Mangalore: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಅನುಷ್ಠಾನಗೊಂಡಿರುವ ಮಂಗಳೂರು ತಾಲೂಕು ಮಟ್ಟದ ವಿವಿಧ ಯೋಜನೆಗಳ ಸಮಿತಿ ಸಭೆ ಗ್ರೇಡ್ 2 ತಹಶೀಲ್ದಾರ್ ರಫೀಕ್ ಚೌಧರಿ ಅಧ್ಯಕ್ಷತೆಯಲ್ಲಿ ಶುಕ್ರವಾರ ತಾಲೂಕು ಕಚೇರಿಯಲ್ಲಿ ನಡೆಯಿತು.
ವಿಕಲಚೇತನರ ವಿಶೇಷ ಗುರುತಿನ ಚೀಟಿ ನೊಂದಣಿಗೆ ಬಾಕಿ ಇರುವ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾದ ಪ್ರಕರಣವನ್ನು ಶೀಘ್ರವಾಗಿ ಇತ್ಯರ್ಥಗೊಳಿಸಲು ಅವರು ಸೂಚಿಸಿದರು. ಮಹಿಳೆಯರ ಮತ್ತು ಮಕ್ಕಳ ಮಾರಾಟ ಸಾಗಾಟ, ವರದಕ್ಷಿಣೆ, ಬಾಲ್ಯವಿವಾಹ, ಮಾದಕ ವ್ಯಸನ, ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಕಂಡು ಬಂದರೆ ಪೊಲೀಸ್ ಇಲಾಖೆಯವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಾಹಿತಿ ನೀಡಲು ಅವರು ತಿಳಿಸಿದರು.
ಮಂಗಳೂರು ವ್ಯಾಪ್ತಿಯಲ್ಲಿರುವ ಮಂಗಳಮುಖಿಯರು ಗುರುತು ಚೀಟಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಲು ಅವರು ಸೂಚಿಸಿದರು. ಮಂಗಳಮುಖಿಯರು ಬಾಡಿಗೆ ಮನೆಯಲ್ಲಿ ವಾಸವಿದ್ದು, ಸ್ವಂತ ನಿವೇಶನ ಹೊಂದಿರುವುದಿಲ್ಲ. ನಿವೇಶನ ಮತ್ತು ಉದ್ಯೋಗದ ಬೇಡಿಕೆಯನ್ನು ಸಲ್ಲಿಸಲು ಅವರು ತಿಳಿಸಿದರು.
ಮಂಗಳೂರು (ಗ್ರಾಮಾಂತರ) ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಕೆ.ಕಾರಿಗೆ ಮಾತನಾಡಿ, ಭಾಗ್ಯಲಕ್ಷ್ಮಿ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ 2024-25 ನೇ ಸಾಲಿನಲ್ಲಿ 154 ಅರ್ಹ ಫಲಾನುಭವಿಗಳನ್ನು ಗುರುತಿಸಿ ನೊಂದಾಯಿಸಲಾಗಿದೆ. ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಲ್ಲಿ ಮೊದಲನೇ ಗರ್ಭಿಣಿಯಾದ ತಾಯಂದಿರಿಗೆ ರೂ.5000 ಹಾಗೂ ಎರಡನೇ ಹೆಣ್ಣು ಮಗುವಾಗಿದ್ದಲ್ಲಿ ರೂ.6000 ನೇರವಾಗಿ ಅವರ ಖಾತೆಗೆ ಜಮೆಯಾಗುತ್ತದೆ. ಅರ್ಹ ಫಲಾನುಭವಿಗಳನ್ನು ಗುರುತಿಸಿ ದಾಖಲೆ ಮಾಡಿ ಸೌಲಭ್ಯ ಒದಗಿಸಿರುವ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಮಕ್ಕಳ ರಕ್ಷಣಾ ವ್ಯವಸ್ಥೆಗಳ ಹಾಗೂ ಮಕ್ಕಳ ಸಹಾಯವಾಣಿ 1098 ಕುರಿತು ಸಭೆಗೆ ಮಾಹಿತಿ ನೀಡಲಾಯಿತು. ಸಭೆಯಲ್ಲಿ ಮಹಿಳಾ ಅಭಿವೃದ್ಧಿ ನಿಗಮದ ನಿರೀಕ್ಷಕಿ ಚಂದ್ರಿಕಾ, ಪೋಲಿಸ್ ಅಧಿಕಾರಿ ನವೀನ್, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
Be the first to comment on "Mangalore: ವಿಕಲಚೇತನರ ವಿಶೇಷ ಗುರುತಿನ ಚೀಟಿ ನೋಂದಣಿ ಬಾಕಿ ಇರುವ ಅರ್ಜಿಗಳ ಶೀಘ್ರ ವಿಲೇವಾರಿ: ತಹಸೀಲ್ದಾರ್ ಸೂಚನೆ"