619 ಅಂಕ: ಪಂಜಿಕಲ್ಲು ಸರಕಾರಿ ಕನ್ನಡ ಮಾಧ್ಯಮ ಶಾಲೆಯ ಹರ್ಷಿತ್ ಪೂಜಾರಿ ಸಾಧನೆ

VNR GOLD

ಬಂಟ್ವಾಳ: ತಂದೆ ವೃತ್ತಿಯಲ್ಲಿ ಪೈಂಟರ್. ತಾಯಿ ಮನೆವಾರ್ತೆ. ಅಣ್ಣನೂ ಪ್ರತಿಭಾವಂತ ವಿದ್ಯಾರ್ಥಿ. ಬಂಟ್ವಾಳತಾಲೂಕಿನ ಮೂಡುನಡುಗೋಡು ಗ್ರಾಮದ ಹರ್ಷಿತ್ ಪೂಜಾರಿ ಯಾವ ಪ್ರತ್ಯೇಕ ಕೋಚಿಂಗ್ ಇಲ್ಲದೆ, ಸರಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಕಲಿತು 619 ಅಂಕ ಗಳಿಸಿ ಸಾಧನೆ ಮಾಡಿದ್ದಾನೆ.

ಪಂಜಿಕಲ್ಲು ಸರಕಾರಿ ಹೈಸ್ಕೂಲಿನಲ್ಲಿ ಓದಿದ ಹರ್ಷಿತ್ ಕನ್ನಡದಲ್ಲಿ 125, ಗಣಿತ 98, ವಿಜ್ಞಾನ 96, ಹಿಂದಿ 100, ಇಂಗ್ಲೀಷ್ 100, ಸಮಾಜವಿಜ್ಞಾನದಲ್ಲಿ 100 ಅಂಕಗಳು ಲಭಿಸಿವೆ. ಇದೆಲ್ಲವೂ ಶಾಲೆಯ ಶಿಕ್ಷಕರ ಪ್ರೋತ್ಸಾಹ ಹಾಗೂ ತರಬೇತಿಯ ಫಲ ಎಂದು ಹರ್ಷಿತ್ ಸಂತಸ ವ್ಯಕ್ತಪಡಿಸಿದ್ದು, ಮುಂದೆ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಕಲಿಯುವ ಇಚ್ಛೆ ಹೊಂದಿದ್ದಾನೆ. ಈತನ ಅಣ್ಣ ನವೋದಯ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಪ್ರಸ್ತುತ ಸೂರತ್ ನಲ್ಲಿ ಎನ್.ಐ.ಟಿ.ಯಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು, ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದಾನೆ.

ಹರ್ಷಿತ್ ಸಾಧನೆ ಕುರಿತು ಸಂತಸ ವ್ಯಕ್ತಪಡಿಸಿದ ಪಂಜಿಕಲ್ಲು ನಿವಾಸಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಇದಕ್ಕೆ ಶಾಲೆಯ ಇಡೀ ತಂಡ ಪ್ರಯತ್ನ ಕಾರಣ ಎಂದು ಅಧ್ಯಾಪಕ ವೃಂದವನ್ನು ಶ್ಲಾಘಿಸಿದ್ದಾರೆ.

ಜಾಹೀರಾತು

ಶನಿವಾರ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಅಧ್ಯಾಪಕ ವೃಂದ ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು ವಿದ್ಯಾರ್ಥಿ ಮನೆಗೆ ತೆರಳಿ ಆತನ ಹಾಗೂ ತಂದೆ, ತಾಯಿಯನ್ನು ಗೌರವಿಸಿದರು.

ಹರ್ಷಿತ್ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದು, 8 ಮತ್ತು 9ನೇ ತರಗತಿಯಲ್ಲೇ ಟಾಪರ್ ಆಗಿದ್ದ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ತೊಡಗಿಸಿಕೊಂಡಿದ್ದ ಎಂದು ಪಂಜಿಕಲ್ಲು ಸರಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ದುರ್ಗಾಪ್ರಸಾದ್ ತಿಳಿಸಿದ್ದಾರೆ.

ಬಂಟ್ವಾಳ: 16 ಸರ್ಕಾರಿ ಪ್ರೌಢಶಾಲೆಗೆ ಶೇ.100 ಫಲಿತಾಂಶ

ಕಳೆದ ಸಾಲಿನ ಎಸ್ ಎಸ್ ವಾರ್ಷಿಕ ಪರೀಕ್ಷೆಗೆ ಹಾಜರಾದ ಒಟ್ಟು 5,488 ವಿದ್ಯಾರ್ಥಿಗಳ ಪೈಕಿ 5,371 ಮಂದಿ ತೇರ್ಗಡೆಗೊಳ್ಳುವ ಮೂಲಕ ಶೇ. 97.87 ಫಲಿತಾಂಶ ದಾಖಲಿಸಿದೆ. ಅನುದಾನಿತ ಮತ್ತು ಅನುದಾನರಹಿತ ಹಾಗೂ ಸರ್ಕಾರಿ ಪ್ರೌಢಶಾಲೆ ಸೇರಿದಂತೆ ಒಟ್ಟು 96 ಪ್ರೌಢಶಾಲೆಗಳ ಪೈಕಿ 55 ಪ್ರೌಢಶಾಲೆ ಶೇ.100 ಫಲಿತಾಂಶ ದಾಖಲಿಸಿಕೊಂಡಿದೆ.

ಒಟ್ಟು 16 ಸರ್ಕಾರಿ ಪ್ರೌಢಶಾಲೆಗಳು ಶೇ.100 ಫಲಿತಾಂಶ ದಾಖಲಿಸಿಕೊಂಡು ಗಮನ ಸೆಳೆದಿದೆ. ಇಲ್ಲಿನ ಪಂಜಿಕಲ್ಲು, ಮಣಿನಾಲ್ಕೂರು, ಗೋಳ್ತಮಜಲು, ಬೆಂಜನಪದವು, ನೈನಾಡು, ಬಿ.ಮೂಡದ ಅಜ್ಜಿಬೆಟ್ಟು, ಕೊಡಂಗೆ, ಶಂಭೂರು, ಬಿಳಿಯೂರು, ಪೊಳಲಿ, ಕಾಡುಮಠ, ಸೂರ್ಯ, ಬೋಳಂತಿಮೊಗರು, ಸುರಿಬೈಲು ಸರ್ಕಾರಿ ಪ್ರೌಢಶಾಲೆ ಸೇರಿದಂತೆ ಪುದು ಮೌಲಾನ ಆಜಾದ್ ಪ್ರೌಢಶಾಲೆ ಮತ್ತು ವಗ್ಗ ಮೊರಾರ್ಜಿ ದೇಸಾಯಿ ವಸತಿ ಶಾಲೆ ಶೇ.100 ಫಲಿತಾಂಶ ದಾಖಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕೊಯಿಲ, ವಗ್ಗ ಕಾವಳಪಡೂರು, ಸಿದ್ಧಕಟ್ಟೆ, ವಾಮದಪದವು ಸರ್ಕಾರಿ ಪ್ರೌಢಶಾಲೆಯಲ್ಲಿ ತಲಾ ಒಬ್ಬ ವಿದ್ಯಾರ್ಥಿ ಅನುತ್ತೀರ್ಣಗೊಳ್ಳುವ ಮೂಲಕ ಶೇ.100 ಫಲಿತಾಂಶದಿಂದ ವಂಚಿತಗೊಂಡಿದೆ.

ಸರ್ಕಾರಿ ಪ್ರೌಢಶಾಲೆಗಳ ಪೈಕಿ ಪಂಜಿಕಲ್ಲು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಹರ್ಷಿತ್ ಪೂಜಾರಿ 619 ಅಂಕ ಮತ್ತು ಮೊಂಟೆಪದವು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಸಿಂಚನ 618 ಅಂಕ ಗಳಿಸಿ ಗಮನ ಸೆಳೆದಿದ್ದಾರೆ. ಇಲ್ಲಿನ ಪಂಜಿಕಲ್ಲು ಸರ್ಕಾರಿ ಪ್ರೌಢಶಾಲೆಯಲ್ಲಿ ಒಟ್ಟು ೨೩ ಮಂದಿ ವಿದ್ಯಾರ್ಥಿಗಳ ಪೈಕಿ ೨೩ ಮಂದಿ ತೇರ್ಗಡೆಗೊಂಡಿದ್ದು, ೫ ಡಿಸ್ಟಿಂಕ್ಷನ್ ಮತ್ತು ೯ ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಆ ಮೂಲಕ ಸತತ ೪ನೇ ಬಾರಿ ಶೇ.೧೦೦ ಫಲಿತಾಂಶ ದಾಖಲಿಸಿದೆ. ನೈನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಒಟ್ಟು ೪೪ ಮಂದಿ ವಿದ್ಯಾರ್ಥಿಗಳ ಪೈಕಿ ೪೪ ಮಂದಿ ತೇರ್ಗಡೆಗೊಂಡಿದ್ದು, ೧೩ ಮಂದಿ ಡಿಸ್ಟಿಂಕ್ಷನ್ ಗಳಿಸಿದ್ದು, ಸತತ ೬ನೇ ಬಾರಿಗೆ ಶೇ.100 ಫಲಿತಾಂಶ ದಾಖಲಿಸಿಕೊಂಡಿದೆ.

ಸಿದ್ಧಕಟ್ಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಒಟ್ಟು ೮೨ ಮಂದಿ ಪರೀಕ್ಷೆಗೆ ಹಾಜರಾಗಿದ್ದು, ೮೧ ಮಂದಿ ತೇರ್ಗಡೆಗೊಂಡಿದ್ದಾರೆ. ೧೩ ಮಂದಿ ಡಿಸ್ಟಿಂಕ್ಷನ್, ೫೪ ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಕೊಯಿಲ ಸರ್ಕಾರಿ ಪ್ರೌಢಶಾಲೆಯಲ್ಲಿ ೬೬ ಮಂದಿ ವಿದ್ಯಾರ್ಥಿಗಳ ಪೈಕಿ ೬೫ ಮಂದಿ ತೇರ್ಗಡೆಗೊಂಡಿದ್ದು, ೯ ಮಂದಿ ಡಿಸ್ಟಿಂಕ್ಷನ್ ಮತ್ತು ೪೧ ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ವಾಮದಪದವು ಸರ್ಕಾರಿ ಪ್ರೌಢಶಾಲೆಯಲ್ಲಿ ಒಟ್ಟು ೭೪ ಮಂದಿ ವಿದ್ಯಾರ್ಥಿಗಳ ಪೈಕಿ ೭೩ ಮಂದಿ ತೇರ್ಗಡೆಗೊಂಡಿದ್ದು, ೧೫ ಮಂದಿ ಡಿಸ್ಟಿಂಕ್ಷನ್ ಮತ್ತು ೩೯ ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ವಗ್ಗ ಕಾವಳಪಡೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಒಟ್ಟು ೩೬ ಮಂದಿ ವಿದ್ಯಾರ್ಥಿಗಳ ಪೈಕಿ ೩೫ ಮಂದಿ ತೇರ್ಗಡೆಗೊಂಡಿದ್ದು, ೪ ಮಂದಿ ಡಿಸ್ಟಿಂಕ್ಷನ್ ಮತ್ತು 22 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "619 ಅಂಕ: ಪಂಜಿಕಲ್ಲು ಸರಕಾರಿ ಕನ್ನಡ ಮಾಧ್ಯಮ ಶಾಲೆಯ ಹರ್ಷಿತ್ ಪೂಜಾರಿ ಸಾಧನೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*