ಇಡೀ ದಿನ ಇಲ್ಲವಾದ್ರೆ ನನ್ನನ್ನು ಕಳುಹಿಸುವುದಿಲ್ಲ..

ಕೆಲವೆಡೆಗಳಲ್ಲಿ ಶಿಬಿರ ನಡೆಸುವವರೂ ಹಾಗೆ ಮಾಡುತ್ತಾರೆ. ನಿಮ್ಮ ಮಕ್ಕಳಿಗೆ ರಜಾ ಸಮಯವನ್ನು ಕ್ಯಾಂಪಿನಲ್ಲೇ ಕಳೆಯಿರಿ-  ಐನೂರು- ಒಂದುಸಾವಿರ ರೂ. ಪಾವತಿಸಿ ಊಟ ತಿಂಡಿ ಎಲ್ಲಾ ಕೊಡುತ್ತೇವೆ – ದಿನವಿಡೀ ಚಟುವಟಿಕೆ ಎಂದೆಲ್ಲಾ ಜಾಹಿರಾತು ನೀಡಿ ಮಕ್ಕಳನ್ನು ಅದಕ್ಕಿಂತಲೂ ಮುಖ್ಯವಾಗಿ ಪೋಷಕರನ್ನು ಸೆಳೆಯುತ್ತಾರೆ.

www.bantwalnews.com

  • ಮೌನೇಶ ವಿಶ್ವಕರ್ಮ
  • ಅಂಕಣ: ಮಕ್ಕಳ ಮಾತು

ಜಾಹೀರಾತು

ಪರೀಕ್ಷೆಗಳು ಮುಗಿಯುತ್ತಿರುವಂತೆಯೇ ಅನೇಕ ಮನೆಗಳಲ್ಲಿ ಹೆತ್ತವರಿಗೆ ಮೂಡುವ ಪ್ರಶ್ನೆ ಒಂದೇ..ರಜೆಯಲ್ಲಿ ಮಕ್ಕಳನ್ನು ಎಲ್ಲಿಗೆ ಕಳುಹಿಸುವುದು..? ನಮ್ಮ ಒತ್ತಡಗಳ ನಡುವೆ ಮಕ್ಕಳನ್ನು ಎಂಗೇಜ್ ಮಾಡುವುದು ಹೇಗೆ..? ಇಂತಹಾ ಪ್ರಶ್ನೆಗಳಿಗೆ  ಉತ್ತರ ದೊರಕುವುದು ಅಲ್ಲಲ್ಲಿ ನಡೆಸುವ ಬೇಸಿಗೆ ಶಿಬಿರಗಳಲ್ಲಿ. ಅನೇಕ ಶಿಬಿರಗಳು ಮಕ್ಕಳಿಗೆ ಸೃಜನಶೀಲತೆಯ ಪಾಠ ಹೇಳಿಕೊಡುತ್ತದೆಯಾದರೂ, ಉದ್ದಿಮೆಗಳಂತೆ ಕೆಲವೆಡೆ ನಡೆಯುವ ಶಿಬಿರಗಳು ಮಕ್ಕಳ ಖುಷಿಗೆ ಕಡಿವಾಣ ಹಾಕುತ್ತದೆ.

ಉದ್ಯೋಗದಲ್ಲಿರುವ ಪೋಷಕರಂತೂ ಮಕ್ಕಳನ್ನು ಬೇಸಿಗೆ ಶಿಬಿರಕ್ಕೆ ಕಳುಹಿಸುವುದೇ ಉತ್ತಮ ಎಂದು ಭಾವಿಸಿ, ಪರೀಕ್ಷೆಗೆ ಮುನ್ನವೇ ಆ ಬಗೆಯ ಬೇಸಿಗೆ ಶಿಬಿರ ಆಯೋಜಕರ ಶೋಧನೆಯಲ್ಲಿ ತೊಡಗುತ್ತಾರೆ. ಕೆಲ ವರ್ಷದ ಹಿಂದೆ ನಾನೊಂದು ಶಾಲೆಯಲ್ಲಿ 10 ದಿನಗಳ ಬೇಸಿಗೆ ಶಿಬಿರವನ್ನು ನಿರ್ವಹಿಸಿದ್ದೆ, ನಾನು ಅವರಿಗೆ ನೀಡಿದ ವೇಳಾಪಟ್ಟಿಯಂತೆ ಬೆಳಿಗ್ಗೆ ೯.೩೦ ರಿಂದ ೧೨.೩೦ ರ ವರೆಗೆ ರಂಗಕಲಿಕೆ, ಆಟ ನಡೆಸಬೇಕಾಗಿತ್ತು. ಎರಡು ದಿನ ಕಳೆಯಿತು. ವಿದ್ಯಾರ್ಥಿನಿಯೊಬ್ಬಳು ನನ್ನಲ್ಲಿ ಬಂದು ಅಳುಕಿನಿಂದಲೇ ಕೇಳಿದಳು ಸರ್..ಶಿಬಿರ ಇಡೀ ದಿನ ಮಾಡಬಹುದಾ ಅಂತ ಅಮ್ಮ ಕೇಳಿದರು.. ನನಗೆ ಅಚ್ಚರಿಯಾಯಿತು. ಶಾಲೆಯ ಆಡಳಿತ ಮಂಡಳಿ-ಮುಖ್ಯಶಿಕ್ಷಕರ ಸೂಚನೆಯಂತೆ ನಾನು ಆ ಶಾಲೆಯಲ್ಲಿ ಶಿಬಿರ ನಿರ್ವಹಿಸುತ್ತಿದ್ದೆ. ಆದರೆ ಆ ವಿದ್ಯಾರ್ಥಿನಿಯ ಮಾತಿನಿಂದ ಆತಂಕಕ್ಕೆ ಒಳಗಾದ ನಾನು  ಹಾಗೆ ಆಗುದಿಲ್ಲ, ಇದು ಹೆಡ್‌ಮಾಸ್ಟ್ರ್ ಹೇಳಿದ ಹಾಗೆ ಮಾಡುವುದು ಎಂದಾಗ , ಇಡೀದಿನ ಇಲ್ಲವಾದ್ರೆ ನನ್ನನ್ನು ನಾಳೆಯಿಂದ ಕಳುಹಿಸುವುದಿಲ್ಲ ಅಂತ ಹೇಳಿದಾರೆ.. ನಾನೇನು ಮಾಡ್ಲಿ ಎಂದು ಅಳುಮೋರೆ ಮಾಡಿಕೊಂಡಳು. ಆಗ ಅವಳಿಗೆ ಸಮಾಧಾನ ಹೇಳಿದ ನಾನು  ಅಮ್ಮ ಮತ್ತೆ ಬರ್‍ತಾರಲ್ವಾ .. ನಾನು ಮಾತಾಡ್ತೇನೆ.. ಎಂದೆ,

ಜಾಹೀರಾತು

ಮಧ್ಯಾಹ್ನದ ಹೊತ್ತು ಅವಳಮ್ಮ ಬಂದರು. ಅವರ ಮಗಳು ಹೇಳಿದ ಮಾತುಗಳನ್ನೇ ಪ್ರಸ್ತಾಪಿಸಿದಾಗ ಹೌದು ಸಾರ್ ತುಂಬಾ ಕಷ್ಟ ಆಗ್ತದೆ, ಇವಳನ್ನು ಇಲ್ಲಿ ಬಿಟ್ಟು ನಾನು ಆಫೀಸ್ ಗೆ ಹೋಗ್ಬೇಕು,. ಮಧ್ಯಾಹ್ನ ಮತ್ತೆ ಮನೆಗೆ ಕರ್‍ಕೊಂಡು ಹೋಗ್ಬೇಕು..ಆಫೀಸ್ ವರ್ಕ್ ಎಲ್ಲಾ ಬ್ಯುಸಿ ಇರ್‍ತೇವೆ, ಊಟದ ಫ್ರೀ ಟೈಮ್ ಎಲ್ಲಾ ಇವಳಿಗೇ ಕೊಡ್ಬೇಕಾಗ್ತದೆ.. ಅದೇ ಶಾಲೆಯ ಹಾಗೆ ಇಡೀ ದಿನ ಇದ್ರೆ ನಮ್ಗೂ ಸ್ವಲ್ಪ ಅನುಕೂಲ,, ಮತ್ತೆ ಇವ್ರೂ.. ॒ಅನ್ನುತ್ತಿದ್ದಂತೆಯೇ ಅವರ ಮಾತಿಗೆ ಬ್ರೇಕ್ ಹಾಕಿದೆ. ನೋಡಿ ಮೇಡಂ, ನೀವು ಹೇಳುವುದು ಎಲ್ಲಾ ಸರಿ. ಆದ್ರೆ ನಿಮ್ಮ ಮಗಳ ಬಗ್ಗೆ ಯೋಚನೆ ಮಾಡಿದ್ರಾ,,? ಅವಳು ಕ್ಯಾಂಪ್‌ಗೆ ಬೇಕಾಗಿ ಇಲ್ಲಿಗೆ ಬರೋಕೆ ಇಷ್ಟಾ ಪಡ್ತಾ ಇದ್ದಾಳೆ ವಿನಃ ಟೈಂಪಾಸ್ ಗೆ ಅಲ್ಲ, ಇದು ಟೈಂಪಾಸ್ ಮಾಡುವ ಕ್ಯಾಂಪೂ ಅಲ್ಲ. ಮಕ್ಕಳನ್ನು ಚಟುವಟಿಕೆಯ ಮೂಲಕ ಕ್ರೀಯಾಶೀಲರನ್ನಾಗಿಸುವ ಶಿಬಿರ. ನಿಮ್ಗೆ ಕಷ್ಟ ಆಗ್ತದೆ ಅಂತ ಮಗಳನ್ನು ಕ್ಯಾಂಪ್ ಗೆ ಕಳುಹಿಸದೇ ಮತ್ತು ಕಳುಹಿಸುತ್ತಿರುವುದು ಕೂಡ ತಪ್ಪು.. ಸರಿಯಾಗಿ ಯೋಚನೆ ಮಾಡಿಎಂದಾಗ ಅವರಿಗೆ ಅರ್ಥವಾಯಿತೋ ಏನೋ..? ಮಾರನೇ ದಿನದಿಂದ ಅವರ ಮಗಳು ಸಮಯಕ್ಕೆ ಸರಿಯಾಗಿ ಶಿಬಿರಕ್ಕೆ ಹಾಜರಾಗಿ ಕ್ಯಾಂಪನ್ನು ಎಂಜಾಯ್ ಮಾಡಿದಳು.

ಮಕ್ಕಳಿಗೆ ಖುಷಿಯಾಗಲಿ ಜ್ಞಾನ ಹೆಚ್ಚಾಗಲಿ ಎಂದು ಶಿಬಿರಕ್ಕೆ ಕಳುಹಿಸಬೇಕಾದ ಪೋಷಕರು ಮಕ್ಕಳ ಕಾಟ ತಪ್ಪಲಿ ಎಂದು ಶಿಬಿರಕ್ಕೆ ಕಳುಹಿಸುವುದು ಎಷ್ಟು ಸರಿ ಈ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಇನ್ನೂ ಕೆಲವೆಡೆಗಳಲ್ಲಿ ಶಿಬಿರ ನಡೆಸುವವರೂ ಹಾಗೆ ಮಾಡುತ್ತಾರೆ. ನಿಮ್ಮ ಮಕ್ಕಳಿಗೆ ರಜಾ ಸಮಯವನ್ನು ಕ್ಯಾಂಪಿನಲ್ಲೇ ಕಳೆಯಿರಿ,ಐನೂರು ಒಂದುಸಾವಿರ ರೂ. ಪಾವತಿಸಿ.. ಊಟ ತಿಂಡಿ, ಎಲ್ಲಾ ಕೊಡುತ್ತೇವೆ ದಿನವಿಡೀ ಚಟುವಟಿಕೆ ॒ಎಂದೆಲ್ಲಾ ಜಾಹಿರಾತು ನೀಡಿ ಮಕ್ಕಳನ್ನು-ಅದಕ್ಕಿಂತಲೂ ಮುಖ್ಯವಾಗಿ ಪೋಷಕರನ್ನು ಸೆಳೆಯುತ್ತಾರೆ. ಹೀಗೆ ಕ್ಯಾಂಪಿಗೆ ಬಂದ ಮಕ್ಕಳು ದಿನವಿಡೀ ಕ್ಯಾಂಪ್ ನಡೆಯುವ ಆವರಣದಲ್ಲಿರುತ್ತಾರೆ. ಆದರೆ ಅವರೆಂದೂ ಅಲ್ಲಿ ಖುಷಿಯಲ್ಲಿರುವುದಿಲ್ಲ. ಅಲ್ಲಿ ಆಯೋಜಕರು ಅವರಿಗೆ ಬಣ್ಣವನ್ನೋ, ಮಣ್ಣನ್ನೋ ನೀಡಿ ಅದರಲ್ಲಿ ಚಿತ್ರಮಾಡಿ, ಮೂರ್ತಿ ಮಾಡಿ ಎಂದೆಲ್ಲಾ ಹೇಳಿ ದಿನಕಳೆಯಿಸುತ್ತಾರೆ, ಏನಾದರೊಂದು ಹೊಸತನ್ನು ಕಲಿಯಬೇಕೆನ್ನುವ ಮಕ್ಕಳ ಕನಸಿಗೆ ಇಲ್ಲಿ ತಣ್ಣೀರೆರಚುತ್ತಾರೆ.  ಮಕ್ಕಳನ್ನು ಮಕ್ಕಳ ಹಾಗೆ ಇರಲು ಬಿಡಿ-ಅವರು ಎಲ್ಲವನ್ನೂ ಕಲಿತು ಕೊಳ್ಳುತ್ತಾರೆ ಎನ್ನುವವರೂ ಇರುತ್ತಾರೆ. ಇದೂ ಹೌದು ಆದರೆ ಆ ರೀತಿಯ  ಕಲಿಕೆಗೆ ಕ್ಯಾಂಪ್‌ಗಳೂ, ತರಗತಿಗಳ ಅಗತ್ಯವೇ ಇರುವುದಿಲ್ಲ. ಮಕ್ಕಳಿಗೆ ಅರಿವಿಲ್ಲದ ಹಾಗೆ ಖುಷಿಯ ಸೂತ್ರದಲ್ಲಿ ಅವರನ್ನು ಹತೋಟಿಯಲ್ಲಿಟ್ಟಿಕೊಂಡು ಅವರಿಗೆ ಕಲಿಕೆಯ ದಾರಿ ತೋರುವುದು ಶಿಬಿರದ ಮುಖ್ಯ ಉದ್ದೇಶವಾಗಬೇಕು. ಆದರೆ ಹೆತ್ತವರ ಈ ಟೈಂಪಾಸ್ ನೀತಿಯಿಂದಾಗಿ ಮಕ್ಕಳು  ಬರಿಯ ಟೈಂಪಾಸ್ ಕ್ಯಾಂಪ್‌ಗಳಿಗೆ ಅನಿವಾರ್ಯವಾಗಿ ಸೇರಬೇಕಾಗುತ್ತದೆ.

ಮಕ್ಕಳ ತಲೆಗೆ, ಕೈಗೆ ಕೆಲಸ ಕೊಡುವ ಕ್ಯಾಂಪ್ ಗಳಿಂದ ಮಕ್ಕಳು ತುಂಬಾ ಕಲಿತುಕೊಳ್ಳುತ್ತಾರೆ. ಆದರೆ ಹೆತ್ತವರಿಗೆ ಭಾರವಾಗಿ ಕ್ಯಾಂಪ್‌ಗೆ  ಸೇರಿದರೆ ಮಕ್ಕಳು ಅಲ್ಲಿ ಅನಾಥರಾಗುತ್ತಾರೆ, ಸಂತ್ರಸ್ತರಾಗುತ್ತಾರೆ ದಯವಿಟ್ಟು ಹಾಗಾಗುವುದು ಬೇಡ, ಮಕ್ಕಳ ಸೃಜನಶೀಲತೆಗೆ ಅವಕಾಶ ಎಲ್ಲಿದೆಯೋ ಅಂತಹಾ ಶಿಬಿರಗಳಿಗೆ ನಮ್ಮ ಮಕ್ಕಳನ್ನು ದಾಖಲಿಸೋಣ. ಉದ್ದಿಮೆ-ವ್ಯಾಪಾರ ಎಂಬಂತೆ ನಡೆಯುವ ಶಿಬಿರಗಳಿಂದ ನಮ್ಮ ಮಕ್ಕಳನ್ನು ದೂರವಿರಿಸೋಣ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Mounesh Vishwakarma
ಮಕ್ಕಳ ಹಕ್ಕು ಮತ್ತು ರಕ್ಷಣೆ ಕುರಿತು ನಿರಂತರವಾಗಿ ಕೆಲಸ ಮಾಡುತ್ತಾ ಬಂದಿರುವ ರಂಗಭೂಮಿ ಕಾರ್ಯಕರ್ತ, ಪತ್ರಕರ್ತ ಮೌನೇಶ ವಿಶ್ವಕರ್ಮ ಮಕ್ಕಳ ದಿನನಿತ್ಯದ ಆಗುಹೋಗುಗಳಲ್ಲಿ ಸಂಭವಿಸುವ ಘಟನೆಯ ಸೂಕ್ಷ್ಮ ನೋಟ ನೀಡುತ್ತಾರೆ. ಪತ್ರಕರ್ತರಾಗಿ ಹಲವು ವರ್ಷಗಳಿಂದ ಮಂಗಳೂರು, ಪುತ್ತೂರು ಬಂಟ್ವಾಳಗಳಲ್ಲಿ ದುಡಿಯುತ್ತಿರುವ ಅವರು ಸಂಪನ್ಮೂಲ ವ್ಯಕ್ತಿಯೂ ಹೌದು.

Be the first to comment on "ಇಡೀ ದಿನ ಇಲ್ಲವಾದ್ರೆ ನನ್ನನ್ನು ಕಳುಹಿಸುವುದಿಲ್ಲ.."

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*