ಮಂಗಳೂರು ನಗರ ಪೊಲೀಸ್ ಹಾಗೂ ಪಶ್ಚಿಮ ವಲಯದ 4 ಜಿಲ್ಲೆಗಳ ಕಾನೂನು ಮತ್ತು ಸುವ್ಯವಸ್ಥೆಯ ಕುರಿತಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು ಪ್ರಗತಿ ಪರಿಶೀಲನಾ ಸಭೆ ನಡೆಸಿ, ಕೆಲವು ಕಟ್ಟುನಿಟ್ಟಿನ ಕ್ರಮ ವಹಿಸಿವಂತೆ ಸೂಚಿಸಿದೆ. ಗೃಹಸಚಿವ ಜಿ.ಪರಮೇಶ್ವರ್ ಈ ಸಂದರ್ಭ ಹಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ.
ಮಾದಕ ವಸ್ತುಗಳ ಜಾಲವನ್ನು ಸಂಪೂರ್ಣವಾಗಿ ಮಟ್ಟ ಹಾಕುವ ನಿಟ್ಟಿನಲ್ಲಿ, ದಂಧೆಕೋರರ ಚಲನವಲನಗಳ ಮೇಲೆ ತೀವ್ರ ನಿಗಾವಹಿಸಿ, ಕಾನೂನು ಕ್ರಮ ಕೈಗೊಳ್ಳಬೇಕು.
ವಾಹನ ಸಂಚಾರ ನಿಯಮ ಉಲ್ಲಂಘನೆ ಹೆಚ್ಚಾಗುತ್ತಿದೆ. 18 ವರ್ಷದೊಳಗಿನ ಮಕ್ಕಳು ವಾಹನ ಚಲಾಯಿಸುತ್ತಿದ್ದು, ಅಪಘಾತಗಳು ಸಂಭವಿಸಿ ಸಾವು ನೋವುಗಳಾಗುತ್ತಿವೆ. ಇದನ್ನು ತಡೆಗಟ್ಟಲು ಅಗತ್ಯ ಕಾರ್ಯಾಚರಣೆ ಮತ್ತು ಜಾಗೃತಿ ಮೂಡಿಸಬೇಕು.
ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಮೇಲೆ ದೌರ್ಜನ್ಯ ಎಸಗಿದ ಆರೋಪಿಗಳು ಕಾನೂನಿಂದ ತಪ್ಪಿಸಿಕೊಳ್ಳಬಾರದು. ನ್ಯಾಯಾಲಯದ ವಿಚಾರಣೆ ವೇಳೆ ಅಗತ್ಯ ಸಾಕ್ಷ್ಯಾದರಗಳನ್ನು ಒದಗಿಸಿ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು. ನೊಂದವರು ಠಾಣೆಗೆ ಬಂದಾಗ ಅವರ ದೂರನ್ನು ಆಲಿಸಿ, ರಕ್ಷಣೆ ನೀಡಬೇಕು ಎಂದು ಸೂಚಿಸಲಾಯಿತು.
ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ.ಸಲೀಂ, ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಸುದೀರ್ ಕುಮಾರ್ ರೆಡ್ಡಿ, ಡಿಸಿಪಿ ಸಿದ್ಧಾರ್ಥ್ ಗೋಯಲ್, ದಕ್ಷಿಣ ಕನ್ನಡ ಪೊಲೀಸ್ ಅಧೀಕ್ಷಕರಾದ ಡಾ. ಅರುಣ್ ಕೆ. ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಿಕ್ರಮ್ ಆಮ್ಟೆ, ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಾರಾಯಣ, ಉಡುಪಿ ಎಸ್‌ಪಿ ಹರಿರಾಮ್ ಶಂಕರ್ ಇದ್ದರು.
Be the first to comment on "ಮಂಗಳೂರಿನಲ್ಲಿ ನಾಲ್ಕು ಜಿಲ್ಲೆಗಳ ಕಾನೂನು ಸುವ್ಯವಸ್ಥೆ ಕುರಿತು ಪ್ರಗತಿ ಪರಿಶೀಲನಾ ಸಭೆ"