ವಿಶೇಷ ವರದಿ: ಹರೀಶ ಮಾಂಬಾಡಿ
ಬಂಟ್ವಾಳ: ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಗೌರಿ-ಗಣೇಶ ಹಬ್ಬಗಳು ಕಳೆದರೂ ಸರ್ಕಾರಿ ಶಾಲೆಗಳ ಪೂರ್ವ ಪ್ರಾಥಮಿಕ ತರಗತಿಗಳ ಅತಿಥಿ ಶಿಕ್ಷಕಿಯರಿಗೆ ನಾಲ್ಕು ತಿಂಗಳಿಂದ ಗೌರವಧನ ಲಭಿಸಿಲ್ಲ. ಅಕ್ಟೋಬರ್ ಮೊದಲ ವಾರದಲ್ಲಾದರೂ ವೇತನ ದೊರಕಬಹುದು ಎಂದು ಅಂದಾಜಿಸಿದ್ದ ಸಿಬ್ಬಂದಿಗೆ ನಿರಾಸೆಯಾಗಿದ್ದು, ಇದೀಗ ವಿಜಯದಶಮಿ ಹಬ್ಬದ ವೇಳೆಯಲ್ಲಾದರೂ ಖಾತೆಗೆ ಹಣ ಜಮೆಯಾಗಬಹುದೇ ಎಂಬ ನಿರೀಕ್ಷೆಯಲ್ಲಿದ್ದಾರೆ.

ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸಮಗ್ರ ಶಿಕ್ಷಣ ಕರ್ನಾಟಕ (ಸರ್ವಶಿಕ್ಷಾ ಅಭಿಯಾನ) ಯೋಜನೆಯಡಿ, ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಬಾಲ್ಯಾವಸ್ಥೆಯ ಆರೈಕೆ ಹಾಗೂ ಶಿಕ್ಷಣ ನೀತಿಯನ್ವಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ವಿಸ್ತರಿಸಿದೆ.
೨೦೨೫-೨೬ನೇ ಸಾಲಿನಲ್ಲಿ ರಾಜ್ಯಾದ್ಯಂತ ೪,೦೫೬ ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ ತರಗತಿಗಳನ್ನು ಪ್ರಾರಂಭಿಸಲು ಅನುಮತಿ ನೀಡಲಾಗಿತ್ತು. ಈ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ 6 ಸಾವಿರಕ್ಕೂ ಅಧಿಕಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು ಆರಂಭಗೊಂಡಿವೆ.

ವೇತನವೆಷ್ಟು?
ಸ್ಥಳೀಯ ಶಾಲಾ ಮೇಲುಸ್ತುವಾರಿ ಮತ್ತು ಅಭಿವೃದ್ಧಿ ಸಮಿತಿ ಮೂಲಕ ತಾತ್ಕಾಲಿಕವಾಗಿ ನೇಮಕಗೊಂಡ ಗೌರವಶಿಕ್ಷಕಿಗೆ 10,000 ರೂ, ಸಹಾಯಕಿ 6,250 ವೇತನ ನೀಡಬೇಕಾಗುತ್ತದೆ. ಮಾಸಿಕ ವೇತನದ ಆಧಾರದ ಮೇಲೆ ಜೂನ್ ತಿಂಗಳಿನಲ್ಲಿ ಇವರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಆದರೆ, ನೇಮಕಗೊಂಡ ದಿನದಿಂದ ಇದುವರೆಗೆ ಶಿಕ್ಷಕರು ಹಾಗೂ ಸಹಾಯಕಿಯರಿಗೆ ವೇತನ ತಲುಪಿಲ್ಲ.
ತಾಂತ್ರಿಕ ಪ್ರಕ್ರಿಯೆ ಕಾರಣ:
ವೇತನ ವಿಳಂಬಕ್ಕೆ ತಾಂತ್ರಿಕ ಪ್ರಕ್ರಿಯೆಗಳು ಹಾಗೂ ಅನುದಾನ ಬಿಡುಗಡೆಯ ಪ್ರಕ್ರಿಯೆಗಳೇ ಮುಖ್ಯ ಕಾರಣ ಎನ್ನಲಾಗಿದೆ. ಈ ಹಿಂದೆ ಚಾಲ್ತಿಯಲ್ಲಿದ್ದ ಕೇಂದ್ರ ಸರ್ಕಾರದ ಪಿಎಫ್ಎಂಎಸ್ ಮಾಡ್ಯೂಲ್ ಬದಲಿಗೆ ಎಸ್.ಎನ್.ಎ ಸ್ಪರ್ಶ್ ವ್ಯವಸ್ಥೆಗೆ ಮೇಲ್ದರ್ಜೆಗೇರಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳಾದ ಮ್ಯಾಪ್ ಮಾಡುವುದು ಸಂಕೀರ್ಣ ಮತ್ತು ತಾಂತ್ರಿಕ ಸವಾಲಿನ ಕೆಲಸವಾಗಿದೆ. ಶಿಕ್ಷಕರ ವೇತನದಲ್ಲಿ ಕೇಂದ್ರ ಸರ್ಕಾರದ ಪಾಲು ಶೇಕಡಾ 60 ಹಾಗೂ ರಾಜ್ಯ ಸರ್ಕಾರದ ಪಾಲು ಶೇಕಡಾ 40 ಇರುತ್ತದೆ. ಕೇಂದ್ರ ಸರ್ಕಾರದಿಂದ ಅನುದಾನ ಬಂದ ತಕ್ಷಣ, ಶಿಕ್ಷಣ ಇಲಾಖೆಯ ಮೂಲಕ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ರಾಜ್ಯದ ಪಾಲನ್ನು ಸೇರಿಸಲು ಆದೇಶ ಪಡೆಯಬೇಕಾಗುತ್ತದೆ. ಈ ಎಲ್ಲ ಪ್ರಕ್ರಿಯೆಗಳು ಮುಗಿದ ಬಳಿಕವಷ್ಟೇ ಪಾವತಿ ಮಾಡಬೇಕಾಗುತ್ತದೆ. ಪ್ರಸ್ತುತ ಪ್ರಕ್ರಿಯೆ ಪೂರ್ಣಗೊಂಡಿದ್ದು, ಎರಡರಿಂದ ಮೂರು ದಿನಗಳೊಳಗೆ ವೇತನ ಪಾವತಿಯಾಗುವ ಸಾಧ್ಯತೆ ಇದೆ.
ಶಿಕ್ಷಕರ ಬೇಡಿಕೆ ಏನು?
ನಾಲ್ಕು ತಿಂಗಳಿಂದ ಬಾಕಿ ಉಳಿದಿರುವ ಗೌರವಧನವನ್ನು ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಬೇಕು. ಮುಂದಿನ ದಿನಗಳಲ್ಲಿ ಪ್ರತಿ ತಿಂಗಳು ನಿರ್ದಿಷ್ಟ ದಿನಾಂಕದೊಳಗೆ ವೇತನ ಸಿಗುವಂತೆ ಶಾಶ್ವತ ಮತ್ತು ಸರಳವಾದ ಅನುದಾನ ಬಿಡುಗಡೆ ವ್ಯವಸ್ಥೆಯನ್ನು ರೂಪಿಸಬೇಕು.
ಅಧಿಕಾರಿಗಳು ಏನಂತಾರೆ?
ಕೇಂದ್ರ ಸರ್ಕಾರವು ಹಿಂದಿನ ‘ಪಿಎಫ್ಎಂಎಸ್’ ಬದಲಿಗೆ ಜಾರಿಗೆ ತಂದಿರುವ ‘ಎಸ್ಎನ್ಎ ಸ್ಪರ್ಶ್’ ತಂತ್ರಾಂಶಕ್ಕೆ ರಾಜ್ಯದ ಎಲ್ಲಾ ಬಿಇಒ, ಡಿಡಿಒ ಹಾಗೂ ಮುಖ್ಯಶಿಕ್ಷಕರ ಕೋಡ್ಗಳನ್ನು ಮರು ಮ್ಯಾಪಿಂಗ್ ಮಾಡುವ ಪ್ರಕ್ರಿಯೆ ನಡೆದ ಹಿನ್ನೆಲೆ ಖಜಾನೆ ಹಂತದಲ್ಲಿ ಮ್ಯಾಪಿಂಗ್ ಪ್ರಕ್ರಿಯೆ ಅಂತಿಮ ಹಂತ ತಲುಪಿದೆ. ಇನ್ನೆರಡು-ಮೂರು ದಿನಗಳಲ್ಲಿ ವೇತನ ಅವರ ಖಾತೆಗಳಿಗೆ ನೇರವಾಗಿ ಜಮೆಯಾಗಲಿದೆ.’’ ಎಂದು ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕಿ ಡಾ. ಕೆ.ವಿದ್ಯಾಕುಮಾರಿ ಪ್ರತಿಕ್ರಿಯಿಸಿದ್ದಾರೆ.


Be the first to comment on "ಹಬ್ಬ ಬಂದರೂ ಗೌರವಧನ ಬಂದಿಲ್ಲ: ಸರ್ಕಾರಿ ಎಲ್.ಕೆ.ಜಿ, ಯು.ಕೆ.ಜಿ. ಅತಿಥಿ ಶಿಕ್ಷಕರಿಗೆ ನಾಲ್ಕು ತಿಂಗಳಿಂದ ವೇತನ ದೊರಕಿಲ್ಲ"