POSITIVE STORY: ಪಕ್ಷಿಗಳಿಗೆ ಗೂಡು ಕಟ್ಟುವ ಮೂಲಕ ಜಾಗೃತಿ | ಪರಿಸರ ಸಂರಕ್ಷಣೆಗೆ ಬದುಕು ಮುಡಿಪಾಗಿಟ್ಟ ನಿತ್ಯಾನಂದ ಶೆಟ್ಟಿ ದಂಪತಿ

ಪಕ್ಷಿಗಳ ಬಗ್ಗೆ ಅತೀವ ಪ್ರೀತಿ ಹೊಂದಿರುವ ಈ ದಂಪತಿ, ಪರಿಸರ ಸಂರಕ್ಷಣೆಗೆ ಪಣ ತೊಟ್ಟಿದ್ದಾರೆ. ಬಂಟ್ವಾಳ ತಾಲೂಕಿನ ಎಲಿಯನಡುಗೋಡಿನ ನಿತ್ಯಾನಂದ ಶೆಟ್ಟಿ ಮತ್ತು ರಮ್ಯ ನಿತ್ಯಾನಂದ ಶೆಟ್ಟಿ ಪಕ್ಷಿಗಳಿಗೆ ಗೂಡು ನಿರ್ಮಿಸಿಕೊಟ್ಟು ಹಂಚುವುದಷ್ಟೇ ಅಲ್ಲ, ಶಾಲೆಗಳಿಗೆ ತೆರಳಿ ಈ ಕುರಿತು ಪಾಠ ಮಾಡುತ್ತಾರೆ. ಇದುವರೆಗೆ 300ಕ್ಕೂ ಅಧಿಕ ಶಾಲೆಗಳಲ್ಲಿ ನಿತ್ಯಾನಂದ ಶೆಟ್ಟಿ ದಂಪತಿ ಪಕ್ಷಿಗಳ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಿದ್ದಾರೆ.

ಜಾಹೀರಾತು

ಈ ಹಿಂದೆ ತಮ್ಮ ಮನೆಯ ಅಂಗಳದಲ್ಲಿ ನಿರ್ಮಿಸಿದ್ದ ಗೂಡಿನಿಂದಾಗಿ ಪಕ್ಷಿಗಳಿಗೆ ಸಾಕಷ್ಟು ನೆರವಾಗಿತ್ತು. ಅದೇ ಸ್ಪೂರ್ತಿಯಿಂದ ಈ ದಂಪತಿ ಇದೀಗ ಪರಿಸರದಲ್ಲೂ ಪಕ್ಷಿಗಳಿಗಾಗಿ ಹಲವು ಬಗೆಯ ಗೂಡುಗಳನ್ನು ನಿರ್ಮಿಸುತ್ತಿದ್ದಾರೆ.

Nityananda Shetty and Ramya Nityananda Shetty from Elianadugodi of Bantwal Taluk, Daksina Kannada, Karnataka not only build nests for birds but also visit schools to teach about this. So far, the couple has created awareness about bird conservation in over 300 schools.

ಗುಬ್ಬಚ್ಚಿಗೂಡು ಕರ್ನಾಟಕ ಯಾತ್ರೆ

ಅಮ್ಮನ ಸ್ಪೂರ್ತಿಯಿಂದ ಬಾಲ್ಯದಿಂದಲೇ ಪಕ್ಷಿ ಸಂರಕ್ಷಣೆ ಕಡೆ ಒಲವು ತೋರಿರುವ ನಿತ್ಯಾನಂದ ಶೆಟ್ಟಿ ತನ್ನ  2 ಎಕರೆ ಜಾಗವನ್ನು ಪಕ್ಷಿಗಳ ಕಲರವಕ್ಕೆ ಅನುಕೂಲ ಮಾಡಿ ಆ ಜಾಗದಲ್ಲಿ ಪಕ್ಷಿಗಳಿಗೆ ವಿಭಿನ್ನ ಮನೆಗಳನ್ನು ನಿರ್ಮಾಣ ಮಾಡಿ, ಬೇಸಿಗೆಯಲ್ಲಿ ನೀರು ಮತ್ತು ಆಹಾರದ ವ್ಯವಸ್ಥೆಯನ್ನು ಮಾಡಿದರು. ಮದುವೆ ಸಮಯದಲ್ಲಿ ಗಿಡಗಳನ್ನು ನೀಡಿದ್ದು, ಮಡದಿಯ ಸೀಮಂತದಲ್ಲಿ ಹಸಿರು ಶ್ರೀಮಂತ ಮಾಡಿ ಬಂದ ಅತಿಥಿಗಳಿಗೆ ಗಿಡ ನೀಡಿದ್ದು, ಮಗುವಿನ ನಾಮಕರಣದಲ್ಲಿ ಹಸಿರು ಕರಣದ ಪಣ ತೊಟ್ಟು ಗಿಡ ನೀಡಿ ಆಹ್ವಾನ ನೀಡಿದ್ದು, ಅಪ್ಪ ಅಮ್ಮ ವಿಧಿವಶರಾದಾಗ ವೈಕುಂಠ ಸಮಾರಾಧನೆಯಲ್ಲಿ ಹಸಿರು ಆರಾಧನೆ ಮಾಡಿ ಅಪ್ಪ ಅಮ್ಮನ ಹೆಸರಲ್ಲಿ ಗಿಡ ನೆಟ್ಟು ಪಕ್ಷಿ ಸಂಕುಲಗಳ ಉಳಿವಿಗೆ ಮಾಡುತ್ತಿರುವ ಕಾರ್ಯ ವಿಭಿನ್ನ. ಕರ್ನಾಟಕದಲ್ಲಿ ಮೊತ್ತ ಮೊದಲ ಬಾರಿಗೆ ಬಿದಿರಿನ ಕೃತಕ ಗೂಡುಗಳನ್ನು ತಯಾರಿಸಿ ಆಸಕ್ತರಿಗೆ ಉಚಿತವಾಗಿ ನೀಡಿ 1037 ಮನೆಗಳಿಗೆ ಪಕ್ಷಿಗಳಿಗೆ ನೀರಿಡಲು ಮಣ್ಣಿನ ಪಾತ್ರೆಗಳನ್ನು ಉಚಿತವಾಗಿ ನೀಡಿರುತ್ತಾರೆ. ಪಯಣದ ಜೊತೆಗೆ ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನವನ್ನು ಕರಪತ್ರದ ಮೂಲಕ ಮಾಡಿ ಗಮನ ಸೆಳೆದಿದ್ದಾರೆ. ಪ್ರಸಕ್ತ ಗುಬ್ಬಚ್ಚಿಗೂಡು ಕರ್ನಾಟಕ ಯಾತ್ರೆಯನ್ನು ಆರಂಭಿಸಿರುತ್ತಾರೆ.

ನಿತ್ಯಾನಂದ ಶೆಟ್ಟಿ ಅವರ ಕುರಿತು:

ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ದಕ್ಷಿಣ ಕನ್ನಡದ ನಿವಾಸಿ ನಿತ್ಯಾನಂದ ಶೆಟ್ಟಿ ಮತ್ತು ಅವರ ಪತ್ನಿ ಎಂ.ಕಾಂ ಪದವೀಧರೆ ರಮ್ಯಾ ಅವರು ಪಕ್ಷಿಗಳಿಗಾಗಿ ಸುರಕ್ಷಿತ ಗೂಡುಗಳನ್ನು ಒದಗಿಸುತ್ತಿದ್ದಾರೆ. ಗುಬ್ಬಚ್ಚಿ ಗೂಡು ಅಭಿಯಾನದ  ಸಂಸ್ಥಾಪಕರಾದ ನಿತ್ಯಾನಂದ ಶೆಟ್ಟಿ ತಮ್ಮ ಈ ನಿಸ್ವಾರ್ಥ ಕಾರ್ಯದ ಕುರಿತು ಮಾತನಾಡಿ, ‘ಪಕ್ಷಿಗಳನ್ನು ಸಂರಕ್ಷಿಸುವ ಧ್ಯೇಯವಾಕ್ಯದೊಂದಿಗೆ ನಾನು ಈ ವೇದಿಕೆಯನ್ನು ಆರಂಭಿಸಿದೆ. ನನ್ನ ಈ ಕಾರ್ಯಕ್ಕೆ ನನ್ನ ಮಡದಿ ಕೂಡ ಸಾಥ್ ನೀಡುತ್ತಿದ್ದಾರೆ. ಪಕ್ಷಿಗಳಿಗೆ ಮರ  ಮತ್ತು ಬಿದಿರು ಮತ್ತು ಮಣ್ಣಿನ ಮಡಕೆಗಳಿಂದ ಮಾಡಿದ ಗೂಡುಗಳನ್ನು ನಿರ್ಮಿಸುತ್ತಿದ್ದೇವೆ. ಅಲ್ಲದೆ ತಮ್ಮ ಜೀವಿತಾವಧಿವರೆಗೂ ಈ ಕಾರ್ಯ ಮಾಡುತ್ತೇವೆ ಎಂದು ಹೇಳಿದರು.

ತೋಟದಲ್ಲೂ ಪಕ್ಷಿಗಳಿಗೆ ಆದ್ಯತೆ:

ಜೀವನೋಪಾಯಕ್ಕೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಈ ರೈತ ದಂಪತಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ  ತಾಲೂಕಿನ ಎಲಿಯನಾಡುಗೋಡು ಎಂಬಲ್ಲಿ ಎರಡು ಎಕರೆ ಭೂಮಿಯಲ್ಲಿ ಚಿಕ್ಕು, ಪೇರಲೆ, ಬಾಳೆಹಣ್ಣು ಮತ್ತು ಹಲಸಿನಂತಹ ವಿವಿಧ ಹಣ್ಣುಗಳನ್ನು ಹೊಂದಿರುವ ಮರಗಳನ್ನು ನೆಡುವ ಮೂಲಕ ತಮ್ಮದೇ ತೋಟದಲ್ಲಿ ಪಕ್ಷಿಗಳಿಗೆ ಸ್ವರ್ಗವನ್ನು ಸೃಷ್ಟಿಸಿದ್ದಾರೆ.

ಅಳಿವಿನಂಚಿನಲ್ಲಿರುವ ಪಕ್ಷಿಸಂತತಿಯ ಬಗ್ಗೆ ಸದಾ ಚಿಂತಿಸುವ ಈ ದಂಪತಿ ಮನೆಯ 2 ಎಕರೆ ಜಾಗದಲ್ಲಿ ‘ಗುಬ್ಬಚ್ಚಿಗೂಡು’ ಎಂಬ ಹೆಸರಿನಲ್ಲಿ ಪಕ್ಷಿಗಳಿಗೆ ಆವಾಸಸ್ಥಾನ ಮಾಡಿದ್ದಾರೆ. ಪ್ರತಿದಿನ ಹತ್ತಾರು ಜಾತಿಯ ನೂರಾರು ಪಕ್ಷಿಗಳು ಗುಬ್ಬಚ್ಚಿಗೂಡಿಗೆ ಭೇಟಿ ನೀಡುತ್ತವೆ. ಬೇಸಿಗೆ ಕಾಲದಲ್ಲಿ ಆಹಾರ ಕೊರತೆಯಿಂದ  ವಲಸೆ ಹೋಗುವ ಪಕ್ಷಿಗಳಿಗೆ ಇವರು ಆಪತ್ಭಾಂದವರು.  ಶೆಟ್ಟಿ ಅವರ ಮನೆಗೆ ಭೇಟಿ ನೀಡಿದರೆ ಮೊದಲು ಅವರ ತೋಟದಲ್ಲಿರುವ ಈ ಹಕ್ಕಿಗಳ ಚಿಲಿಪಿಲಿ ಸದ್ದು ಸ್ವಾಗತ ಕೋರುತ್ತವೆ.

ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ’ ಎಂಬ ಸಂದೇಶದೊಂದಿಗೆ ರಾಜ್ಯದ 313ಕ್ಕೂ ಅಧಿಕ ಶಾಲೆಗಳಿಗೆ ಭೇಟಿ ನೀಡಿ ಉಚಿತವಾಗಿ ಪಕ್ಷಿಗಳ ಕುರಿತು ಜಾಗೃತಿ ಮೂಡಿಸಿದ್ದಾರೆ. ಅಲ್ಲದೆ, ಪಕ್ಷಿಗಳಿಗೆ ನೀರು, ಆಹಾರ ಇಡಲು ಮಣ್ಣಿನ ಪಾತ್ರೆಗಳನ್ನೂ ಕೂಡ ನೀಡಿದ್ದಾರೆ. ಇದಲ್ಲದೆ ಮನೆ-ಮನಗಳಲ್ಲಿ  ಗುಬ್ಬಚ್ಚಿಗೂಡು’ ಅಭಿಯಾನದಲ್ಲಿ 600ಕ್ಕೂ ಅಧಿಕ ಮನೆಗಳಿಗೆ ಮಣ್ಣಿನ ಪಾತ್ರೆಗಳನ್ನು ಉಚಿತವಾಗಿ ನೀಡಿದ್ದಾರೆ. ಪ್ರತಿ ಭಾನುವಾರ ಒಂದೊಂದು ಹಳ್ಳಿಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಜಮ್ಮು ಕಾಶ್ಮೀರ, ಪಂಜಾಬ್‌, ಉತ್ತರಾಖಂಡ, ದೆಹಲಿ ಮುಂತಾದ ರಾಜ್ಯಗಳಲ್ಲಿ ಸಂಚರಿಸಿ ಪಕ್ಷಿ ಉಳಿವಿನ ಬಗ್ಗೆ  ಸಾರ್ವಜನಿಕರಿಗೆ ಅರಿವು ನೀಡುತ್ತಿದ್ದಾರೆ.

ನಮ್ಮಂತೆ ಪಕ್ಷಿಗಳೂ ಜೀವಿಗಳಲ್ಲವೇ?

ಪಕ್ಷಿಗಳು ಸಹ ಹಸಿವು ಮತ್ತು ಬಾಯಾರಿಕೆಯನ್ನು ಅನುಭವಿಸುತ್ತವೆ. ನಮಗೆ ಆಹಾರ ಮತ್ತು ನೀರು ಲಭ್ಯವಿಲ್ಲದಿದ್ದರೆ ನಾವು ಎಷ್ಟು ಅಸಹಾಯಕರಾಗುತ್ತೇವೆ. ಹಾಗೆಯೇ ಪಕ್ಷಿಗಳೂ ಆಗುತ್ತವೆ ಎಂಬ ಅರಿವನ್ನು ಅವರು ಮೂಡಿಸುತ್ತಾರೆ. ಕಳೆದ ಒಂಭತ್ತು ವರ್ಷಗಳಲ್ಲಿ, ದಂಪತಿಗಳು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ನೂರಾರು ನಿವಾಸಿಗಳಿಗೆ 1,000 ಕ್ಕೂ ಹೆಚ್ಚು ಗೂಡುಗಳನ್ನು ವಿತರಿಸಿದ್ದಾರೆ. ಶಾಲೆಗಳು ಮತ್ತು ಹಳ್ಳಿಗಳಲ್ಲಿ ಪಕ್ಷಿಗಳ ಸಂರಕ್ಷಣೆಯ ಮಹತ್ವದ ಕುರಿತು ನೂರಾರು ಕಾರ್ಯಕ್ರಮ ನೀಡಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ತಮ್ಮ ಜಾಗೃತಿ ಅಭಿಯಾನದ ಕುರಿತು ಮಾಹಿತಿ ಸಾರುವ ಮೂಲಕ ಮತ್ತಷ್ಟು ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಈ ದಂಪತಿಗಳು ನಿಯಮಿತವಾಗಿ ಯೂಟ್ಯೂಬ್‌ನಲ್ಲಿ ವೀಡಿಯೊಗಳನ್ನು ಅಪ್‌ಲೋಡ್ ಮಾಡುತ್ತಾರೆ. ಪಕ್ಷಿಗಳನ್ನು ಸಂರಕ್ಷಿಸುವ ಮಹತ್ವದ ಬಗ್ಗೆ  ಜನರಿಗೆ ಶಿಕ್ಷಣ ನೀಡುತ್ತಾರೆ. ಯಾರಾದರೂ ತಮ್ಮ ಮನೆಯ ಸುತ್ತ ಗೂಡು ಇಡಲು ಮುಂದೆ ಬಂದರೆ ನಮಗೆ ತುಂಬಾ ಸಂತೋಷವಾಗುತ್ತದೆ. ಎಂದು ಶೆಟ್ಟಿ ಹೇಳುತ್ತಾರೆ.  ಇನ್ನು ಶೆಟ್ಟಿ ಅವರು ತಮ್ಮ ಈ ಕಾರ್ಯಕ್ಕಾಗಿ ಸ್ನೇಹಿತರು ಮತ್ತು ಸಂಬಂಧಿಕರಿಂದ ಬಿದಿರನ್ನು ಪಡೆಯುತ್ತಾರೆ, ಅವರು ಸ್ಥಳೀಯ ಮಾರುಕಟ್ಟೆಯಿಂದ ಮಣ್ಣಿನ ಮಡಕೆಗಳು ಮತ್ತು ಮರವನ್ನು ಖರೀದಿಸುತ್ತಾರೆ.

ಪಕ್ಷಿಗಳನ್ನು ಆಕರ್ಷಿಸಲು ಗೂಡುಗಳನ್ನು ಇರಿಸಲು ಸೂಕ್ತ ಸ್ಥಳವನ್ನು ಪತ್ತೆ ಮಾಡಲು ತಮ್ಮದೇ ಆದ ವಿಶಿಷ್ಠ ತಂತ್ರ ಬಳಕೆ ಮಾಡುತ್ತಾರೆ. ಬೆಕ್ಕುಗಳಂತಹ ಸಾಕುಪ್ರಾಣಿಗಳ ಹಾವಳಿ, ವಾಹನ ಶಬ್ದ ಮತ್ತು ಚಲನೆಯು ಪಕ್ಷಿಗಳಿಗೆ ಗಂಭೀರ ಅಪಾಯವನ್ನುಂಟುಮಾಡುತ್ತದೆ. ಹಾಗಾಗಿ, ಮಳೆಯಿಂದ ಗೂಡುಗಳನ್ನು ರಕ್ಷಿಸಲು  ನಾವು ಶಾಂತ ಮತ್ತು ನೆರಳಿನಲ್ಲಿರುವ ಸ್ಥಳವನ್ನು ಆರಿಸಿಕೊಳ್ಳುತ್ತೇವೆ ಎಂದು ಹೇಳಿದರು. ಬೇಸಿಗೆಯ ತಿಂಗಳುಗಳಲ್ಲಿ ಪಕ್ಷಿಗಳಿಗೆ ನೀರು ಮತ್ತು ಧಾನ್ಯಗಳನ್ನು ನೀಡುವಂತೆ ಅವರು ಜನರಿಗೆ ಮನವಿ ಮಾಡುತ್ತಿದ್ದು, ಮಳೆಗಾಲದಲ್ಲಿ ಸಸಿಗಳನ್ನು ನೆಟ್ಟು ಭವಿಷ್ಯದಲ್ಲಿ ಪಕ್ಷಿಗಳನ್ನು ಆಕರ್ಷಿಸುವ ಕಾರ್ಯಕ್ಕೂ  ಮುಂದಾಗುತ್ತಾರೆ.

ಜಾಹೀರಾತು

About the Author

Harish Mambady
ಕಳೆದ 27 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ. Harish Mambady - who has experience working as a Journalist in various Print and Digital Media in Dakshina Kannada, Udupi (Mangalore, Manipal, and Bantwal) for the past 27 years, He Started digital Media www.bantwalnews.com in 2016.

Be the first to comment on "POSITIVE STORY: ಪಕ್ಷಿಗಳಿಗೆ ಗೂಡು ಕಟ್ಟುವ ಮೂಲಕ ಜಾಗೃತಿ | ಪರಿಸರ ಸಂರಕ್ಷಣೆಗೆ ಬದುಕು ಮುಡಿಪಾಗಿಟ್ಟ ನಿತ್ಯಾನಂದ ಶೆಟ್ಟಿ ದಂಪತಿ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*