ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಮಕ್ಕಳ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಈ ಸಂದರ್ಭ ಭಾಗವಹಿಸಿದ್ದ ಮಜಿ ಶಾಲೆ ಮಕ್ಕಳು, ಶಾಲೆಗೆ ಬೇಕಾದ ಸೌಕರ್ಯಗಳ ವಿಷಯಗಳ ಪಟ್ಟಿಯನ್ನು ನೀಡಿದರು.
ಅಧ್ಯಕ್ಷತೆಯನ್ನು ಮಜಿ ಸರಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿ ನಾಯಕಿ ಧನ್ವಿತಾ ವಹಿಸಿದ್ದರು. ಸುಗ್ರಾಮ ಸಂಯೋಜಕರಾದ ಚೇತನ್ ಮಕ್ಕಳ ಗ್ರಾಮಸಭೆಯ ಮಹತ್ವದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದರು. ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ರೂಪಕಲಾ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಇಲಾಖೆಯಲ್ಲಿ ಸಿಗುವಂತ ಸೌಲಭ್ಯ, ರಕ್ಷಣೆಗಳ ಬಗ್ಗೆ ಮಾಹಿತಿ ನೀಡಿದರು.
ಗ್ರಾಮ ಸಮುದಾಯ ಆರೋಗ್ಯ ಅಧಿಕಾರಿ ಹರ್ಷಿತ ಮಕ್ಕಳ ಆರೋಗ್ಯ ಬಗ್ಗೆ ಮಾಹಿತಿ ನೀಡಿದರು. ವೀರಕಂಭ ಗ್ರಾಮ ವ್ಯಾಪ್ತಿಯ ಶಾಲೆಗಳಾದ ಮಜಿ, ಕೆಲಿಂಜ, ಬಾಯಿಲ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಕ್ಕಳ ಗ್ರಾಮ ಸಭೆಯಲ್ಲಿ ಮಕ್ಕಳ ವಿಷಯಗಳಿಗೆ ಸಂಬಂಧಪಟ್ಟ ಎಲ್ಲ ಇಲಾಖೆಗಳು ಭಾಗವಹಿಸಬೇಕೆಂದು ಮಕ್ಕಳು ಬೇಡಿಕೆ ಇಟ್ಟರು. ಮಜಿ ಶಾಲೆಯ ಮಕ್ಕಳು ತಮ್ಮ ಶಾಲೆಗೆ ಸ್ಯಾನಿಟರಿ ಪ್ಯಾಡ್ ಬರ್ನರ್,ಶಾಲಾ ಆವರಣ ಗೋಡೆ, ಮಕ್ಕಳ ಸುರಕ್ಷಾ ದೃಷ್ಟಿಯಿಂದ ಸಿಸಿ ಕ್ಯಾಮರ, ಶೌಚಾಲಯಕ್ಕೆ ನೀರಿನ ಟ್ಯಾಂಕಿ, ಕ್ರೀಡಾ ಸಾಮಗ್ರಿಗಳು, ವಾಚನಾಲಯ, ಕಂಪ್ಯೂಟರ್,ರಸ್ತೆಗೆ ಸೂಚನಾ ಫಲಕ ಮೊದಲಾದ ಬೇಡಿಕೆಗಳನ್ನು ನೀಡಿದರು. ಕೆಲಿಂಜ ಶಾಲಾ ಮಕ್ಕಳು ಶಾಲಾ ಆವರಣ ಎದುರು ಗಿಡಗಂಟಿಗಳಿದ್ದು, ರಸ್ತೆ ದಾಟುವಾಗ ವಾಹನಗಳು ಗಮನಕ್ಕೆ ಬರೋದಿಲ್ಲ ಹಾಗೂ ಪರೀಕ್ಷೆಗಳು ಹತ್ತಿರ ಬರುವ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ತೆರವಾದ ಕಾರಣ ಶಿಕ್ಷಕರ ಕೊರತೆ ಯಾಗಿದೆ ಎಂದರು.
ಗ್ರಾಮ ಸಭಾ ವೇದಿಕೆಯಲ್ಲಿ ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತ, ಉಪಾಧ್ಯಕ್ಷರಾದ ಜನಾರ್ಧನ ಪೂಜಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುಷ್ಪ, ಕಾರ್ಯದರ್ಶಿ ಸವಿತಾ, ಮೊದಲಾದವರು ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಸದಸ್ಯರುಗಳು, ಗ್ರಾಮ ಆರೋಗ್ಯ ಸುರಕ್ಷ ಆಧಿಕಾರಿ ಜ್ಯೋತಿ, ಮಜಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಇಂದುಶೇಖರ್, ಕೆಲಿಂಜ ಶಾಲಾ ಶಿಕ್ಷಕಿ ಶ್ವೇತಾ, ಬಾಯಿಲ ಶಾಲಾ ಶಿಕ್ಷಕಿ ವಾರಿಜಾಕ್ಷಿ,ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು, ಉಪಸ್ಥಿತರಿದ್ದರು.
Be the first to comment on "ವೀರಕಂಭದಲ್ಲಿ ಮಕ್ಕಳ ಗ್ರಾಮಸಭೆ: ಶಾಲೆಗೆ ಬೇಕಾದ ಸೌಕರ್ಯಗಳ ಪಟ್ಟಿ ನೀಡಿದ ಮಕ್ಕಳು"