ಕೇಂದ್ರ ಸರಕಾರದ ರಸ್ತೆ ಮತ್ತು ಮೂಲಸೌಕರ್ಯ ನಿಧಿಯಡಿ 5.27 ಕೋಟಿ ವೆಚ್ಚದಲ್ಲಿ ಬಂಟ್ವಾಳ ತಾಲೂಕಿನ 3 ರಸ್ತೆಗಳು ಅಭಿವೃದ್ಧಿಯಾಗಲಿವೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಬಿಜೆಪಿ ಬಂಟ್ವಾಳ ನೂತನ ಕಾರ್ಯಕಾರಣಿಯ ವಿಧ್ಯುಕ್ತ ಪದಗ್ರಹಣ ಕಾರ್ಯಕ್ರಮ ಹಾಗೂ ನೂತನವಾಗಿ ಆಯ್ಕೆಯಾದ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಅವರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ಬಿಜೆಪಿ ತನ್ನ ಸಂಘಟಿತ ಪ್ರಯತ್ನದಿಂದ ಸಹಕಾರಿ ಕ್ಷೇತ್ರಗಳ ಚುನಾವಣೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ಗೆಲುವು ಸಾಧಿಸಿದೆ. ರಾಜಕೀಯವಾಗಿ ಗುರುತಿಸಿಕೊಂಡಿರದ ಯುವಕನನ್ನು ಮುಂದಿನ ದಿನಗಳಲ್ಲಿ ಬಂಟ್ವಾಳದಲ್ಲಿ ಶಾಸಕನನ್ನಾಗಿ ಮಾಡುವುದು ನನ್ನ ಕನಸು ಎಂದು ಹೇಳಿದ ರಾಜೇಶ್ ನಾಯ್ಕ್ ಇದಕ್ಕೆ ಕ್ಷೇತ್ರದ ಜನರು ಬೆಂಬಲ ನೀಡಬೇಕು ಎಂದರು.
ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ ಸರಕಾರ ಜನವಿರೋಧಿ ಧೋರಣೆ ಅನುಸರಿಸುತ್ತಿದ್ದು, ಇದಕ್ಕೆ ರಾಹುಲ್ ಗಾಂಧಿ ಪ್ರೇರಣೆಯಾಗಿದ್ದಾರೆ ಎಂದ ಕ್ಯಾ. ಚೌಟ, ಬಿಜೆಪಿಯ ಅಭ್ಯರ್ಥಿಗಳಿಂದ ಸೋತ ಕಾಂಗ್ರೆಸ್ ನವರು ಅಲ್ಲಿ ಬಿಜೆಪಿ ಶಾಸಕರಿದ್ದರೂ ಅಧಿಕಾರ ಚಲಾಯಿಸುತ್ತಿದ್ದಾರೆ. ಬಂಟ್ವಾಳದಲ್ಲೂ ಅಧಿಕಾರ ಹಸ್ತಕ್ಷೇಪವಾಗುತ್ತಿದೆ ಇದು ಯಾವ ಸಂವಿಧಾನ ಮಾದರಿ ಎಂದು ಪ್ರಶ್ನಿಸಿದರು. ಸಿದ್ಧರಾಮಯ್ಯ ರಾಜಕೀಯ ಹಿಟ್ಲರ್ ಮಾದರಿಯದ್ದಾಗಿದೆ ಎಂದ ಚೌಟ, ಅಂತಿಮ ದಿನಗಳು ಆರಂಭವಾಗಿದ್ದು, ಹಿಂದು ವಿರೋಧಿ ನೀತಿ ಅನುಸರಿಸಿದರೆ ಉಳಿಗಾಲವಿಲ್ಲ ಎಂದರು.
ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿದರು. ಚುನಾವಣಾಧಿಕಾರಿ ಸಾಜ ರಾಧಾಕೃಷ್ಣ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡ ವಿಕಾಸ್ ಪುತ್ತೂರು ಅಭಿನಂದನಾ ಭಾಷಣ ಮಾಡಿದರು. ಪ್ರಮುಖರಾದ ಅಪ್ಪಯ್ಯ ಮಣಿಯಾಣಿ, ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ್, ಪೂಜಾ ಪೈ, ದೇವಪ್ಪ ಪೂಜಾರಿ, ಸುಲೋಚನಾ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಿಜೆಪಿ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ ವಂದಿಸಿದರು. ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರ್ವಹಿಸಿದರು. ಕಿಶೋರ್ ಪಲ್ಲಿಪ್ಪಾಡಿ ಪ್ರಾರ್ಥಿಸಿದರು.
Be the first to comment on "ಕೇಂದ್ರ ಸರಕಾರದ ರಸ್ತೆ ಮತ್ತು ಮೂಲಸೌಕರ್ಯ ನಿಧಿಯಡಿ ಬಂಟ್ವಾಳಕ್ಕೆ 5.27 ಕೋಟಿ ರೂ: ಕ್ಯಾ.ಬ್ರಿಜೇಶ್ ಚೌಟ"