ಸಾಮರಸ್ಯದ ಬಂಟ್ವಾಳ : ಜಕ್ರಿಬೆಟ್ಟು ಗಣೇಶೋತ್ಸವದ ಆಶಯ – ಬಿ.ರಮಾನಾಥ ರೈ

| ಸೆ.14ರಿಂದ 18ರವರೆಗೆ 23ನೇ ವರ್ಷದ ಅದ್ದೂರಿ ಕಾರ್ಯಕ್ರಮಗಳು

ಬಂಟ್ವಾಳ: ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ಜಕ್ರಿಬೆಟ್ಟು, ಬಂಟ್ವಾಳ ಇದರ ನೇತೃತ್ವದಲ್ಲಿ 23ನೇ ವರ್ಷದ ಶ್ರೀ ಗಣೇಶೋತ್ಸವ ಸಾಮರಸ್ಯದ ಬಂಟ್ವಾಳಕ್ಕೆ ಸಾಕ್ಷಿಯಾಗಲಿದೆ.  ಸೆ.14ರಿಂದ 18ರವರೆಗೆ ಜಕ್ರಿಬೆಟ್ಟು ಬೈಪಾಸ್‌ನಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಲಿದೆ ಎಂದು ಮಾಜಿ ಸಚಿವ ಹಾಗೂ ಸಮಿತಿಯ ಗೌರವಾಧ್ಯಕ್ಷ ಬಿ.ರಮಾನಾಥ ರೈ ಹೇಳಿದರು.

VNR GOLD

ಶುಕ್ರವಾರ ಬಂಟ್ವಾಳದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲಾಡಳಿತದ ಸುತ್ತೋಲೆ ಹಾಗೂ ಕಾನೂನು ಸುವ್ಯವಸ್ಥೆಯ ನಿಯಮಗಳನ್ನು ಪಾಲಿಸಿಕೊಂಡು ಶಿಸ್ತಿನ ವ್ಯಾಪ್ತಿಯಲ್ಲಿ ಗಣೇಶೋತ್ಸವವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗುವುದು ಎಂದರು.

ಜಾಹೀರಾತು

ಬಂಟ್ವಾಳದ ಗಣೇಶೋತ್ಸವವು ಯಾವುದೇ ಜಾತಿ, ಮತ ಅಥವಾ ಧರ್ಮಕ್ಕೆ ಸೀಮಿತವಾಗದೆ ಸರ್ವಧರ್ಮೀಯರನ್ನು ಒಗ್ಗೂಡಿಸುವ ವಿಶಿಷ್ಟ ಉತ್ಸವವಾಗಿ ಬೆಳೆದಿದೆ. ಎಲ್ಲರೂ ಒಂದಾಗಿ ಬೆಸೆಯುವ ಸೌಹಾರ್ದತೆಯ ಸಮ್ಮೇಳನವಾಗಿ ಇದು ‘ಬಂಟ್ವಾಳದ ಹಬ್ಬ’ವಾಗಿ ರೂಪುಗೊಂಡಿರುವುದು ವಿಶೇಷ ಎಂದು ಅವರು ಹೇಳಿದರು.

ಸಾಮಾಜಿಕ ಸಾಮರಸ್ಯ ಹಾಗೂ ಸಹಬಾಳ್ವೆಗೆ ಧಕ್ಕೆ ತರುವ ಪ್ರಯತ್ನಗಳು ನಡೆಯುತ್ತಿರುವ ಸಂದರ್ಭದಲ್ಲಿ ಮನುಷ್ಯ-ಮನುಷ್ಯರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಅಗತ್ಯವಿದೆ. ಈ ಉದ್ದೇಶದಿಂದ ಆರಂಭಗೊಂಡ ಬಂಟ್ವಾಳದ ಗಣೇಶೋತ್ಸವ ಇಂದು ಜನಾಕರ್ಷಣೆಯ ಉತ್ಸವವಾಗಿ ಬೆಳೆದಿದ್ದು, ಮುಂದೆಯೂ ‘ಸಾಮರಸ್ಯದ ಬಂಟ್ವಾಳ’ ನಿರ್ಮಾಣಕ್ಕೆ ಪೂರಕವಾದ ನಾಡಹಬ್ಬವಾಗಿ ರೂಪುಗೊಳ್ಳಬೇಕು ಎಂಬುದು ನಮ್ಮ ಆಶಯ ಎಂದು ರಮಾನಾಥ ರೈ ಹೇಳಿದರು.

ಗಣೇಶೋತ್ಸವವು ಬಂಟ್ವಾಳದ ಸಮಸ್ತ ಜನತೆಯ ಉತ್ಸಾಹ-ಉಲ್ಲಾಸದ ಮಹೋತ್ಸವವಾಗಿದ್ದು, ಇದುವರೆಗೆ ನಡೆದ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳೊಂದಿಗೆ ವೈಭವದ ಶೋಭಾಯಾತ್ರೆ ಜನಮಾನಸದಲ್ಲಿ ಹಚ್ಚಹಸಿರಾಗಿದೆ ಎಂದು ಅವರು ತಿಳಿಸಿದರು.

ಸೆ.14ರಂದು ಗಣೇಶ ವಿಗ್ರಹ ಪ್ರತಿಷ್ಠೆ

ಸೆ.14ರಂದು ಬೆಳಗ್ಗೆ 10ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಗಣೇಶ ವಿಗ್ರಹ ಪ್ರತಿಷ್ಠೆ ನಡೆಯಲಿದೆ. ಬಳಿಕ ವೈದ್ಯ ಡಾ. ಶಿವಪ್ರಸಾದ್ ರೈ, ಮಂಗಳೂರು ಅವರು ಗಣೇಶೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಸೊಲೂರು ಮಠದ ಶ್ರೀ ವಿಖ್ಯಾತನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.

ಮಧ್ಯಾಹ್ನ 12.05ಕ್ಕೆ ಮಹಾಪೂಜೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ವಿವಿಧ ಭಜನಾ ತಂಡಗಳಿಂದ ಭಜನೆ ನಡೆಯಲಿದ್ದು, ರಾತ್ರಿ 7ಕ್ಕೆ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ಬಳಿಕ ‘ನೃತ್ಯ ಸಿಂಚನ’ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಸೆ.15ರಂದು ಯು.ಟಿ.ಖಾದರ್ ಅಧ್ಯಕ್ಷತೆ

ಸೆ.15ರಂದು ಬೆಳಗ್ಗೆ 9ರಿಂದ ವೈದಿಕ ಕಾರ್ಯಕ್ರಮಗಳು ನಡೆಯಲಿವೆ. ಮಹಾಪೂಜೆ ಹಾಗೂ ಅನ್ನಸಂತರ್ಪಣೆ ಬಳಿಕ ಮಧ್ಯಾಹ್ನ 1ಕ್ಕೆ ನಡೆಯುವ ಸಭಾ ಕಾರ್ಯಕ್ರಮಕ್ಕೆ ಸಚಿವ ಯು.ಟಿ.ಖಾದರ್ ಅಧ್ಯಕ್ಷತೆ ವಹಿಸಲಿದ್ದು, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಬಳಿಕ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಹಾಗೂ ರಾತ್ರಿ 7ಕ್ಕೆ ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ.

ಸೆ.16ರಂದು ಮೋಹನದಾಸ ಸ್ವಾಮೀಜಿ ಆಶೀರ್ವಚನ

ಸೆ.16ರಂದು ಬೆಳಗ್ಗೆ 9.30ರಿಂದ ವೈದಿಕ ಕಾರ್ಯಕ್ರಮಗಳು ಹಾಗೂ ಭಜನೆ ನಡೆಯಲಿವೆ. ಮಧ್ಯಾಹ್ನ 12.05ಕ್ಕೆ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 1ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮಾಣಿಲ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಮಾಜಿ ಸಚಿವ ವಿಜಯಕುಮಾರ್ ಸೊರಕೆ ಅಧ್ಯಕ್ಷತೆ ವಹಿಸಲಿದ್ದಾರೆ.

ಬಳಿಕ ಭಜನಾ ಕಾರ್ಯಕ್ರಮ, ರಾತ್ರಿ 7ಕ್ಕೆ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ನಂತರ ಅಮ್ಮ ಕಲಾವಿದರು ಕುಡ್ಲ ತಂಡದಿಂದ ‘ಚಿ.ಸೌ. ಸುಮಂಗಲಾ’ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.

ಸೆ.17ರಂದು ಯಕ್ಷಗಾನ ತಾಳಮದ್ದಳೆ, ತುಳು ನಾಟಕ

ಸೆ.17ರಂದು ಬೆಳಗ್ಗೆ 9.30ರಿಂದ ವೈದಿಕ ಕಾರ್ಯಕ್ರಮ ಹಾಗೂ ಭಜನೆ, ಮಧ್ಯಾಹ್ನ 12.05ಕ್ಕೆ ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 1ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕಾವೂರು ಆದಿಚುಂಚನಗಿರಿ ಮಠದ ಶ್ರೀ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.

ಲೊರೆಟ್ಟೊ ಚರ್ಚ್ ಧರ್ಮಗುರು ವಂ. ಜೇಮ್ಸ್ ಡಿಸೋಜ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ. ಮಧ್ಯಾಹ್ನ 2ಕ್ಕೆ ‘ಜಾಂವತೀ ಕಲ್ಯಾಣ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ರಾತ್ರಿ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ಬಳಿಕ ಲಕುಮಿ ತಂಡದಿಂದ ‘ಚಂದ್ರಾವತಿ’ ತುಳು ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ.

ಸೆ.18ರಂದು ವೈಭವದ ಶೋಭಾಯಾತ್ರೆ

ಸೆ.18ರಂದು ಬೆಳಗ್ಗೆ 9.30ರಿಂದ ವೈದಿಕ ಕಾರ್ಯಕ್ರಮ, 10.30ರಿಂದ ಗಣಹೋಮ ನಡೆಯಲಿದೆ. ಬಳಿಕ ಭಜನೆ, ಮಧ್ಯಾಹ್ನ 12.30ಕ್ಕೆ ಪೂರ್ಣಾಹುತಿ ಹಾಗೂ 1ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.

ಮಧ್ಯಾಹ್ನ 2ರಿಂದ ನಾಡಿನ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಇಂದ್ರಜಿತು ಕಾಳಗ–ಕುಶಲವ’ ಯಕ್ಷಗಾನ ಬಯಲಾಟ ನಡೆಯಲಿದೆ. ಸಂಜೆ 5ರಿಂದ ಸಂಧ್ಯಾಪೂಜೆ, ವಿಸರ್ಜನಾ ಪೂಜೆ ಹಾಗೂ ಪ್ರಾರ್ಥನೆ ನೆರವೇರಿದ ಬಳಿಕ ಗಣೇಶ ವಿಗ್ರಹದ ವೈಭವದ ಶೋಭಾಯಾತ್ರೆ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಬಿ.ಪದ್ಮಶೇಖರ್ ಜೈನ್, ಉಪಾಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಸಂಪತ್ ಕುಮಾರ್ ಶೆಟ್ಟಿ, ಮೋಹನ್ ಚೆಂಡ್ತಿಮಾರ್, ಕಾರ್ಯದರ್ಶಿಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಬಾಲಕೃಷ್ಣ ಆರ್.ಅಂಚನ್, ಪಿಯೂಸ್ ಎಲ್.ರೊಡ್ರಿಗಸ್,  ಚಂದ್ರಶೇಖರ ಭಂಡಾರಿ, ಸುರೇಶ್ ಪೂಜಾರಿ ಜಕ್ರಿಬೆಟ್ಟು,  ಪದ್ಮನಾಭ ರೈ, ಪ್ರವೀಣ್ ಜಕ್ರಿಬೆಟ್ಟು, ದೇವಪ್ಪ ಕುಲಾಲ್ ಪಂಜಿಕಲ್ಲು, ಸದಾಶಿವ ಬಂಗೇರ, ಸುಧಾಕರ ಶೆಣೈ ಖಂಡಿಗ, ಮನೋಹರ ನೇರಂಬೊಳು, ಸುವರ್ಣ ಜೈನ್,  ಮಾಣಿಕ್ಯ ರಾಜ್ ಜೈನ್,  ಅಶೋಕ್ ಭಂಡಾರಿ, ಸಂತೋಷ್ ಪೂಜಾರಿ, ಆದೇಶ್ ಕುಮಾರ್ ಜೈನ್, ಜಿ.ಎ.ಇಕ್ಬಾಲ್ ಮತ್ತಿತರರು ಉಪಸ್ಥಿತರಿದ್ದರು.

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಸಾಮರಸ್ಯದ ಬಂಟ್ವಾಳ : ಜಕ್ರಿಬೆಟ್ಟು ಗಣೇಶೋತ್ಸವದ ಆಶಯ – ಬಿ.ರಮಾನಾಥ ರೈ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*