ಬಂಟ್ವಾಳ: ಬಂಟ್ವಾಳ ತಾಲೂಕು ಆಡಳಿತ ಸೌಧದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಗುರುವಾರ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ನಡೆಯಿತು.ಕೆಂಪೇಗೌಡರ ಭಾವಚಿತ್ರಕ್ಕೆ ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಹಾಗೂ ತಹಸೀಲ್ದಾರ್ ಡಿ.ಅರ್ಚನಾ ಭಟ್ ಅವರು ಪುಷ್ಪಾರ್ಚನೆಗೈದರು.
ಇದೇ ಸಂದರ್ಭ ಕೃಷಿ ಕ್ಷೇತ್ರದಲ್ಲಿ ತನ್ನ ವೈವಿಧ್ಯಮಯ ವಿಧಾನಗಳ ಮೂಲಕ ಸಾಧನೆ ಮಾಡಿದ ಹಿರಿಯರಾದ ನೀಲಪ್ಪ ಗೌಡ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಕೆಂಪೇಗೌಡರ ಕುರಿತು ಮಾತನಾಡಿದ ನಿವೃತ್ತ ಉಪನ್ಯಾಸಕ ಪದ್ಮಯ್ಯ ಗೌಡ ಪೈಸಾರಿ, ಕೆಂಪೇಗೌಡರು ಮಾದರಿಯಾದ ಸಾಮ್ರಾಜ್ಯವನ್ನು ಬೆಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ನಿರ್ಮಿಸಿದ್ದನ್ನು ನೆನಪಿಸಿದರು. ಅವರು ನಿರ್ಮಿಸಿದ ಬೆಂಗಳೂರು ಈಗ ಜಗತ್ತನ್ನೇ ಸೆಳೆಯುತ್ತಿರುವುದನ್ನು ಗಮನಿಸಬೇಕು ಎಂದರು..
ಬಂಟ್ವಾಳ ತಹಸೀಲ್ದಾರ್ ಡಿ. ಅರ್ಚನಾ ಭಟ್ ಮಾತನಾಡಿ ಕೆಂಪೇಗೌಡರ ದೂರದೃಷ್ಟಿಯಲ್ಲಿ ಸುಸ್ಥಿರತೆ ಇತ್ತು. ಎಲ್ಲ ಜನರಿಗೆ ಬೇಕಾದ ವ್ಯವಸ್ಥೆಯನ್ನು ಕಲ್ಪಿಸಿದರು. ಅವರ ಆಡಳಿತ ವೈಖರಿಯನ್ನು ನಾವೂ ಅಳವಡಿಸಿಕೊಂಡು ಕಾರ್ಯೋನ್ಮುಖರಾಗಬೇಕು ಎಂದು ಸಲಹೆ ನೀಡಿದರು.
ಬುಡಾ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ಇಂದು ವಿಶ್ವಮಾನ್ಯವಾಗಿದೆ ಎಂದರು.
ಈ ಸಂದರ್ಭ ತಾಲೂಕು ಒಕ್ಕಲಿಗ ಯಾನೆ ಗೌಡರ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ, ಮಹಿಳಾ ಘಟಕದ ಅಧ್ಯಕ್ಷೆ ಅನಿತಾಕೃಷ್ಣ, ಬಂಟ್ವಾಳ ಪುರಸಭಾ ಸದಸ್ಯೆ ಮೀನಾಕ್ಷಿ ಗೌಡ, ತಾಲೂಕು ಕಚೇರಿ ಶಿರಸ್ತೇದಾರ್ ಎಂ.ಶ್ರೀನಿಧಿ, ಉಪತಹಸೀಲ್ದಾರ್ ದಿವಾಕರ ಮುಗುಳಿಯ, ನವೀನ್ ಬೆಂಜನಪದವು, ಶಿವಪ್ರಸಾದ್, ರಾಜೇಶ್ ನಾಯ್ಕ್, ಕಂದಾಯ ನಿರೀಕ್ಷಕ ವಿಜಯ್. ಆರ್ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಶುಕುಮಾರ್ ಉಪಸ್ಥಿತರಿದ್ದರು. ಉಪತಹಸೀಲ್ದಾರ್ ನವೀನ್ ಬೆಂಜನಪದವು ಕಾರ್ಯಕ್ರಮ ನಿರ್ವಹಿಸಿದರು. ಜನಾರ್ದನ ವಂದಿಸಿದರು. ತಾಲೂಕು ಕಚೇರಿ ಸಿಬ್ಬಂದಿ, ಒಕ್ಕಲಿಗ ಯಾನೆ ಗೌಡರ ಸಂಘದ ಪೂರ್ವಾಧ್ಯಕ್ಷರು, ಪದಾಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.
Be the first to comment on "Bantwal: ಬಂಟ್ವಾಳ ತಾಲೂಕು ಆಡಳಿತ ಸೌಧದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ"