ಜಾತ್ರಾ ಸಂಭ್ರಮದಲ್ಲಿ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ದೇವಸ್ಥಾನ

  • ಪ್ರೊ| ರಾಜಮಣಿ ರಾಮಕುಂಜ

ಒಂದು ಕಾಲದಲ್ಲಿ ಗಾಣಪತ್ಯರ, ಶೈವರ, ವೈಷ್ಣವರ, ಶಾಕ್ತರ, ಜೈನರ ಆರಾಧನಾ ಶಕ್ತಿಗಳ ಸಮ್ಮಿಲನವಾಗಿ ರೂಪುಗೊಂಡಿದ್ದ ನಂದಾವರ ಕ್ಷೇತ್ರ ದ.ಕ. ಜಿಲ್ಲೆಯ ಪ್ರಮುಖ ಪ್ರಾಚೀನ ದೇವಸ್ಥಾನಗಳಲ್ಲಿ ಒಂದು. ನೇತ್ರಾವತಿಯ ದಕ್ಷಿಣ ದಂಡೆಯ ಮೇಲಿರುವ ಈ ದೇವಾಲಯಕ್ಕೆ ಬಿ.ಸಿ.ರೋಡಿನಿಂದ ಮುಂಬರಿದು ನೇತ್ರಾವತಿ ಸೇತುವೆಯನ್ನು ದಾಟಿ ಪಾಣೆಮಂಗಳೂರು ಮೂಲಕ ತಲುಪಬೇಕು. ಬಿ.ಸಿ.ರೋಡಿನಿಂದ ಸುಮಾರು ೪ ಕಿ.ಮೀ ಅಂತರದಲ್ಲಿರುವ ನಂದಾವರ, ವಿಜಯನಗರ ಕಾಲದಲ್ಲಿ ಬಂಗರಸರ ಒಂದು ಪ್ರಮುಖ ಕೋಟೆ ರಾಜಧಾನಿಯಾಗಿ ಮೆರೆದಿತ್ತು. ಸಜಿಪ ಮುನ್ನೂರು, ಸಜಿಪಮೂಡ, ಸಜಿಪನಡು, ಸಜಿಪಪಡು ಎಂಬ ನಾಲ್ಕು ಗ್ರಾಮಗಳಿಗೆ ಸಂಬಂಧಿತ ಈ ದೇವಾಲಯ, ಮಾಗಣೆ ದೇವಾಲಯವೆಂದೇ ಪ್ರಸಿದ್ಧ.

ನಂದಾವರವು ಐತಿಹಾಸಿಕ ಮಹತ್ವದ ಪಟ್ಟಣವಾದರೂ ಅದರ ಪ್ರಾಚೀನತೆಗೆ ಸಂಬಂಧಿಸಿದ ಚರಿತ್ರೆಯೆಲ್ಲ ಕಾಲಗರ್ಭದಲ್ಲಿ ಮರೆಯಾಗಿ ಹೋಗಿದೆ. ನಂದರು ಹಾಗೂ ಬಂಗರ ರಾಜಧಾನಿಯಾಗಿ ಮೆರೆದಿದ್ದ ನಂದಾವರ; ಇಲ್ಲಿನ ದೇವಾಲಯದ ಕಟ್ಟಡದ ರಚನೆ ಹಾಗೂ ಕುರುಹುಗಳಿಂದಾಗಿ ಸುಮಾರೂ 10-11 ನೇ ಶತಮಾನಗಳಷ್ಟು ಐತಿಹಾಸಿಕ ದೃಷ್ಟಿಯಿಂದ ಹಿಂದಕ್ಕೆ ಹೋಗುತ್ತದೆ, ನಂದರು ಮತ್ತು ಬಂಗರು ಈ ಪ್ರದೇಶವನ್ನು ಆಳಿದ್ದರೆನ್ನುವುದು ವಿದ್ವಾಂಸರ ಅಭಿಪ್ರಾಯವಾಗಿದೆ.

ಇಲ್ಲಿನ ವಿನಾಯಕ-ಶಂಕರನಾರಾಯಣ-ದುರ್ಗಾಂಬಾ ದೇವಾಲಯಗಳು ಒಂದೇ ಆವರಣದಲ್ಲಿದ್ದು ಅವುಗಳ ನಿರ್ಮಾಣ ಬೇರೆ ಬೇರೆ ಕಾಲ ಘಟ್ಟಗಳಲ್ಲಾಗಿದೆ.

ಶಿಲ್ಪಕಲಾಕೃತಿಗಳ ಕೆತ್ತನೆಯನ್ನು ಹೊಂದಿರುವ ಗುಡಿಗಳನ್ನು ಒಳಗೊಂಡಂತೆ ಸಂಪೂರ್ಣ ಶಿಲಾಮಯ ದೇಗುಲವಿದು. ಸುಮಾರು ಹತ್ತನೇ ಶತಮಾನದಲ್ಲಿ ಈ ದೇವಾಲಯದ ನಿರ್ಮಾಣವಾಗಿರಬಹುದೆಂಬುದು ಸಾಮಾನ್ಯ ಅಭಿಪ್ರಾಯ. ನವರಂಗ ಮತ್ತು ಗರ್ಭಗೃಹ ಇದರ ಮುಖ್ಯ ಅಂಗಗಳು. ಇಲ್ಲಿನ ಬಹಳ ಸುಂದರವಾದ ಬಲಮುರಿ ಗಣಪತಿಯ ವಿಗ್ರಹಕ್ಕೆ ಕರಂಡಕ ಮಾದರಿಯ ಕಿರೀಟವಿದೆ. ಉತ್ಕಟಾಸನದಲ್ಲಿ ಕುಳಿತಿರುವ ಭಂಗಿಯಲ್ಲಿರುವ ವಿನಾಯಕನ ವಿಗ್ರಹವು ಚತುರ್ಬಾಹುಯುಕ್ತವಾಗಿದೆ. ಎಡಬಲ ಹಸ್ತಗಳಲ್ಲಿ ಕ್ರಮವಾಗಿ ದಂತ ಮತ್ತು ಅಂಕುಶಗಳಿವೆ. ಕೆಳಗಿನ ಬಲಗೈ ಬಲಮಂಡಿಗಿಂತ ಸ್ವಲ್ಪ ಕೆಳಕ್ಕೆ ಇದ್ದು ತೊಡೆಯ ಆಧಾರ ಪಡೆದಿದ್ದರೆ ಎಡಗೈ ಎಡ ತೊಡೆಯ ಮೇಲೆ ಭದ್ರವಾಗಿದೆ. ಎರಡೂ ಹಸ್ತಗಳಲ್ಲಿ ಮೋದಕದ ನಿರ್ದೇಶನವಿದೆ. ಈ ವಿಗ್ರಹದಲ್ಲಿ ಉತ್ತರೀಯವು ಎಡಭುಜದ ಮೇಲಿಂದ ಹಿಂದಕ್ಕೆ ಇಳಿದು ಬಲಗೈಯ ಮೇಲೆ ಹಾದು ಹೋಗುವಂತಿದೆ; ಎದುರಿಗೆ ತೀರ್ಥ ಮಂಟಪವಿದೆ. ನವರರಂಗದ ಭುವನೇಶ್ವರಿಯಲ್ಲಿ ಅಷ್ಟದಿಕ್ಪಾಲಕರ ಸುಂದರ ವಿಗ್ರಹಗಳ ಕೆತ್ತನೆ ಇದೆ; ಆದರೆ ಇದು ಯಾರ ದರ್ಶನಕ್ಕೂ ನಿಲುಕದಂತಿದೆ. ನಂದಾವರವೆಂದರೆ ಗಣಪತಿ, ಗಣಪತಿಯೆಂದರೆ ಅಪ್ಪದ ಪೂಜೆ. ಹಾಗಾಗಿ ನಂದಾವರ-ಗಣಪತಿ-ಅಪ್ಪ ಅವಿನಾಭಾವದೊಂದಿಗೆ ಎಲ್ಲರ ಮನೆ ಮಾತಾಗಿ ಎಲ್ಲರ ಮನದೊಳಗೆ ಎಲ್ಲಾ ಶುಭ ಸಮಾರಂಭಕ್ಕೆ ಬೇಕೇ ಬೇಕೆಂಬಷ್ಟು ಪ್ರಖ್ಯಾತಿಯನ್ನು ಪಡೆದಿದೆ.

ದೇವಸ್ಥಾನದ ಮಹಾದ್ವಾರಕ್ಕೆ ಎದುರಾಗಿ, ನಂದಾವರದಲ್ಲಿ ಮೂಲ ದೇವರೆಂದು ಪೂಜಿಸಲಾಗುತ್ತಿರುವ ಶ್ರೀ ಶಂಕರನಾರಾಯಣ ದೇವರ ಉದ್ಭವ ಲಿಂಗವಿದೆ. ಈ ಲಿಂಗದಲ್ಲಿ ರೇಖಾ ನಿರ್ದೇಶನವಿದ್ದು, ಲಿಂಗದ ಬಲ ಭಾಗದಲ್ಲಿ ಶಿವನ ಮತ್ತು ಎಡಭಾಗದಲ್ಲಿ ವಿಷ್ಣುವಿನ ಸಂಕೇತ ನಿರ್ದೇಶಗಳಿವೆ ಎಂದು ಹೇಳಲಾಗುತ್ತಿದೆ. ಹರಿಹರರಲ್ಲಿ ಭೇದವಿಲ್ಲ ಅನ್ನುವುದಕ್ಕೆ ಇದೊಂದು ಸ್ಪಷ್ಟ ನಿದರ್ಶನ.

ಬಂಗರಸ ರಾಮರಾಯನ ತರುವಾಯ ಅವನ ತಮ್ಮ ೩ನೇ ಹಾವಳಿ ಬಂಗರಾಜ (೧೫೩೩-೧೫೪೫)ನಿಗೆ ಪಟ್ಟವಾಗಿ ಈತನೇ ಶಂಕರನಾರಾಯಣ ದೇವಸ್ಥಾನವನ್ನು ಕಟ್ಟಿಸಿ ಪ್ರತಿಷ್ಠೆ ಮಾಡಿಸಿದನೆಂದು ಸಂಶೋಧಕ ಎಂ.ಗಣಪತಿ ರಾವ್ ಐಗಳ್ ಅವರ ಹೇಳಿಕೆ ಇಲ್ಲಿನ ಇತಿಹಾಸವನ್ನು ಬಹಳ ಹಿಂದಕ್ಕೆ ಕೊಂಡೊಯ್ಯುತ್ತದೆ.

ಈ ದೇವಾಲಯದ ಎಡಭಾಗದಲ್ಲಿ ಶ್ರೀ ದುರ್ಗಾಂಬೆಯ ಗುಡಿಯಿದ್ದು, ಇದೂ ಕೂಡಾ ಮೂಲ ದೇವಾಲಯದ ಕಾಲಕ್ಕೆ ಸೇರುವಂತಹದೆಂದು ಅಭಿಪ್ರಾಯಪಡಲಾಗಿದೆ.

ಹಲವು ವಿದ್ವಾಂಸರ ಅಭಿಪ್ರಾಯದಂತೆ, ನಂದಾವರ ಎಂಬ ಹೆಸರು ನಂದ ಮತ್ತು ಪುರ ಎಂಬ ಎರಡು ಪದಗಳಿಂದ ರೂಪಿತವಾಗಿದೆ. ಇದು ನಂದರೆಂಬ ಅರಸು ಮನೆತನದ ಪುರ ಅಥವಾ ರಾಜಧಾನಿಯಾಗಿದ್ದರಿಂದ ಈ ಪ್ರದೇಶವು ನಂದಪುರವೆಂದೂ ಮುಂದೆ ನಂದಾವರವೆಂದೂ ಪ್ರಸಿದ್ಧವಾಯಿತು. ಆದ ಕಾರಣ ನಂದಾವರ ಎಂಬ ಹೆಸರಿನ ಮೂಲ ನಂದರಸರು. ಇನ್ನೊಂದು ಉಲ್ಲೇಖದಂತೆ, ನಂದರು ಆವರಿಸಿದ ಸ್ಥಳ, ನಂದರ ಆವರಣ, ನಂದರು ಸುತ್ತು ಗೋಡೆ ಹೊಂದಿದ್ದ ಸ್ಥಳ ನಂದಾವರವಾಯಿತೆನ್ನುವುದು. ನಾಲ್ಕೈತ್ತಾಯಿ ಇಲ್ಲಿನ ಮಾಗಣೆ ದೈವ. ದೇವಸ್ಥಾನದಲ್ಲಿ ರಥೋತ್ಸವಕ್ಕೆ ಮೊದಲು ದೈವದ ಭಂಡಾರ ಬಂದು ಉತ್ಸವಕ್ಕೆ ರಕ್ಷಣೆಯ ಅಭಯ ದೊರೆಯಬೇಕು; ನಂತರವಷ್ಟೇ ಧ್ವಜಾರೋಹಣವಾಗಿ ಜಾತ್ರೆ ಆರಂಭ.

ಮದುವೆ, ಉದ್ಯೋಗ ಪ್ರಾಪ್ತಿ, ವ್ಯಾಪಾರ ವೃದ್ಧಿ, ಗೃಹಶಾಂತಿ, ಸಂತಾನ ಪ್ರಾಪ್ತಿ, ವಿದ್ಯಾಭ್ಯಾಸ, ವಸ್ತುಗಳು ಕಳವಾದ ಸಂದರ್ಭದಲ್ಲಿ, ಅಪವಾದಗಳ ನಿವಾರಣೆ ಇದು ಇಲ್ಲಿನ ಸಾನ್ನಿಧ್ಯ ವಿಶೇಷ. ಶ್ರೀ ಕ್ಷೇತ್ರವು ಹಿಂದಿನಿಂದಲೂ ಮಡಿವಂತಿಕೆಗಳನ್ನು ಮೀರಿ ಎಲ್ಲಾ ಜಾತಿ,ಮತ ಪಂಥಗಳನ್ನು ಮೀರಿ ಪರಸ್ಪರ ಅನ್ಯೋನ್ಯತೆಯಿಂದೊಡಗೂಡಿದ್ದು ಯಾವುದೇ ಭೇದಗಳಿಲ್ಲದಿರುವುದು ಸ್ತುತ್ಯರ್ಹವಾಗಿದೆ.

ದೇವಾಲಯದ ಸಮೀಪವೇ ನೇತ್ರಾವತಿಯು ಉತ್ತರದಿಂದ ದಕ್ಷಿಣಕ್ಕೆ ಹರಿದು ದೇವಾಲಯದ ಸಮೀಪ ಪಶ್ಚಿಮವಾಹಿನಿಯಾಗಿದ್ದಾಳೆ. ಒಂದರ್ಥದಲ್ಲಿ ಈ ನದಿ, ಕ್ಷೇತ್ರದ ಶಕ್ತಿ ಮತ್ತು ಪಾವಿತ್ರ್ಯತೆಗೆ ಸಾಕ್ಷಿಯಾಗಿ ನಿಂತಿದೆ.

ಇಲ್ಲಿನ ಜಾತ್ರೆಯೆಂದರೆ ಇಡೀ ಬಂಟ್ವಾಳ ತಾಲೂಕೆ ಸಂಭ್ರಮಿಸುವ ಸಂದರ್ಭ. ಪ್ರತೀ ವರ್ಷ ಮಾಘ ಮಾಸ ಹುಣ್ಣಿಮೆಯಿಂದ ಪ್ರಾರಂಭವಾಗಿ ಐದು ದಿನಗಳ ಜಾತ್ರೋತ್ಸಕ್ಕೆ ಭಾಕ್ತಾದಿಗಳು ಕಾದುನಿಂದ ದಿನಗಳಿವು. ದಿನಾಂಕ 10 ರಂದು ಧ್ವಜಾರೋಹಣವಾಗಿ ದಿನಾಂಕ 15 ರವರೆಗೆ ನಿರಂತರ ಐದು ದಿನಗಳ ಅವಧಿ ಭಾವುಕ ಜನ ರೋಮಾಂಚನಗೊಳ್ಳುವ ಪರ್ವಕಾಲ. ತಂತ್ರಿಗಳ ಆಗಮನದೊಂದಿಗೆ ಸಜೀಪನಡು ನಲ್ಕೈತ್ತಾಯಿ ದೈವಸ್ಥಾನದಿಂದ ಭಂಡಾರ ಬರುವುದರ ಮೂಲಕ ಧ್ವಜಾರೋಹಣ. 11 ರಂದು ಬಯನ ಬಲಿ; ದಿನಾಂಕ 12 ಶನಿವಾರ ನಡುಬಲಿ, ಪಾಲಕಿ ಉತ್ಸವ, ರಥಬೀದಿಯಲ್ಲಿ ಸಾಗಿ ಕಟ್ಟೆ ಉತ್ಸವ. 13ರಂದು ಶತರುದ್ರಾಭಿಷೇಕ ಹಗೂ ಲಕ್ಷ ತುಳಸಿ ಅರ್ಚನೆ, ಶ್ರೀ ದೇವರ ರಥಾರೋಹಣ ಮತ್ತು ರಾತ್ರೆ ಒಂಭತ್ತಕ್ಕೆ ಮಹಾ ರಥೋತ್ಸವ ಹಾಗೂ ಸುಡು ಮದ್ದು ಪ್ರದರ್ಶನ; ದಿನಾಂಕ 14 ರಂದು ಅವಭೃತ ಸ್ನಾನ, ಧ್ವಜಾವರೋಣ, ಮಾಗಣೆಯ ನಾಲ್ಕೈತ್ತಾಯಿ ದೈವದ ನೇಮೋತ್ಸವದೊಂದಿಗೆ ಜಾತ್ರೆ ಸಂಪನ್ನಗೊಳ್ಳುತ್ತದೆ. ಈ ಮಧ್ಯೆ ಹಲವಾರು ಸಮಾಜ ಮುಖಿ ಸಾಸ್ಕೃತಿಕ ಕಾರ್ಯಕ್ರಮಗಳು ಭಕ್ತರನ್ನು ಪುಲಕಗೊಳ್ಳುವಂತೆ ಮಾಡುತ್ತದೆ.

 

   

 

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಜಾತ್ರಾ ಸಂಭ್ರಮದಲ್ಲಿ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ದೇವಸ್ಥಾನ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*