ಈ ವರ್ಷ ಬಂಟ್ವಾಳದಲ್ಲಿ ಅಳತೆ ಮಾಪನದ ಬುಡಕ್ಕೇ ನೇತ್ರಾವತಿ ನದಿ ಹರಿಯುತ್ತಿಲ್ಲ.
ಹಾಗೆ ನೋಡಿದರೆ, ಅಳತೆ ಮಾಪನವೂ ಒಂದು ಬದಿ ವಾಲಿದ್ದು, ಒಂದು ವೇಳೆ, ನೀರಿನ ಹೆಚ್ಚಳವಾದರೆ, ಸಮರ್ಪಕ ಅಳತೆಯೂ ದೊರಕದ ಸ್ಥಿತಿ ಇದೆ.

ಕಳೆದ ವರ್ಷ ಜೂನ್ ಜುಲೈ ತಿಂಗಳ ಮಧ್ಯದವರೆಗೆ ನೇತ್ರಾವತಿ ನದಿ ಅಪಾಯದ ಮಟ್ಟದ ಹತ್ತಿರ ಹತ್ತಿರ ಹರಿಯುತ್ತಿತ್ತು. ಈ ವರ್ಷ ಕಂದಾಯ ಇಲಾಖೆ ಅಳವಡಿಸಿರುವ ನೀರಿನ ಮೀಟರ್ ಗೇಜ್ ಬುಡಕ್ಕೇ ಬಂದಿಲ್ಲ.
ಕಳೆದ ವರ್ಷ 5.9 ಮೀಟರ್
ಬಿ.ಸಿ.ರೋಡ್ ಗೂಡಿನಬಳಿಯ ಸಮೀಪ ಕಂಚಿಕಾರಪೇಟೆ ಸನಿಹ ನೇತ್ರಾವತಿ ನದಿಯ ಮಾಪನವನ್ನು ಮಾಡಲಾಗುತ್ತದೆ. ಇಲ್ಲಿ ಮೀಟರ್ ಅಳತೆಮಾಪಕವನ್ನು ಅಳವಡಿಸಲಾಗಿದ್ದು, ನದಿ ನೀರು ಎತ್ತರಕ್ಕೆ ಬರುತ್ತಿದ್ದಂತೆ ಇಲ್ಲಿ ಅದರ ಅಳತೆಯನ್ನು ಗುರುತಿಸಲಾಗುತ್ತದೆ. ಕಳೆದ ವರ್ಷ 5.9 ಮೀಟರ್ ಎತ್ತರಕ್ಕೆ ನೇತ್ರಾವತಿ ಹರಿಯುತ್ತಿತ್ತು. ಈ ವರ್ಷ 4 ಮೀಟರ್ ವರೆಗೆ ಬಂದದ್ದೇ ಹೆಚ್ಚು.!!

ವಾಲಿದ ಅಳತೆ ಸ್ತಂಭ
ನದಿಯಲ್ಲಿ ನೀರಿನ ಮಟ್ಟ ಎಷ್ಟು ಏರುತ್ತಿದೆ ಎಂಬುದನ್ನು ಅಳೆಯಲು ನೆಡಲಾದ ಅಳತೆ ಸ್ತಂಭಗಳ ಪೈಕಿ ಒಂದು ವಾಲಿದ ಸ್ಥಿತಿಯಲ್ಲಿ ಕಂಡುಬಂದಿದೆ. ಇದನ್ನು ದುರಸ್ತಿಪಡಿಸುವ ಕಾರ್ಯ ಇನ್ನೂ ಆಗಿಲ್ಲ. ಸದ್ಯಕ್ಕಂತೂ ಅಪಾಯದ ಮಟ್ಟದವರೆಗೆ ನೀರು ಹರಿಯದೇ ಇದ್ದ ಕಾರಣ, ಇಲ್ಲಿಯ ಅಳತೆವರೆಗೆ ನೀರು ಏರಿಲ್ಲ.
ಗಾಳಿ ಮಾತ್ರ, ಮಳೆ ಕಡಿಮೆ
ಸದ್ಯಕ್ಕಂತೂ ಬಂಟ್ವಾಳ ತಾಲೂಕಿನಲ್ಲಿ ಅಬ್ಬರದ ಗಾಳಿ ಬೀಸುವ ಮೂಲಕ ಮಳೆ ಸುರಿಯುತ್ತದೆ. ಆದರೆ ಅದರಲ್ಲಿ ಮಳೆ ಪ್ರಮಾಣ ಕಡಿಮೆ. ಎರಡು ಮೂರು ನಿಮಿಷ ಬಲವಾದ ಗಾಳಿ ಬೀಸಿ ಮಳೆಯ ಪ್ರೋಕ್ಷಣೆ ಮಾಡಿ, ಹತ್ತಾರು ಮರಗಳನ್ನು ಬೀಳಿಸಿಬಿಡುತ್ತದೆ. ಹೀಗಾಗಿ ಮನೆಗಳ ಮೇಲೆ ಮರ, ವಿದ್ಯುತ್ ಕಂಬಗಳು ಬೀಳುತ್ತಿರುವ ಸುದ್ದಿಗಳು ಕೇಳಿಬರುತ್ತಿವೆಯೇ ಹೊರತು, ನದಿಯ ನೀರಿನ ಮಟ್ಟ ಹೆಚ್ಚಳವಾಗುವ ಸಂಗತಿಯೇ ಬಂದಿಲ್ಲ. ಸಣ್ಣ ಪ್ರಮಾಣದಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ ಎಂಬುದೇ ಸಮಾಧಾನಪಟ್ಟುಕೊಳ್ಳುವ ಸಂಗತಿ.


Be the first to comment on "ಮಳೆ ಕೊರತೆ: ಅಳತೆ ಮಾಪನದ ಬುಡಕ್ಕೇ ಬಾರದ ನೇತ್ರಾವತಿ"