ಮಕ್ಕಳ ಕೈಯಲ್ಲಿ ಮೊಬೈಲ್: ಆರೋಗ್ಯ ಸಮಸ್ಯೆಯೊಂದೇ ಅಲ್ಲ, ಏನೇನ್ ಪ್ರಾಬ್ಲಂ ಇದೆ ಗೊತ್ತಾ?

IMAGE SOURCE : INTERNET

IMAGE SOURCE: INTERNET

 

ಪ್ರಕರಣ ಒಂದು

ಡೇರ್ ಡೆವಿಲ್. (ಹೆಸರು ಬದಲಾಯಿಸಿದೆ) ಪ್ರತಿಷ್ಠಿತ ಖಾಸಗಿ ಶಾಲೆಯೊಂದರ ಒಂಭತ್ತನೇ ತರಗತಿಯ ಮಕ್ಕಳ ವಾಟ್ಸಾಪ್ ಗ್ರೂಪ್ ಹೆಸರು ಇದು. ಊಟ ಆಯ್ತಾ, ಎಂಬ ಸಂದೇಶಗಳೇ ಹೆಚ್ಚಾಗಿರುವ ಫ್ಯಾಮಿಲಿ ಗ್ರೂಪುಗಳಂತಲ್ಲ. ಊಹೆಗೂ ನಿಲುಕದ ಸಂದೇಶಗಳನ್ನು ಶಾಲೆ, ಶಿಕ್ಷಕರು, ಮನೆಯವರ ಕುರಿತು ಹರಡುತ್ತಾ, ತಮ್ಮದೇ ಕಾಲ್ಪನಿಕ ಲೋಕದಲ್ಲಿ ವಿಹರಿಸುವ ಖತರ್ನಾಕ್ ಗ್ರೂಪ್ ನಲ್ಲಾದ ಜಗಳ ವಿದ್ಯಾರ್ಥಿಯೊಬ್ಬನ ಆಸ್ಪತ್ರೆಗೆ ದಾಖಲಾಗುವಷ್ಟರ ಮಟ್ಟಿಗೂ ಹೋಗಿತ್ತು.

ಪ್ರಕರಣ ಎರಡು

ಸಣ್ಣ ಪಟ್ಟಣದಲ್ಲಿ ಸುಖಜೀವನ ನಡೆಸುತ್ತಿದ್ದ ಅಪ್ಪ, ಅಮ್ಮ. ಮಗನನ್ನು ಪ್ರತಿಷ್ಠಿತ ಶಾಲೆಗೆ ಸೇರಿಸಿದ್ದರು. ಅದೇನಾಯ್ತೋ ಗೊತ್ತಿಲ್ಲ. ಮಧ್ಯರಾತ್ರಿ ಎದ್ದು ನೇರವಾಗಿ ಮನೆಯ ಟೆರೇಸ್ ಕಡೆ ಸಾಗಿದ. ಹಾಗೆಯೇ ಕೆಳಗೆ ಹಾರಿಬಿಟ್ಟ. ಮನೆಯವರು ಏನದು ಸದ್ದು ಎಂದು ನೋಡುವಾಗ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು. ಇಡೀ ದಿನ ಮೊಬೈಲ್ ಒತ್ತುತ್ತಾ ಇದ್ದ ಅವನ ಆ ಮಾಯಾಯಂತ್ರವನ್ನು ಪೊಲೀಸರು ತನಿಖೆ ಮಾಡಿದಾಗ ಡೆತ್ ಗೇಮ್ ಒಂದರ ಭಾಗವಾಗಿ ಈತ ಹಾರಿದ್ದ ಎಂದು ಗೊತ್ತಾಗಿತ್ತು.

ಶೈಕ್ಷಣಿಕ ಪ್ರಗತಿಗೆ ಮಾರಕ:

ಮೊಬೈಲ್ ಮಾಯಾಲೋಕದ ದುಷ್ಪರಿಣಾಮಗಳನ್ನು ಬಿಂಬಿಸುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ನೂರಾರು ಪ್ರಕರಣಗಳಲ್ಲಿ ಉಲ್ಲೇಖಿತ ಎರಡು ಪ್ರಕರಣಗಳು ಎಲ್ಲವನ್ನೂ ಹೇಳುತ್ತವೆ. ಮೊಬೈಲ್ ಡೀಅಡಿಕ್ಷನ್ ಗಾಗಿ ಕೌನ್ಸೆಲಿಂಗ್ ವರೆಗೂ ಹೋಗುವ ಮಟ್ಟಕ್ಕೆ ಸಮಸ್ಯೆ ಗಂಭೀರವಾಗಿದೆ. ಶೈಕ್ಷಣಿಕ ಪ್ರಗತಿಗೂ ಇದು ಮಾರಕ. ಡ್ರಗ್ಸ್ ಸೇವನೆಯಂತೆ ಇದರ ಗೀಳು ವಿಶೇಷವಾಗಿ ಹದಿಹರೆಯದ ಮಕ್ಕಳಲ್ಲಿ ನುಸುಳಿಹೋಗಿದೆ. ಇದಕ್ಕೆ ಕಡಿವಾಣ ಹಾಕಲು ಮಕ್ಕಳ ಪೋಷಕರು, ಶಿಕ್ಷಕರು ಒಟ್ಟಾಗಿ ನಿಯಮ ರೂಪಿಸುವುದು ಅಗತ್ಯ.

ಪೋಷಕರು/ಶಿಕ್ಷಕರು ಏನು ಮಾಡಬೇಕು?

ಪೋಷಕರು ಹಾಗೂ ಶಿಕ್ಷಕರು ಮಕ್ಕಳು ಮೊಬೈಲ್ ಬಳಕೆ ಮಾಡುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರೇನು ಬಳಸುತ್ತಾರೆ ಎಂಬುದನ್ನು ಪತ್ತೆಹಚ್ಚಲು ಸಾಧ್ಯ. ಶಾಲೆಗಳಲ್ಲಿ ಈ ಕುರಿತು ಮಾರ್ಗದರ್ಶನ ನೀಡುವುದು ಮುಖ್ಯ. ಪೋಷಕರೂ ಮಕ್ಕಳೊಂದಿಗೆ ಮುಖತಃ ಮಾತನಾಡುವ ವ್ಯವಸ್ಥೆಯನ್ನು ಮನೆಯಲ್ಲಿ ನಿರ್ಮಿಸುವುದು ಅಗತ್ಯ.

ಮಕ್ಕಳೇ… ಹೀಗೆ ಮಾಡಿರಿ

ದೂರವಾಣಿ ನೋಡಲು ಸಮಯ ನಿಗದಿಪಡಿಸಿ, ಮೊಬೈಲ್ ಹಿಡಿದು ಕೂರಬೇಡಿ ಎಂದು ದೊಡ್ಡವರಿಗೂ ಹೇಳಿ, ಮೊಬೈಲ್ ನಲ್ಲೇ ನೋಟ್ಸ್ ಕಳುಹಿಸುವ ವ್ಯವಸ್ಥೆ ಕಡಿಮೆಗೊಳಿಸಿ, ಹೊರಾಂಗಣದ ಆಟಕ್ಕೆ ಸಮಯ ನಿಗದಿಗೊಳಿಸುವುದು ಕಡ್ಡಾಯವಾಗಿರಲಿ,

ಇದನ್ನು ವರ್ಚುವಲ್ ಆಟಿಸಂ ಅಂತಾರೆ

ಚಿಕ್ಕ ಮಕ್ಕಳು ಮೊಬೈಲ್ ಫೋನ್ ಬಳಕೆಯ ಚಟಕ್ಕೆ ಬಿದ್ದು ಬೆಳೆಸಿಕೊಳ್ಳುವ ಆಟಿಸಂ ಅನ್ನು ಹೋಲುವ ವರ್ತನೆಯ ಸಮಸ್ಯೆಯನ್ನು ವರ್ಚುವಲ್ ಆಟಿಸಂ ಎಂದು ಕರೆಯಲಾಗುತ್ತದೆ ಎಂದು ಹೇಳುತ್ತಾರೆ ಈ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿರುವ ವಿಕಾಸಂ ಸೇವಾ ಫೌಂಡೇಶನ್ ನ ಸಹಸಂಸ್ಥಾಪಕ ಹಾಗೂ ಸಿಇಒ ಗಣೇಶ್ ಭಟ್ ವಾರಣಾಸಿ.

ವರ್ಚುವಲ್ ಆಟಿಸಂನಿಂದಾಗಿ ಮಕ್ಕಳಲ್ಲಿ ಕಂಡುಬರುವ ಸಮಸ್ಯೆಗಳು ಹೀಗಿವೆ  ಇತರರು ಕೊಟ್ಟ ಸೂಚನೆಗಳನ್ನು ಅನುಸರಿಸದೇ ಇರುವುದು, ಅತಿಯಾದ ಸಿಡುಕುತನ , ಆಗಾಗ್ಗೆ ಕೋಪೋದ್ರೇಕಗಳು ಮತ್ತು ಭಾವಾವಿಷ್ಟತೆ, ತೀಕ್ಷ್ಣವಾಗಿ  ಪ್ರತಿಕ್ರಿಯಿಸುವುದು, ಹಠಮಾರಿತನ, ಬದಲಾವಣೆಗಳು ಅಥವಾ ಪರಿವರ್ತನೆಗಳಿಗೆ ಪ್ರತಿರೋಧ, ದುರ್ಬಲವಾಗುವ ಸಾಮಾಜಿಕ ಕೌಶಲ್ಯಗಳು , ಮಾತು  ವಿಳಂಬವಾಗುವುದು, ಭಾಷೆ ಮತ್ತು ಸಂವಹನ ಸಮಸ್ಯೆಗಳು , ಕಡಿಮೆ ದೈಹಿಕ ಚಟುವಟಿಕೆ, ನಿದ್ರೆಯ ತೊಂದರೆಗಳು, ಗಮನ ಕೇಂದ್ರೀಕರಣದ ಸಮಸ್ಯೆ

ಮೊಬೈಲ್ ದುಷ್ಪರಿಣಾಮ: ಮಕ್ಕಳ ತಜ್ಞರು ಏನಂತಾರೆ?

ಮೊಬೈಲ್ ಬಳಕೆಯಿಂದ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಬಿ.ಸಿ.ರೋಡಿನ ಮಕ್ಕಳ ತಜ್ಞ ವೈದ್ಯರಾದ ಡಾ. ಎಂ.ಎಸ್. ಮಹೇಶ್ ಅಭಿಪ್ರಾಯಪಡುತ್ತಾರೆ. ಕಣ್ಣಿನ ಸಮಸ್ಯೆಗಳಾದ ಮಯೋಫಿಯಾ, ಹೈಪರ್ ಮೆಟ್ರೋಫಿಯಾ ಉಂಟಾಗಬಹುದು. ಬ್ಲೂಲೈಟ್ ನೋಡುವುದರಿಂದ ನಿದ್ದೆಯ ಚಕ್ರವೇ ಬದಲಾಗುತ್ತದೆ. ಕೈಯ ಸ್ನಾಯುಗಳಿಗೆ ತೊಂದರೆ ಉಂಟಾಗುತ್ತದೆ. ಮಾನಸಿಕವಾಗಿ ಕ್ಷೋಭೆ ಉಂಟಾಗುತ್ತದೆ. ವರ್ತನೆಗಳು ಬದಲಾಗಬಹುದು ಆಹಾರ ಕ್ರಮಗಳ ಬದಲಾವಣೆ ಆಗಿ, ಜೀರ್ಣಶಕ್ತಿಗೆ ಪರಿಣಾಮ ಉಂಟಾಗಬಹುದು. ಒಟ್ಟಾರೆಯಾಗಿ ಕಣ್ಣು, ಮನಸ್ಸು ಮತ್ತು ಸ್ನಾಯುಗಳಿಗೆ ಮೊಬೈಲ್ ದುಷ್ಪರಿಣಾಮ ಬೀರುವುದು ಖಂಡಿತ ಎಂದವರು ಹೇಳಿದರು.

About the Author

Harish Mambady
ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ. Harish Mambady - who has experience working as a Journalist in various Print and Digital Media in Dakshina Kannada, Udupi (Mangalore, Manipal, and Bantwal) for the past 26 years, He Started digital Media www.bantwalnews.com in 2016.

Be the first to comment on "ಮಕ್ಕಳ ಕೈಯಲ್ಲಿ ಮೊಬೈಲ್: ಆರೋಗ್ಯ ಸಮಸ್ಯೆಯೊಂದೇ ಅಲ್ಲ, ಏನೇನ್ ಪ್ರಾಬ್ಲಂ ಇದೆ ಗೊತ್ತಾ?"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*