
ಬಿ.ಸಿ.ರೋಡ್ ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೈಕಿ, ಬಿ.ಸಿ.ರೋಡಿನಿಂದ ಮಾಣಿವರೆಗಿನ ಕೆಲಸಗಳು ಬಹುತೇಕ ಪೂರ್ಣಗೊಂಡಿದ್ದು, ಇದೀಗ ಕೆಲ ಭಾಗಗಳಲ್ಲಿ ವಿದ್ಯುದ್ದೀಪ ಅಳವಡಿಕೆ ನಡೆದಿದೆ. ಪ್ರಾಯೋಗಿಕವಾಗಿ ವಿದ್ಯುತ್ ದೀಪ ಉರಿಸುವ ಕಾರ್ಯವನ್ನು ಜನರೇಟರ್ ಬಳಸುವ ಮೂಲಕ ಗುತ್ತಿಗೆ ಕಂಪನಿ ಮಾಡುತ್ತಿದೆ.
ಮೇ ಪ್ರಥಮ ವಾರದಲ್ಲಿ ಬಹುತೇಕ ಶಾಶ್ವತವಾಗಿ ಬೆಳಕು ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಸಿರೋಡು – ಅಡ್ಡಹೊಳೆವರೆಗೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಬಹುತೇಕ ಕಾಮಗಾರಿ ಪೂರ್ಣವಾಗುತ್ತಿದ್ದು, ನೆಲ್ಯಾಡಿ ಹಾಗೂ ಪೆರ್ನೆ ಬಳಿ ಸ್ವಲ್ಪ ಕೆಲಸ ಬಾಕಿಯಾಗಿದೆ. ಬಿ.ಸಿ.ರೋಡು ಪೆರಿಯಶಾಂತಿವರೆಗೆ ವಿದ್ಯುತ್ ಕಂಬಗಳು ಅಳವಡಿಸಿಯಾಗಿದೆ. ಲೈಟ್ ಗಳ ಆಳವಡಿಕೆ ಕಾರ್ಯ ಕೂಡ ಬಹುತೇಕ ಪೂರ್ಣವಾಗಿದೆ. ನೆಲ್ಯಾಡಿ ಬಿಟ್ಟರೆ ಉಳಿದ ಕಡೆಗಳಲ್ಲಿ 80 ಶೇ. ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಮೇ ತಿಂಗಳ ಪ್ರಥಮ ವಾರದಲ್ಲಿ ಕೆಲಸಗಳು ಪೂರ್ಣವಾಗಲಿದ್ದು, ಮಳೆಗಾಲದ ಮುನ್ನ ವಿದ್ಯುತ್ ಬೀದಿ ದೀಪಗಳು ಉರಿಯಲಿದೆ ಎಂದು ಅವರು ತಿಳಿಸಿದ್ದಾರೆ.

ಎಲ್.ಇ.ಡಿ. ದೀಪಗಳು:
ಜಿ.ಐ. ಪೈಪ್ ಗಳನ್ನು ವಿದ್ಯುತ್ ಕಂಬಗಳಾಗಿ ಬಳಸಲಾಗಿದ್ದು, ಕ್ರಾಂಪ್ಟನ್ ಕಂಪೆನಿಯ ಎಲ್.ಇ.ಡಿ. ಲೈಟ್ ಗಳನ್ನು ಒಳಗೊಂಡಿದೆ. ಅತ್ಯಂತ ಗುಣಮಟ್ಟದ ಪರಿಕರಗಳನ್ನು ಬಳಸಿರುವ ಕಂಪೆನಿ ಮಳೆಗಾಳಿಗೆ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯ ಮಧ್ಯ ಭಾಗದಲ್ಲಿ ವಿದ್ಯುತ್ ಕಂಬಗಳನ್ನು ಹಾಕಿ, ಲೈಟ್ ಅಳವಡಿಸಲಾಗಿದೆ. ಪ್ಲೈ ಓವರ್ ನ ಪ್ರಾರಂಭ ಮತ್ತು ಕೊನೆಯ ಭಾಗದಲ್ಲಿ ಮಾತ್ರ ಸರ್ವೀಸ್ ರಸ್ತೆ ಹಾಗೂ ಪ್ಲೈ ಓವರ್ ಎರಡಕ್ಕೂ ಅನ್ವಯವಾಗುವಂತೆ ವಿದ್ಯುತ್ ದೀಪಗಳನ್ನು ಜೋಡಿಸಲಾಗಿದೆ.
ಮೆಸ್ಕಾಂ ಇಲಾಖೆಯಿಂದ ಸಂಪರ್ಕವನ್ನು ಪಡೆಯಲಾಗಿದ್ದರೂ ಪರೀಕ್ಷೆ ನಡೆಸದೆ ವಿದ್ಯುತ್ ಸಂಪರ್ಕ ನೀಡುವಂತಿಲ್ಲ. ಹಾಗಾಗಿ ಬಿಸಿರೋಡಿನಿಂದ ಮೆಲ್ಕಾರ್ ವರೆಗೆ ಜನರೇಟರ್ ಬಳಸಿ ವಿದ್ಯುತ್ ಸಂಪರ್ಕ ನೀಡಿ ದೀಪಗಳನ್ನು ಪ್ರಾಯೋಗಿಕವಾಗಿ ಉರಿಸಿ ಪರೀಕ್ಷೆ ಮಾಡಿದ್ದಾರೆ. ಇಂದಿನಿಂದ ಪೆರಿಯಶಾಂತಿವರೆಗೆ ಹಂತಹಂತವಾಗಿ ವಿದ್ಯುತ್ ದೀಪಗಳನ್ನು ಇದೇ ಮಾದರಿಯಲ್ಲಿ ಉರಿಸಿ ನೋಡುವ ಕೆಲಸ ನಡೆಯಲಿದೆ. ಪ್ರಾಯೋಗಿಕ ಪರೀಕ್ಷೆ ನಡೆಸಿದ ಬಳಿಕ ಮೆಸ್ಕಾಂ ಇಲಾಖೆಯಿಂದ ಸಂಪರ್ಕ ನೀಡಿ ಶಾಶ್ವತವಾಗಿ ದೀಪಗಳು ಉರಿಯಲಿದೆ ಎಂದು ಅವರು ತಿಳಿಸಿದ್ದಾರೆ.


Be the first to comment on "ಹೆದ್ದಾರಿಯಲ್ಲಿ ಝಗಮಗಿಸುವ ಬೆಳಕು, ಪ್ರಾಯೋಗಿಕ ಪರೀಕ್ಷೆ"