ಉಳ್ಳಾಲ ಠಾಣಾ ವ್ಯಾಪ್ತಿಯ ಕೆ.ಸಿ ರೋಡ್ ಜಂಕ್ಷನ್ ನಲ್ಲಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಶಾಖೆಯಿಂದ ದರೋಡೆ ನಡೆದಿದೆ.
ಬ್ಯಾಂಕ್ ಶಾಖೆಗೆ ನುಗ್ಗಿದ ಐವರು ಮಾಸ್ಕ್ ಧಾರಿಗಳು ಒಳಗಿದ್ದ ಐವರು ಸಿಬ್ಬಂದಿಗಳಿಗೆ ಬಂದೂಕು, ತಲ್ವಾರ್ ತೋರಿಸಿ ದರೋಡೆ ನಡೆಸಿದ್ದಾರೆ. ಬೀದರಿನಲ್ಲಿ ನಿನ್ನೆ ಎಟಿಎಂ ಹಣ ತುಂಬುವಾಗ ಗನ್ ಶೂಟ್ ಮಾಡಿದ ದರೋಡೆ ಬೆನ್ನಲ್ಲೇ ದಕ್ಷಿಣ ಕನ್ನಡದಲ್ಲಿ ನಡೆದ ಈ ಘಟನೆ ಜನತೆಯನ್ನು ಬೆಚ್ಚಿಬೀಳಿಸಿದೆ.

ಶುಕ್ರವಾರ ಮಧ್ಯಾಹ್ನ ಒಂದು ಗಂಟೆ ವೇಳೆಗೆ ಕಾರಿನಲ್ಲಿ ಬಂದ ಆಗಂತುಕರಲ್ಲಿ ಐವರು ಬ್ಯಾಂಕ್ ಶಾಖೆಗೆ ನುಗ್ಗಿದ್ದು ಕಚೇರಿಯಲ್ಲಿದ್ದ ಸಿಬ್ಬಂದಿಗಳಿಗೆ ಮಾರಕಾಯುಧಗಳನ್ನ ತೋರಿಸಿ ಸುಮಾರು ಹತ್ತು ಕೋಟಿಗೂ ಅಧಿಕ ಬೆಲೆಬಾಳುವ ಚಿನ್ನಾಭರಣ, ಸುಮಾರು ಐದು ಲಕ್ಷ ರೂಪಾಯಿ ನಗದನ್ನ ದರೋಡೆಗೈದು ಮಂಗಳೂರು ಕಡೆ ಕಾರಿನಲ್ಲಿ ಪರಾರಿಯಾಗಿದ್ದಾರೆ. ಕೆ.ಸಿ ರೋಡ್ ಜಂಕ್ಷನ್ನಲ್ಲಿರುವ ವಾಣಿಜ್ಯ ಕಟ್ಟಡದ ಮೊದಲ ಮಹಡಿಯಲ್ಲಿ ಕಾರ್ಯಾಚರಿಸುತ್ತಿದ್ದ ಬ್ಯಾಂಕ್ ಶಾಖೆಯಲ್ಲಿ ದರೋಡೆ ನಡೆದಿದೆ. ಬ್ಯಾಂಕಿನ ಕೆಳಗಿನ ಅಂತಸ್ತಿನ ಬೇಕರಿಯಲ್ಲಿದ್ದ ನಾಲ್ವರು ಶಾಲಾ ವಿದ್ಯಾರ್ಥಿಗಳು ಬ್ಯಾಂಕಿನ ಸಿಬ್ಬಂದಿಗಳ ಬೊಬ್ಬೆ ಕೇಳಿ ಮೇಲೆ ಓಡಿದ್ದಾರೆ. ವಿದ್ಯಾರ್ಥಿಗಳಿಗೆ ಆಗಂತುಕರು ಗನ್ ತೋರಿಸಿ ಬೆದರಿಸಿದ್ದಾರೆ. ಎಸಿಪಿ ಧನ್ಯ ನಾಯಕ್ ನೇತೃತ್ವದ ಪೊಲೀಸರ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಸ್ಥಳಕ್ಕೆ ಸ್ಪೀಕರ್ ಖಾದರ್ ಭೇಟಿ ನೀಡಿ ಆರೋಪಿಗಳನ್ನ ಶೀಘ್ರ ಬಂಧಿಸಲು ಪೊಲೀಸರಿಗೆ ಸೂಚನೆ ನೀಡಿದ್ದಾರೆ.
Be the first to comment on "ಬೀದರ್ ಬಳಿಕ ಉಳ್ಳಾಲ – ಮುಸುಕುಧಾರಿಗಳಿಂದ ಹಾಡಹಗಲೇ ದರೋಡೆ, ಎಲ್ಲೆಡೆ ಪೊಲೀಸರ ಕಟ್ಟೆಚ್ಚೆರ"