ಇಂದು ದಂತ ವೈದ್ಯರ ದಿನ

ಮಾರ್ಚ್ 6 ರಂದು ದೇಶಾದ್ಯಂತ ದಂತ ವೈದ್ಯರ ದಿನ ಎಂದು ಆಚರಿಸಲಾಗುತ್ತದೆ. ದಂತ ವೈದ್ಯರ ಸೇವೆಯನ್ನು ಸ್ಮರಿಸುತ್ತಾ ಅವರಿಗೊಂದು ಧನ್ಯವಾದ ಅಥವಾ ಅಭಿನಂದನೆ ತಿಳಿಸುವ ಸುದಿನ.

  • ಡಾ|| ಮುರಲೀ ಮೋಹನ್ ಚೂಂತಾರು
    ಸುರಕ್ಷಾದಂತ ಚಿಕಿತ್ಸಾಲಯ
    ಹೊಸಂಗಡಿ – 671323
    ಮೊ : 09845135787

 

ಜಾಹೀರಾತು

ಅದೇಕೋ ದಂತ ವೈದ್ಯರ ಬಗೆಗಿನ ಭಯ ಜನ ಸಾಮಾನ್ಯರಲ್ಲಿ ಇನ್ನೂ ಉಳಿದಿದೆ. ದಂತ ವೈದ್ಯರು ಎಂದರೆ ನೋವು ಉಂಟು ಮಾಡುವವರು ಎಂಬ ಹಣೆ ಪಟ್ಟಿ ಇನ್ನೂ ಪೂರ್ತಿಯಾಗಿ ಕಳಚಿ ಕೊಂಡಿಲ್ಲ. ತಲೆ ತಲಾಂತರಗಳಿಂದ ದಂತ ವೈದ್ಯರನ್ನು ಖಳ ನಾಯಕನ ರೀತಿಯಲ್ಲಿ ಚಿತ್ರಿಸಲಾಗಿದೆ ಮತ್ತು ಜನಮಾನಸದಲ್ಲಿ ದಂತ ವೈದ್ಯರ ಬಗ್ಗೆ ಬೀತಿಯ ಕಲ್ಪನೆ ಇನ್ನೂ ತೊಲಗಿಲ್ಲದಿರುವುದೇ ಸೋಜಿಗರ ಮತ್ತು ದೌರ್ಭಾಗ್ಯದ ಸಂಗತಿ. ಯಾವೊಬ್ಬ ವ್ಯಕ್ತಿಯೂ ನೋವಿಲ್ಲದೇ ಇನ್ನೂ ದಂತ ವೈದ್ಯರ ಬಳಿ ಬರಲು ಹಿಂದೇಟು ಹಾಕುವುದಂತೂ ಸತ್ಯ. ದಂತ ವೈದ್ಯರ ದಂತ ಕುರ್ಚಿ ಮಾತ್ರ ಇನ್ನೂ ಹೆಚ್ಚಿನವರಿಗೆ ಮುಳ್ಳಿನ ಹಾಸಿಗೆಯಾಗಿ ಉಳಿದಿರುವುದೇ ಬಹು ದೊಡ್ಡ ಜೀರ್ಣಿಸಿಕೊಳ್ಳಲಾಗದ ಸತ್ಯ.
ಹಿಂದಿನ ಕಾಲದಲ್ಲಿ ವೈಜ್ಞಾನಿಕತೆ ತಂತ್ರಜ್ಞಾನ ಮತ್ತು ಕೌಶಲ್ಯಗಳ ಕೊರತೆಯಿಂದಾಗಿ ದಂತ ವೈದ್ಯಕೀಯ ಕ್ಷೇತ್ರ ಅಂದರೆ ಜನರಲ್ಲಿ ಒಂದು ರೀತಿಯ ಅವ್ಯಕ್ತ ಭಯ ಕಾಡುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಹೊಸ ಹೊಸ ಆವಿಷ್ಕಾರ ಬಂದಿದೆ. ತಂತ್ರಜ್ಞಾನ ಮತ್ತು ವೈದ್ಯ ವಿಜ್ಞಾನದಲ್ಲಿ ಅಪಾರ ಬದಲಾವಣೆ ಉಂಟಾಗಿದೆ. ಹಾಗಾಗಿ ದಂತ ವೈದ್ಯಕೀಯ ಕ್ಷೇತ್ರ ಈಗ ಮೊದಲಿನಂತೆ ಉಳಿದಿಲ್ಲ. ದಂತ ವೈದ್ಯಕೀಯ ಆಸ್ಪತ್ರೆ ಎಂದರೆ ಯಾವುದೋ ಹೊಸ ಲೋಕಕ್ಕೆ ಎಂದಂತೆ ಭಾಸವಾಗುವ ರೀತಿಯಲ್ಲಿ ಮಾರ್ಪಾಡಾಗಿದೆ. ವಿಶಾಲವಾದ ಜಾಗ, ಮೆತ್ತನೆಯ ದೇಹದಾಕೃತಿಯ ದಂತ ಕುರ್ಚಿ, ಹವಾನಿಯಂತ್ರಿಕ ವಾತಾವರಣ, ಕಿವಿಗೊಪ್ಪುವ ಲಘು ಸಂಗೀತ…ಹಾಗೇ ಬಹಳಷ್ಟು ಬದಲಾವಣೆ ಉಂಟಾಗಿದೆ. ದಂತ ವೈದ್ಯಕೀಯ ಚಿಕಿತ್ಸೆ ಈಗ ಬರೀ ನೋವು ನಿವಾರಕ ವ್ಯವಸ್ಥೆಗಿಂತಲೂ ಸೌಂದರ್ಯವರ್ಧಕ ಚಿಕಿತ್ಸೆಯಾಗಿ ಬದಲಾಗಿರುವುದು ಖಂಡಿತವಾಗಿಯೂ ಸತ್ಯ. ಇಷ್ಟೆಲ್ಲಾ ಬದಲವಣೆಯಾಗಿದ್ದರೂ ಜನರು ಮಾತ್ರ ದಂತ ವೈದ್ಯರ ಬಗ್ಗೆ ಇನ್ನೂ ತಪ್ಪು ಕಲ್ಪನೆಗಳನ್ನು ಹೊಂದಿರುವುದು ಸೋಜಿಗವೇ ಸರಿ. ಅದೇನೋ ಇರಲಿ ನಿಮ್ಮ ನೋವನ್ನು ಶಮನ ಮಾಡುವ ನಿಮ್ಮನ್ನು ಸದಾ ನಗಿಸಲು ಮತ್ತು ಹಸನ್ಮುಖಿಯಾಗಿ ಇರುವಂತೆ ಶುಭ್ರ ದಂತಪಂಕ್ತಿಗಳಿಗಾಗಿ ಸದಾಕಾಲ ಶ್ರಮ ಪಡುವ ದಂತ ವೈದ್ಯರನ್ನು ಸ್ಮರಿಸುವ ಮತ್ತು ಒಂದು ಪುಟ್ಟ ಥ್ಯಾಂಕ್ಸ್ ಹೇಳುವ ದಿನ ಮಾರ್ಚ್ 6 ಎಂಬುದಂತೂ ನಿಜ.
ನೀವು ವಿಪರೀತ ಹಲ್ಲು ನೋವಿನಿಂದ ಬಳಲುತ್ತಿದ್ದು, ಸುಸ್ತು, ಜ್ವರದಿಂದ ಬಳಲಿ, ಅನ್ನ, ಆಹಾರ ತಿನ್ನಲಾಗದೆ ಚಡಪಡಿಸುತ್ತಾ, ನೋವಿನಿಂದ ಸಂಕಟದಿಂದ ನರಳುತ್ತಿದ್ದಾಗ, ನೋವು ಶಮನಗೊಳಿಸಿ, ಧೈರ್ಯನೀಡಿ, ಆತ್ಮ ವಿಶ್ವಾಸ ತುಂಬಿ, ಅರಿವಳಿಕೆ ಚುಚ್ಚು ಮದ್ದು ನೀಡಿ, ನಿಮಗರಿವಿಲ್ಲದಂತೆ ನಿಮ್ಮ ನೋವಿನ ಹಲ್ಲನ್ನು ಕಿತ್ತಾಗ ನಿಮಗಾಗುವ ಸಂತಸವನ್ನು ಒಂದು ಕ್ಷಣ ನೆನೆದುಕೊಳ್ಳಿ. ಅಂತಹ ದಂತ ವೈದ್ಯರನ್ನು ಸ್ಮರಿಸುವ ನೆನಪಿಸಿಕೊಳ್ಳುವ ಮತ್ತು ಆದರಿಸುವ ಸ್ಮರಣೀಯವಾದ ದಿನ ಮಾರ್ಚ್ ೬. ಅದೇ ರೀತಿ ದಂತ ವೈದ್ಯ ಬಂಧುಗಳಿಗೂ ಆತ್ಮಾವಲೋಕನದ ದಿನ ಎಂದರೂ ಅತಿಶಯೋಕ್ತಿಯಲ್ಲ. ತನ್ನ ವೃತ್ತಿ ಜೀವನದ ಏಳು ಬೀಳುಗಳತ್ತ ದೃಷ್ಟಿಹರಿಸಿ, ತನ್ನ ತಪ್ಪು ಒಪ್ಪುಗಳನ್ನು ಪುನರ್ ವಿಮರ್ಷಿಸಿಕೊಂಡು, ಸಾಧನೆಯ ಮಜಲುಗಳತ್ತ ಹಿನ್ನೋಟ ಬೀರಿ ತನ್ನ ತನು,ಮನ,ಧನಗಳನ್ನು ತನ್ನ ವೃತ್ತಿಗೆ ಪುನಃ ಅರ್ಪಿಸಿಕೊಳ್ಳುವ ಸುದಿನ ಎಂದರೂ ತಪ್ಪಲ್ಲ.


ಹಿಂದೊಂದು ಕಾಲವಿತ್ತು. ವೈದ್ಯೋ ನಾರಾಯಣ ಹರಿಃ ಎಂದು ವೈದ್ಯರನ್ನು ಪೂಜಿಸಲಾಗುತ್ತಿತ್ತು ಮತ್ತು ದೇವರ ಸಮಾನರಾಗಿ ಕಾಣುತ್ತಿದ್ದರು. ಅದಕ್ಕೆ ಪ್ರತಿಯಾಗಿ ವೈದ್ಯರೂ ಕೂಡಾ ಮನುಷ್ಯತ್ವವನ್ನು ಎತ್ತಿ ಹಿಡಿದು ದೇವತ್ವವನ್ನು ಪಡೆದ ಸಾವಿರಾರು ಉದಾಹರಣೆ ನಮ್ಮ ಮುಂದಿದೆ. ಆದರೆ ಇಂದು ವ್ಯಾಪಾರೀಕರಣದ ಧಾವಂತದ ಜಗತ್ತಿನಲ್ಲಿ ಎಲ್ಲವೂ ಯಾಂತ್ರೀಕೃತ. ದಂತ ವೈದ್ಯಕೀಯ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಮೊದಲೆಲ್ಲಾ ವೈದ್ಯ ರೋಗಿಯ ಸಂಬಂಧ ನಂಬಿಕೆಯ ತಳಹದಿಯಲ್ಲಿ ಭದ್ರವಾಗಿತ್ತು. ಈಗ ವೈದ್ಯ -ರೋಗಿ ಇಬ್ಬರಲ್ಲೂ ಈ ನಂಬಿಕೆ ವಿಶ್ವಾಸ ಇಲ್ಲದಿರುವುದೇ ದುರಂತದ ಸಂಗತಿ. ದಂತ ವೈದ್ಯಕೀಯ ಕ್ಷೇತ್ರ ನೋವು ನಿವಾರಕ ಪಾತ್ರಕ್ಕಿಂತ ಹೆಚ್ಚಾಗಿ ಸೌಂದರ್ಯವರ್ಧಕ ಚಿಕಿತ್ಸೆಯಾಗಿ ಮಾರ್ಪಾಡಾಗಿದೆ ಎಂದರೂ ತಪ್ಪಲ್ಲ ಮತ್ತು ವೈದ್ಯರೂ ಕೂಡಾ ಬಳಕೆದಾರರ ವೇದಿಕೆಯಲ್ಲಿ ಬರುವುದರಿಂದ ಕೋರ್ಟು ಕಟಕಟೆ, ನ್ಯಾಯಾಲಯ ಹೀಗೆ ಹತ್ತು ಹಲವು ಸಮಸ್ಯೆಗಳೂ ಸೇರಿಕೊಂಡಿದೆ. ಈ ಕಾರಣದಿಂದಲೇ ಚಿಕಿತ್ಸೆ ಆರಂಭಕ್ಕಿಂತಲೂ ಮೊದಲು ಚಿಕಿತ್ಸೆಯ ಮೌಲ್ಯ ಹೇಳುವಂತಹಾ ಅನಿವಾರ್ಯತೆಗೆ ದಂತ ವೈದ್ಯರು ಸಿಲುಕಿದ್ದಾರೆ ಎಂದರೂ ತಪ್ಪಲ್ಲ. ಹಿಂದಿನ ಕಾಲದಲ್ಲಿ ಈ ರೀತಿಯ ವ್ಯವಸ್ಥೆ ಇರಲಿಲ್ಲ. ವೈದ್ಯರು ಚಿಕಿತ್ಸೆ ಮಾಡಿದ ಬಳಿಕ ಮೌಲ್ಯವನ್ನು ರೋಗಿಗಳೇ ಹೆಚ್ಚಾಗಿ ನೀಡುತ್ತಿದ್ದರು (ವೈದ್ಯರ ಆದೇಶದಂತೆ). ಸರ್ವ ವ್ಯಾಪಾರ ದ್ರೋಹ ಚಿಂತನಂ ಎಂಬ ಬಳಕೆಯ ಮಾತು ರೂಢಿಯಲ್ಲಿರುವ ಈ ಕಾಲ ಘಟ್ಟದಲ್ಲಿ, ದಂತ ವೈದ್ಯಕೀಯ ಶಾಸ್ತ್ರವೂ ಒಂದು ವ್ಯಾಪಾರವಾಗಿ ಬಿಟ್ಟಿದೆ ಎಂಬುದು ಬಹಳ ನೋವಿನ ಸಂಗತಿ. ಬಹಳ ಸ್ಪರ್ಧಾತ್ಮಕ ಜಗತ್ತು, ಸಂಪನ್ಮೂಲಗಳ ಸುಲಭ ಲಭ್ಯತೆ ಮತ್ತು ವಿಪರೀತ ಪೈಪೋಟಿಯಿದಾಗಿ ದಂತ ವೈದ್ಯರುಗಳ ನಡುವೆಯೂ ಸ್ಪರ್ಧೆ ಏರ್ಪಟ್ಟಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ವ್ಯಾಪಾರೀಕರಣಗೊಂಡ ವೈದ್ಯಕೀಯ ಕ್ಷೇತ್ರದಲ್ಲಿ ದಂತ ವೈದ್ಯರು ಕೋಟಿಗಟ್ಟಲೆ ಹಣವನ್ನು ಬಂಡವಾಳ ಹಾಕಿದ ಮೇಲೆ ರಾಜಧರ್ಮದ ರಾಜನೀತಿ, ವೃತ್ತಿ ಧರ್ಮ ಇತ್ಯಾದಿ ನಗಣ್ಯವಾಗಿ ಕಾಣಿಸಿದರೂ ಆಶ್ಚರ್ಯವೇನಲ್ಲ. ಮಾನವೀಯತೆ, ಕರುಣೆ, ಉದಾರತೆ, ತತ್ವ ಸಿದ್ಧಾಂತ, ಅನುಕಂಪ ಮುಂತಾದ ಶಬ್ದಗಳು ಶಬ್ದಕೋಶದಲ್ಲಿ ತುಂಬಾ ಚೆನ್ನಾಗಿರುತ್ತದೆ. ಆದರೆ ವ್ಯವಾಹಾರಿಕವಾಗಿ, ವಾಸ್ತವದಲ್ಲಿ ಇವುಗಳಿಗೆ ಏನೊಂದು ಅರ್ಥವೇ ಸಿಗುತ್ತಿಲ್ಲ. ಇದು ನಮ್ಮ ವೈದ್ಯಕೀಯ ವ್ಯವಸ್ಥೆಯ ವ್ಯಂಗ್ಯ, ವಿಡಂಬಣೆ, ಮತ್ತು ಅಣಕವಾಗಿ ಕಂಡು ನಮ್ಮೆದುರು ಭೂತಾಕಾರವಾಗಿ ಬಂದು ನಿಂತರೆ ಅಚ್ಚರಿ ಏನಲ್ಲ.
ದಂತ ವಾಸ್ತವ
ನಮ್ಮ ದೇಶದಲ್ಲಿ ಸುಮಾರು ಹತ್ತಿರ ಹತ್ತಿರ ಮನ್ನೂರು ದಂತ ಕಾಲೇಜುಗಳಿದ್ದು ಏನಿಲ್ಲವೆಂದರೂ ವರ್ಷಕ್ಕೆ ೧೫,೦೦೦ ಮಂದಿ ದಂತ ವೈದ್ಯರು ತೇರ್ಗಡೆ ಹೊಂದಿ ಸಮಾಜದ ಮುಖ್ಯ ವಾಹಿನಿಗೆ ಸೇರುತ್ತಾರೆ. ಇವರೆಲ್ಲರಿಗೂ ಪ್ರತಿಭೆ ಇದ್ದರೂ ಉನ್ನತ ವ್ಯಾಸಂಗ ಮಾಡಲು ಅವಕಾಶ ಸಿಗುವುದಿಲ್ಲ ಯಾಕೆಂದರೆ ನಮ್ಮಲ್ಲಿರುವ ಉನ್ನತ ವ್ಯಾಸಂಗದ ಸೀಟುಗಳ ಸಂಖ್ಯೆ ೩೦೦೦ದಿಂದ ೪೦೦೦ ಅಷ್ಟೆ. ಹೀಗಿರುವಾಗ ಬಿ.ಡಿ.ಎಸ್. ಪದವಿ ಮುಗಿಸಿ ೫ ವರ್ಷಗಳು ಕಳೆದಾಗ ಸುಮಾರು ಲಕ್ಷಗಳು ಖರ್ಚಾಗಿರುತ್ತವೆ. ಪ್ರತಿಭೆ ಇದ್ದಲ್ಲಿ ಶೇಕಡಾ ೧೦% ಮಂದಿಗೆ ಮಾತ್ರ ಉನ್ನತ ವ್ಯಾಸಂಗಕ್ಕೆ ಅವಕಾಶ ಸಿಗಬಹುದು. ಉಳಿದವರು ಲಕ್ಷಗಟ್ಟಲೆ ಖರ್ಚುಮಾಡಿದರೂ ಉನ್ನತ ವ್ಯಾಸಂಗಕ್ಕೆ ಸೀಟು ಸಿಗುವುದು ಸುಲಭದ ಮಾತಲ್ಲ. ಹೀಗಾಗಿ ೫ ಮತ್ತು ೩ ಹೀಗೆ ಒಟ್ಟು ೮ ವರ್ಷಗಳ ಕಾಲ ಕಲಿತಾಗ ದಂತ ವೈದ್ಯ ಹೈರಾಣಾಗಿ ಹೋಗಿಬಿಡುತ್ತಾನೆ. ಇಷ್ಟೆಲ್ಲಾ ಮಾಡಿಯೂ ಕೆಲಸ ಸಿಗುತ್ತದೆ ಎನ್ನುವ ಗ್ಯಾರಂಟಿ ಇಲ್ಲ. ಈಗ ನಿರುದ್ಯೋಗಿ ದಂತ ವೈದ್ಯರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹೋಗಲಿ ಬಿಡಿ ಸ್ವಂತ ಚಿಕಿತ್ಸಾಲಯ ಹಾಕೋಣ ಎಂದರೆ ಏನಿಲ್ಲ ವೆಂದರೂ ನಾಲ್ಕೈದು ಲಕ್ಷ ರೂಪಾಯಿ ಯಾದರೂ ಬೇಕೇ ಬೇಕು. ಆ ಹೊತ್ತಿಗಗಲೇ ತಂದೆ ತಾಯಂದಿರು ಲಕ್ಷಾಂತರ ರೂಪಾಯಿ ಸಾಲ ಮಾಡಿರುತ್ತಾರೆ. ಇಷ್ಟೇ ಮಾಡಿ ದಂತ ಚಿಕಿತ್ಸಾಲಯ ತೆರೆದ ದಂತ ವೈದ್ಯರಿಂದ ಸೇವಾ ಮನೋಭವವನ್ನು ನೀರೀಕ್ಷಿಸುವುದುಹೇಗೆ? ಈ ಕಾರಣದಿಂದಲೇ ಬಹುಷ್ಯ ದಂತ ವೈದ್ಯಕೀಯ ಕ್ಷೇತ್ರ ಸೇವೆಯಾಗಿ ಉಳಿದಿಲ್ಲ. ಇತರ ವೃತ್ತಿಗಳಂತೆ ಬಂಡವಾಳ ಹಾಕಿ ಲಾಭ ತೆಗೆಯುವ ಉದ್ಯಮವಾಗಿ ಬಿಟ್ಟರೆ ಎನ್ನುವುದೇ ನಂಬಲೇಬೇಕಾದ ಸತ್ಯ ಮತ್ತು ನಮ್ಮ ಸಮಾಜದ ದುರಂತ ಎಂದರೂ ತಪ್ಪಲ್ಲ. ಜಗತ್ತಿನ ಇತರ ಹಲವು ದೇಶಗಳಂತೆ ಯೋಗ್ಯ ವಿದ್ಯಾರ್ಥಿಗೆ ಸರಕಾರವೇ ಉಚಿತ ಸೀಟು ನೀಡಿ ಓದಿಸಿ ಅಂಥsವರಿಂದ ಗ್ರಾಮೀಣ ಪ್ರದೇಶದಲ್ಲಿ ಸೇವೆ ಮಾಡಿಸುವುದು ಉಚಿತವೇನೋ ಎಂಬ ಸಂದೇಹವೂ ಕೆಲವೊಮ್ಮೆ ಕಾಡುತ್ತದೆ. ಅದೇನೇ ಇರಲಿ ದಂತ ವೈದ್ಯಕೀಯ ಕ್ಷೇತ್ರ ಬಹಳ ಹಿಂದಿನಿಂದಲೂ ಸೇವಾ ಕ್ಷೇತ್ರದ ಜೊತೆ ತಳಕು ಹಾಕಿಕೊಂಡಿದೆ. ದಂತ ವೈದ್ಯರು ತನ್ನೆಲ್ಲಾ ವೈಯಕ್ತಿಕ ಆರ್ಥಿಕ ಮತ್ತು ಇನ್ನೆಲ್ಲಾ ಸಮಸ್ಯೆಗಳನ್ನು ಬದಿಗೊತ್ತಿ ರೋಗಿಯ ನೋವು ಶಮನ ಮಾಡುವದೇ ವೃತ್ತಿ ಧರ್ಮ. ಅದಕ್ಕಾಗಿಯೇ ತಿಳಿದವರು ಹೇಳುತ್ತಾರೆ, ರೋಗಿಗಳು ತಮ್ಮ ಕಷ್ಟಗ ಮತ್ತು ನೋವುಗಳ ಶಮನಕ್ಕಾಗಿ ವ್ಶೆದ್ಯರಿಗೆ ಹಣ ನೀಡುತ್ತಾರೆ. ಆದರೆ ವೈದ್ಯರ ಕರುಣೆಯಿಂದಾಗಿ ಸದಾ ವೈದ್ಯರ ಋಣದಲ್ಲಿಯೇ ರೋಗಿಗಳು ಇರುತ್ತಾರೆ ಎಂದು. ಒಟ್ಟಿನಲ್ಲಿ ತಾಳ್ಮೆ ಕರುಣೆ, ಸಹನೆ, ಕಾಳಜಿ ಎಲ್ಲವನ್ನೂ ಮೇಳೈಸಿಕೊಂಡು ತನ್ನ ರೋಗಿಗಳಲ್ಲಿ ದೇವರನ್ನು ಕಾಣುವುವನೇ ನಿಜವಾದ ದಂತ ವೈದ್ಯ. ಈ ರೀತಿ ಪ್ರಾಮಾಣಿಕವಾಗಿ ತನ್ನ ವೃತ್ತಿ ಧರ್ಮವನ್ನು ಪಾಲಿಸಿದಲ್ಲಿ ರೋಗಿಯೂ ವೈದ್ಯರ ಮೇಲಿಟ್ಟ ನಂಬಿಕೆ ಯಾವತ್ತೂ ಹುಸಿಯಾಗಲಿಕ್ಕಿಲ್ಲ. ಯಾಕೆಂದರೆ ನಂಬಿಕೆಯ ತಳಹದಿಯ ಮೇಲೆ ನೀಡಿ ಎಲ್ಲಾ ಚಿಕಿತ್ಸೆಯೂ ಖಂಡಿತಾ ಪರಿಣಾಮಕಾರಿಯಾಗಬಲ್ಲದು. ಹಾಗೆಯೇ ನಂಬಿಕೆಯ ತಳಹದಿ ಇಲ್ಲದಿದ್ದಾಗ ವೈದ್ಯನೀಡಿದ ಅಮೃತವೂ ವಿಷವಾಗಬಲ್ಲದು. ಈ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ವೈದ್ಯ ಮತ್ತು ರೋಗಿ ಇಬ್ಬರಿಗೂ ಗುರುತರವಾದ ಜವಾಬ್ದಾರಿ ಇದೆ. ಮತ್ತು ಅದರಲ್ಲಿಯೇ ರೋಗಿ ವೈದ್ಯ ಮತ್ತು ಸಮಾಜದ ಸ್ಥಾಸ್ಥ ಅಡಗಿದೆ.
ಕೊನೆಮಾತು
ಮೊದಲೆಲ್ಲಾ ವೈದ್ಯ ವೃತ್ತಿಯನ್ನು ಪವಿತ್ರವಾದ ವೃತ್ತಿ ಎಂದು ಕರೆಯಲಾಗುತ್ತಿತ್ತು. ಕಾಲಕ್ರಮೇಣ ಬಹಳಷ್ಟು ಬದಲಾವಣೆಗಳಾದವು ಎಲ್ಲವೂ ವ್ಯಾಪಾರೀಕರಣವಾಗುತ್ತಿರುವ ಕಾಲಘಟ್ಟದಲ್ಲಿ ವೈದ್ಯಕೀಯ ವೃತ್ತಿಯಲ್ಲಿಯೂ ಬಹಳಷ್ಟು ಪರಿವರ್ತನೆಯಾಯಿತು. ಮೊದಲಿದ್ದ ವೈದ್ಯ- ರೋಗಿಯ ಸಂಬಂಧ ಈಗೀಗ ಮೊದಲಿನಂತೆ ಉಳಿದಿಲ್ಲ. ಎಲ್ಲವನ್ನೂ ಸಂಶಯದ ದೃಷ್ಟಿಯಿಂದ ನೋಡುವ ಕಾಲಘಟ್ಟದಲ್ಲಿ ನಾವಿದ್ದೇವೆ. ಇದರಲ್ಲಿ ರೋಗಿ ಮತ್ತು ವೈದ್ಯರ ತಪ್ಪೂಇದೆ. ಪ್ರತಿ ವೈದ್ಯ ಮತ್ತು ರೋಗಿ ತನ್ನ ಹೊಣೆಗಾರಿಕೆ, ವೃತ್ತಿ ಧರ್ಮ ಮತ್ತು ಇತಿಮಿತಿಯೊಳಗೆ ವ್ಯವರಿಸಿದ್ದಲ್ಲಿ ಈ ರೀತಿಯ ಸಂಘರ್ಷ ತಪ್ಪಿಸಬಹುದು. ಅವgಲ್ಲ್ಲಿಯೇ ಇಬ್ಬರ ಒಳಿತು ಮತ್ತು ಸಮಾಜದ ಒಳಿತೂ ಅಡಗಿದೆ. ಸಾವು ಸಮೀಪಿಸಿದಾಗ ವೈದ್ಯ ದೇವರಾಗಿಯೂ, ಚಿಕಿತ್ಸೆ ಆರಂಭಿಸಿದಾಗ ದೇವಮಾನವನಾಗಿಯೂ, ಚಿಕಿತ್ಸೆ ಫಲಿಸಿದಾಗ ಸಾಮಾನ್ಯ ಮನುಷ್ಯನಾಗಿಯೂ, ಶುಲ್ಕ ಕೇಳಿದಾಗ ಧನದಾಹಿ ಎಂದೂ, ಚಿಕಿತ್ಸೆ ಫಲಿಸದಾಗ ಕೊಲೆಗಡುಕ ಎಂದೂ ಜನರು ವೈದ್ಯರನ್ನೂ ಹಾಡಿ ಹೊಗಳುತ್ತಾರೆ ಮತ್ತು ತೆಗಳುತ್ತಾರೆ. ಆದರೆ ಈ ಎಲ್ಲಾ ಹೊಗಳಿಕೆಗೆ ಹಿಗ್ಗದೆ ತೆಗಳಿಕೆಗೆ ಕುಗ್ಗದೆ ಸಮಚಿತ್ತದಿಂದ ವರ್ತಿಸಿ ವೃತ್ತಿ ಧರ್ಮವನ್ನು ಪಾಲಿಸಿ ರೋಗಿಯು ಗುಣಮುಖವಾಗಲು ಪ್ರಾಮಾಣಿಕವಾಗಿ ಪ್ರಯತ್ನಿಸುವವನೇ ನಿಜವಾದ ವೈದ್ಯ. ಅಂತಹ ವೈದ್ಯ ನಾರಾಯಣನಾಗದಿದ್ದರೂ ಮನುಷ್ಯನಾಗುವುದಂತೂ ಖಂಡಿತ ಸತ್ಯ. ಈ ರೀತಿ ತನ್ನ ವೈದ್ಯಕೀಯ ಕ್ಷೇತ್ರದಲ್ಲಿ ರೋಗಿಗಳ ಸೇವೆ ಮಾಡುತ್ತಿರುವ ನೂರಾರು ದಂತ ವೈದ್ಯರು ನಮ್ಮ ಸಮಾಜದಲ್ಲಿ ಇದ್ದಾರೆ. ಅವರು ಹಾಕಿದ ಆದರ್ಶ ಮತ್ತು ತತ್ವಗಳು ಇತರರಿಗೆ ಮಾದರಿಯಾಗಲಿ. ದಂತ ವೈದ್ಯರ ದಿನದಂದು ನನ್ನೆಲ್ಲಾ ದಂತ ವೈದ್ಯ ಸಹೋದ್ಯೋಗಿ ಬಂಧುಗಳಿಗೆ ಶುಭಾಶಯ ಕೋರುತ್ತೇನೆ. ಗೆಳೆಯರೇ, ಇನ್ಯಾಕೆ ತಡಮಾಡುತ್ತೀರಾ ಮೊಬೈಲ್ ಎತ್ತಿಕೊಂಡು ನಿಮ್ಮ ದಂತ ವ್ಶೆದ್ಯರಿಗೆ ಪ್ರೀತ್ಯಾಧರದಿಂದ ಅಭಿನಂಧನೆ ಸಲ್ಲಿಸುವ ಸಂದೇಶ ಅಥವಾ ವಾಟ್ಸ್ಸಫ್ ಸಂದೇಶ ಇಲ್ಲವೇ ವೈಬರ್ ಸಂದೇಶ ಕಳುಹಿಸಿ. ಹಗಲಿರುಳು ನಿಮ್ಮ ನೋವುಗಳಿಗೆ ಸ್ಪಂದಿಸುವ ಆ ಜೀವಕ್ಕೆ ನಿಮ್ಮ ಪ್ರೀತಿಯ ಸಂದೇಶ ಅಮೃತ ಸಿಂಚನ ಮಾಡೀತು ಮತ್ತು ವ್ಶೆದ್ಯರಿಗೆ ನವಚೈತನ್ಯನೀಡಿ ಇನ್ನೊಂದು ಜೀವ ಉಳಿಸುವ ಮತ್ತು ನೋವು ಶಮನಗೊಳಿಸುವ ಶಕ್ತಿ ನೀಡಲೂ ಬಹುದು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಇಂದು ದಂತ ವೈದ್ಯರ ದಿನ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*