
ಸಮರ್ಥ ನಾಯಕರು ದೇಶ ನಡೆಸಬಲ್ಲರು. ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವ ಗುಣ ಬೆಳೆಸಿಕೊಂಡಲ್ಲಿ ಭವಿಷ್ಯದಲ್ಲಿ ದೇಶವನ್ನು ಮುನ್ನಡೆಸಲು ಇದು ಭದ್ರ ಬುನಾದಿ. ಯುವಕರು ದಾರಿ ತಪ್ಪಬಾರದು. ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು. ಜವಾಬ್ದಾರಿಯುತ ನಾಗರಿಕನಾಗಬೇಕು ಎಂದು ದ.ಕ.ಜಿಲ್ಲೆ ಎ.ಎಸ್.ಪಿ. ಅನಿಲ್ ಕುಮಾರ್ ಬೂಮಾ ರೆಡ್ಡಿ ಹೇಳಿದರು.
ಅವರು ಮಂಗಳವಾರ ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಬೋಧಶ್ರೀ ಸಭಾಭವನದಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟಿಸಿ, ಮಾತನಾಡಿದರು.
ಮಂಗಳೂರು ಎ.ಬಿ.ಡೆಂಟಲ್ ಕಾಲೇಜು ನಿವೃತ್ತ ಡೀನ್ ಮತ್ತು ಪ್ರಾಂಶುಪಾಲ ಡಾ.ಬಿ.ರಾಜೇಂದ್ರಪ್ರಸಾದ್ ಅಧ್ಯಕ್ಷತೆ ವಹಿಸಿ, ಮಾತನಾಡಿ, ಉತ್ತಮ ಅಂಶಗಳನ್ನು ಅಳವಡಿಸಿಕೊಂಡು ಎಲ್ಲಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಬೇಕು. ಜವಾಬ್ದಾರಿ ಹೊತ್ತವರು ಮಾತ್ರ ನಾಯಕತ್ವ ಬೆಳೆಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಬಜಪೆ ಪಾಪ್ಯುಲರ್ ಬಂಟ್ಸ್ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಗೋಪಿನಾಥ ಹೆಗ್ಡೆ ಮಾತನಾಡಿ, ಹೆತ್ತವರು ಮತ್ತು ಶಿಕ್ಷಕರ ಜೊತೆ ವಿದ್ಯಾರ್ಥಿಗಳು ಸತ್ಯವನ್ನು ಹೇಳಬೇಕು. ವಿಶ್ವಾಸ ಗಳಿಸಬೇಕು. ಶಿಸ್ತು, ಸಂಯಮ ಹೊಂದಿರಬೇಕು ಎಂದು ಹೇಳಿದರು.

ಸಂಸ್ಥೆಯ ಕಾರ್ಯದರ್ಶಿ ಶ್ರೀಕೃಷ್ಣ ನೀರಮೂಲೆ, ಸಿ.ಪಿ.ಎಲ್. ಹೃತಿಕ್ ರವಿ ಕುಮಾರ್, ಎಸ್.ಪಿ.ಎಲ್.ತನ್ವಿಷ್ ಉಪಸ್ಥಿತರಿದ್ದರು.
ಪ್ರಾಂಶುಪಾಲ ಸಂದೀಪ್ ಆಚಾರ್ಯ ಪ್ರಮಾಣವಚನ ಬೋಧಿಸಿದರು.ವಿದ್ಯಾರ್ಥಿನಿ ಡಿಂಪಲ್ ಸ್ವಾಗತಿಸಿದರು. ಪ್ರಥ್ವಿನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸುಪೇಕ್ಷಾ ವಂದಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.


Be the first to comment on "ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳು : ವಿದ್ಯಾರ್ಥಿ ಸಂಘ ಉದ್ಘಾಟನೆ"