ಸಮಾಜದಲ್ಲಿ ದೊಡ್ಡ ಪಿಡುಗಾಗಿರುವ ಮಾದಕ ದ್ರವ್ಯ ವ್ಯಸನದ ಕುರಿತು ಜನಜಾಗೃತಿ ಮೂಡಿಸುವ ಕಾರ್ಯವನ್ನು ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಕೊಳಕೆ ಸಮುದಾಯ ಭವನದಲ್ಲಿ ಆಯೋಜಿಸಲಾಗಿತ್ತು. ಮುಹಿಯುದ್ದೀನ್ ಜುಮಾ ಮಸೀದಿ ಕೊಳಕೆ ಸುನ್ನಿ ಸ್ಟುಡೆಂಟ್ ಫೆಡರೇಷನ್ ಕೊಳಕೆ ವತಿಯಿಂದ ಇಂದಿನ ಮಕ್ಕಳೇ ಮುಂದಿನ ಜನಾಂಗ ಎಂಬ ಧ್ಯೇಯದೊಂದಿಗೆ ವ್ಯಸನಮುಕ್ತ ಸಮುದಾಯ ಮತ್ತು ಸಮಾಜ ನಿರ್ಮಿಸೋಣ ಎಂಬ ಘೋಷವಾಕ್ಯದ ಜತೆ ನಡೆದ ಕಾರ್ಯಕ್ರಮದಲ್ಲಿ ಡ್ರಗ್ಸ್ ದುಷ್ಪರಿಣಾಮಗಳ ಕುರಿತು ಮಾಹಿತಿಯನ್ನು ನೀಡಲಾಯಿತು.
ಬಂಟ್ವಾಳ ನಗರ ಪೊಲೀಸ್ ಠಾಣೆಯ ನಿರೀಕ್ಷಕರಾದ ಅನಂತ ಪದ್ಮನಾಭ ಕೆ.ವಿ. ಮಾತನಾಡಿ, ಡ್ರಗ್ಸ್ ಸೇವನೆಯಿಂದ ಉಂಟಾಗುವ ಕೆಟ್ಟ ಪರಿಣಾಮಗಳನ್ನು ವಿವರಿಸಿದರು. ಡ್ರಗ್ಸ್ ಮಾರಾಟ ಮಾಡುವ ಹಾಗೂ ಸೇವನೆ ಮಾಡುವ ವ್ಯಕ್ತಿಗಳ ಬಗ್ಗೆ ಪೊಲೀಸ್ ಇಲಾಖೆ ವಿಶೇಷ ನಿಗಾ ವಹಿಸಿದ್ದು, ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪೂರ್ಣ ಸಹಕಾರವನ್ನೂ ನೀಡುತ್ತದೆ ಎಂದರು.
ಮಂಗಳೂರಿನ ಇಂಡಿಯಾನ ಹಾಸ್ಪಿಟಲ್ ವೈದ್ಯರಾದ ಡಾ. ಸಲ್ಫಿ ಮಾತನಾಡಿ, ಮಾದಕ ದ್ರವ್ಯ ಸೇವನೆಯಿಂದ ನಮ್ಮ ದೇಹದ ಮೇಲೆ ಆಗುವ ಹಾನಿಯ ಕುರಿತು ವಿವರ ನೀಡಿದರು.
ಸುನ್ನಿ ಸ್ಟೂಡೆಂಟ್ ಫೆಡರೇಷನ್ ರಾಜ್ಯ ನಾಯಕರಾದ ಸಿನಾನ್ ಸಖಾಫಿ ಅಜಿಲಮೊಗರು ಮಾತನಾಡಿ, ಡ್ರಗ್ಸ್ ವಿಚಾರದಲ್ಲಿ ಮಕ್ಕಳ ಹೆತ್ತವರು, ಪೋಷಕರು ವಿಶೇಷ ನಿಗಾ ವಹಿಸಬೇಕು ಎಂಬ ಸಂದೇಶ ನೀಡಿದರು.ಎಸ್.ಎಸ್.ಎಫ್. ಕೊಳಕೆ ಯುನಿಟ್ ಅಧ್ಯಕ್ಷರಾದ ಮಹಮ್ಮದ್ ಆಫ್ರೀದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮುಹಿಯದ್ದಿನ್ ಜುಮಾ ಮಸೀದಿ ಮುಖ್ಯ ಗುರುಗಳಾದ ಸಾಲಿಂ ಸಆದಿ ಅಲ್ ಅಫ್ಳಲಿ ಉದ್ಘಾಟಿಸಿದರು.ವೇದಿಕೆಯಲ್ಲಿ ಜುಮಾ ಮಸೀದಿ ಅಧ್ಯಕ್ಷ ರಾದ ಸಿದ್ದಿಕ್ ಎಸ್, ಸ್ವಾಗತ ಸಮಿತಿ ಅಧ್ಯಕ್ಷರಾದ ಸುಲೈಮಾನ್ ಬಿ, ಅಬ್ದುಲ್ ರಝಾಕ್ ಸಖಾಫಿ, ಹೈದರ್ ಮದನಿ, ಫಾರೂಕ್ ಅಂಜದಿ, ನಿಝರ್ ಕೊಳಕೆ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಸಜೀಪಮೂಡ, ಹಾಗೂ ಸಜಿಪಮುನ್ನೂರು ತಂತಿ ಪಾಲಕರಾದ ಬಸವರಾಜ್ ಅವರ ನಿಸ್ವಾರ್ಥ ಸೇವೆ ಗುರುತಿಸಿ ಹಾಗೂ ಸಜಿಪಮೂಡ ಪಂಚಾಯತ್ ಸದಸ್ಯರಾದ ಹಮೀದ್ ಕೊಳಕೆ, ಸಿದ್ದಿಕ್ ಕೊಳಕೆ, ಯೋಗೀಶ್ ಬಡಂಗಮಜಲು ಇವರುಗಳನ್ನು ಸನ್ಮಾನಿಸಲಾಯಿತು. ಶಂಸುದ್ದಿನ್ ಸಖಾಫಿ ಸ್ವಾಗತಿಸಿದರು. ಅಫ್ರಿದ್ ವಂದಿಸಿದರು. ಮಲಿಕ್ ಕೊಳಕೆ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಡ್ರಗ್ಸ್ ವಿರುದ್ಧ ಜನಜಾಗೃತಿ ಅಭಿಯಾನ = ವಿವರಗಳು ಇಲ್ಲಿವೆ"