ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಯೋಜನೆ ಹಿನ್ನೆಲೆ ಪೈಪ್ ಲೈನ್ ಅಳವಡಿಸಿದ್ದರೂ ಸರಿಯಾಗಿ ನೀರು ವಿತರಣೆ ಆಗುತ್ತಿಲ್ಲ. ಸಮಸ್ಯೆ ಕುರಿತು ದೂರು ಹೇಳಲು ಯಾರನ್ನು ಸಂಪರ್ಕಿಸುವುದು ಎಂದೇ ಗೊತ್ತಾಗುವುದಿಲ್ಲ. ಈ ಕುರಿತು ಸರಿಯಾದ ರೂಪುರೇಷೆಯನ್ನು ಕೈಗೊಂಡು, ವ್ಯವಸ್ಥಿತವಾಗಿ ಕಾರ್ಯನಿರ್ವಹಣೆ ನಡೆಯಬೇಕು. ಸಮಸ್ಯೆಗೆ ಶೀಘ್ರ ಸ್ಪಂದನೆ ನೀಡಬೇಕು ಎಂದು ಬಂಟ್ವಾಳ ಪುರಸಭೆಯ ವಿಶೇಷ ಸಭೆಯಲ್ಲಿ ಸದಸ್ಯರು ಅಹವಾಲು ಮಂಡಿಸಿದರು.
ಅಧ್ಯಕ್ಷ ಬಿ.ವಾಸು ಪೂಜಾರಿ ಅಧ್ಯಕ್ಷತೆಯಲ್ಲಿ ಗುರುವಾರ ಪುರಸಭೆ ವ್ಯಾಪ್ತಿಯಲ್ಲಿ ಸಮಗ್ರ ಕುಡಿಯುವ ನೀರು ಸರಬರಾಜು ಯೋಜನೆ ಅನುಷ್ಠಾನದ ಕುರಿತು ನಡೆದ ಸಭೆಯಲ್ಲಿ ಸಾರ್ವಜನಿಕರು ಪ್ರತಿನಿತ್ಯ ಸಮಸ್ಯೆಗಳ ಕುರಿತು ದೂರು ನೀಡುತ್ತಿದ್ದು, ಈ ಕುರಿತು ಸಮರ್ಪಕವಾಗಿ ಪರಿಹಾರ ದೊರಕಬೇಕು ಎಂದು ಪಕ್ಷಬೇಧ ಮರೆತು ಒತ್ತಾಯಿಸಿದರು.
ಈ ಸಂದರ್ಭ ಉತ್ತರಿಸಿದ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಜಯ್ ಆರ್. ವಿ, ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಪೈಪ್ ಲೈನ್ ಗಳು ಒಡೆದುಹೋಗಿರುವುದನ್ನು ಎರಡು ವಾರದಲ್ಲಿ ದುರಸ್ತಿಗೊಳಿಸಲಾಗುವುದು,ಒಂದನೇ ಹಂತದ ಕಾಮಗಾರಿ ಕುರಿತು ನೀಡಿರುವ ದೂರನ್ನು ಪುರಸಭೆ ಮೂಲಕ ತಮ್ಮ ಇಲಾಖೆಗೆ ನೀಡಿದರೆ, ಪರಿಹಾರ ಕಲ್ಪಿಸಲಾಗುವುದು. ಜನವರಿ 31ರೊಳಗೆ ಮೊದಲ ಹಂತದ ಕಾಮಗಾರಿ ಕುರಿತು ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಸಹಾಯಕ ಎಂಜಿನಿಯರ್ ಶೋಭಾಲಕ್ಷ್ಮೀ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುವ ಕಂಪನಿಯವರು ಕುಡಿಯುವ ನೀರಿನ ಪೈಪ್ ಲೈನ್ ಗಳನ್ನು ಕೆಲಸ ನಡೆಸುವ ವೇಳೆ ತುಂಡು ಮಾಡಿ ಸಮಸ್ಯೆ ಉಂಟು ಮಾಡಿದ್ದಾರೆ ಎಂದರು. ವಿತರಣೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇದ್ದಾಗ ಪುರಸಭೆಯಿಂದ ನಮಗೆ ಬಂದರೆ ಸರಿ ಮಾಡಿಕೊಡಲಾಗುವುದು ಎಂದು ಎಇಇ ಹೇಳಿದರು.
ಬಂಟ್ವಾಳ ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ ಮಾತನಾಡಿ, ಸಾಕಷ್ಟು ದೂರುಗಳು ಈ ಕುರಿತು ಬರುತ್ತಿದ್ದು, ಶುದ್ಧ ಕುಡಿಯುವ ನೀರು ಪೂರೈಕೆಯಲ್ಲಿ ಸಮಸ್ಯೆಗಳು ಎದುರಾಗಿವೆ ಎಂದರು. ಉಪಾಧ್ಯಕ್ಷ ಮೊನೀಶ್ ಆಲಿ ಮಾತನಾಡಿ, ನದಿ ಪಕ್ಕದಲ್ಲೇ ಇದ್ದರೂ ನಮಗೆ ನೀರು ಪೂರೈಕೆಯಲ್ಲಿ ಸಮಸ್ಯೆ ಉಂಟಾಗುತ್ತಿದೆ ಎಂದರು.
ಪ್ರತಿಭಟನೆ ಎಚ್ಚರಿಕೆ:
ಸದಸ್ಯ ಸಿದ್ದೀಕ್ ಗುಡ್ಡೆಯಂಗಡಿ ಆಕ್ರೋಶ ವ್ಯಕ್ತಪಡಿಸಿ, ನಮ್ಮ ಐದು ವಾರ್ಡ್ ಗಳಿಗೆ ನೀರು ಬರುತ್ತಿಲ್ಲ, ಈ ಕುರಿತು ಪ್ರತಿಭಟನೆ ಸಿದ್ಧ ಎಂದರು.
ಹಿರಿಯ ಸದಸ್ಯ ಎ.ಗೋವಿಂದ ಪ್ರಭು ಮಾತನಾಡಿ, ಕುಡಿಯುವ ನೀರಿನ ಯೋಜನೆಯ ಮೊದಲನೇ ಹಂತ, ಎರಡನೇ ಹಂತವೆರಡೂ ಸಮಸ್ಯೆಗಳ ಆಗರವಾಗಿದ್ದು, ಈ ಕುರಿತು ಲೋಕಾಯುಕ್ತರಿಗೆ ದೂರು ನೀಡಬೇಕಾಗಬಹುದು ಹಸ್ತಾಂತರ ಮಾಡುವ ವೇಳೆ ಸರಿಯಾದ ಕ್ರಮ ಪಾಲಿಸಿದ್ದೀರಾ ಎಂದು ಪ್ರಶ್ನಿಸಿದ ಅವರು, ಇಪ್ಪತ್ತನಾಲ್ಕು ಗಂಟೆಗಳಲ್ಲಿ ಒಂದೇ ಗಂಟೆ ನೀರು ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದಿನದ 24 ಗಂಟೆ ಮನೆಗಳಿಗೆ ಕುಡಿಯುವ ನೀರು ಸರಬರಾಜು ಮಾಡುವುದಾಗಿ ಹೇಳಿಕೊಂಡು ಈಗ ಒಂದು ಗಂಟೆಯೂ ನೀರು ಬರುತ್ತಿಲ್ಲ. ರಸ್ತೆಯ ಮೇಲೆಲ್ಲಾ ಪೈಪುಗಳು ಕಾಣಿಸಿಕೊಂಡಿದ್ದು, ಇಂಥ ಯೋಜನೆ ನಮಗೆ ಬೇಕಿತ್ತಾ ಎಂದು ಹಿರಿಯ ಸದಸ್ಯ ಎ.ಗೋವಿಂದ ಪ್ರಭು ಪ್ರಶ್ನಿಸಿದರು. ಅವರಿಗೆ ಪೂರಕವಾಗಿ ಮಾತನಾಡಿದ ಸದಸ್ಯ ಲುಕ್ಮಾನ್ ಬಂಟ್ವಾಳ, ಸಮಸ್ಯೆಗಳಿಗೆ ಯಾರು ಜವಾಬ್ದಾರಿ, ನಾವು ಜನರಿಗೆ ಉತ್ತರದಾಯಿಗಳಾಗಿದ್ದೇವೆ. ಸದಸ್ಯೆಗಳಾದಾಗ ಯಾರ ಬಳಿ ಕೇಳುವುದು ಎಂದು ಪ್ರಶ್ನಿಸಿದರು.
ಸದಸ್ಯ ಹರಿಪ್ರಸಾದ್ ಮಾತನಾಡಿ, ಎರಡನೇ ಹಂತದ್ದು ಎಷ್ಟು ಹಂತಕ್ಕೆ ಬಂತು ಯಾವ ವಾರ್ಡ್ ನಲ್ಲಿ ಆಗಿದೆ ಎಂದು ಪ್ರಶ್ನಿಸಿ, ಜನರ ಹಣ ಪೋಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸದಸ್ಯೆ ಜೆಸಿಂತಾ ಡಿಸೋಜ ಮಾತನಾಡಿ, ನನ್ನ ವಾರ್ಡಿನ ಒಂದೇ ಒಂದು ಮನೆಗೂ ನೀರು ಬರುವುದಿಲ್ಲ ಎಂದರು. ಸದಸ್ಯೆ ಗಾಯತ್ರಿ ಪ್ರಕಾಶ್ ಅವರೂ ಈ ಕುರಿತು ದನಿಗೂಡಿಸಿದರು.
ಪಾಣೆಮಂಗಳೂರು ಭಾಗದ ವಾರ್ಡ್ ಗಳಲ್ಲಿ ಸಮಸ್ಯೆ ತೀವ್ರವಾಗಿದೆ ಎಂದು ಹೇಳಿದ ಸದಸ್ಯ ಸಿದ್ದೀಕ್ ಗುಡ್ಡೆಯಂಗಡಿ, ಕಾಟಾಚಾರಕ್ಕೆ ಈ ಸಭೆ ನಡೆಸುವ ಬದಲು ಪರಿಹಾರ ನೀಡಿ ಎಂದರು. ಸದಸ್ಯರಾದ ಝೀನತ್ ಫಿರೋಜ್, ಮೀನಾಕ್ಷಿ ಗೌಡ, ಇದ್ರೀಸ್ ಪಿ.ಜೆ. ಸಹಿತ ಹಲವು ಸದಸ್ಯರು ನೀರು ಸರಬರಾಜು ವಿಷಯದ ಕುರಿತು ಗಮನ ಸೆಳೆದರು. ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಉಪಸ್ಥಿತರಿದ್ದರು.
Be the first to comment on "ಪೈಪ್ ಇದ್ರೂ ಬಾರದ ನೀರು, ಪುರಸಭೆಯಲ್ಲಿ ಸದಸ್ಯರ ದೂರು: ವಿಶೇಷ ಸಭೆಯಲ್ಲಿ ಗಮನ ಸೆಳೆದ ಜನಪ್ರತಿನಿಧಿಗಳು"