ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ

ಪ್ರೊ. ರಾಜಮಣಿ ರಾಮಕುಂಜ

ಆಧುನಿಕತೆಯನ್ನು ಕೊಡವಿ, ಮಾನವ ಲೋಕಕ್ಕೆ ಸವಾಲಾಗಿ ತಲೆಯೆತ್ತಿ ನಿಂತಿರುವ, ಸೌಂದಾರ್ಯನುಭೂತಿಗೆ ಖನಿಯಂತಿರುವ, ಪೌರಾಣಿಕವಾಗಿ ಕೃತ, ತ್ರೇತ , ದ್ವಾಪರ ಕಲಿಯುಗಗಳ ಸ್ಪರ್ಶಕ್ಕೊಳಗಾದ ಬಂಟ್ವಾಳ ತಾಲೂಕಿನ ಕಾವಳ ಮೂಡೂರು ಗ್ರಾಮದ ಕಾರಿಂಜದಲ್ಲಿರುವುದೇ ಮಹತೋಭಾರ ಶ್ರೀ ಕಾರಿಂಜೇಶ್ವಾರ ದೇವಾಲಯ. ಭಕ್ತರಿಗೆ ಪ್ರಕೃತಿ ಪ್ರೇಮಿಗಳಿಗೆ, ಚಾರಣಿಗರಿಗೆ ಏಕಕಾಲದಲ್ಲಿ ಆಹ್ವಾನವನ್ನೀಯುವ ಈ ದೇವಾಲಯವಿರುವ ಪ್ರದೇಶ ನಿಜಕ್ಕೂ ’ಕಣ್ಣಿದ್ದವನಿಗೆ ಕಾರಿಂಜ’ ಎಂಬ ನಾಣ್ನುಡಿಗೆ ಸಮರ್ಥನೆಯಂತಿದೆ. ಹೆಬ್ಬಂಡೆಗಳ ಸಮೂಹಗಳು, ಗುಹಾಂತರ ಸ್ಥಳಗಳು, ಬಂಡೆಯಲ್ಲೇ ನಿರ್ಮಿತವಾದ ಕೊಳಗಳು, ಪ್ರಾಚೀನ ತಪೋವನಗಳನ್ನು ನೆನಪಿಗೆ ತರುವ ನೀರವ ದಟ್ಟವಾದ ಅರಣ್ಯ ಪ್ರದೇಶಗಳು ಇದು ಸುತ್ತಲಿನ ಪರಿಸರ.

ಸು, ೪೫೦ ಮೀಟರ್ ಎತ್ತರದ ಶಿಲಾ ಬಂಡೆಯ ಮೇಲೆ ಕಂಗೊಳಿಸಿತ್ತಿರುವ ಈ ದೇವಾಲಯ ಮಂಗಳೂರು-ಬೆಳ್ತಂಗಡಿ ರಸ್ತೆಯಲ್ಲಿ ವಗ್ಗ ಎಂಬಲ್ಲಿಂದ ಎರಡೂವರೆ ಕಿಲೋಮೀಟರ್ ಹಾಗೂ ತಾಲೂಕು ಕೇಂದ್ರ ಬಂಟ್ವಾಳದಿಂದ ೧೭ ಕಿ.ಮೀ.ದೂರದಲ್ಲಿದೆ. ನವರಂಗ, ಸುಕನಾಸಿ ಮತ್ತು ಗರ್ಭಗೃಹಗಳನ್ನು ಮುಖ್ಯ ಅಂಗಗಳಾಗಿ ಹೊಂದಿರುವ ಈ ದೇವಾಲಯವನ್ನು ಅಧಿಷ್ಠಾನದ ಮೇಲೆ ಗಜ ಪೃಷ್ಠಾಕಾರದಲ್ಲಿ ಕಟ್ಟಲಾಗಿದೆ. ಹೊರಗೆ ಪ್ರಧಾನ ಬಲಿಪೀಠ ಮತ್ತು ಧ್ವಜಸ್ಥಂಭಗಳಿರುವ ಈ ದೇವಾಲಯ ಗರ್ಭ ಗೃದಲ್ಲಿ ಎತ್ತರವಾದ ಪಾಣಿಪೀಠದ ಮೇಲೆ ಈ ಉದ್ಭವ ಶಿವಲಿಂಗವಿದೆ. ಗರ್ಭಗೃಹದ ಮೇಲೆ ಎತ್ತರವೂ ಸುಂದರವೂ ಆದ ಶಿಖರವಿದೆ. ಈ ದೇವಾಲಯದಲ್ಲಿ ಸುಮಾರು ೧೦ ಇಂಚು ಎತ್ತರವಿರುವ ಕಂಚು ಲೋಹದಿಂದ ತಯಾರಿಸಿದ ಶಿವನ ಮೂರ್ತಿಯಿದೆ. ದೇವಳದ ಹೊರದ್ವಾರದ ಗೋಡೆಯಲ್ಲಿ ಹನುಮ ಗರುಡರ ಉಬ್ಬು ಶಿಲ್ಪವಿದೆ. ಶಿವನ ಮುಂಭಾಗದಲ್ಲಿ ಕಂಚಿನ ಲೋಹದ ಬಸವೇಶ್ವರನ ವಿಗ್ರಹವಿದೆ. ಶಿವಾಲಯದ ಬಲ ಭಾಗದ ಆವರಣ ಗೋಡೆಯ ಹೊರಭಾಗಕ್ಕೆ ಸುಮಾರು ನಾಲ್ಕು ಅಡಿ ಹೊರಕ್ಕೆ ಚಾಚಿರುವ ಶಿಲೆಗಲ್ಲಿನ ಚಪ್ಪಡಿಗಳಿವೆ. ಇದನ್ನು ಪ್ರಮಾಣ ಕಲ್ಲು ಎನ್ನುತ್ತಾರೆ; ಸತ್ಯ ಪ್ರಮಾಣ ಮಾಡುವವರು ಒಂದು ಕಲ್ಲಿನಿಂದ ಇನ್ನೊಂದು ಕಲ್ಲಿಗೆ ಹಾರಿ ತಮ್ಮ ಪ್ರಾಮಾಣಿಕತೆಯನ್ನು ವ್ಯಕ್ತಪಡಿಸಬೇಕು. ಅಪ್ಪಿ ತಪ್ಪಿ ಬಿದ್ದರೆ ಪಾತಾಳವೆ ಗತಿ. ಸೀತಾಮಾತೆ ಪ್ರಮಾಣ ಮಾಡಿದ ಕಲ್ಲು ಎಂಬುದಾಗಿಯೂ ಇದಕ್ಕೆ ಹೆಸರಿದೆ. ಈ ದೇವಳ ಅತ್ಯಂತ ವಿಶೇಷ ದೃಶ್ಯ, ದೇವಾಲಯದ ಎದುರು ಭಾಗದಲ್ಲಿ ವಾನರ ಸಂತತಿಗೆ ಬಡಿಸುವ ಕಲ್ಲಿನ ಬಟ್ಟಲಿನಲ್ಲಿ, ಪ್ರತಿದಿನ ಮಹಾಪೂಜೆಯಾದೊಡನೆ ಶಿವನಿಗೆ ಅರ್ಪಿಸಿದ ಮೂರು ಸೇರು ಅಕ್ಕಿ ನೈವೇದ್ಯವನ್ನು ಹಾಕಿದಾಗ ಅವುಗಳು ಅದನ್ನು ಉಣ್ಣುವ ದೃಶ್ಯವೆ ಬಹಳ ಮನೋರಂಜಕ.