ಪಾಣೆಮಂಗಳೂರು ಸೇತುವೆಯಲ್ಲಿ ತಾತ್ಕಾಲಿಕವಾಗಿ ಎಲ್ಲ ವಾಹನಗಳ ಸಂಚಾರಕ್ಕೂ ಬಂದ್ ಮಾಡಿ ತಹಸೀಲ್ದಾರ್ ಆದೇಶ ಹೊರಡಿಸಿದ್ದು, ಗುರುವಾರ ಬಿ.ವಾಸು ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಬಂಟ್ವಾಳ ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ವಿರೋಧಕ್ಕೆ ಕಾರಣವಾಗಿದೆ.
ಪಾಣೆಮಂಗಳೂರು ಅಷ್ಟೇ ಅಲ್ಲ, ಸುತ್ತಮುತ್ತಲಿನ ಪ್ರದೇಶಗಳವರು ಬಿ.ಸಿ.ರೋಡ್, ಬಂಟ್ವಾಳವನ್ನು ಸಂಪರ್ಕಿಸಲು ಸುಲಭದ ದಾರಿಯಾಗಿರುವ ಈ ಸೇತುವೆಯ ದುರಸ್ತಿ, ಸುರಕ್ಷತೆಗೆ ಗಮನ ಹರಿಸಬೇಕು ಎನ್ನುವುದು ಸರಿ, ಆದರೆ ಘನ ವಾಹನ ಸಂಚಾರ ನಿಷೇಧ ಮಾಡುವ ಬದಲು ಎಲ್ಲ ವಾಹನ ಸಂಚಾರಕ್ಕೂ ತಡೆಯೊಡ್ಡಿರುವುದು ಸರಿಯಲ್ಲ, ಪುರಸಭೆಯೂ ತರಾತುರಿಯಲ್ಲಿ ಬ್ಯಾರಿಕೇಟ್ ಅಳವಡಿಸಿ ಆದೇಶ ಪಾಲನೆಗೆ ಹೊರಟದ್ದು ಸರಿಯಲ್ಲ ಎಂದು ಆ ಭಾಗದ ಸದಸ್ಯ ಇದ್ರೀಸ್ ಪಿ.ಜೆ. ಅವರು ಆಕ್ಷೇಪಿಸಿ, ಸಭೆಯಿಂದ ಹೊರನಡೆದರು.
ಆ ಭಾಗದ ಇನ್ನೋರ್ವ ಸದಸ್ಯ ಸಿದ್ಧೀಕ್ ಗುಡ್ಡೆಯಂಗಡಿ ಮಾತನಾಡಿ, ಸೇತುವೆ ದುರಸ್ಥಿಗೊಳಿಸುವಂತೆ ಹಲವು ಬಾರಿ ಒತ್ತಾಯಿಸಿದಾಗಲೂ ಆಗದ ಸ್ಪಂದನೆ, ಇದೀಗ ವಾಹನ ಡಿಕ್ಕಿಯಾಗಿದ್ದಕ್ಕೆ ಎಲ್ಲಾ ವಾಹನಗಳ ಸಂಚಾರವನ್ನೇ ನಿರ್ಬಂಧಿಸಿ ಆದೇಶ ಹೊರಡಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿ, ಈ ಕ್ರಮದಿಂದ ಪಾಣೆಮಂಗಳೂರಿನ ಜನತೆ ಆಕ್ರೋಶಿತರಾಗಿದ್ದಾರೆ. ಸಂಜೆಯೊಳಗೆ ಇದನ್ನು ತೆರವುಗೊಳಿಸಿ ಲಘು ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡದಿದ್ದಲ್ಲಿ, ನಾಗರಿಕರ ಜೊತೆ ತಾನೂ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಹಿರಿಯ ಸದಸ್ಯ ಗೋವಿಂದಪ್ರಭು ಮಾತನಾಡಿ ಸೇತುವೆಯನ್ನು ಸ್ಮಾರಕವಾಗಿ ಉಳಿಸುವ ನಿಟ್ಟಿನಲ್ಲಿಯು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ವೇಳೆ ಮುಖ್ಯಾಧಿಕಾರಿ ನಜೀರ್ ಅಹಮದ್ ಮಾತನಾಡಿ, ಜಿಲ್ಲಾಧಿಕಾರಿ,ತಹಶೀಲ್ದಾರರ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ಪುರಸಭಾಧ್ಯಕ್ಷ ವಾಸುಪೂಜಾರಿ ಲೊರೆಟ್ಟೋ ಸಭಾಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮೊನೀಶ್ ಆಲಿ, ಸದಸ್ಯರಾದ ಹರಿಪ್ರಸಾದ್, ಲುಕ್ಮಾನ್ ಬಂಟ್ವಾಳ, ರಾಮಕೃಷ್ಣ ಆಳ್ವ, ಸಹಿತ ಹಲವರು ಚರ್ಚೆಗಳಲ್ಲಿ ಪಾಲ್ಗೊಂಡರು. ಸಭೆಯಲ್ಲಿ ಹಲವು ಚರ್ಚೆಗಳು ನಡೆದವು.
Be the first to comment on "ಎಲ್ಲ ವಾಹನಗಳನ್ನೂ ಬಂದ್ ಮಾಡಿದರೆ, ಪಾಣೆಮಂಗಳೂರು ಪೇಟೆ ಸಂಪರ್ಕ ಸಮಸ್ಯೆಯಾಗುತ್ತದೆ – ಬಂಟ್ವಾಳ ಪುರಸಭೆ ಸಾಮಾನ್ಯ ಸಭೆಯಲ್ಲಿ ಪಾಣೇರ್ ಸಂಕ ಸಂಚಾರ ನಿಷೇಧ ಕ್ರಮಕ್ಕೆ ವಿರೋಧ"