ಬ್ರಹ್ಮರಕೂಟ್ಲು ಟೋಲ್ ಗೇಟ್ ಮುಚ್ಚಿಬಿಡಿ

| ಟೋಲ್ ಮುಂಭಾಗ ಧರಣಿ ಕುಳಿತ ಸಮಾನ ಮನಸ್ಕ ಸಮನ್ವಯ ಸಮಿತಿ ಹಾಗೂ ಟೋಲ್ ವಿರೋಧಿ ಹೋರಾಟ ಸಮಿತಿ ಸದಸ್ಯರ ಮನವಿ

ಬಂಟ್ವಾಳ: ಬ್ರಹ್ಮರಕೂಟ್ಲು ಟೋಲ್ ಗೇಟ್ ಮುಚ್ಚಿಬಿಡಿ..

ಹೀಗೆಂದು ಬ್ರಹ್ಮರಕೂಟ್ಲು ಟೋಲ್ ಗೇಟ್ ಮುಂಭಾಗ ಮಂಗಳವಾರ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಧರಣಿ ಕುಳಿತ ಸಮಾನ ಮನಸ್ಕ ಸಮನ್ವಯ ಸಮಿತಿ ಹಾಗೂ ಟೋಲ್ ವಿರೋಧಿ ಹೋರಾಟ ಸಮಿತಿಯ ಸದಸ್ಯರು, ಟೋಲ್ ವಿರೋದಿಸುವ ಸಾರ್ವಜನಿಕರು ಮನವಿ ಮಾಡಿದ್ದಾರೆ. ಈ ಕುರಿತು ಪತ್ರವನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಯೋಜನಾ ನಿರ್ದೇಶಕರಿಗೆ ಬರೆದಿದ್ದು, ಪ್ರತಿಯನ್ನು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾ. ಬೃಜೇಶ್ ಚೌಟ ಹಾಗೂ ಜಿಲ್ಲಾಧಿಕಾರಿಗಳಿಗೆ ರವಾನಿಸಿದ್ದಾರೆ.

ಜಾಹೀರಾತು

ನಂತೂರು – ಬಿ ಸಿ ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ರಹ್ಮರಕೂಟ್ಟು ಬಳಿ ಕಳೆದ 23 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಟೋಲ್ ಗೇಟ್ ಅನ್ನು ಮುಚ್ಚಬೇಕು ಎಂದು ನಾವು ಒತ್ತಾಯಿಸುತ್ತಿದ್ದೇವೆ. B.O.T ಮಾದರಿಯಲ್ಲಿ ನಿರ್ಮಾಣಗೊಂಡಿರುವ ಬಿ ಸಿ ರೋಡ್ ನಂತೂರು ಹೆದ್ದಾರಿಯಲ್ಲಿ 23 ವರ್ಷಗಳ ಕಾಲ ನಿರಂತರ ಸುಂಕ ಸಂಗ್ರಹಿಸಿದ ತರುವಾಯವೂ ಟೋಲ್ ಗೇಟ್ ಮುಚ್ಚದಿರುವುದು ಒಪ್ಪಲು ಸಾಧ್ಯವಿಲ್ಲದ ಸಂಗತಿ. ಯಾವುದೇ ಬೈಪಾಸ್, ಮೇಲ್ಸೇತುವೆ, ಅಂಡರ್ ಪಾಸ್ ಗಳಿಲ್ಲದ, ಸರಿಯಾದ ಸರ್ವೀಸ್ ರಸ್ತೆಗಳನ್ನು ಹೊಂದಿರದ, ಗುಣಮಟ್ಟದ ನಿರ್ವಹಣೆ ಇಲ್ಲದ ನಾಲ್ಕು ಪಥಗಳ ಸಾಮಾನ್ಯ ರಸ್ತೆಗೆ 23 ವರ್ಷಗಳಿಗೂ ದೀರ್ಘ ಕಾಲ ಟೋಲ್ ಸಂಗ್ರಹಿಸಿಯೂ “ಹೂಡಿದ ಹಣ ಮರು ಸಂಗ್ರಹ ಆಗಿಲ್ಲ” ಎಂದರೆ ನಂಬಲು ಸಾಧ್ಯವಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಬ್ರಹ್ಮರಕೂಟ್ಟು ಟೋಲ್ ಗೇಟ್ ಗೆ 32 ಕಿ ಮೀ ದೂರದ ತಲಪಾಡಿ, 44 ಕಿ.ಮೀ ದೂರದ ಹೆಜಮಾಡಿಯಲ್ಲಿ ಎಳೆಂಟು ವರ್ಷಗಳ ಈಚೆಗೆ ಹೊಸ ಟೋಲ್ ಸಂಗ್ರಹ ಕೇಂದ್ರಗಳು ಕಾರ್ಯನಿರ್ವಹಿಸತೊಡಗಿವೆ. ಇದು ಎರಡು ಟೋಲ್ ಗೇಟ್ ಗಳ ನಡುವೆ ಇರಬೇಕಾದ ಕನಿಷ್ಟ ಅಂತರವಾದ 60 ಕಿ ಮೀ ನಿಯಮದ ನೇರ ಉಲ್ಲಂಘನೆ ಆಗಿದೆ. ಇಷ್ಟಲ್ಲದೆ, ಈಗ ಬ್ರಹ್ಮರಕೂಟ್ಟು ಟೋಲ್ ಗೇಟ್ ನಿಂದ ಬೆಂಗಳೂರು ಕಡೆಗೆ 31 ಕಿ ಮೀ ದೂರದ ಉಪ್ಪಿನಂಗಡಿಯ ವಳಾಲು ಎಂಬಲ್ಲಿ ಹಾಗೂ ಚಿಕ್ಕಮಗಳೂರು ಕಡೆಗಿನ ಹೆದ್ದಾರಿಯಲ್ಲಿ ಬೆಳ್ತಂಗಡಿ ತಾಲೂಕಿನ ಪಣಕಜೆ ಎಂಬಲ್ಲಿ 28 ಕಿ ಮೀ ದೂರದಲ್ಲಿ, ಸಾಣೂರು ಬಿಕರ್ನಕಟ್ಟೆ ಹೆದ್ದಾರಿಯಲ್ಲಿ ಗಂಜಿಮಠ ಎಂಬಲ್ಲಿ 32 ಕೀ ಮೀ ದೂರದಲ್ಲಿ ಹೀಗೆ ಹೊಸದಾಗಿ ಮೂರು ಟೋಲ್ ಸಂಗ್ರಹ ಕೇಂದ್ರಗಳು ನಿರ್ಮಾಣ ಹಂತದಲ್ಲಿದೆ. ಇದೆಲ್ಲವೂ ಅಂತರದ ನಿಯಮಗಳ ಉಲ್ಲಂಘನೆ ಮಾತ್ರ ಅಲ್ಲದೆ, ಈ ಭಾಗದಲ್ಲಿ ಹೆದ್ದಾರಿ ಪ್ರಯಾಣವೆ ತೀರಾ ದುಬಾರಿಯಾಗಿ ಅಸಹನೀಯ ಸಂದರ್ಭ ಸೃಷ್ಟಿಯಾಗಲಿದೆ. ಇಂತಹ ಸಂದರ್ಭದಲ್ಲಿ ಬ್ರಹ್ಮರಕೊಟ್ಟು ಟೋಲ್ ಗೇಟ್ ನಲ್ಲಿ ಸುಂಕ ಸಂಗ್ರಹ ಮುಂದುವರಿಸುವುದು ಯಾವುದೇ ಕಾರಣಕ್ಕೂ ಸಮರ್ಥನೀಯ ಅಲ್ಲ ಎಂದು ಹೇಳಿದೆ.

ನಿಯಮಗಳನ್ನು ಉಲ್ಲಂಘಿಸಿ ಜಿಲ್ಲೆಯ ಹೆದ್ದಾರಿಗಳಲ್ಲಿ ಹಲವಾರು ಟೋಲ್ ಗೇಟ್ ಗಳನ್ನು ಸ್ಥಾಪಿಸುತ್ತಿರುವುದು ಹೆದ್ದಾರಿ ಬಳಕೆದಾರರಲ್ಲಿ ತೀವ್ರ ಅತೃಪ್ತಿ, ಆಕ್ಷೇಪಗಳಿಗೆ ಕಾರಣವಾಗುತ್ತಿದೆ ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪುನ‌ರ್ ಪರಿಶೀಲನೆ ನಡೆಸಬೇಕು. ನಿಯಮಗಳನ್ನು ನ್ಯಾಯಯುತವಾಗಿ ಅನುಷ್ಠಾನಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ತೀವ್ರ ವಾಹನ ದಟ್ಟಣೆಯ ಈ ರಸ್ತೆಯಲ್ಲಿ ಅಗಾಧ ಮೊತ್ತದ ಹಣ ಮರು ಸಂಗ್ರಹ ಆಗಿರುವುದು ಸೇರಿದಂತೆ ಯಾವುದೇ ಆಯಾಮದಲ್ಲಿ ನೋಡಿದರೂ ಬ್ರಹ್ಮರಕೂಟ್ಟು ಟೋಲ್ ಗೇಟ್ ತೆರವುಗೊಳಿಸುವುದು ನ್ಯಾಯಯುತವಾಗಿದೆ. ಈ ಹಿನ್ನಲೆಯಲ್ಲಿ ತಕ್ಷಣದಿಂದಲೆ ಬ್ರಹ್ಮರಕೂಟ್ಟು ಟೋಲ್ ಗೇಟ್ ಮುಚ್ಚಲು ಕ್ರಮ ಜರುಗಿಸಬೇಕು ಎಂಬ ಬೇಡಿಕೆಯನ್ನು ಸಾಮೂಹಿಕ ಧರಣಿಯ ಮೂಲಕ ನಿಮ್ಮ ಮುಂದೆ ಇಡುತ್ತಿದ್ದೇವೆ. ನಮ್ಮ ಬೇಡಿಕೆಯನ್ನು ಈಡೇರಿಸಬೇಕು ಎಂದು ವಿನಂತಿಸುತ್ತಿದ್ದೇವೆ. ಬ್ರಹ್ಮರಕೂಟ್ಟು ಟೋಲ್ ಗೇಟ್ ಮುಚ್ಚಲು ತೀರ್ಮಾನಿನದಿದ್ದಲ್ಲಿ ಮುಂದಕ್ಕೆ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಈ ಮೂಲಕ ನಿಮ್ಮ ಗಮನಕ್ಕೆ ತರುತ್ತಿದ್ದೇವೆ ಎಂದು ಮನವಿಯಲ್ಲಿ ಹೇಳಲಾಗಿದೆ.

ಇದು ಸುಲಿಗೆಯ ಕೇಂದ್ರವಾಗಿದೆ: ರಮಾನಾಥ ರೈ

ಇದು ಸುಲಿಗೆಯ ಕೇಂದ್ರವಾದ ಟೋಲ್ ಗೇಟ್ ಆಗಿದೆ ಎಂದು ಅಭಿಪ್ರಾಯಪಟ್ಟಿರುವ ಮಾಜಿ ಸಚಿವ ಬಿ.ರಮಾನಾಥ ರೈ, ಕಾನೂನುಬಾಹಿರವಾಗಿ ಇದನ್ನು ಕಾರ್ಯಾಚರಿಸುತ್ತಿದ್ದಾರೆ. ಬ್ರಹ್ಮರಕೂಟ್ಲು ಟೋಲ್ ಗೇಟ್ ಅನ್ನು ತೆರವುಮಾಡಬೇಕಾದದ್ದು ನ್ಯಾಯಯುತವಾಗಿದೆ. ನಮ್ಮ ಹೋರಾಟ ಪೂರ್ಣ ಪ್ರಮಾಣದಲ್ಲಿ ನ್ಯಾಯಯುತವಾಗಿದೆ ಎಂದರು.

ಬ್ರಹ್ಮರಕೂಟ್ಲು ಟೋಲ್ ತೆರವು ಸಮಿತಿ ಸಂಚಾಲಕ ಹಾಗೂ ಸಮಾನ ಮನಸ್ಕ ಸಮನ್ವಯ ಸಂಘಟನೆಯ ಅಧ್ಯಕ್ಷ ಮೋಹನ್ ಕುಮಾರ್ ಶೆಟ್ಟಿ ಮಾತನಾಡಿ, ಜನರಿಗೆ ಅವ್ಯವಸ್ಥೆಯಿಂದ ರೋಸಿಹೋಗಿದೆ, ಟೋಲ್ ಗೇಟ್ ಗೆ ಯಾವ ಸವಲತ್ತುಗಳು ಬೇಕೋ ಅವುಗಳು ಇಲ್ಲ. ಜನರ ಒತ್ತಡ ಇರುವ ಕಾರಣ ಪ್ರತಿಭಟನೆಯನ್ನು ಮಾಡುತ್ತಿದ್ದೇವೆ. ಸಾರ್ವಜನಿಕರಿಗೆ ನ್ಯಾಯ ದೊರಕಿಸಿಕೊಡಬೇಕು, ಟೋಲ್ ತೆರವುಗೊಳಿಸಬೇಕು ಎಂದರು.

ನಾವು ಹೋರಾಟದಲ್ಲಿ ಯಾರನ್ನೂ ಬೈಯುವುದಿಲ್ಲ, ಖಂಡಿತಾ ನಾವು ಹೋರಾಟದಲ್ಲಿ ಗೆಲ್ಲುತ್ತೇವೆ. ಬ್ರಹ್ಮರಕೂಟ್ಲು ಟೋಲ್ ತೆರವು ಮಾಡಿಯೇ ಮಾಡುತ್ತೇವೆ ಎಂದು ಮುಖಂಡರಾದ ಮುನೀರ್ ಕಾಟಿಪಳ್ಳ ಹೇಳಿದರು.ಪ್ರತಿಭಟನೆಯಲ್ಲಿ ಎಂ.ಜಿ.ಹೆಗಡೆ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಶೇಖರ್, ಬೇಬಿ ಕುಂದರ್, ಸುಹೈಲ್ ಕಂದಕ್, ಮೋಹನ್ ಶೆಟ್ಟಿ, ಮಮತಾ ಗಟ್ಟಿ, ಪಿಯೂಸ್ ಎಲ್. ರೋಡ್ರಿಗಸ್, ಬಿ.ಎಂ. ಅಬ್ಬಾಸ್ ಆಲಿ ಬೋಳಂತೂರು, ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್, ಸುದೀಪ್ ಕುಮಾರ್ ಶೆಟ್ಟಿ, ಸುರೇಶ್ ಕುಮಾರ್, ಧರಣೇಂದ್ರ ಕುಮಾರ್, ಇಸ್ಮಾಯಿಲ್ ಕೆ, ಇಕ್ಬಾಲ್ ಬೆಳ್ಳಾರೆ, ವಿ.ಎಸ್. ಬೇರಿಂಜ, ಶೇಖರ್ ಲಾಯಿಲ, ಬಿ.ಎಂ. ಭಟ್, ಇಕ್ಬಾಲ್ ಐಎಂಆರ್,ಉಮೇಶ್ ಕುಮಾರ್ ವೈ, ಧನರಾಜ್, ಹನೀಫ್ ಖಾನ್ ಕೊಡಾಜೆ, ಅನ್ವರ್ ಸಾದತ್ ಸಹಿತ ಹಲವು ಪಕ್ಷಗಳ ಪ್ರಮುಖರು, ಸಾರ್ವಜನಿಕರು ಉಪಸ್ಥಿತರಿದ್ದರು.

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಬ್ರಹ್ಮರಕೂಟ್ಲು ಟೋಲ್ ಗೇಟ್ ಮುಚ್ಚಿಬಿಡಿ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*