ಬಸ್ಸಿನಲ್ಲಿ ಯಾನ- ಧ್ಯಾನ

www.bantwalnews.com

ಡಾ.ಅಜಕ್ಕಳ ಗಿರೀಶ ಭಟ್

ಅಂಕಣ: ಗಿರಿಲಹರಿ

ಜಾಹೀರಾತು

 

ನಾನು ಅವಕಾಶ ಇದ್ದಾಗ ಮತ್ತು ಸಾಕಷ್ಟು ಸಮಯ ಇದ್ದಾಗ ಸಾಧ್ಯವಾದಷ್ಟು ಮಟ್ಟಿಗೆ ಬಸ್ಸಿನಲ್ಲಿ ಪ್ರಯಣ ಮಾಡಲು ಬಯಸುತ್ತೇನೆ. ಅದರಲ್ಲೂ ರಾಜರಸ್ತೆಗಳಲ್ಲಿ ವೇಗದೂತರಾಗಿ ಚಲಿಸುವ ಬಸ್ಸುಗಳಿಗಿಂತಲೂ ಒಳರಸ್ತೆಗಳಲ್ಲಿ ಓಡಾಡುವ ಬಸ್ಸುಗಳ ಪ್ರಯಾಣ ನಮಗೆ ಹೊಸ ಹೊಸ ಅನುಭವಗಳನ್ನು ಮತ್ತು ಮಹಿತಿಯನ್ನೂ ಕೊಡುತ್ತದೆ.

ಜಾಹೀರಾತು

ಎರಡು ವಾರಗಳ ಹಿಂದೆ ರಾತ್ರಿ ಎಂಟೂವರೆಗೆ ಹೊರಡುವ ಕೊನೆಯ ಟ್ರಿಪ್ಪಿನಲ್ಲಿ ಸುಮಾರು ಒಂದೂಕಾಲು ಗಂಟೆ ಪ್ರಯಾಣಿಸುವ ಸದವಕಾಶ ಸಿಕ್ಕಿತು. ಚಾಲಕರ ಹತ್ತಿರದ ಉದ್ದ ಸೀಟಿನಲ್ಲಿ ಜಾಗ ಖಾಲಿಯಿತ್ತು. ಆ ಆಸನವು ನಿದ್ದೆ ಮಾಡಲು ಅಷ್ಟು ಹಿತಕಾರಿಯಲ್ಲದೇ ಇದ್ದರೂ ಅಲ್ಲಿ ಕೂತರೆ ಬಸ್ಸು ಬಿಡುವ ಚಾಲಕರ ಲಹರಿ ಒಳ್ಳೆಯದಿದ್ದರೆ ಮಾತಾಡಿಕೊಂಡು ಹೋಗಬಹುದು. ಸಾಮಾನ್ಯವಾಗಿ ನಾನಾಗಿ ಇಂಥಲ್ಲಿ ಬಸ್ಸಿನ ಚಾಲಕರನ್ನು ಮಾತಿಗೆ ಎಳೆಯುವುದಿಲ್ಲ. ಚಾಲಕರ ಗಮನ ಬೇರೆಡೆ ಹೋಗುವುದು ಅಪಾಯ. ಅಲ್ಲದೆ ಅಪಘಾತವಾದರೆ ಆ ಸೀಟಿನಲ್ಲಿ ಕೂತ ನಮಗೇ ಮೊದಲು ಪೆಟ್ಟಾಗುವ ಸಂಭವವೂ ಇದೆ. ಆದರೆ ಕೆಲವು ಚಾಲಕರಿಗೆ ಮಾತಾಡುವ ಉಮೇದು ಇರುತ್ತದೆ. ನಾನು ಹತ್ತಿದ ಈ ಬಸ್ಸಿನ ಚಾಲಕ, ಅವರ ಹೆಸರು ಲಿಂಗಣ್ಣ ಅಂತಿರಲಿ, ತುಂಬ ಮಾತಾಡುವ ಸ್ವಭಾವದವರು.

ಬಸ್ಸು ಹೊರಟ ಕೂಡಲೇ ಲಿಂಗಣ್ಣ ಮಾತಿಗೆ ಶುರು ಮಾಡಿದರು. ಅದಕ್ಕೆ ಕಾರಣ ಯಾರೋ ಕುಡಿದು ಬಸ್ಸು ಹತ್ತಿದವನು ಬಸ್ಸು ಹೊರಡುವ ಮೊದಲೇ ಬಸ್ಸಿನ ಮೆಟ್ಟಲಿನ ಮೇಲೆಯೇ ವಾಂತಿ ಮಾಡಿದ್ದು. ನಾನು ಮಾತಾಡಿದ್ದು ಕಡಿಮೆ. ಹೂಂಗುಟ್ಟಿದ್ದೇ ಜಾಸ್ತಿ. ಲಿಂಗಣ್ಣ ಹೇಳುತ್ತಿದ್ದರು -ಈ ಲಾಸ್ಟ್ ಟ್ರಿಪ್ ಭಾರೀ ಕಷ್ಟಪ್ಪ. ಕುಡುಕರು. ಬೆಳಗ್ಗಿನಿಂದ ಈ ಗೇರು ಎಳೆದೂ ಎಳೆದೂ ನೂಕೀ ನೂಕೀ ಎಡದ ಕೈ ಬಿದ್ದು ಹೋದ ಹಾಗೆ ಆಗುತ್ತದೆ. ನಮಗೆ ಎಕ್ಸ್ ಪ್ರೆಸ್ ಬಸ್ಸಿನ ಹಾಗೆ ಅಲ್ಲ ನೋಡಿ. ಅರ್ಥ ಆಯಿತಲ್ಲ,  ಗಳಿಗ್ಗೆಗೊಮ್ಮೆ ನಿಲ್ಲಿಸಬೇಕು. ಗೇರು ಒಂದು ಎರಡು ಮೂರು ನಾಕು ಹೀಗೆ ಮೇಲೇ ಕೆಳಗೆ ಮಾಡೂದೇ ಕೆಲಸ. ಯರಾದ್ರೂ ಕೈ ತೋರಿಸಿದಲ್ಲಿ ನಿಲ್ಲಿಸದಿದ್ರೆ ದನಿ ಬಿಡ್ತಾರಾ? ನಾವು ಕಲೆಕ್ಷನ್ ತೋರಿಸ್ಬೇಕಲ್ವಾ? ಚಾಲಕರ ಕಷ್ಟ ಯಾರಿಗೂ ಗೊತ್ತಾಗುದಿಲ್ಲಪ್ಪ. ದನಿಗಳಿಗೆ ಇದೆಲ್ಲ ಅಂದಾಜಾಗುದಿಲ್ಲ. ನಾವು ನಾಲ್ಕು ದಿನ ಏನಾದ್ರೂ ಅರ್ಜೆಂಟು ಅಂತ ರಜೆ ಮಾಡಿದ್ರೆ ಭಾರಿ ಸಮಸ್ಯೆ. ಎಂತದ್ದು ಗೊತ್ತುಂಟ? ಬದಲಿಗೆ ಬಂದವರು ದಡಬಡ ಅಂತ ಓಡಿಸಿ ಕಲೆಕ್ಷನ್ ಸ್ವಲ್ಪ ಜಸ್ತಿ ಮಾಡುತ್ತಾರೆ. ಗಾಡಿ ಹಾಳು ಮಾಡಿ ಇಡ್ತಾರೆ. ನಾವು ಖಾಯಮ್ಮಿನವರು ರಜೆ ಮುಗಿಸಿ ಬಂದ ದಿನ ಗಾಡಿ ಅರ್ಧದಲ್ಲಿ ನಿಲ್ಲುತ್ತದೆ. ದನಿ ಏನು ಹೇಳುವುದು ಗೊತ್ತುಂಟೋ? ಅರ್ಥ ಆಯಿತಲ್ಲ ನಿಮಗೆ? ಅವನು ಬಿಡುವಾಗ ಗಾಡಿ ಸರೀ ಇತ್ತು. ಕಲೆಕ್ಷನ ಕೂಡ ಹೆಚ್ಚು. ನೀನು ಬಂದ ಕೂಡಲೇ ಗಾಡಿ ಹಾಳಾಯಿತು ಅಂತ ಬೈತಾರೆ. ಹೇಗೆ? ಅರ್ಥ ಆಯಿತಲ್ಲ ನಿಮಗೆ? ನಾನು ಎಂತ ಹೇಳಬೇಕು? ನಾವು ಮಂಗಳೂರು ಪೇಟೆಯಲ್ಲಿ ನರಕ್ಕ ಬರುವುದು ಗೊತ್ತುಂಟೋ ನಿಮಗೆ? ನಿಮ್ಮಂಥವರು ದೊಡ್ಡ ದೊಡ್ಡ ಜನರು ಹೊಸ ಹೊಸ ಕಾರು ತೆಕ್ಕೊಂಡು ಪೇಟೆಗೆ ಬರುವುದು. ಕೆಲವರಿಗೆ ಸರೀ ಕಾರು ಬಿಡಲಿಕ್ಕೆ ಗೊತ್ತಿರುವುದಿಲ್ಲ. ಅದರಲ್ಲೂ ಕೆಲವು ಜವ್ವಂತಿ ಹುಡುಗಿಯರು ನಡು ಮಾರ್ಗದಲ್ಲಿ ಬಂದ್ ಬೀಳಿಸುತ್ತಾರೆ. ಇಡೀ ರೋಡು ಬ್ಲೋಕ್ ಮಾಡುತ್ತಾರೆ. ಅವರಿಗೇನು? ಯಾರಾದರೂ ಬಂದು ಕಾರು ಸ್ಟಾರ್‍ಟ್ ಮಾಡಿ ಕೊಡುತ್ತಾರೆ. ಅವರಿಗೆ ಉಪಕಾರ ಮಾಡಲಿಕ್ಕೆ ಜನ ಕಡಿಮೆ ಉಂಟ? ಆದರೆ ನಮ್ಮ ಕಷ್ಟ ಯಾರಿಗೆ ಹೇಳುವುದು? ಅವರಿಗೆ ಉಪಕಾರ ಮಾಡುವವರು ನಮ್ಮ ದನಿ ಹತ್ರ ಬಂದು ಅಲ್ಲಿ ನಾಲ್ಕು ನಿಮಿಷ ಬ್ಲೋಕ್ ಆಗಿ ಲೇಟು ಆಗಿ ಟ್ರಿಪ್ ಕಟ್ಟಾದದ್ದು ಅಂತ ಸಾಕ್ಷಿ ಹೇಳ್ತಾರಾ? ಅರ್ಥ ಆಯಿತಲ್ಲ ನಿಮಗೆ? ನಮಗೆ ಮೂರು ನಿಮಿಷ ಬ್ಲೋಕ್ ಆದ್ರೆ ಒಂದು ಟ್ರಿಪ್ ಕಟ್ ಆಗುತ್ತದೆ. ಆ ಟ್ರಿಪ್ಪಿನ ದುಡ್ಡು ಹೋಯಿತಲ್ಲ? ಈ ಗಾಡಿ ಬಿಡ್ಳಿಕೆ ಬರದವರು ಮುಖದ ಬೆವರು ಒರಸಿಕೊಂಡು ಹೋಗ್ತಾರೆ. ನಾವು ಹೋರ್‍ನ್ ಹಾಕಿದ್ರೆ ಎಲ್ಲರೂ ನಮ್ಮನ್ನೇ ಪರೆಂಚುವವರು. ಅರ್ಥ ಆಯಿತಲ್ಲ ನಿಮಗೆ? ಈಗ ನಾನು ಕೇಳಬೇಕೆನ್ನಿಸಿತು ಕೇಳಿದೆ-ಹಾಗೆ ಟ್ರಿಪ್ಪು ಕಟ್ಟಾದ್ರೆ ನಮ್ಮ ಸಂಬಳದಲ್ಲಿ ಕಡಿಮೆ ಮಾಡುತ್ತಾರಾ? ಲಿಂಗಣ್ಣ ಹೇಳಿದರು-ತಿಂಗಳಲ್ಲಿ ಒಂದು ಸಲ ಎಲ್ಲ ಆದ್ರೆ ಮಾಡುದಿಲ್ಲ. ಮತ್ತೆ ಮತ್ತೆ ಆದ್ರೆ ಅವರಿಗೂ ಸಿಟ್ಟು ಬರೂದಿಲ್ವಾ? ಅಷ್ಟಾಗುವಾಗ ವಾಂತಿ ಮಾಡಿದವನು ಇಳಿಯುವ ಸ್ಟಾಪ್ ಬಂದಿತ್ತು. ಲಿಂಗಣ್ಣ ಹೇಳಿದರು -ಇಂಥ ಕುಡುಕರದ್ದು ಭಾರಿ ಜಾಗ್ರತೆ ಬೇಕು. ಇಳಿದವರು ಕೆಲವು ಸಲ ಹಿಂದಿನ ಚಕ್ರದ ಅಡಿಗೇ ಬೀಳುತ್ತಾರೆ. ರಾತ್ರಿ ಈ ಹಳ್ಳಿ ರಸ್ತೆಗಳಲ್ಲಿ ಇಳಿದ ಮೇಲೆ ಅವರೆಲ್ಲಿ ಬಿದ್ದರೋ ಆಚೆ ಹೋದರೋ ಅಂತ ನಮಗೆ ಗೊತ್ತಾಗುವುದು ಹೇಗೆ? ಅರ್ಥ ಆಯಿತಲ್ಲ ನಿಮಗೆ? ಒಂದು ಸಲ ಹಾಗೇ ಆಗಿತ್ತು. ಬಸ್ ಸ್ಟೇಂಡಲ್ಲಿ ಒಬ್ಬ ನನ್ನ ಬಸ್ಸಿಗೆ ಒರಗಿ ನಿಂತಿದ್ದವನು ನಾನು ಬಸ್ಸು ಮೂವ್ ಮಾಡಿದಾಗ ಹಿಂದಿನ ಟಯರಿನ ಅಡಿಗೆ ಮಾರಾಯರೆ. ಅರ್ಥ ಆಯಿತಲ್ಲ ನಿಮಗೆ? ಸ್ಪೋಟ್. ನಾನೆಂತದ್ದು ಮಾಡುವುದು? ಅವನು ನಿಜವಾಗಿ ಒರಗಿ ನಿಂತದ್ದು ಅಲ್ಲ. ನಿಲ್ಲಿಕ್ಕಾಗದೆ ಒರಗಿದ್ದು. ಅವನು ದೊಡ್ಡ ಕುಡುಕ ಅಂತ ಮತ್ತು ಸರೀ ಕುಡಿದಿದ್ದ ಅಂತ ಬಸ್ ಸ್ಟೇಂಡಿನಲ್ಲಿದ್ದ ಎಲ್ಲರಿಗೂ ಮೊದಲೇ ಗೊತ್ತಿದ್ದರಿಂದ ನನ್ನ ಮೇಲೆ ಕೇಸು ಕಾಯಲಿಲ್ಲ. ಆದರೂ ಆ ದಿನದ ಟ್ರಿಪ್ಪು ಕಟ್ಟೇ ಅಲ್ವ? ಅರ್ಥ ಆಯಿತಲ್ಲ ನಿಮಗೆ? ನನ್ನ ಕೈಯಲ್ಲಿ ಎರಡು ಮೂರು ಡೆತ್ ಆಗಿದೆ, ಹಾಗಾಗಿ ನನಗೆ ಈಗ ಅದೆಲ್ಲ ದೊಡ್ಡ ಹೆದರಿಕೆ ಇಲ್ಲ. ಹೊಸಬರಿಗೆ ಆದ್ರೆ ಭಾರಿ ಕಷ್ಟ. ಕ್ರಮ ಗೊತ್ತಿದ್ರೆ ತೊಂದರೆ ಇಲ್ಲ. ಯಾರಾದ್ರೂ ಸತ್ರೂ ಹೆದರಬೇಕಂತಿಲ್ಲ. ನನಗೆ ಕುತೂಹಲವಾಯಿತು. ಅದು ಹೇಗೆ? ಕ್ರಮ ಅಂದ್ರೆ ಹೇಗೆ? ಅಂತ ಕೇಳಿದೆ. ಲಿಂಗಣ್ಣ ಹೇಳಿದರು- ಈಗ ನೋಡಿ. ಅರ್ಥ ಆಯಿತಲ್ಲ ನಿಮಗೆ? ಅಪಘಾತ ಆಗಿ ನಮ್ಮ ಗಾಡಿಯ ಅಡಿಗೆ ಯಾರಾದ್ರೂ ಬಿದ್ದು ಡೆತ್ ಏನಾದ್ರೂ ಆದ್ರೆ ನಾವು ರಪ್ಪ ಅಲ್ಲಿಂದ ತಪ್ಪಿಸಬೇಕು.

ನಾನು ಕೇಳಿದೆ.-  ಹೌದು. ನಾನೂ ಪೇಪರಲ್ಲಿ ಎಲ್ಲ ನೋಡಿದ್ದೇನೆ ಚಾಲಕ ತಲೆಮರೆಸಿಕೊಂಡ ಅಂತ. ಅದು ಹೇಗೆ ಅಷ್ಟು ಸುಲಭದಲ್ಲಿ ತಪ್ಪಿಸುವುದು?  ಲಿಂಗಣ್ಣರಿಗೆ ನಗು ಬಂತು. ಹೇಳಿದರು-  ನಾವು ನೋಡಿ ಯಾವಾಗಲೂ ನಮ್ಮ ಮಾಮೂಲಿ ಅಂಗಿಯ ಮೇಲೆ ಖಾಕಿ ಅಂಗಿ ಹಾಕಬೇಕು. ಅದರ ಗುಬ್ಬಿ ಎಲ್ಲವನ್ನ್ಲು ಹಾಕಬಾರದು. ಒಂದು ಗುಬ್ಬಿ ಹಾಕಬೇಕು. ಅರ್ಥ ಆಯಿತಲ್ಲ ನಿಮಗೆ? ಅಪಘಾತ ಆದ ಕೂಡಲೆ ಜನ ಎಲ್ಲ ಮೊದಲು ನೋಡುವುದು ಪೆಟ್ಟಾದವರನ್ನೆ. ನಾವು ರಪ್ಪ ನಮ್ಮ ಖಾಕಿ ಅಂಗಿ ತೆಗೆಯೂದು, ಗಾಡಿಯಿಂದ ಜಂಪ್ ಮಾಡಿ ಹಿಂಬದಿಗೆ ಹೋಗಿ ಯಾವುದಾದ್ರೂ ರಿಕ್ಷವೋ ಏನಾದ್ರೂ ಸಿಕ್ಕಿಯೇ ಸಿಗ್ತದೆ ಅದ್ರಲ್ಲಿ ಸೀದ ಹೋಗುವುದು. ಅಷ್ಟಾಗುವಾಗ ದನಿಗೆ ಫೋನು ಮಾಡಿ ಹೀಗೀಗೆ ಅಂತ ಹೇಳಬೇಕು. ಅವರು ಎಮ್ಮೆಲ್ಲೆಗೋ ಯಾರಿಗಾದರೂ ಫೋನು ಮಾಡಿ ಸ್ಟೇಷನ್ನಿಗೆ ಫೋನು ಮಾಡಿಸುತ್ತಾರೆ. ಈ ಮೊಬೈಲು ಬಂದದ್ದು ದೊಡ್ಡ ಉಪಕಾರ. ಅವರ ಫೋನು ಹೋದ ನಂತರ ನಾವು ಸ್ಟೇಷನ್ನಿಗೆ ತಲುಪಬೇಕು. ಅರ್ಥ ಆಯಿತಲ್ಲ ನಿಮಗೆ? ಹಾಗೆ ಹೇಳಿ ನಮಗೆ ಕರುಣೆ ಇಲ್ಲ ಅಂತ ನೀವು ಆಲೋಚನೆ ಮಾಡ್ಬೇಡಿ. ಜೀವ ಹೋದ ಕೇಸಲ್ಲಿ ನಾವು ಜನ ಸೇರುವಲ್ಲಿ ನಿಲ್ಲುವುದು ಡೇಂಜರ್. ಬರೀ ಪೆಟ್ಟಾದಲ್ಲಿ ಬೇರೆ ಯಾರೂ ಇಲ್ಲದಿದ್ರೆ ನಾವು ಆಸ್ಪತ್ರೆಗೆ ಸೇರಿಸುತ್ತೇವೆ. ಅರ್ಥ ಆಯಿತಲ್ಲ ನಿಮಗೆ? ಈಗ ನೋಡಿ. ನೀವು ಇಷ್ಟು ಕಲ್ತಿದ್ದೀರಿ ಈ ವಿಷಯ ನಾನು ಹೇಳಿ ಗೊತ್ತಾದ್ದಲ್ವ ನಿಮಗೆ?

ಜಾಹೀರಾತು

ಗುರುತು ಪರಿಚಯವೇ ಇಲ್ಲದ ನಾನು ಇಷ್ಟೆಲ್ಲ(?) ಕಲ್ತಿದ್ದೇನೆ ಅಂತ ಲಿಂಗಣ್ಣರಿಗೆ ಗೊತ್ತಾದ್ದು ಹೇಗೆ ಅಂತ ನನಗೆ ಅಂದಾಜಾಗಲಿಲ್ಲ. ಬಹುಶಃ ನನಗೆ ಏನೂ ಗೊತ್ತಿಲ್ಲ ಅಂತ ಅವನಿಗೆ ಗೊತ್ತಾದ ಕಾರಣ ನಾನು ತುಂಬ ಕಲ್ತಿದ್ದೇನೆ ಅನ್ನುವ ಕನ್‌ಕ್ಲೂಶನಿಗೆ ಅವರು ಬಂದಿರಬಹುದು. ನಾನು ಕೇಳಿದೆ- ನಿಮಗೆ ಇದೆಲ್ಲ ತುಂಬ ಅನುಭವ ಉಂಟೋಂತ  ಮತ್ತೆ ನೋಡುವಾಗ ಲಿಂಗಣ್ಣ ಬಸ್ಸು ಬಿಡುವುದು ಮೂವತ್ತೊಂದು ವರ್ಷ ಆಯಿತಂತೆ. ಹೇಳಿದರು- ನನಗೆ ಸಾಧಾರಣದ ರಿಪೇರಿ ಎಲ್ಲ ಗೊತ್ತುಂಟು. ನೋಡುವ ಈಗಿನ ಈ ಜವ್ವನ ಡ್ರೈವರುಗಳು ಮಾಡ್ಳಿ ನೋಡುವ. ಅರ್ಥ ಆಯಿತಲ್ಲ ನಿಮಗೆ? ನಾವು ಹೀಗೆ ರಿಪೇರಿ ಎಲ್ಲ ಮಾಡಿ ನಮ್ಮ ದನಿಗೆ ಎಷ್ಟು ದುಡ್ಡು ಉಳಿಸ್ತೇವೆ ಗೊತ್ತುಂಟ? ನಿಮಗೆ ಹೇಗೆ ಗೊತ್ತಾಗುವುದು? ನಮ್ಮ ದನಿಗಳಿಗೇ ಗೊತ್ತಾಗುದಿಲ್ಲ. ಅವರಿಗೆ ಸ್ಟೈಲಲ್ಲಿ ಉದ್ದ ಕೂದಲು ಬಿಟ್ಟು ಬೂಟ್ಸು ಹಾಕಿ ಬಸ್ಸು ಬಿಟ್ರೆ ಭಯಂಕರ ಡ್ರೈವರು ಅಂತ ಲೆಕ್ಕ. ನಮ್ಮ ಕಷ್ಟ ನಮಗೆ. ಈಗ ನೋಡಿ ನಾನು ಗಾಡಿ ನಿಲ್ಲಿಸುವಾಗ ಒಂಬತ್ತೂಮುಕ್ಕಾಲು ಕಳೀತದೆ. ಮತ್ತೆ ಗೋರ್‍ಮೆಂಟ್ ಬಸ್ಸು ಹಿಡಿದು ನನ್ನ ಮನೆಗೆ ಹೋಗ್ಬೇಕು. ಅರ್ಥ ಆಯಿತಲ್ಲ ನಿಮಗೆ? ನನ್ನ ಮಕ್ಕಳನ್ನು ಓದಿಸಿದ್ದು ಬಸ್ಸು ಬಿಟ್ಟೇ. ಮಗ ಪೋಲಿಟೆಕ್ನಿಕ್ ಮಾಡಿದವನು ಮದುವೆ ಆಗಿ ಬೆಂಗಳೂರಲ್ಲಿ ಕಂಪೆನಿಯಲ್ಲಿದ್ದಾನೆ. ಒಳ್ಳೆ ಕೆಲಸ ಅವನಿಗೆ. ಮಗಳಿಗೆ ಮದುವೆ ಆಗಿದೆ ಗೋರ್ಮೆಂಟ್ ಶಾಲೆಯಲ್ಲಿ ಟೀಚರು. ಅಳಿಯನಿಗೆ ಒಳ್ಳೆ ಬಿಸಿನೆಸ್ಸು ಉಂಟು. ಅರ್ಥ ಆಯಿತಲ್ಲ ನಿಮಗೆ? ಸ್ವಲ್ಪ ಡಿಪೋಸಿಟ್ಟು ಬೇಂಕಲ್ಲೂ ಉಂಟು. ಅರ್ಥ ಆಯಿತಲ್ಲ ನಿಮಗೆ?  ಅರ್ಥ ಆದರೂ ನಾನು ಕೇಳಿದೆ-  ಇಷ್ಟೆಲ್ಲ ಇದ್ದ ಮೇಲೆ ಈ ಕೆಲಸ ಬಿಟ್ಟು ಆರಾಮವಗಿ ಇರಬೌದಲ್ಲ ಮನೆಯಲ್ಲಿ?

ಲಿಂಗಣ್ಣ ಹೇಳಿದರು-  ಏ ಅದೆಲ್ಲ ಆಗೂದಿಲ್ಲ ಗಾಡಿ ಬಿಟ್ಟು ಇರ್‍ಲಿಕ್ಕೆ ನನ್ನಿಂದಾಗ್ಲಿಕ್ಕಿಲ್ಲ. ಕೂಡಿದಷ್ಟು ದಿನ ಗೇರು ಎಳಿಯೂದೇ. ದನಿ ಎಷ್ಟು ಪಿರಿಪಿರಿ ಮಾಡಿದ್ರೂ ನಾನು ಅಂದ್ರೆ ಅವರಿಗೆ ಒಂದು ಗೌರವ ಉಂಟು. ಹೊಸಬರ ಗುಟ್ಟು ಅವರಿಗೂ ಗೊತ್ತಿಲ್ವ? ಮತ್ತೆ ಈ ಬಸ್ಸು ಬಿಡುವುದು ಉಂಟಲ್ಲ, ಇದು ಯಾರದ್ದಾದ್ರೂ ಶ್ರೀಮಂತರ ಮನೆ ಕಾರಿನ ಖಾಯಂ ಡ್ರೈವರು ಆಗುದಕ್ಕಿಂತ ಸಾವಿರ ಪಾಲು ಆದೀತು ಮಾರಾಯರೆ. ಅರ್ಥ ಆಯಿತಲ್ಲ ನಿಮಗೆ? ಅದ್ಯಾಕೆ? ನಾನು ಕೇಳಿದೆ. ಲಿಂಗಣ್ಣ ಹೇಳಿದರು- ನಿಮಗೆ ಗೊತ್ತಿಲ್ಲ, ಅರ್ಥ ಆಯಿತಲ್ಲ ನಿಮಗೆ? ನಾನು ಬಸ್ಸು ಡ್ರೈವರು ಆಗುದಕ್ಕಿಂತ ಮೊದಲು ಮಂಗಳೂರಲ್ಲಿ ಎರಡು ವರ್ಷ ಅದೇ ಕೆಲಸ ಮಾಡಿದ್ದೆ. ಎಂತದ್ದು ಮರಾಯರೆ? ದನಿಯ ಬಟ್ಟೆ, ಅವರ ಹೆಂಡತಿ ಮಕ್ಕಳ ಬಟ್ಟೆ, ಒಣಗಿದ್ರೆ ತಂದು ಮಡಿಸಿ ಇಡಬೇಕು. ಇಸ್ತ್ರಿಗೆ ಕೊಡ್ಬೇಕು, ತರಕಾರಿ ತರ್‍ಬೇಕು, ಕಸ ಗುಡಿಸ್ಬೇಕು, ಮತ್ತೆ ಗಾಡಿಯಲ್ಲಿ ಒಂದು ಹುಡಿ ಧೂಳು ಇರಬಾರ್‍ದು. ಒಂದ ಎರಡ? ಹೇಗೂ ಮನೆಯಲ್ಲಿಯೇ ಇರ್‍ತಾನಲ್ಲ? ಅರ್ಥ ಆಯಿತಲ್ಲ ನಿಮಗೆ? ಅವರು ಹೇಳಿದ್ದೆಲ್ಲ ಮಾಡ್ಬೇಕು. ಈಗ ಅದಕ್ಕೇ ಖಾಯಂ ಡ್ರೈವರುಗಳು ಮನೆಯಲ್ಲಿ ನಿಲ್ಲಿಕ್ಕೆ ಯಾರೂ ಸಿಗೂದಿಲ್ಲ. ಬೇಕಾದಾಗ ಬೇಕಿದ್ರೆ ಕರೆದ್ರೆ ಬರ್‍ತಾರೆ. ದಿನಕ್ಕೆ ಖರ್ಚು ಕಳೆದು ಎಂಟುನೂರೋ ಸಾವಿರವೋ ಹೇಳುತ್ತಾರೆ. ಹಾಗೇ ಆಗ್ಬೇಕು ಈ ದೊಡ್ಡವರಿಗೆ. ಅರ್ಥ ಆಯಿತಲ್ಲ ನಿಮಗೆ? ಹೀಗೇ ಎಣೇನೋ ವಿಚಾರಗಳ ವಿಮರ್ಶೆ ಆಗುವಾಗ ನಾನೂ ಲಿಂಗಣ್ಣರೂ ಇಳಿಯಬೇಕಾದ ಬಸ್ಸು ಹೋಲ್ಟ್ ಆಗುವ ಕೊನೇ ಸ್ಟೋಪಿಗೆ ತಲುಪಿ ಆಗಿತ್ತು. ಇನ್ನೊಂದಷ್ಟು ಹೊತ್ತು ಈ ಪ್ರಯಾಣ ಇರಬೇಕಿತ್ತು ಅಂತ ಅಂದುಕೊಂಡೇ ಬಸ್ಸಿಳಿದೆ. ಲಿಂಗಣ್ಣರೂ ಬೈರಾಸು ಹೆಗಲಿಗೆ ಹಾಕಿಕೊಂಡು ಇಳಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Dr. Ajakkala Girish Bhat
ವೃತ್ತಿಯಲ್ಲಿಕನ್ನಡ ಬೋಧಕ. ಬಂಟ್ವಾಳ ಸರಕಾರಿ ಪದವಿ ಕಾಲೇಜು ಪ್ರಾಂಶುಪಾಲ. ಇಂಗ್ಲಿಷನ್ನುಪಳಗಿಸೋಣ, ಬುದ್ಧಿಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ, ಅಸತ್ಯ ಅಥವಾ ಸತ್ಯ?, ಮುಂತಾದ ಹದಿನಾರು ಪುಸ್ತಕಗಳು ಪ್ರಕಟವಾಗಿವೆ. ವಿವಿಧ ಗೋಷ್ಠಿ, ಸಮ್ಮೇಳನಗಳಲ್ಲಿ ಪ್ರಬಂಧ, ವಿಚಾರ ಮಂಡಿಸಿದ್ದಾರೆ.

Be the first to comment on "ಬಸ್ಸಿನಲ್ಲಿ ಯಾನ- ಧ್ಯಾನ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*