


OPTIC WORLD
ಕೃಷಿಯೊಂದಿಗೆ ಅದಕ್ಕೆ ಸಂಬಂಧಿಸಿದಂತೆ ಉದ್ದಿಮೆಗಳನ್ನು ಮಾಡುವುದರ ಮೂಲಕ ಆರ್ಥಿಕವಾಗಿ ಬೆಳೆಗಾರ ಯಶಸ್ಸು ಸಾಧಿಸಲು ಸಾಧ್ಯ . ಈ ನಿಟ್ಟಿನಲ್ಲಿ ಕೃಷಿಕ ಪ್ರಯತ್ನಿಸಬೇಕಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಕೃಷಿ ಇಲಾಖೆ ವತಿಯಿಂದ ಇಲಾಖಾ ಸೌಲಭ್ಯಗಳ ವಿತರಣೆ, ಇಲಾಖಾ ಸೌಲಭ್ಯ ಮಾಹಿತಿ, ಪಿ.ಆರ್. ಬೆಳೆ ಸಮೀಕ್ಷೆ ತರಬೇತಿ ಕಾರ್ಯಕ್ರಮ ಹಾಗೂ 2025-26ನೇ ಸಾಲಿನ ರಾಷ್ಟ್ರೀಯ ಕೃಷಿ ವಿಸ್ತರಣೆ ಉಪಅಭಿಯಾನ ಆತ್ಮ ಯೋಜನೆಯಡಿ ಕಿಸಾನ್ ಗೋಷ್ಠಿಯನ್ನು ಬಂಟ್ವಾಳದ ಬಿ.ಸಿ.ರೋಡಿನಲ್ಲಿರುವ ಅಂಬೇಡ್ಕರ್ ಭವನದಲ್ಲಿ ಅವರು ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿಕರು ಆರ್ಥಿಕವಾಗಿ ಬಲಿಷ್ಠರಾಗಬೇಕು, ಬಂಟ್ವಾಳ ತಾಲೂಕಿನಲ್ಲಿ ಕೃಷಿಕರ ಸಂಖ್ಯೆ ಜಾಸ್ತಿ ಇದ್ದು, ಹೆಚ್ಚಿನವರು ಸಣ್ಣ ಹಿಡುವಳಿದಾರರು ಹೀಗಾಗಿ ಸಾಂಪ್ರದಾಯಿಕ ಕೃಷಿಯ ಜೊತೆಗೆ ಪೂರಕ ವ್ಯವಹಾರಗಳನ್ನು ಮಾಡುವ ಮೂಲಕ ಆರ್ಥಿಕವಾಗಿ ಸದೃಢನಾಗಬೇಕಾಗಿದೆ ಎಂದು ಶಾಸಕರು ಹೇಳಿದರು.
ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ, ಮಣ್ಣಿನ ಫಲವತ್ತತೆಗೆ ತಕ್ಕಂತೆ ಕೃಷಿ ಚಟುವಟಿಕೆಗಳನ್ನು ಕೈಗೊಂಡರೆ ಯಶಸ್ಸು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭ ವಿವೇಚನಾತ್ಮಕ ಕೀಟನಾಶಕಗಳ ಬಳಕೆ ಹಾಗು ಬೆಳೆಗಳಲ್ಲಿ ಶೇಷಾಂಶ ತಗ್ಗಿಸಲು ಅಗತ್ಯ ಕ್ರಮಗಳ ಕುರಿತು ತರಬೇತಿ ಕಾರ್ಯಕ್ರಮ, ಖಾಸಗಿ ನಿವಾಸಿಗಳಿಗೆ ಬೆಳೆ ಸಮೀಕ್ಷೆ ಎಪಿಪಿ ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು. ಆತ್ಮ ಯೋಜನೆಯಡಿ ವಿಶೇಷ ಸಾಧನೆ ಮಾಡಿದ ಕೃಷಿಕರಿಗೆ ಸನ್ಮಾನ, ಸವಲತ್ತು ವಿತರಣೆ ನಡೆಯಿತು.
ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಜೋ ಪ್ರದೀಪ್ ಡಿಸೋಜ, ಸಿಪಿಸಿಆರ್ ಐ ಸಂಸ್ಥೆ ವಿಜ್ಞಾನಿ ಡಾ. ಮಧು, ಕೃಷಿ ಇಲಾಖೆಯ ಉಪನಿರ್ದೇಶಕಿ ಕುಮುದಾ, ಬಂಟ್ವಾಳ ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ನಂದನ್ ಶೆಣೈ ಉಪಸ್ಥಿತರಿದ್ದರು. ಪ್ರಾಸ್ತಾವಿಕವಾಗಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ವೀಣಾ ಆರ್. ಶೆಟ್ಟಿ ಮಾತನಾಡಿ, ಸ್ವಾಗತಿಸಿದರು. ಕಡೇಶಿವಾಲಯ ಪಿಡಿಒ ಸುನಿಲ್ ಕಾರ್ಯಕ್ರಮ ನಿರ್ವಹಿಸಿದರು. ಕೃಷಿ ಪ್ರಶಸ್ತಿ ವಿಜೇತರ ಪಟ್ಟಿಯನ್ನು ದೀಕ್ಷಾ ವಾಚಿಸಿದರು. ಕಿಟ್ ವಿತರಣೆ ಫಲಾನುಭವಿಗಳ ಪಟ್ಟಿಯನ್ನು ಹಣಮಂತ ಕಾಳಗಿ, ವಿರೂಪಾಕ್ಷಿ ಹಡಪದ ವಾಚಿಸಿದರು. ತಾಲೂಕು ತಾಂತ್ರಿಕ ವ್ಯವಸ್ಥಾಪಕಿ ದೀಕ್ಷಾ ಪಿ.ಸಿ. ವಂದಿಸಿದರು.


Be the first to comment on "Bantwal: ಆರ್ಥಿಕ ಯಶಸ್ಸು ಕಾಣಲು ಕೃಷಿ ಸಂಬಂಧಿತ ಚಟುವಟಿಕೆಯಲ್ಲಿ ತೊಡಗಿಸಿ: ರಾಜೇಶ್ ನಾಯ್ಕ್"