ಈ ಬದಲಾವಣೆಗೆ ಇನ್ನೆಷ್ಟು ದಿನ ಬೇಕೋ..

ಪತ್ರಿಕೆಗಳಲ್ಲಿ ನಾಲ್ಕಾರು ದಿನ ಫೊಟೋ ಹಾಕಿಸಿಕೊಂಡಲ್ಲಿಗೆ ಡಿಜಿಟಲ್ ಯುಗ ಮುಗಿದು ಮೊದಲಿನಂತೆ ನೋಟುಗಳಿಗೆ ಜೋತು ಬಿದ್ದಾಗಿದೆ ಅಂತಾಯ್ತು.

  • ಅನಿತಾ ನರೇಶ್ ಮಂಚಿ
  • ಅಂಕಣ: ಅನಿಕತೆ
  • www.bantwalnews.com

 

ಜಾಹೀರಾತು

ಯಾಕ್ರೀ ಸರೋಜಮ್ಮ ಗರ ಬಡಿದಂತೆ ಕೂತುಬಿಟ್ಟಿದ್ದೀರಾ? ಏನಾಯ್ತು. ಬೆಳಗ್ಗೆ ನೀವು ಹೊರಗಡೆ ಹೋಗಿದ್ದು ನೋಡಿದ್ದೆ. ಈಗಷ್ಟೇ ಬಂದ್ರಾ ಹೇಗೆ. ಬಿಸಿಲು ಬೇರೆ ತಲೆ ಒಡೆಯುವಂತಿದೆ. ಸ್ವಲ್ಪ ನೀರೋ ಜ್ಯೂಸೋ ತರ್ಲಾ..?

ಹುಂ ಕನಕಾಂಗಿ, ಎಂತ ಇದ್ರೂ ತಂದು ಕೊಡಿ. ಬೆಳಗ್ಗಿನಿಂದ ಹನಿ ನೀರು ಕುಡಿದಿಲ್ಲ. ಮನೆಯಲ್ಲಿ ಅಡುಗೆ ಕೂಡಾ ಮಾಡದೇ ಹೋಗಿದ್ದೆ. ಇನ್ನು ಮಾಡಿಕೊಂಡು ಊಟ ಮಾಡುವ ತಾಕತ್ತು ಇಲ್ಲ.

ಅಯ್ಯೋ, ಅಂತದ್ದೇನಾಯ್ತು? ಇರ್ಲಿ ಬಿಡಿ ಆ ಸುದ್ದಿ ಮತ್ತೆ ಮಾತಾಡೋಣ. ಸ್ವಲ್ಪ ಮೊಸ್ರನ್ನ ಕಲಸಿ ಕೊಡ್ತೀನಿ  ಇರಿ.

ಜಾಹೀರಾತು

ನಿಂಗೆ ಪುಣ್ಯ ಬರ್ಲಿ ತಾಯಿ. ನಂಗಂತೂ ಇವತ್ತು ನಾನು ಮನೆ ಸೇರ್ತೇನೋ ಇಲ್ಲವೋ ಅನ್ನೋದೇ ಸಮಸ್ಯೆಯಾಗಿ ಬಿಟ್ಟಿತ್ತು.

ಅಲ್ಲಾ.. ಆಗಿನಿಂದ ಒಗಟಾಗಿಯೇ ಹೇಳ್ತಾ ಇದ್ದೀರಾ ಏನಾಯ್ತು ಅಂತ ಬಿಡಿಸಿ ಹೇಳಿ.

ಹುಂ.. ಹೇಳೋಕೆ ಹೋದರೆ ನನ್ನದಿವತ್ತು ಕಥೆಯಲ್ಲ ವ್ಯಥೆಯೇ. ಇವ್ರು ಆಫೀಸ್ ಕೆಲ್ಸ ಅಂತ ನಾಲ್ಕು ದಿನಕ್ಕೆ ಡೆಲ್ಲಿಗೆ ಹೋಗಿರೋದು ಗೊತ್ತು ತಾನೇ. ಮಕ್ಕಳು ಎನ್ ಸಿ ಸಿ ಕ್ಯಾಂಪ್ ಅಂತ ಇನ್ನು ಮೂರುದಿನ ಮನೆಯಲ್ಲಿಲ್ಲ. ಹೇಗೂ ಫ್ರೀ ಇದ್ದೀನಿ. ಬೆಳಗ್ಗೆಯೇ ಹೋಗಿ ಸ್ವಲ್ಪ ಮನೆಗೆ ಬೇಕಾದ ಸಾಮಾನು ತರೋಣ ಅಂತ ಹೋಗಿದ್ದೆ ನೋಡಿ. ಅದೇ ತಪ್ಪಾಗಿದ್ದು.

ಜಾಹೀರಾತು

ಅದ್ರಲ್ಲಿ ತಪ್ಪಾಗುವಂತದ್ದು ಏನಿದೆ?

ಹಣ ಹಿಡಿದುಕೊಂಡು ಹೋಗದೇ ಇದ್ದದ್ದು ತಪ್ಪು

ಅಯ್ಯೋ ಏನು ಪರ್ಸ್ ಬಿಟ್ಟು ಹೋಗಿದ್ರಾ?

ಜಾಹೀರಾತು

ಇಲ್ಲಾ ಕಣ್ರೀ ಪರ್ಸ್ ಹಿಡಿದುಕೊಂಡೇ ಹೋಗಿದ್ದೆ. ಅದರಲ್ಲಿ ಹಣದ ಬದಲು ಕ್ರೆಡಿಟ್ ಕಾರ್ಡ್ ಇತ್ತು. ಜೊತೆಗೆ ಮೊಬೈಲಿನಲ್ಲಿ ಪೇ ಟಿ ಎಮ್ ಕೂಡಾ ಇದೆ. ಅದು ಹಣದಂತೆ ತಾನೇ ಅಂದುಕೊಂಡು ಹೋಗಿದ್ದೆ. ಇಲ್ಲಿಂದ ಸೀದಾ ನಮ್ಮ ಸರ್ಕಲ್ಲಿನವರೆಗೆ ನಡೆದೆ. ಅಲ್ಲಿ ಹೇಗೂ ಆಟೋ ಸ್ಟ್ಯಾಂಡ್ ಇದೆಯಲ್ಲ. ಅಲ್ಲಿಂದ ಆಟೋ ಹತ್ಕೊಂಡು ಹೋಗೋಣ ಅಂದ್ಕೊಡ್ಡಿದ್ದೆ. ಅಲ್ಲಿಗೆ ಹೋಗಿ ಆಟೋ ಹತ್ತಿ ಸ್ವಲ್ಪ ದೂರ ಹೋದಾಗ ನಂಗ್ಯಾಕೋ ಒಂದು ಸಂಶಯ ಬಂದು ಕೇಳಿದೆ. ನಿನ್ನ ಆಟೋದಲ್ಲಿ ಪೇ ಟಿ ಎಮ್ ಲ್ಲಿ ದುಡ್ಡು ವರ್ಗಾವಣೆ ಮಾಡ್ಬಹುದಲ್ಲ ಅಂದೆ. ಅವನು ನನ್ನ ಮುಖವನ್ನೇ ನೋಡಿ  ಬೆಳಗ್ಗೆ ಬೆಳಗ್ಗೆ ಹಣ ಇಲ್ಲದೇ ಎಲ್ಲಿಂದ ಬಂದ್ರಿ ನೀವು ಬಿಟ್ಟಿ ಗಿರಾಕಿಯಾಗಿ, ಇಲ್ಲಿಗೆ ಬಂದಷ್ಟು ದೂರದ್ದು ಆಟೋ ಚಾರ್ಜ್ ಕೊಟ್ಟು ಇಳೀರಿ ಎಂದ. ಕರ್ಮ ಮೊದಲೇ ಕೇಳಿಕೊಳ್ಳದೇ ಇವನ ಆಟೋ ಹತ್ತಿ ತಪ್ಪು ಮಾಡಿದೆ ಎಂದುಕೊಂಡು ಪರ್ಸೆಲ್ಲಾ ತಡಕಾಡಿ ಇದ್ದ ಹದಿನೈದು ರೂಪಾಯಿಯನ್ನು ಅವನ ಕೈಗಿತ್ತು ನಡೆದೆ. ಈ ಅರ್ಧ ದಾರಿಯಲ್ಲಿ ನನಗ್ಯಾರು ಗಿರಾಕಿ ಸಿಗ್ತಾರಿನ್ನು ಎಂದು ಬಯ್ದುಕೊಳ್ಳುತ್ತಾಲೇ ಹೋದ. ನಾನು ಹೋಗಬೇಕಾದ ಸೂಪರ್ ಮಾರ್ಕೆಟಿಗೆ ಇನ್ನೂ ದೂರವಿತ್ತು. ದಾರಿಯಲ್ಲಿ ಹೋಗುವ ಬೇರೆ ಬೇರೆ ಆಟೋಗಳನ್ನು ತಡೆದು ಪೇ ಟಿ ಎಮ್ ಇದೆಯಾ? ಅಥ್ವಾ ಸ್ವೈಪಿಂಗ್ ಮೆಷಿನ್ ಆದ್ರೂ ಇದೆಯಾ ಎಂದು ಕೇಳಿದರೆ ಎಲ್ಲರೂ ತಾರಮ್ಮಯ್ಯ ಆಡಿಸಿ ನನ್ನನ್ನೊಂದು ವಿಚಿತ್ರ ವ್ಯಕ್ತಿಯನ್ನು ನೋಡಿದಂತೆ ನೋಡಿದರು. ಸ್ವಲ್ಪ ದೂರ ನಡೆದರೆ ಸಿಕ್ಕಿದ ಅಂಗಡಿಯಲ್ಲಿ ಸಾಮಾನು ತೆಗೆದುಕೊಂಡು ಹೋಗೋಣ. ಈಗ ಅಂಗಡಿಗಳೆಲ್ಲಾ ಡಿಜಿಟಲ್ ಆಗಿದೆ ತಾನೇ ಅಂದುಕೊಂಡು ಪರ್ಲಾಂಗು ದೂರದಲ್ಲಿದ್ದ ಅಂಗಡಿಗೆ ನಡೆದೆ. ಅಲ್ಲಿ ಹೋದ ಕೂಡಲೇ ಮೊದಲು ಕೇಳಿದ ಪ್ರಶ್ನೆ ಸ್ವೈಪಿಂಗ್ ಇದೆಯಾ.. ಎಂದೇ. ಆತ.. ಇಲ್ಲ ಮೇಡಂ.. ಬ್ಯಾಂಕಿಂದ ತರಿಸ್ಬೇಕಷ್ಟೇ ಎಂದು ದೇಶಾವರಿ ನೆಗೆಯಾಡಿದ. ಮುಂದಿನ ಅಂಗಡಿಗೆ ನಡೆದೆ.. ನಿಮ್ಗೆ ಆಶ್ಚರ್ಯ ಆದೀತು. ನಾನು ಹೋದ ಅಂಗಡಿಗಳಲ್ಲೆಲ್ಲಾ ಇದೇ ಉತ್ತರ ಸಿಕ್ಕಿದ್ದು. ಇನ್ನೂ ಬರ್ಬೇಕಷ್ಟೇ, ಆರ್ಡರ್ ಕೊಡ್ಬೇಕಷ್ಟೇ.. ಈಗೇನು ಹಣ ತೆಗೀಬಹುದಲ್ವಾ ಎ ಟಿ ಎಮ್ ನಿಂದ ತೆಗೆದು ಕೊಡಿ, ಇನ್ನೊಂದರ್ಧ ಕಿ. ಮೀ ದೂರದಲ್ಲಿ ಎ ಟಿ ಎಮ್ ಇದೆ. ಎಂದೆಲ್ಲಾ ನನಗೆ ಉಪದೇಶ. ಎ ಟಿ ಎಮ್ ನಲ್ಲಿ ಕ್ಯೂ ನಿಂತು ಹಣ ತೆಗೆಯುವ ಬದಲು ನೀವೇ ಸ್ವೈಪಿಂಗ್ ಮೆಶಿನ್ ಇಟ್ಕೊಂಡ್ರೆ ಇಲ್ಲೇ  ಆ ಕೆಲಸ ಮುಗಿಸಬಹುದಲ್ಲಾ ಎಂದರೆ ಆತ ಇಡೀ ದಿನ ಕಾರ್ಡ್ ಉಜ್ಜೋದಕ್ಕೆ ಜನ ಇಡ್ಬೇಕಷ್ಟೆ ಮೇಡಂ. ಈಗ ನೋಡಿ ನೋಟುಗಳೇ ಎಲ್ಲರ ಕೈಯಲ್ಲಿ ಓಡಾಡ್ತಿದೆ ಎಂದ್ಮೇಲೆ ನಾವ್ಯಾಕೆ ಖರ್ಚು ಮಾಡಿ ಮೆಶಿನ್ ಹಾಕಿಸಿಕೊಳ್ಳೋದು ಅಲ್ವ.. ಅದೂ ಅಲ್ಲದೇ ಕೈಯಲ್ಲಿ ಹಿಡಿದು ಲೆಕ್ಕ ಹಾಕುವ ಹಣದ ಖದರ್ರೇ ಬೇರೆ ಎಂದು ನನಗೇ  ಪಾಠ ಹೇಳಿದ.

ನಿರಾಯುಧನಾಗಿ ಯುದ್ದರಂಗಕ್ಕಿಳಿದ ಸೈನಿಕನ ಪಾಡು ನನ್ನದು.  ದಾರಿಯಲ್ಲೆಲ್ಲೂ ಎ ಟಿ ಎಮ್ ಇಲ್ಲದ ಕಾರಣ ಕೈಯಲ್ಲಿ ಕಾಸಿಲ್ಲದೇ ಹೋದಷ್ಟು ದೂರವನ್ನು ಮತ್ತೆ ಕಾಲ್ನಡಿಗೆಯಲ್ಲಿ ಮರಳಿ ಇಲ್ಲಿಗೆ ತಲುಪಬೇಕಾದರೆ ಇಷ್ಟು ಹೊತ್ತಾಯಿತು ನೋಡಿ

ಅಯ್ಯೋ.. ಹೌದೇನ್ರೀ.. ಪತ್ರಿಕೆಗಳಲ್ಲಿ ನಾಲ್ಕಾರು ದಿನ ಫೊಟೋ ಹಾಕಿಸಿಕೊಂಡಲ್ಲಿಗೆ ಡಿಜಿಟಲ್ ಯುಗ ಮುಗಿದು ಮೊದಲಿನಂತೆ ನೋಟುಗಳಿಗೆ ಜೋತು ಬಿದ್ದಾಗಿದೆ ಅಂತಾಯ್ತು.

ಜಾಹೀರಾತು

ಈ ಬದಲಾವಣೆಗೆ ಇನ್ನೆಷ್ಟು ದಿನ ಬೇಕೋ..

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು

About the Author

Anitha Naresh Manchi
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಮಂಚಿಯ ರಾಮ ನರೇಶ್ ಮಂಚಿ ಅವರ ಪತ್ನಿ ಅನಿತಾ ನರೇಶ್ ಮಂಚಿ, ಕನ್ನಡದ ಪ್ರಸಿದ್ಧ ಲೇಖಕಿ. ಕೊಡೆ ಕೊಡೆ ನನ್ನಕೊಡೆ ಕಾಲೇಜು ಪಠ್ಯವಾಗಿದೆ. ಎರಡು ಲಘು ಬರಹ ಸಂಕಲನ, ಮೂರು ಕಥಾಸಂಕಲನ ಬಿಡುಗಡೆಗೊಂಡಿವೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಕಥೆ, ಲೇಖನಗಳು ಪ್ರಕಟಗೊಂಡಿವೆ. ಅವರ ಕಥೆಗಳು ಬೇರೆ ಭಾಷೆಗೂ ಅನುವಾದಗೊಂಡಿವೆ. ವಿಜಯವಾಣಿ ದಿನಪತ್ರಿಕೆಯಲ್ಲಿ ಅಂಕಣ ಬರೆಯುವ ಅನಿತಾ ಅವರಿಗೆ ಮಂಗಳೂರಿನ ಕನ್ನಡ ರತ್ನ ಪ್ರಶಸ್ತಿ. ಕೊಡಗಿನ ಗೌರಮ್ಮ ಪ್ರಶಸ್ತಿ, ಅಕ್ಷರ ಶ್ರೀ ಪ್ರಶಸ್ತಿ ದೊರಕಿವೆ.

Be the first to comment on "ಈ ಬದಲಾವಣೆಗೆ ಇನ್ನೆಷ್ಟು ದಿನ ಬೇಕೋ.."

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*