
ಪುಣ್ಯ ಕ್ಷೇತ್ರ ನರಹರಿ ಪರ್ವತಕ್ಕೆ ಹೆದ್ದಾರಿಯಿಂದ ಸಂಪರ್ಕ ಕಲ್ಪಿಸಲು ಅನುಕೂಲವಾಗುವ ಹೊಸ ರಸ್ತೆ ಕಾಮಗಾರಿ ಬಹುತೇಕ ಮುಕ್ತಾಯವಾಗಿದ್ದು ಸಂಚಾರಕ್ಕೆ ಅನುಕೂಲವಾಗುವ ಹಂತದಲ್ಲಿದೆ.
ಎರಡೂ ಭಾಗಗಳಿಂದ ಸಂಪರ್ಕ ಕಲ್ಪಿಸಬಹುದಾದ ಹೆದ್ದಾರಿ ಬದಿಯ ಹೊಸ ರಸ್ತೆಯ ಒಂದು ಬಾಗದಲ್ಲಿ ಇತ್ತೀಚಿನವರೆಗೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಹೀಗಾಗಿ ಸ್ಥಳೀಯರು ಹಾಗೂ ದೇವಸ್ಥಾನಕ್ಕೆ ಹೋಗುವವರಿಗೆ ಸಮಸ್ಯೆ ಆಗುತ್ತಿತ್ತು. ಇದೀಗ ಎರಡೂ ಬದಿಯ ಪ್ರವೇಶಕ್ಕೆ ಅನುಕೂಲ ಕಲ್ಪಿಸಲಾಗಿದೆ. ಆದರೆ, ರಸ್ತೆಯ ಅಂಚಿನಲ್ಲಿ ಇನ್ನಷ್ಟು ಕಾಮಗಾರಿ ನಡೆಸಲು ಬಾಕಿ ಇದೆ.

ಚತುಷ್ಪಥ ಹೆದ್ದಾರಿ ಕಾಮಗಾರಿ ಹಿನ್ನೆಲೆಯಲ್ಲಿ ಕಲ್ಲಡ್ಕ ಹಾಗೂ ಮೆಲ್ಕಾರ್ ನಡುವೆ ಬೋಳಂಗಡಿ ತಿರುವು ಹಾಗೂ ಏರು ರಸ್ತೆ ಈಗ ನೇರ ರಸ್ತೆಯಾಗಿ ಸಂಪೂರ್ಣ ಬದಲಾಗಿದೆ. ಏರು ರಸ್ತೆಯನ್ನು ತಗ್ಗಿಸಿ ಕಾಂಕ್ರಿಟೀಕರಣದ ಚತುಷ್ಪಥ ರಸ್ತೆಯಾಗಿದೆ. ಹೀಗಾಗಿ ನರಹರಿ ಪರ್ವತ ರಸ್ತೆಗೆ ಸಂಪರ್ಕಿಸುತ್ತಿದ್ದ ರಸ್ತೆಯನ್ನು ಕಡಿದು ಹಾಕಲಾಗಿತ್ತು. ಚತುಷ್ಪಥ ರಸ್ತೆಯಿಂದ ನರಹರಿ ಪರ್ವತ ಮತ್ತಷ್ಟು ಎತ್ತರವಾಗುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಇದಕ್ಕಾಗಿ, ಹೆದ್ದಾರಿ ಪಕ್ಕದಲ್ಲಿಯೇ ನರಹರಿ ಪರ್ವತಕ್ಕೆ ಹೋಗಲು ಅನುಕೂಲವಾಗುವ ಹೊಸ ರಸ್ತೆಯನ್ನು ಹೆದ್ದಾರಿ ಇಲಾಖೆಯೇ ನಿರ್ಮಿಸಿದೆ.
ಆಟಿ ಅಮವಾಸ್ಯೆ ತೀರ್ಥಸ್ನಾನ ವೇಳೆ ರೆಡಿಯಾಗಬಹುದೇ:
ಆಟಿ ಅಮವಾಸ್ಯೆಯ ತೀರ್ಥ ಸ್ನಾನಕ್ಕೆ ಬರುವ ಬಹುತೇಕ ಮಂದಿ ಕಾಲ್ನಡಿಗೆಯಲ್ಲಿ ಸಂಚರಿಸುವ ಸಂಪ್ರದಾಯವಿದೆ. ಹೀಗಾಗಿ ವಾಹನಗಳಲ್ಲಿ ಬರುವವರು ಹೆದ್ದಾರಿ ಪಕ್ಕದಲ್ಲಿ ವಾಹನ ನಿಲ್ಲಿಸಿ ಕಾಲ್ನಡಿಗೆಯಲ್ಲಿ ಬೆಟ್ಟು ಏರುತ್ತಾರೆ. ಈ ಬಾರಿ ಹೆದ್ದಾರಿಯ ಪಕ್ಕದ ಹೊಸ ರಸ್ತೆ ಆಗಿದ್ದರೂ ಕೂಡ ಅಲ್ಲಿ ಇನ್ನೂ ಕೆಲವು ಕಾಮಗಾರಿ ನಡೆಸಲು ಬಾಕಿ ಇರುವುದರಿಂದ ವಾಹನ ನಿಲುಗಡೆಗೆ ಸ್ಥಳದ ಸಮಸ್ಯೆ ಎದುರಾಗುವ ಸಾಧ್ಯತೆಯೂ ಇದೆ.
ನರಹರಿ ಪರ್ವತಕ್ಕೆ ಬಿ.ಸಿ ರೋಡ್ ಕಡೆಯಿಂದ ಬರುವವರು ಕಲ್ಲಡ್ಕ ಫ್ಲೈಓವರ್ ನ ಕೆಳಭಾಗದಿಂದ ಯು ಟರ್ನ್ ಮಾಡಿ ಬರಬೇಕು. ಪುತ್ತೂರು ಕಡೆಯಿಂದ ಬಂದವರು ವಾಪಾಸ್ ಹೋಗಬೇಕಾದರೆ ಮೆಲ್ಕಾರ್ ಫ್ಲೈಓವರ್ ನ ಕೆಳಗಡೆಯಿಂದ ಯು ಟರ್ನ್ ಪಡೆಯಬೇಕು. ಇದು ಪ್ರಯಾಣಿಕರಿಗೆ ಕೊಂಚ ತ್ರಾಸವಾದರೂ ಸುರಕ್ಷತೆ ದೃಷ್ಟಿಯಿಂದ ಉತ್ತಮ ಎಂಬ ಅಭಿಪ್ರಾಯವಿದೆ.


Be the first to comment on "ನರಹರಿ ಸಂಪರ್ಕ ರಸ್ತೆ ಬಹುತೇಕ ಪೂರ್ಣ, ಹೆದ್ದಾರಿ ಪಕ್ಕ ವಾಹನ ನಿಲುಗಡೆಗೆ ಬೇಕು ವ್ಯವಸ್ಥೆ"