\
ಪುತ್ತೂರಿನ ಕಬಕ ಸಮೀಪ ಕೂವೆತ್ತಿಲ ಎಂಬಲ್ಲಿ ಭಾನುವಾರ ಬೆಳಗ್ಗೆ ಕೆಎಸ್ಸಾರ್ಟಿಸಿ ಬಸ್ ಡಿಕ್ಕಿಯಾಗಿ ಬೈಕ್ ನಲ್ಲಿ ಸಾಗುತ್ತಿದ್ದ ತಂದೆ, ಮಗ ಸಾವನ್ನಪ್ಪಿದ್ದಾರೆ.
ಸಮಾಜ ಸೇವಾ ಸಹಕಾರಿ ಸಂಘದ ನಿರ್ದೇಶಕರೂ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮ ಪಂಚಾಯಿತಿ ಸದಸ್ಯರೂ ಆಗಿರುವ ಅರುಣ್ ಕುಲಾಲ್ ಬೋರುಗುಡ್ಡೆ (45) ಹಾಗೂ ಅವರ ಪುತ್ರ ಹತ್ತನೇ ತರಗತಿ ವಿದ್ಯಾರ್ಥಿ ಧ್ಯಾನ್ (15) ಮೃತಪಟ್ಟವರು.
ಬೆಳಗ್ಗೆ ಸುಮಾರು 11 ಗಂಟೆಗೆ ಅಪಘಾತ ಸಂಭವಿಸಿದ್ದು, ಸುಳ್ಯದ ಕಡೆಗೆ ವಿವಾಹ ಸಮಾರಂಭಕ್ಕೆಂದು ಬೈಕಿನಲ್ಲಿ ಸಾಗುತ್ತಿದ್ದ ನರಿಕೊಂಬು ಗ್ರಾಪಂ ಸದಸ್ಯ ಅರುಣ್ ಕುಲಾಲ್ ಬೋರುಗುಡ್ಡೆ ಹಾಗೂ ಅವರ ಪುತ್ರ ಧ್ಯಾನ್ ಅವರಿಗೆ ಕೂವೆತ್ತಿಲ ತಿರುವಿನ ಬಳಿ ಮಂಗಳೂರು ಕಡೆ ಸಾಗುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ಡಿಕ್ಕಿಯಾಗಿದೆ. ಪರಿಣಾಮ, ಅರುಣ್ ಕುಲಾಲ್ ಅವರು ಸ್ಥಳದಲ್ಲೇ ಮೃತಪಟ್ಟರೆ, ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮಗನೂ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಅಪಘಾತದ ಪರಿಣಾಮ ಮಾಣಿ ಮೈಸೂರು ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ವ್ಯತ್ಯಯವಾಗಿ ತ್ತು. ಬಳಿಕ ಪುತ್ತೂರು ಟ್ರಾಫಿಕ್ ಪೊಲೀಸರು ಆಗಮಿಸಿ ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟರು.
ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ಅರುಣ್:
ಅರುಣ್ ಕುಲಾಲ್ ಬೋರುಗುಡ್ಡೆ ಅವರು ಹಿಂದು ಸಂಘಟನೆ, ಬಿಜೆಪಿ ಸಹಿತ ಹಲವು ಸಂಘ, ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದು ಜನಾನುರಾಗಿಯಾಗಿದ್ದರು. ಇತ್ತೀಚೆಗಷ್ಟೇ ಸಮಾಜ ಸೇವಾ ಸಹಕಾರಿ ಸಂಘದ ನಿರ್ದೇಶಕ ಮಂಡಳಿಗೆ ಆಯ್ಕೆಯಾಗಿದ್ದರು. ನರಿಕೊಂಬು ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ಅವರು ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಮರದ ಕೆಲಸವನ್ನು ಮಾಡುತ್ತಿದ್ದ ಅವರು, ಕುಲಾಲ ಮಾತೃಸಂಘದ ಸೇವಾದಳದ ಸದಸ್ಯರಾಗಿ, ಬಂಟ್ವಾಳ ಕುಲಾಲ ಯುವವೇದಿಕೆ ಉಪಾಧ್ಯಕ್ಷ, ನರಿಕೊಂಬು ಕುಲಾಲ ಸಂಘದ ಸದಸ್ಯರಾಗಿ ಗುರುತಿಸಿಕೊಂಡಿದ್ದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿಸಿದ್ದ ಧ್ಯಾನ್:
ಅರುಣ್ ಕುಲಾಲ್ ಪುತ್ರ ಧ್ಯಾನ್ ಮೊನ್ನೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿಸಿ ತೇರ್ಗಡೆಯಾಗಿದ್ದ. ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿ ಪಿಯುಸಿ ಸೇರುವ ಹೊಸ್ತಿಲಲ್ಲಿದ್ದ ಬಾಲಕ ರಸ್ತೆ ಅಪಘಾತದಲ್ಲಿ ಮರಣ ಹೊಂದುವಂತಾಗಿದೆ.
Be the first to comment on "ಕೂವೆತ್ತಿಲದಲ್ಲಿ ನಡೆದ ಅಪಘಾತ: ಬಸ್ ಡಿಕ್ಕಿಯಾಗಿ ನರಿಕೊಂಬು ಗ್ರಾಮದ ತಂದೆ, ಮಗ ಸಾವು"