ಬಂಟ್ವಾಳ: ಬಂಟ್ವಾಳ ತಾಲೂಕು ಗಮಕ ಪರಿಷತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಪಾಣೆಮಂಗಳೂರು ಶ್ರೀ ಭಯಂಕೇಶ್ವರ ದೇವಸ್ಥಾನದಲ್ಲಿ ನಡೆಯಿತು.

ತಾಲೂಕು ಘಟಕ ನಿರ್ಗಮಿತ ಅಧ್ಯಕ್ಷ ಕಯ್ಯೂರು ನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಅಧ್ಯಾಪಕ ಎಚ್.ಎನ್. ಹೆಬ್ಬಾರ್ ಗಮಕ ವಾಚಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರವನ್ನು ಜಿಲ್ಲಾ ಘಟಕ ಅಧ್ಯಕ್ಷ ಪ್ರೊ. ಮಧೂರು ಮೋಹನ ಕಲ್ಲೂರಾಯ ನೆರವೇರಿಸಿದರು. ನೂತನ ಕಾರ್ಯದರ್ಶಿ ನ್ಯಾಯವಾದಿ ರವೀಂದ್ರ ಕುಕ್ಕಾಜೆ ಕಾರ್ಯಕ್ರಮಗಳ ವಿವರ ನೀಡಿದರು. ನೂತನ ಅಧ್ಯಕ್ಷ ಎ ರವಿಶಂಕರ ಮಯ್ಯ ಮಾತನಾಡಿ, ಗಮಕ ಕಲೆ ಬಂಟ್ವಾಳದ ಮೂಲೆ ಮೂಲೆಯಲ್ಲೂ ಕಾರ್ಯಕ್ರಮ ನಡೆಸಲು ಎಲ್ಲರೂ ಸಹಕರಿಸುವಂತೆ ವಿನಂತಿಸಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ ರಘುನಾಥ ಸೋಮಯಾಜಿ ಶುಭ ಹಾರೈಸಿದರು. ಸಜೀಪಮಾಗಣೆ ತಂತ್ರಿ ಸುಬ್ರಹ್ಮಣ್ಯ ಭಟ್ ಮಾತನಾಡಿ, ಭಾರತೀಯ ಕಲೆಗಳಲ್ಲಿ ಪ್ರಮುಖವಾದ ಗಮಕ ಮನೆಮನೆಗಳಲ್ಲಿ ನಡೆಯುವಂತಾಗಲಿ ಎಂದರು. ಸಿದ್ಧಕಟ್ಟೆ ಸರಕಾರಿ ಪದವಿ ಕಾಲೇಜು ಪ್ರಾಚಾರ್ಯ ಡಾ. ಅಜಕ್ಕಳ ಗಿರೀಶ್ ಭಟ್ ಮಾತನಾಡಿ,ಹಿಂದೆ ರಾಜಾಶ್ರಯದಿಂದ ಗೌರವಿಸಲ್ಪಡುತ್ತಿದ್ದ ಗಮಕಕಲೆ, ಇಂದು ಜನಾಶ್ರಯದಿಂದ ಮುಂದಿನ ಜನಪದಕ್ಕೆ ಪ್ರಸಾರವಾಗುವಲ್ಲಿ ಇಂಥ ಕಾರ್ಯಕ್ರಮಗಳು ಉಪಯುಕ್ತವಾಗಲಿದೆ ಎಂದರು
ನಮೋ ಕುಮಾರವ್ಯಾಸ ಗಮಕಗೀತೆ ಹಾಗೂ ಕನಕದಾಸ ವಿರಚಿತ ದಾಸ ಸಾಹಿತ್ಯ ಗಮಕ ವಾಚನ ಹಿರಿಯ ಕಿರಿಯ ಗಮಕಿಗಳಿಂದ ನಡೆಸಲಾಯಿತು. ಭೀಮಾಂಜನೇಯ ಸಮಾಗಮ ಸೌಗಂಧಿಕಾ ಸಂದಿ ಎಂಬ ಭಾಗವನ್ನು ಮಂಜುಳಾ ಸುಬ್ರಮಣ್ಯ ಭಟ್ ಗಮಕಿಯಾಗಿ ಪ್ರೊ. ಮದ್ದೂರು ಮೋಹನ ಕಲ್ಲೂರಾಯ ವ್ಯಾಖ್ಯಾನಕಾರರಾಗಿ ಕಥಾನಕವನ್ನು ನಿರ್ವಹಿಸಿದರು


Be the first to comment on "ಬಂಟ್ವಾಳ ತಾಲೂಕು ಗಮಕ ಪರಿಷತ್ ನೂತನ ಪದಾಧಿಕಾರಿಗಳ ಪದಗ್ರಹಣ"