
ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ಬಿ.ಸಿ ರೋಡ್ ಬಸ್ ನಿಲ್ದಾಣದ ಸಮೀಪದಲ್ಲಿರುವ ಅಜ್ಜಿಬೆಟ್ಟು, ಮಠ ಹಾಗೂ ಸುತ್ತಮುತ್ತಲಿನ ಭಾಗದಿಂದ ಸನಿಹದಲ್ಲೇ ಇರುವ ದೈಪಲ, ಕಾಮಾಜೆ, ಮೈರನ್ ಪಾದೆ ಭಾಗಕ್ಕೆ ವಾಹನದಲ್ಲಿ ಹೋಗಬೇಕಾದರೆ ಮಧ್ಯೆ ಇರುವ ಮಂಗಳೂರು-ಬೆಂಗಳೂರು ರೈಲು ಹಳಿಯ ನಿರ್ಬಂಧವಿದೆ.
ಅಪಾಯಕಾರಿಯಾಗಿ ರೈಲು ಹಳಿ ದಾಟಿಕೊಂಡು ಅತ್ತಿಂದಿತ್ತ ಕಾಲ್ನಡಿಗೆಯಲ್ಲಿ ತೆರಳಬೇಕೇ ವಿನಃ ವಾಹನದಲ್ಲಿ ಅತ್ತಿಂದಿತ್ತ ಹೋಗಲು ರಸ್ತೆಯೇ ಇಲ್ಲ.

ರೈಲ್ವೇ ಹಳಿಯ ಮತ್ತೊಂದು ಭಾಗದ ಕಾಮಾಜೆಯಲ್ಲಿ ಸರಕಾರಿ ಪದವಿ ಕಾಲೇಜಿದೆ. ಈ ಕಾಲೇಜಿಗೆ ಬಿ.ಸಿ ರೋಡ್ ಭಾಗದಿಂದ ಕಾಲುದಾರಿಯಲ್ಲಿ ಹೋಗಲು ಇರುವುದು 2/3 ಕಿ.ಮೀ.; ಆದರೆ, ರಸ್ತೆ ಹಾದಿಯಲ್ಲಿ ಇದೇ ಮಕ್ಕಳು ಬಿ.ಸಿ ರೋಡ್ ನಿಂದ ಹೋಗಬೇಕಾದರೆ ಬರೋಬ್ಬರಿ 8 ಕಿ.ಮೀ ದೂರದಿಂದಾಗಿ ಹೋಗಬೇಕು!
ಬಿ.ಸಿ ರೋಡ್ ಬೈಪಾಸ್ ನಿಂದ ಪೊಳಲಿ ರಸ್ತೆವರೆಗಿನ ಜಾಗದವರೆಗೆ ಸಾಗಿರುವ ರೈಲ್ವೇ ಹಳಿ ಇರುವ ಸರಿಸುಮಾರು 4/5 ಕಿ.ಮೀ ಉದ್ದದಲ್ಲಿ ರೈಲು ಹಳಿಯ ಇಕ್ಕೆಲವನ್ನು ಸುಲಭವಾಗಿ ದಾಟಲು ಅಂಡರ್ ಪಾಸ್ ಅಥವಾ ರೈಲ್ವೇ ಬ್ರಿಡ್ಜ್ ನಿರ್ಮಾಣಕ್ಕೆ ಆಗ್ರಹಕ್ಕೆ ದಶಕಗಳ ಇತಿಹಾಸವಿದೆ.!!!
ಬಂಟ್ವಾಳ ಪುರಸಭೆಯ ಬಿ.ಮೂಡ ಗ್ರಾಮದಲ್ಲಿ ಮಂಗಳೂರು-ಬೆಂಗಳೂರು ರೈಲು ದಾರಿ ಹೋಗುವುದರಿಂದ ಬಿ.ಮೂಡ ಗ್ರಾಮವು ಎರಡು ಭಾಗಗಳಾಗಿ ಮಾರ್ಪಾಡಾಗಿದೆ. ರೈಲು ದಾರಿಯ ಬಿ.ಮೂಡದ ಅರ್ಧ ಭಾಗದಲ್ಲಿರುವ ಅಜ್ಜಿಬೆಟ್ಟು, ಸಂಚಯಗಿರಿ, ಕೈಕುಂಜೆ, ಕೊಡಂಗೆ ಪ್ರದೇಶಗಳು ಅಭಿವೃದ್ದಿ ಕಂಡಿದೆ. ಆದರೆ ರೈಲು ಹಳಿಯ ಮತ್ತೊಂದು ಭಾಗದಲ್ಲಿರುವ ದೈಪಲ, ಕಾಮಾಜೆ, ಮೈರಾನ್ ಪಾದೆ ಸಹಿತ ಕೆಲವು ಪ್ರದೇಶಗಳು ಅಭಿವೃದ್ದಿಯಿಂದ ಕೊಂಚ ದೂರ ಉಳಿದಿದೆ. ಈ ಭಾಗಕ್ಕೆ ಬಿ.ಸಿ ರೋಡ್ ನಿಂದ ನೇರ ಸಂಪರ್ಕ ರಸ್ತೆ ಇಲ್ಲದ ಕಾರಣದಿಂದ ಅಭಿವೃದ್ದಿ ಕೊಂಚ ದೂರವಾಗಿದೆ. ಸರಿಸುಮಾರು 500ಕ್ಕೂ ಅಧಿಕ ಮನೆಗಳು ಈ ಭಾಗದಲ್ಲಿದ್ದು ನೇರ ರಸ್ತೆ ವ್ಯವಸ್ಥೆ ಇಲ್ಲದೆ ಕಾಲ್ನಡಿಗೆಯಲ್ಲಿಯೇ ಹೋಗಬೇಕಾದ ಅನಿವಾರ್ಯತೆ ಇದೆ.
ಕೇಂದ್ರ ರೈಲ್ವೇ ಸಚಿವರಿಗೆ ಮನವಿ ಸಲ್ಲಿಕೆ
ಬಂಟ್ವಾಳ ತಾಲೂಕು ಬಿ.ಮೂಡ ಗ್ರಾಮದ ಅಜ್ಜಿಬೆಟ್ಟು ಶಾಲಾ ಬಳಿಯಿಂದ ದೈಪಲ ಸಂಪರ್ಕ ರಸ್ತೆಗೆ ರೈಲ್ವೇ ಬ್ರಿಡ್ಜ್ ನಿರ್ಮಾಣ ಹಾಗೂ ಇದೇ ಗ್ರಾಮದ ಕುಂಭೋದರಿ ಮಠ ದೇವಸ್ಥಾನದಿಂದ ಕುಲಾಲ ಭವನದ ಸಂಪರ್ಕ ರಸ್ತೆಗೆ ಕುಂಭೋಧರಿ ದೇವಸ್ಥಾನದ ಬಳಿಯಲ್ಲಿ ಅಂಡರ್ ಪಾಸ್ ರಚನೆ ಮಾಡುವ ಒತ್ತಾಯ ಸ್ಥಳೀಯರಿಂದ ರೈಲ್ವೇ ಇಲಾಖೆಗೆ ಸಲ್ಲಿಕೆಯಾಗಿದೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಇತ್ತೀಚೆಗೆ ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಈ ಕುರಿತಂತೆ ಮನವಿಯನ್ನೂ ಸಲ್ಲಿಸಿದ್ದು, ಎರಡು ಬೇಡಿಕೆಯನ್ನು ರೈಲ್ವೇ ಇಲಾಖೆಯ ಪರಿಗಣಿಸುವಂತೆ ಕೋರಿದ್ದಾರೆ.
ಶ್ರೀ ಕುಂಭೋಧರಿ ದೇವಸ್ಥಾನ, ದೈವಸ್ಥಾನ ಹಾಗೂ ಕುಟುಂಬಸ್ಥರ ಮನೆಗಳ ಮುಂಭಾಗದಲ್ಲಿಯೇ ರೈಲು ಮಾರ್ಗ ಹಾದುಹೋಗುತ್ತಿದೆ. ರೈಲು ಹಳಿಯ ಇನ್ನೊಂದು ಬದಿಯಲ್ಲಿ ಪುರಾತನ ನಾಗಬನವಿದೆ. ಅಲ್ಲದೆ, ಕೆಲವು ಕುಟುಂಬಗಳ ಮನೆಗಳು, ಕೃಷಿ ಜಮೀನು ಹಾಗೂ ತೋಟಗಳೂ ರೈಲು ಹಳಿಯ ಇನ್ನೊಂದು ಬದಿಯಲ್ಲಿವೆ. ಇದರಿಂದ ದೇವಸ್ಥಾನಕ್ಕೆ ಬರುವ ಭಕ್ತರು ಹಾಗೂ ಸ್ಥಳೀಯ ನಿವಾಸಿಗಳು ರೈಲು ಹಳಿ ದಾಟಿ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ರೈಲು ಸಂಚಾರ ಹೆಚ್ಚಿರುವ ಹಿನ್ನೆಲೆಯಲ್ಲಿ ಹಳಿಯನ್ನು ದಾಟುವುದು ಅಪಾಯಕಾರಿಯಾಗಿದ್ದು, ಸುರಕ್ಷಿತ ಸಂಚಾರಕ್ಕಾಗಿ ಈ ಪ್ರದೇಶದಲ್ಲಿ ಅಂಡರ್‌ಪಾಸ್ ನಿರ್ಮಿಸುವುದು ಸದ್ಯದ ಜರೂರತ್ತು


Be the first to comment on "ಬಿ.ಮೂಡ ಗ್ರಾಮದ ಸಮಸ್ಯೆ ಇದು…ಸುರಕ್ಷಿತ ಸಂಚಾರಕ್ಕೆ ಬೇಕು ಅಂಡರ್ ಪಾಸ್"