ಬಂಟ್ವಾಳ ಪುರಸಭಾ ವ್ಯಾಪ್ತಿಯ ಜನರಿಗೆ ಕುಡಿಯುವ ನೀರು ಪೂರೈಸುವ ಶುದ್ಧೀಕರಣ ಘಟಕದಲ್ಲಿ ಕಸ, ಕೆಸರು ಹಾಗೂ ಪಾಚಿ ತುಂಬಿಕೊಂಡು, ಅಶುದ್ಧ ನೀರು ಸರಬರಾಜಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಸೋಮವಾರ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎರಡು ದಿನಗಳೊಳಗೆ ಇದನ್ನು ಸರಿಪಡಿಸಬೇಕು ಎಂದು ಅಧಿಕಾರಿಗಳಿಗೆ ಈ ಸಂದರ್ಭ ಸೂಚನೆ ನೀಡಿದ್ದಾರೆ.

ಘಟಕದ ಒಳಭಾಗದಲ್ಲಿ ಕಸ, ಕೆಸರು ಹಾಗೂ ಪಾಚಿ ಸಂಗ್ರಹವಾಗಿರುವುದರಿಂದ ನೀರಿನ ಗುಣಮಟ್ಟದ ಬಗ್ಗೆ ಗಂಭೀರ ಆತಂಕ ಉಂಟಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನೀರನ್ನು ಶುದ್ಧೀಕರಿಸಿ ಜನರಿಗೆ ಪೂರೈಸಲಾಗುತ್ತಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ಈ ನೀರನ್ನು ಕುಡಿಯುವ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾದರೆ ಅದಕ್ಕೆ ಯಾರು ಹೊಣೆ? ಜನರಿಗೆ ರೋಗ ಹರಡುವ ಪರಿಸ್ಥಿತಿ ನಿರ್ಮಾಣವಾಗುವ ಮೊದಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಹೇಳಿದರು.

ಈ ಕುರಿತು ಜಿಲ್ಲಾಧಿಕಾರಿಯವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು, ಪುರಸಭಾ ವ್ಯಾಪ್ತಿಯಲ್ಲಿ ಅಶುದ್ಧ ನೀರು ಪೂರೈಕೆಯಾಗುತ್ತಿರುವ ಬಗ್ಗೆ ಗಮನಕ್ಕೆ ತಂದರು. ಶುದ್ಧೀಕರಣ ಘಟಕದ ಸಂಪೂರ್ಣ ಸ್ವಚ್ಛತೆ ಹಾಗೂ ಅಗತ್ಯ ನಿರ್ವಹಣಾ ಕಾರ್ಯವನ್ನು ತಕ್ಷಣ ಕೈಗೊಳ್ಳುವಂತೆ ತಿಳಿಸಿ, ಎರಡು ದಿನಗಳ ಗಡುವು ನೀಡುವಂತೆ ಸೂಚಿಸಿದರು. ಪುರಸಭಾ ಮುಖ್ಯಾಧಿಕಾರಿಯವರಿಗೂ ದೂರವಾಣಿ ಕರೆ ಮಾಡಿ ಮಾತನಾಡಿದ ಶಾಸಕರು, ಎರಡು ದಿನಗಳೊಳಗೆ ಘಟಕವನ್ನು ಸಮರ್ಪಕವಾಗಿ ಸ್ವಚ್ಛಗೊಳಿಸಿ, ಕುಡಿಯುವ ನೀರಿನ ಶುದ್ಧೀಕರಣ ವ್ಯವಸ್ಥೆಯನ್ನು ಸುಸ್ಥಿತಿಗೆ ತರಬೇಕು. ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡಲು ಅವಕಾಶ ನೀಡುವುದಿಲ್ಲ. ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದು ಎಚ್ಚರಿಸಿದರು.

ಪುರಸಭೆಯಲ್ಲಿ ಶುದ್ದೀಕರಣ ಘಟಕ ಶುಚಿಗೊಳಿಸಲು ಹಣದ ಕೊರತೆ ಇದ್ದರೆ ಹೇಳಲಿ, ನಾನೇ ಸಾರ್ವಜನಿಕರೊಂದಿಗೆ ಶುಚಿಗೊಳಿಸುವ ಕಾರ್ಯ ಮಾಡುತ್ತೇನೆ. ಅಧಿಕಾರಿಗಳು ನಿಗದಿತ ಅವಧಿಯೊಳಗೆ ಸ್ವಚ್ಛತಾ ಕಾರ್ಯ ಕೈಗೊಳ್ಳದಿದ್ದಲ್ಲಿ, ಅಧಿಕಾರಿಗಳ ಸಮ್ಮುಖದಲ್ಲೇ ಪುರಸಭಾ ವ್ಯಾಪ್ತಿಯ ಸಾರ್ವಜನಿಕರನ್ನು ಒಗ್ಗೂಡಿಸಿ ನಾನೇ ಖುದ್ದಾಗಿ ಶುದ್ಧೀಕರಣ ಘಟಕದ ಸ್ವಚ್ಛತಾ ಕಾರ್ಯಕ್ಕೆ ಮುಂದಾಗುತ್ತೇನೆ. ಜನರಿಗೆ ಕುಡಿಯಲು ಯೋಗ್ಯವಾದ ನೀರು ಸಿಗಬೇಕು ಎಂಬುದೇ ನನ್ನ ಉದ್ದೇಶ. ಸಾರ್ವಜನಿಕರ ಆರೋಗ್ಯದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಜನರ ತೆರಿಗೆ ಹಣದಿಂದ ನಡೆಯುವ ವ್ಯವಸ್ಥೆಯಲ್ಲಿ ಜನರಿಗೆ ಕನಿಷ್ಠ ಶುದ್ಧ ಕುಡಿಯುವ ನೀರನ್ನಾದರೂ ಒದಗಿಸಲು ಸಾಧ್ಯವಾಗದಿದ್ದರೆ ಅಂತಹ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದರು.

ಪುರಸಭಾ ವ್ಯಾಪ್ತಿಯ ಜನರಿಗೆ ನಿರಂತರವಾಗಿ ಸುರಕ್ಷಿತ ಕುಡಿಯುವ ನೀರು ಪೂರೈಕೆಯಾಗಬೇಕು. ಶುದ್ಧೀಕರಣ ಘಟಕದ ಸ್ವಚ್ಛತೆ ಕೇವಲ ಒಮ್ಮೆ ನಡೆಸುವ ಕಾರ್ಯವಾಗದೆ, ನಿಯಮಿತವಾಗಿ ನಿರ್ವಹಣೆ ಮಾಡುವ ವ್ಯವಸ್ಥೆ ರೂಪಿಸಬೇಕು. ನೀರಿನ ಗುಣಮಟ್ಟವನ್ನು ಕಾಲಕಾಲಕ್ಕೆ ಪರೀಕ್ಷಿಸಿ ಸಾರ್ವಜನಿಕರ ಆರೋಗ್ಯಕ್ಕೆ ಯಾವುದೇ ಅಪಾಯವಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭಾ ಮಾಜಿ ಸದಸ್ಯರಾದ ಎ. ಗೋವಿಂದ ಪ್ರಭು, ಗಂಗಾಧರ ಪೂಜಾರಿ, ವಿದ್ಯಾವತಿ ಪ್ರಮೋದ್, ರೇಖಾ ಪೈ, ಹರಿಪ್ರಸಾದ್, ಪ್ರಮುಖರಾದ ವಿಕಾಸ್ ಪುತ್ತೂರು, ಶಿವಪ್ರಸಾದ್ ಶೆಟ್ಟಿ, ರಾಮ್ದಾಸ್ ಬಂಟ್ವಾಳ, ಸುರೇಶ್ ಕುಲಾಲ್, ಜನಾರ್ದನ ಬೊಂಡಾಲ, ಪುರುಷೋತ್ತಮ ಶೆಟ್ಟಿ ವಾಮದಪದವು, ಗಣೇಶ್ ದಾಸ್, ಪ್ರಣಾಮ್ ಅಜ್ಜಿಬೆಟ್ಟು, ವಸಂತ ಭಂಡಾರಿ ಹಾಗೂ ನಗರ ಮಹಾಶಕ್ತಿ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.



Be the first to comment on "ಶುದ್ಧೀಕರಣ ಘಟಕದಲ್ಲಿ ಕಸ, ಕೆಸರು ಪಾಚಿ: ಶಾಸಕ ರಾಜೇಶ್ ನಾಯ್ಕ್ ಪರಿಶೀಲನೆ. ಎರಡು ದಿನಗಳೊಳಗೆ ಸರಿಪಡಿಸಲು ಅಧಿಕಾರಿಗಳಿಗೆ ಸೂಚನೆ"