
ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಅಕ್ಕಿ ವಿತರಣೆಯಲ್ಲಿ ವ್ಯತ್ಯಯವಾಗುತ್ತಿರುವ ಕುರಿತು ದೂರುಗಳು ಕೇಳಿಬರುತ್ತಿವೆ. ಆಹಾರ, ನಾಗರಿಕ ಸರಬುರಾಜು ಇಲಾಖೆ ವತಿಯಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಣೆ ಮಾಡುತ್ತಿರುವ ಪಡಿತರ ಅಕ್ಕಿ ಸರ್ವರ್ ಸಮಸ್ಯೆಯಿಂದಾಗಿ ಗ್ರಾಹಕರಿಗೆ ಸರಿಯಾಗಿ ತಲುಪದೇ ಅಡಚಣೆಯಾಗುತ್ತಿದೆ ಎಂದು ಗ್ರಾಹಕರು ದೂರಿದ್ದಾರೆ. ಈ ಸರ್ವರ್ ತೊಂದರೆಯಿಂದ ಗ್ರಾಹಕರು ತಮ್ಮ ಪಡಿತರ ಅಕ್ಕಿ ಪಡೆಯಲು ಸಂಬಂಧ ಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ದಿನ ಪೂರ್ತಿಯಾಗಿ ಕಾಯುವ ಪರಿಸ್ಥಿತಿ ಇದೆ ಎಂದು ತಾಪಂ ಮಾಜಿ ಸದಸ್ಯ ಪ್ರಭಾಕರ ಪ್ರಭು ಗಮನ ಸೆಳೆದಿದ್ದಾರೆ. ಈ ಕುರಿತು ಅವರು ಆಹಾರ, ನಾಗರಿಕ ಸರಬುರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರಿಗೆ ಪತ್ರಮುಖೇನ ಮನವಿ ಮಾಡಿದ್ದಾರೆ.

ತಿಂಗಳ ಅಂತ್ಯವರೆಗೂ ಹೀಗೆಯೇ ಮುಂದುವರಿದರೆ ಕೆಲವರು ಪಡಿತರ ಅಕ್ಕಿ ಪಡೆಯುವಲ್ಲಿ ವಂಚಿತರಾಗಬಹುದು. ಈ ಹಿನ್ನೆಲೆಯಲ್ಲಿ ಮೇ ತಿಂಗಳ ಪಡಿತರ ಅಕ್ಕಿಯನ್ನು ಜೂನ್ ಮೊದಲ ವಾರದವರೆಗೂ ನೀಡಲು ಸೂಕ್ತ ಆದೇಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಕೆಲವೊಂದು ಕಡೆ ದಿನವಿಢೀ ಕಾದರೂ ಸರ್ವರ್ ಸಮಸ್ಯೆಯಿಂದ ಅಕ್ಕಿ ಲಭಿಸದೆ ಮನೆಗೆ ವಾಪಾಸ್ ಹೋಗುತ್ತಿದ್ದಾರೆ. ಸರಕಾರದ ಮಟ್ಟದಲ್ಲಿನ ಈ ರೀತಿಯ ತಾಂತ್ರಿಕ ಅಡಚಣೆಯಿಂದಾಗಿ ಕೂಲಿ ಕೆಲಸ ಮಾಡುತ್ತಿರುವ ಬಿಪಿಎಲ್ ಪಡಿತರ ಚೀಟಿದಾರ ಗ್ರಾಹಕರು ಸಕಾಲದಲ್ಲಿ ಅಕ್ಕಿ ಸಿಗದೆ ನ್ಯಾಯಬೆಲೆ ಅಂಗಡಿ ಸಿಬ್ಬಂದಿಯನ್ನು ತರಾಟೆಗೆ ತೆಗೆದು ಕೊಳ್ಳುತ್ತಿರುವುದು ಕಂಡುಬಂದಿದೆ. ಸಂಬಂಧ ಪಟ್ಟ ಆಹಾರ ಅಧಿಕಾರಿಗಳಲ್ಲಿ ವಿಚಾರಿಸಿದರೆ ಎರಡು ತಿಂಗಳ ಅಕ್ಕಿಯನ್ನು ಒಂದೇ ತಿಂಗಳಿನಲ್ಲಿ ನೀಡುತ್ತಿರುವುದರಿಂದ ಸರ್ವರ್ ಸಮಸ್ಯೆ ಉದ್ಭವಿಸಿದೆ ಎಂದು ಉತ್ತರ ನೀಡುತ್ತಿದ್ದು ಸಮರ್ಪಕ ಕಾರಣ ತಿಳಿಯುತ್ತಿಲ್ಲ ಎಂದವರು ಗಮನ ಸೆಳೆದಿದ್ದಾರೆ.


Be the first to comment on "ಸರ್ವರ್ ಸಮಸ್ಯೆ: ಪಡಿತರ ಅಕ್ಕಿ ವಿತರಣೆಯಲ್ಲಿ ವ್ಯತ್ಯಯ, ಆಹಾರ ಸಚಿವಾಲಯದ ಗಮನ ಸೆಳೆದ ತಾಪಂ ಮಾಜಿ ಸದಸ್ಯ ಪ್ರಭಾಕರ ಪ್ರಭು"