೇಜು ಪ್ರಾಂಶುಪಾಲ. ಇಂಗ್ಲಿಷನ್ನುಪಳಗಿಸೋಣ, ಬುದ್ಧಿಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ, ಅಸತ್ಯ ಅಥವಾ ಸತ್ಯ?, ಮುಂತಾದ ಹದಿನಾರು ಪುಸ್ತಕಗಳು ಪ್ರಕಟವಾಗಿವೆ. ವಿವಿಧ ಗೋಷ್ಠಿ, ಸಮ್ಮೇಳನಗಳಲ್ಲಿ ಪ್ರಬಂಧ, ವಿಚಾರ ಮಂಡಿಸಿದ್ದಾರೆ.

Be the first to comment on "ಮತ-ಕಥೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*