
ರಾಷ್ಟ್ರೀಯ ಹೆದ್ದಾರಿಯ ಬಿಸಿರೋಡು–ಅಡ್ಡಹೊಳೆ ಮಾರ್ಗದಲ್ಲಿ ಕಲ್ಲಡ್ಕ, ಮೆಲ್ಕಾರ್, ಕುದ್ರೆಬೆಟ್ಟು ಸಹಿತ ಹಲವೆಡೆ ಮಳೆ ಸುರಿದಾಗ ರಸ್ತೆ ಮೇಲೆ ಅಲ್ಲಲ್ಲಿ ನೀರು ಶೇಖರಣೆಯಾಗುತ್ತಿರುವುದು ವಾಹನ ಸವಾರರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ. ರಸ್ತೆ ಕೆರೆಯಂತಾಗುತ್ತಿದ್ದು, ಅಪಘಾತದ ಭೀತಿ ಎದುರಾಗಿದೆ.

ಭಾರೀ ಮಳೆಯ ಸಂದರ್ಭ ರಸ್ತೆ ಮೇಲೆ ನೀರು ನಿಂತಿರುವ ಕಾರಣ ವೇಗವಾಗಿ ಸಂಚರಿಸುವ ಲಾರಿಗಳು ಹಾಗೂ ಇತರ ವಾಹನಗಳು ಮಳೆ ನೀರನ್ನು ರಸ್ತೆಯ ಎರಡೂ ಬದಿಗೆ ಚಿಮ್ಮಿಸುತ್ತಿವೆ. ಇದರಿಂದ ದ್ವಿಚಕ್ರ ವಾಹನ ಸವಾರರು ಏಕಾಏಕಿ ನಿಯಂತ್ರಣ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ಕೆಲವೆಡೆ ಸವಾರರು ಜಾರಿ ಬೀಳುವ ಘಟನೆಗಳೂ ವರದಿಯಾಗಿವೆ. ನೀರು ರಭಸವಾಗಿ ಎರಚುವುದರಿಂದ ವಾಹನ ಚಾಲಕರ ದೃಷ್ಟಿಗೂ ಅಡ್ಡಿಯಾಗುತ್ತಿದ್ದು, ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಕೇವಲ ದ್ವಿಚಕ್ರ ವಾಹನಗಳಷ್ಟೇ ಅಲ್ಲದೆ, ಕಾರು ಹಾಗೂ ಇತರೆ ಸಣ್ಣ ವಾಹನಗಳ ಚಾಲಕರಿಗೂ ರಸ್ತೆ ಮೇಲಿನ ನೀರು ದೊಡ್ಡ ಸಂಕಷ್ಟವಾಗುತ್ತಿದೆ. ನೀರು ತುಂಬಿರುವ ಗುಂಡಿಗಳು ಹಾಗೂ ರಸ್ತೆಯ ಮೇಲ್ಮೈ ಸ್ಪಷ್ಟವಾಗಿ ಗೋಚರಿಸದ ಕಾರಣ ವಾಹನಗಳು ನಿಯಂತ್ರಣ ತಪ್ಪುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕೆಲವು ಸಂದರ್ಭಗಳಲ್ಲಿ ಕಾರುಗಳು ಜಾರುವ ಮತ್ತು ಪಲ್ಟಿಯಾಗುವ ದೃಶ್ಯಗಳೂ ಕಂಡು ಬಂದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ನೀರು ನಿಲ್ಲುತ್ತಿರುವ ಪ್ರದೇಶಗಳನ್ನು ಗುರುತಿಸಿ, ಗುತ್ತಿಗೆದಾರರಿಗೆ ಅಗತ್ಯ ತಿದ್ದುಪಡಿ ಕಾಮಗಾರಿ ಕೈಗೊಳ್ಳುವಂತೆ ನಿರ್ದೇಶನ ನೀಡಬೇಕು. ದೊಡ್ಡ ಅನಾಹುತ ಸಂಭವಿಸುವ ಮೊದಲು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಮೂಲಕ ವಾಹನ ಸವಾರರ ಸುರಕ್ಷತೆಗೆ ಆದ್ಯತೆ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


Be the first to comment on "ಹೆದ್ದಾರಿಯಲ್ಲೇ ಜಲರಾಶಿ, ವಾಹನ ಸವಾರರಿಗೆ ಸಂಕಟ"