ಬಂಟ್ವಾಳ: ಇಲ್ಲಿನ ಬಿ.ಸಿ.ರೋಡಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಸವಿತಾ ಸೌಹಾರ್ದ ಸಹಕಾರಿಯ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಬಿ.ಸಿ.ರೋಡಿನ ಕನ್ನಡ ಭವನದಲ್ಲಿ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ್ ಸಾಲ್ಯಾನ್ ಬಂಟ್ವಾಳ ಅಧ್ಯಕ್ಷತೆಯಲ್ಲಿ ಜರುಗಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷ ವಿಶ್ವನಾಥ್ ಸಾಲ್ಯಾನ್, “ವರದಿ ಸಾಲಿನಲ್ಲಿ ಸಹಕಾರಿಯು 73.32 ಕೋಟಿ ರೂ ನಿವ್ವಳ ವ್ಯವಹಾರ ನಡೆಸಿದ್ದು, 11.86 ಲಕ್ಷ ರೂ ಲಾಭಗಳಿಸಿದೆ. ಈ ಹಿನ್ನೆಲೆಯಲ್ಲಿ ಸದಸ್ಯರಿಗೆ ಶೇ. 13ರಷ್ಟು ಡಿವಿಡೆಂಡ್ ಘೋಷಿಸಲಾಗಿದೆ” ಎಂದು ತಿಳಿಸಿದರು.

ಸಂಸ್ಥೆಯ ಆರ್ಥಿಕ ಸ್ಥಿತಿಗತಿಯ ಬಗ್ಗೆ ಮಾಹಿತಿ ನೀಡಿದ ಅವರು, “ಸಂಘದಲ್ಲಿ 30.15 ಲಕ್ಷ ರೂ ಪಾಲು ಬಂಡವಾಳ ಹಾಗೂ 15.58 ಕೋಟಿ ರೂ ಠೇವಣಿ ಸಂಗ್ರಹವಾಗಿದೆ. ವರ್ಷಾಂತ್ಯಕ್ಕೆ 12.91 ಕೋಟಿ ರೂ ಸಾಲ ಹೊರಬಾಕಿ ಇರುತ್ತದೆ. ಸಂಘದಲ್ಲಿ ಲಭ್ಯವಿರುವ ಸೆಲೂನ್ ಸಾಮಗ್ರಿಗಳ ಮಾರಾಟ ವ್ಯವಸ್ಥೆಗೆ ಸದಸ್ಯರೆಲ್ಲರೂ ಬೆಂಬಲ ನೀಡಬೇಕು. ಸದಸ್ಯರ ನಿರಂತರ ಸಹಕಾರದಿಂದಲೇ ಸಂಸ್ಥೆ ಪ್ರಗತಿ ಪಥದಲ್ಲಿದ್ದು, ಮುಂದೆಯೂ ಇದೇ ರೀತಿಯ ಸಹಕಾರ ಅಗತ್ಯ” ಎಂದು ಮನವಿ ಮಾಡಿದರು.
ದಕ್ಷಿಣ ಕನ್ನಡ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಹಾಗೂ ಸಹಕಾರಿಯ ನಿರ್ದೇಶಕ ಆನಂದ ಭಂಡಾರಿ ಗುಂಡದಡೆ ಮಾತನಾಡಿ, “ಸಮಾಜದ ಅಭಿವೃದ್ಧಿಯ ಧೈಯೋದ್ದೇಶದೊಂದಿಗೆ ಆರಂಭಗೊಂಡ ಸವಿತಾ ಸಮಾಜ ಸಂಘಟನೆಯು ಹಲವರ ಶ್ರಮದಿಂದ ಬೆಳೆದಿದೆ. ತದನಂತರ ಸ್ಥಾಪನೆಯಾದ ಸವಿತಾ ಸೌಹಾರ್ದ ಸಹಕಾರಿಯು ಸರ್ವ ಸಮಾಜದವರ ಸಹಕಾರದಿಂದ ಪ್ರತಿಯೊಬ್ಬರಿಗೂ ಆರ್ಥಿಕ ಶಕ್ತಿ ತುಂಬುತ್ತಾ, ನಿರಂತರವಾಗಿ ಲಾಭದಾಯಕವಾಗಿ ಬೆಳೆಯುತ್ತಿದೆ” ಎಂದರು.
ಸಹಕಾರಿಯ ನಿರ್ದೇಶಕರಾದ ಮೋಹನ್ ಭಂಡಾರಿ ಪೊಯಿತಾಜೆ, ಪದ್ಮನಾಭ ಭಂಡಾರಿ ಸುಳ್ಯ, ರವಿ ಎಸ್. ಮಡಂತ್ಯಾರು, ಭುಜಂಗ ಸಾಲ್ಯಾನ್, ಆಶಾ ಕಂದಾವರ ಹಾಗೂ ಸುಮಾಲತಾ ಪುತ್ತೂರು ಉಪಸ್ಥಿತರಿದ್ದರು.
ಉಪಾಧ್ಯಕ್ಷ ಸುರೇಶ್ ನಂದೊಟ್ಟು ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಿಶನ್ ಎಸ್. ವಾರ್ಷಿಕ ವರದಿ ಮಂಡಿಸಿದರು. ನಿರ್ದೇಶಕ ವಸಂತ ಬೆಳ್ಳೂರು ಧನ್ಯವಾದ ಸಮರ್ಪಿಸಿದರು.


Be the first to comment on "ಸವಿತಾ ಸೌಹಾರ್ದ ಸಹಕಾರಿ ಮಹಾಸಭೆ: 13 ಶೇ. ಡಿವಿಡೆಂಡ್ ಘೋಷಣೆ"