ಬಂಟ್ವಾಳ: ಸಮಾಜ ಸೇವಾ ಸಹಕಾರಿ ಸಂಘ ನಿಯಮಿತದ ನೂತನ 18ನೇ ಬೋಳಿಯಾರು ಶಾಖೆಯ ಉದ್ಘಾಟನಾ ಸಮಾರಂಭ ಉಳ್ಳಾಲ ತಾಲೂಕಿನ ಬೋಳಿಯಾರು ಶ್ರೀ ದೇವಿಕಿರಣ್ ಸಂಕೀರ್ಣದಲ್ಲಿ ಮೇ 17ರ ಭಾನುವಾರ ಬೆಳಗ್ಗೆ 10.30ಕ್ಕೆ ನಡೆಯಲಿದೆ.

ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ದೀಪಪ್ರಜ್ವಲನೆಗೈದು, ಆಶೀರ್ವಚನ ನೀಡುವರು. ಶಾಖೆಯನ್ನು ಸಂಸದ ಕ್ಯಾ.ಬ್ರಿಜೇಶ್ ಚೌಟ ಉದ್ಘಾಟಿಸುವರು. ಭದ್ರತಾ ಕೊಠಡಿಯನ್ನು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಉದ್ಘಾಟಿಸುವರು. ಸೇಫ್ ಲಾಕರ್ ಅನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಕಂಪ್ಯೂಟರ್ ಅನ್ನು ಮಾಜಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸುವರು. ಠೇವಣಿ ಪತ್ರವನ್ನು ಸಹಕಾರಿ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ ರಾವ್ ಬಿಡುಗಡೆ ಮಾಡುವರು ಎಂದು ಸಂಘದ ಅಧ್ಯಕ್ಷ ಸುರೇಶ್ ಕುಲಾಲ್ ಅವರು ಬಂಟ್ವಾಳದ ಸಂಘದ ಕಛೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಜನಾರ್ದನ ಬೊಂಡಾಲ, ಪ್ರಧಾನ ವ್ಯವಸ್ಥಾಪಕ ಭೋಜ ಮೂಲ್ಯ, ಆಡಳಿತ ಮಂಡಳಿ ಸದಸ್ಯರಾದ ರಮೇಶ್ ಸಾಲ್ಯಾನ್, ಅರುಣ್ ಕುಮಾರ್ ಕೆ, ಸತೀಶ್, ಬಿ.ರಮೇಶ್ ಸಾಲ್ಯಾನ್, ಸುರೇಶ್ ಕುಲಾಲ್ ಎನ್, ಭೋಜ ಸಾಲಿಯಾನ್, ಕಿರಣ್ ಕುಮಾರ್ ಎ, ಹರೀಶ್, ಪ್ರೇಮನಾಥ ಬಂಟ್ವಾಳ, ವಿದ್ಯಾ, ಮಾಲತಿ ಮಚ್ಚೇಂದ್ರ, ಜಗನ್ನಿವಾಸ ಗೌಡ, ಗಣೇಶ ಸಮಗಾರ, ರೇಖಾ ನಾಯಕ್ ಉಪಸ್ಥಿತರಿದ್ದರು. ಈ ಸಂದರ್ಭ ಪ್ರಧಾನ ವ್ಯವಸ್ಥಾಪಕ ಭೋಜ ಮೂಲ್ಯ ಸಂಘದ ಮಾಹಿತಿ ನೀಡಿದರು. ವಿವರ ಇಲ್ಲಿದೆ.
ಸಹಕಾರಿಯ ಸಾಧನೆ:
ಸಂಘದ ಪ್ರಧಾನ ವ್ಯವಸ್ಥಾಪಕ ಭೋಜ ಮೂಲ್ಯ ವಿವರಗಳನ್ನು ನೀಡಿ ಸಹಕಾರಿಯ ಇದುವರೆಗಿನ ಸಾಧನೆಗಳನ್ನು ವಿವರಿಸಿದರು. ಬಂಟ್ವಾಳ ಬೈಪಾಸ್ ಜಂಕ್ಷನಿನಲ್ಲಿ ಸಹಕಾರಿಯು ತನ್ನ ಸ್ವಂತ ಕಟ್ಟಡದಲ್ಲಿ ಕೇಂದ್ರ ಕಛೇರಿಯನ್ನು ಹೊಂದಿದ್ದು ತನ್ನ ೧೭ ಶಾಖೆಗಳಾದ ಬಂಟ್ವಾಳ ಪಟ್ಟಣ, ಫರಂಗಿಪೇಟೆ, ವಿಟ್ಲ, ಮುಡಿಪು, ಕುಕ್ಕಾಜೆ, ಬಂಟ್ವಾಳ ಬೈಪಾಸ್, ಪಡೀಲ್, ಕಲ್ಲಡ್ಕ, ಬಜಪೆ, ಬಿ. ಸಿ. ರೋಡ್, ಪುಂಜಾಲಕಟ್ಟೆ, ಪುತ್ತೂರು, ಮೆಲ್ಕಾರ್, ಸಿದ್ಧಕಟ್ಟೆ, ಉಪ್ಪಿನಂಗಡಿ, ತೊಕ್ಕೊಟ್ಟು-ದೇರಳಕಟ್ಟೆ ಮತ್ತು ಆಲಂಕಾರು ಶಾಖೆಗಳಲ್ಲಿ ಉತ್ತಮ ಬ್ಯಾಂಕಿಂಗ್ ಸೇವಾ ಸೌಲಭ್ಯವನ್ನು ನೀಡುತ್ತಾ ಬಂದಿರುತ್ತದೆ ಎಂದರು.
೩೧-೦೩-೨೦೨೬ರ ಅಂತ್ಯಕ್ಕೆ ಸಹಕಾರಿಯಲ್ಲಿ ಒಟ್ಟು ೯೩೧೯ ’ಎ’ ತರಗತಿ ಸದಸ್ಯರಿದ್ದು ಪಾಲು ಬಂಡವಾಳ ರೂ. ೮.೨೩ ಕೋಟಿ, ಠೇವಣಾತಿಗಳು ರೂ. ೨೬೪.೦೮ ಕೋಟಿ, ನಿಧಿಗಳು ೨೨.೬೪ ಕೋಟಿ, ವಿನಿಯೋಗಗಳು ೬೨.೮೮ ಕೋಟಿ, ಸಾಲಗಳು ರೂ. ೨೪೮.೯೯ ಕೋಟಿ, ಇದ್ದು ವಸೂಲಾತಿ ಶೇಕಡ ೯೫.೧೫ ಆಗಿರುತ್ತದೆ. ೨೦೨೫-೨೬ನೇ ಸಾಲಿನಲ್ಲಿ ರೂ. ೧೪೩೨.೧೩ ಕೋಟಿ ವ್ಯವಹಾರ ನಡೆಸಿ ರೂ. ೫.೨೮ ಕೋಟಿ ತಾತ್ಕಾಲಿಕ ಲಾಭ ಗಳಿಸಿರುತ್ತದೆ. ಸಂಘದ ದುಡಿಯುವ ಬಂಡವಾಳ ರೂ. ೨೯೭.೭೧ ಕೋಟಿ ಮೀರಿದ್ದು ಅಡಿಟ್ ವರ್ಗೀಕರಣದಲ್ಲಿ ಸತತವಾಗಿ ’ಎ’ ತರಗತಿ ಕಾಯ್ದುಕೊಂಡಿರುತ್ತದೆ. ಕಳೆದ ಸಾಲಿನಲ್ಲಿ ಸದಸ್ಯರಿಗೆ ಶೇಕಡ ೧೭ ಡಿವಿಡೆಂಡ್ ನೀಡಲಾಗಿರುತ್ತದೆ. ಸಹಕಾರಿಯು ೨೦೦೬ ರಲ್ಲಿ ಬೆಳ್ಳಿ ಹಬ್ಬವನ್ನು ಆಚರಿಸಿರುತ್ತದೆ. ಕೇಂದ್ರ ಕಛೇರಿ ಹಾಗೂ ಬಂಟ್ವಾಳ ಬೈಪಾಸ್ ಶಾಖೆಯು ಬೈಪಾಸು ಜಂಕ್ಷನ್ನ ಸ್ವಂತ ಕಟ್ಟಡದಲ್ಲಿ ಕಾರ್ಯಚರಿಸುತ್ತಿದೆ. ಪುಂಜಾಲ್ ಕಟ್ಟೆ, ಮುಡಿಪು ಹಾಗೂ ಉಪ್ಪಿನಂಗಡಿ ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಮುಂದಿನ ದಿನಗಳಲ್ಲಿ ಇನ್ನು ಐದು ಶಾಖೆಗಳನ್ನು ಆರಂಭಿಸಲು ಆಡಳಿತ ಮಂಡಳಿ ತಿರ್ಮಾನಿಸಿರುತ್ತದೆ. ಸಹಕಾರಿಯಲ್ಲಿ ೭೮ ಖಾಯಂ ಸಿಬ್ಬಂದಿಗಳು ಹಾಗೂ ಇತರ ಠೇವಣಾತಿ ಸಂಗ್ರಾಹಕರಾಗಿ ೪೪ ಮಂದಿ ಕಾರ್ಯನಿರ್ವಹಿಸುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜನರಿಗೆ ಉದ್ಯೋಗ ನೀಡುವ ಚಿಂತನೆ ಆಡಳಿತ ಮಂಡಳಿಯದ್ದಾಗಿರುತ್ತದೆ. ಗ್ರಾಹಕರ ಸೇವೆಯ ಅನುಕೂಲಕ್ಕಾಗಿ ತ್ವರಿತ ಸಾಲ ಸೌಲಭ್ಯ ಜಾರಿಗೊಳಿಸಲಾಗಿದೆ ಎಂದವರು ಮಾಹಿತಿ ನೀಡಿದರು.
ಆನ್ಲೈನ್ ಸೇವೆ:
ಗ್ರಾಹಕರ ಅನುಕೂಲಕ್ಕಾಗಿ ಮತ್ತು ಸಹಕಾರಿಯ ಹಿತದೃಷ್ಟಿಯಿಂದ ಆನ್ಲೈನ್ ಮುಖಾಂತರ ಸೇವೆಯನ್ನು ಕೊಡುವ ಬಗ್ಗೆ ಆಡಳಿತ ಮಂಡಳಿಯ ಯೋಜನೆಯಂತೆ ಈಗಾಗಲೇ ಸಂಪೂರ್ಣ ಗಣಕಿಕೃತ ಸಿಬಿಎಸ್ ತಂತ್ರಾಂಶದೊಂದಿಗೆ ಗ್ರಾಹಕರು ನೆಪ್ಟ್, ಆರ್.ಟಿ.ಜಿ.ಎಸ್. ಹಾಗೂ ಗೂಗಲ್-ಪೇ, ಪೋನ್-ಪೇ ಮುಂತಾದ ಯು.ಪಿ.ಐ. ಅಪ್ಲಿಕೇಶನ್ ಗಳ ಮೂಲಕ ಸಂಘದಲ್ಲಿರುವ ತಮ್ಮ ಖಾತೆಗೆ ನೇರವಾಗಿ ಜಮೆ ಮಾಡುವಂತಹ ಇ-ಕಲೆಕ್ಷನ್ ತಂತ್ರಾಜ್ಞಾನವನ್ನು ಮತ್ತು ಐ.ಎಫ್.ಎಸ್.ಸಿ. ಕೋಡನ್ನು ಐ.ಸಿ.ಐ.ಸಿ.ಐ. ಬ್ಯಾಂಕ್ನ ಸಹಯೋಗದೊಂದಿಗೆ ಆಳವಡಿಸಿಕೊಂಡಿರುತ್ತದೆ. ಈ ಮೂಲಕ ಬಂಟ್ವಾಳ ತಾಲೂಕಿನಲ್ಲಿಯೆ ಈ ಸೌಲಭ್ಯವನ್ನು ಹೊಂದಿರುವ ಮೊದಲ ಸಹಕಾರ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂದಿನ ದಿನಗಳಲ್ಲಿ ಸಂಘವು ತನ್ನದೆ ಆದ ಮೊಬೈಲ್ ಅಪ್ಲಿಕೇಶನ್ ಹೊಂದಿ ಆ ಮೂಲಕ ಯಾವುದೇ ವಾಣಿಜ್ಯ ಬ್ಯಾಂಕುಗಳಿಗೆ ಕಡಿಮೆ ಇಲ್ಲದಂತೆ ಗ್ರಾಹಕರಿಗೆ ಸೇವೆ ನೀಡಬೇಕೆಂಬ ಆಲೋಚನೆ ಆಡಳಿತ ಮಂಡಳಿಯು ಹೊಂದಿದೆ ಎಂದರು.
ಸಂಘವು ವ್ಯವಹಾರದಲ್ಲಿ ಸರ್ವತೋಮುಖ ಪ್ರಗತಿ ಸಾಧಿಸಿ ಹಾಗೂ ಬ್ಯಾಂಕಿನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಮಂಗಳೂರು ಇವರಿಂದ ಹಲವು ಬಾರಿ ಸಾಧನಾ ಪ್ರಶಸ್ತಿ ಪಡೆದುಕೊಂಡಿರುತ್ತದೆ. ಅಲ್ಲದೆ ೭೨ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಸಂಘವು ದಕ್ಷಿಣ ಕನ್ನಡ ಜಿಲ್ಲೆಯ ಉತ್ತಮ ಪತ್ತಿನ ಸಹಕಾರಿ ಸಂಘ ಪ್ರಶಸ್ತಿ ಪಡೆದುಕೊಂಡಿರುತ್ತದೆ ಸಹಕಾರಿಯ ವತಿಯಿಂದ ೨೦೨೫-೨೬ ನೇ ಸಾಲಿನಲ್ಲಿ ಉನ್ನತ ವ್ಯಾಸಂಗಕ್ಕಾಗಿ ೨೦೪ ಸದಸ್ಯರ ಮಕ್ಕಳಿಗೆ ರೂ. ೮,೮೦,೦೦೦.೦೦ ವಿದ್ಯಾರ್ಥಿ ವೇತನ ನೀಡಲಾಗಿರುತ್ತದೆ. ಉನ್ನತ ವ್ಯಾಸಂಗಕ್ಕಾಗಿ ಸಹಕಾರಿಯಲ್ಲಿ ವಿದ್ಯಾ ಸಾಲದ ಸೌಲಭ್ಯವನ್ನು ಕಲ್ಪಿಸಲಾಗಿದೆ. ಸದಸ್ಯರ ಅನೂಕೂಲಕ್ಕಾಗಿ ಇ-ಸ್ಟ್ಯಾಂಪ್ ಸೌಲಭ್ಯವನ್ನು ಬಂಟ್ವಾಳ ಬೈಪಾಸ್ ಶಾಖೆಯಲ್ಲಿ ಆಳವಡಿಸಲಾಗಿದೆ. ಸಹಕಾರಿಯಲ್ಲಿ ಪ್ರಸ್ತುತ ೨೪೧ ಅಮೂಲ್ಯ ಸ್ವಸಹಾಯ ಗುಂಪುಗಳು ಇದ್ದು ೨೧೬೧ ಸದಸ್ಯರು ಸಕ್ರಿಯವಾಗಿ ವ್ಯವಹರಿಸುತ್ತಿದ್ದು ಒಟ್ಟು ರೂ. ೧,೦೪,೯೫,೭೧೯.೫೦ ಉಳಿತಾಯವನ್ನು ಮಾಡಿರುತ್ತಾರೆ. ೨೦೨೫-೨೬ ನೇ ಸಾಲಿನಲ್ಲಿ ಗುಂಪುಗಳಿಗೆ ರೂ. ೧,೮೬,೭೫,೦೦೦.೦೦ ಸಾಲವನ್ನು ನೀಡಿದ್ದು ವರ್ಷಾಂತ್ಯಕ್ಕೆ ರೂ. ೨,೩೦,೫೧,೬೦೬.೦೦ ಹೊರಬಾಕಿ ಇರುತ್ತದೆ. ಸದಸ್ಯರಿಗೆ ಸೇಫ್ ಡೆಪಾಸಿಟ್ ಲಾಕರ್ ಸೌಲಭ್ಯವನ್ನು ನೀಡಲಾಗುತ್ತಿದೆ. ಸಿಬ್ಬಂದಿಗಳಿಗೆ ಆರೋಗ್ಯ ವಿಮೆ ಸೌಲಭ್ಯವನ್ನು ಒದಗಿಸಲಾಗಿದೆ. ರೂ. ೧೦,೦೦೦.೦೦ ಮೇಲ್ಪಟ್ಟ ನಿರಖು ಠೇವಣಾತಿದಾರರಿಗೆ ರೂ. ಒಂದು ಲಕ್ಷ ಮೊತ್ತದ ಅಪಘಾತ ವಿಮೆಯ ಸೌಲಭ್ಯವನ್ನು ಕಲ್ಪಿಸಲಾಗಿದೆ. ಸಂಘದ ಸದಸ್ಯರ ವೈದ್ಯಕೀಯ ಚಿಕಿತ್ಸೆಗೆ ಸಹಾಯ ಧನ ನೀಡಲಾಗುತ್ತಿದೆ. ಪ್ರಸ್ತುತ ಸದಸ್ಯರಿಗೆ ಸರಕಾರದ ಯಶಸ್ವಿನಿ ಆರೋಗ್ಯ ರಕ್ಷಣಾ ಸೌಲಭ್ಯ ಯೋಜನೆ ಮತ್ತು ಮಣಿಪಾಲ ಆರೋಗ್ಯ ಕಾರ್ಡ್ ಸೌಲಭ್ಯವನ್ನು ನೀಡಲಾಗುತ್ತಿದೆ ಎಂದು ವಿವರ ನೀಡಿದರು.


Be the first to comment on "ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಬಂಟ್ವಾಳದ 18ನೇ ಬೋಳಿಯಾರು ಶಾಖೆ ಮೇ 17ರಂದು ಉದ್ಘಾಟನೆ"