
ಕುಕ್ಕೆ ಸುಬ್ರಹ್ಮಣ್ಯದಿಂದ ಹಾಸನ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಎರ್ಮಾಯಿಲ್ ಬಳಿ ಆಕಸ್ಮಿಕವಾಗಿ ಬೆಂಕಿಗಾಹುತಿಯಾಗಿ ಸಂಪೂರ್ಣ ಸುಟ್ಟುಹೋಗಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಬಸ್‌ನಲ್ಲಿದ್ದ 37 ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಸುಬ್ರಹ್ಮಣ್ಯ–ಗುಂಡ್ಯ ರಾಜ್ಯ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ಈ ಘಟನೆ ಸಂಭವಿಸಿದೆ. ಕುಕ್ಕೆ ಸುಬ್ರಹ್ಮಣ್ಯದಿಂದ ಪ್ರಯಾಣಿಕರನ್ನು ಕರೆದೊಯ್ದಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಸನ ಮೂಲಕ ಬೆಂಗಳೂರಿನತ್ತ ತೆರಳುತ್ತಿತ್ತು. ಬಿ.ಸಿ.ರೋಡ್ ಡಿಪೋಗೆ ಸೇರಿದ ಸರಕಾರಿ ಬಸ್ ಎರ್ಮಾಯಿಲ್ ಸಮೀಪ ಸಂಚರಿಸುತ್ತಿದ್ದ ವೇಳೆ ಬಸ್‌ನಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡಿತ್ತು.


ಬಸ್‌ನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಚಾಲಕ ಕೂಡಲೇ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಎಚ್ಚರಿಸಿದ್ದಾರೆ. ಯಾವುದೇ ಆತಂಕಕ್ಕೆ ಒಳಗಾಗದೆ ಪ್ರಯಾಣಿಕರನ್ನು ತಕ್ಷಣವೇ ಬಸ್‌ನಿಂದ ಕೆಳಗಿಳಿಸುವಲ್ಲಿ ಚಾಲಕ ಯಶಸ್ವಿಯಾಗಿದ್ದಾರೆ. ಪ್ರಯಾಣಿಕರೆಲ್ಲರೂ ಬಸ್‌ನಿಂದ ಸುರಕ್ಷಿತವಾಗಿ ಹೊರಬಂದ ಕೆಲವೇ ಕ್ಷಣಗಳಲ್ಲಿ ಬೆಂಕಿ ತೀವ್ರವಾಗಿ ವ್ಯಾಪಿಸಿದ್ದು, ನೋಡನೋಡುತ್ತಿದ್ದಂತೆ ಬಸ್ ಸಂಪೂರ್ಣವಾಗಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದೆ.
ಬೆಂಕಿಯ ತೀವ್ರತೆ ಹೆಚ್ಚಾಗುತ್ತಿದ್ದಂತೆ ಬಸ್‌ನ ಬಹುತೇಕ ಭಾಗ ಸುಟ್ಟು ಕರಕಲಾಗಿದೆ. ಘಟನೆಯಿಂದಾಗಿ ಸುಬ್ರಹ್ಮಣ್ಯ–ಗುಂಡ್ಯ ರಾಜ್ಯ ಹೆದ್ದಾರಿಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.


Be the first to comment on "ಹೊತ್ತಿ ಉರಿದ KSRTC ಬಸ್, ಚಾಲಕ ಸಮಯ ಪ್ರಜ್ಞೆಯಿಂದ 37 ಪ್ರಯಾಣಿಕರು ಪಾರು – Details"