ಹರೀಶ ಮಾಂಬಾಡಿ
ಇದು ಒಂದು ವರ್ಷದ ಹಿಂದಿನ ವಿಚಾರ. ಜೂನ್ ತಿಂಗಳಲ್ಲಿ ಸಂಪೂರ್ಣ ಹಳ್ಳಿಪ್ರದೇಶವಾಗಿರುವ ಹಚ್ಚಹಸಿರಿನ ತೋಟ, ಗದ್ದೆಗಳನ್ನು ದಾಟಿ ತಲುಪುವ ಬಾಳ್ತಿಲ ಗ್ರಾಮದ ಕಂಟಿಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಐವರು ಮಕ್ಕಳಷ್ಟೇ ಇದ್ದರು. ಒಂದು ಹಂತದಲ್ಲಿ ಈ ಶಾಲೆ ನಿರ್ವಹಣೆ ಕಷ್ಟವಾಗಿ ಇನ್ನೇನು ಮುಚ್ಚುತ್ತದೆ ಎಂಬ ಹಂತಕ್ಕೆ ತಲುಪಿತ್ತು. ಆದರೆ ಈ ವರ್ಷ ಹತ್ತು ಮಕ್ಕಳ ಸೇರ್ಪಡೆಯಾಗಿದೆ. ಕಳೆದ ವರ್ಷ ಸೇರಿದ ಏಳು ಮಕ್ಕಳನ್ನೂ ಸೇರಿಸಿದರೆ, 22 ಮಕ್ಕಳು. ಶಾಲೆ ಕಟ್ಟಡದ ಸ್ವರೂಪವೇ ಬದಲಾಗಿದೆ. ಸುಣ್ಣ, ಬಣ್ಣ, ಚಿತ್ರಗಳಿಂದ ಆಕರ್ಷಕವಾಗಿ ಕಾಣಿಸುತ್ತಿದೆ. ಮಕ್ಕಳೂ ಲವಲವಿಕೆಯಿಂದ ಪಾಠ ಕಲಿಯುತ್ತಿದ್ದಾರೆ.
1964ರಲ್ಲಿ ಆರಂಭಗೊಂಡ ಶಾಲೆಗೆ ನವರೂಪ:
ಬಾಳ್ತಿಲ ಗ್ರಾಮದ ಕಂಟಿಕದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ 1964ನೇ ಇಸವಿಯಲ್ಲಿ ಜೂನ್ 10ರಂದು ಆರಂಭಗೊಂಡಿತ್ತು. ಶಾಲೆ ವ್ಯಾಪ್ತಿಯಲ್ಲಿ 1 ಎಕರೆ 18 ಸೆಂಟ್ಸ್ ಜಾಗವಿದೆ. ಕಂಟಿಕ, ಸುಧೆಕಾರು, ಕಾಂಪ್ರಬೈಲ್ ಪ್ರದೇಶಗಳು ಶಾಲಾ ವ್ಯಾಪ್ತಿಗೆ ಬರುವ ಜನವಸತಿ ಸ್ಥಳಗಳು. ಇಲ್ಲಿ ಇಬ್ಬರು ಶಿಕ್ಷಕರು ಇರಬೇಕಿದ್ದು, ಓರ್ವ ಶಿಕ್ಷಕಿ ಪ್ರಭಾರ ಮುಖ್ಯಶಿಕ್ಷಕಿ ನೆಲೆಯಲ್ಲಿ ನಿಯುಕ್ತಿಗೊಂಡಿದ್ದಾರೆ. ಓರ್ವ ಅತಿಥಿ ಶಿಕ್ಷಕಿ ಈ ವರ್ಷ ನೇಮಕಗೊಂಡಿದ್ದರೆ, ಗೌರವ ಶಿಕ್ಷಕಿಯೊಬ್ಬರನ್ನು ಪ್ರಭಾರ ಮುಖ್ಯ ಶಿಕ್ಷಕಿಯ ಮುತುವರ್ಜಿಯಿಂದ ನೇಮಿಸಲಾಗಿದೆ. ಹಲವಾರು ಕಾರಣಗಳಿಂದ ಈ ಶಾಲೆಗೆ ಮಕ್ಕಳ ಸಂಖ್ಯೆ ಕ್ಷೀಣಿಸಿ ಇನ್ನೇನು ಮುಚ್ಚುವ ಹಂತದಲ್ಲಿದೆ ಎಂದಾಗ ದಿಢೀರನೆ ಮೈಕೊಡವಿ ಎದ್ದು ನಿಂತಿರುವುದು ವಿಶೇಷ.
ಶಿಕ್ಷಕಿಯ ಸಹಕಾರ:
ಶಿಕ್ಷಕರೊಬ್ಬರು ಮನಸ್ಸು ಮಾಡಿದರೆ, ಶಾಲೆ ಅಭಿವೃದ್ಧಿ ಹೇಗೆ ಸಾಧ್ಯ ಎಂಬುದನ್ನು ಇಲ್ಲಿಗೆ ವರ್ಗಾವಣೆಯಾಗಿ ಆಗಮಿಸಿದ ಚೇತನಾ ಟೀಚರ್ ಸಾಧಿಸಿದ್ದಾರೆ. ಆರಂಭದಲ್ಲಿ ಐವರು ಮಕ್ಕಳಿರುವುದನ್ನು ಗಮನಿಸಿ, ಊರವರ ಮನವೊಲಿಸಿದ ಫಲವಾಗಿ ಕಳೆದ ವರ್ಷ ಟರಿಂದ 5ನೇ ತರಗತಿಗೆ 7 ಮಕ್ಕಳು ಸೇರ್ಪಡೆಗೊಂಡರು. ಕಳೆದ ಶೈಕ್ಷಣಿಕ ವರ್ಷದಲ್ಲಿ ಹೀಗೆ ಮಕ್ಕಳ ಸಂಖ್ಯೆ 5ರಿಂದ 13ಕ್ಕೇರಿತು. ಮಕ್ಕಳು ಓಡಾಡಲು ಶಿಕ್ಷಕಿಯೇ ಸ್ವತಃ ಆಟೊ ವ್ಯವಸ್ಥೆ ಕಲ್ಪಿಸಿದರು. ಶಾಲೆಗೆ ಆಗಮಿಸಲು ವಾಹನ ಇದೆ ಎಂದಾದಾಗ ಮಕ್ಕಳ ಸಂಖ್ಯೆ ಹೆಚ್ಚಾಯಿತು. ಈ ವರ್ಷ ಹತ್ತು ಮಕ್ಕಳು ಸೇರ್ಪಡೆಯಾದರು. ಈ ಮಧ್ಯೆ ದಾನಿಗಳ ನೆರವಿನಿಂದ ಶಾಲೆಗೆ ನೆಲಹಾಸು ಮತ್ತಿತರ ಸೌಕರ್ಯಗಳು ದೊರಕಿದರೆ, ಶಿಕ್ಷಕಿಯೇ ಸ್ವತಃ ಮುತುವರ್ಜಿ ವಹಿಸಿ, ಶಾಲೆಗೆ ವರ್ಣಚಿತ್ತಾರ ಮಾಡಿಸಿದರು. ಈ ವರ್ಷ ಇಲಾಖೆ ಓರ್ವ ಅತಿಥಿ ಶಿಕ್ಷಕರನ್ನು ನೀಡಿದೆ. ಅಲ್ಲದೆ, ಪ್ರಭಾರ ಮುಖ್ಯ ಶಿಕ್ಷಕಿ ನೆರವಿನಿಂದ ಗೌರವ ಶಿಕ್ಷಕಿಯೊಬ್ಬರು ಕಾರ್ಯನಿರ್ವಹಿಸುತ್ತಿದ್ದಾರೆ.
ಗಮನ ಸೆಳೆಯುವ ಕಲ್ಪವೃಕ್ಷದ ಚಿತ್ರ:
ಬಾಗಿದ ಫಲಭರಿತ ಕಲ್ಪವೃಕ್ಷಗಳ ಚಿತ್ರಗಳು ಶಾಲೆಯ ಎರಡು ಬಾಗಿಲುಗಳ ಪಕ್ಕ ಗಮನ ಸೆಳೆಯುತ್ತವೆ. ತೆಂಗಿನಮರದ ತುಂಬಾ ಫಲಗಳಲ್ಲಿ ತಾಳ್ಮೆ, ಪ್ರೀತಿ, ನಿಸ್ವಾರ್ಥತೆ, ಕ್ಷಮೆ, ಸತ್ಯ, ಸಾಮರಸ್ಯ, ಪ್ರಾಮಾಣಿಕತೆ, ನ್ಯಾಯ, ನೀತಿ ಸಹಿತ ಜೀವನದಲ್ಲಿ ನಾವು ಯಾವುದನ್ನು ಅನುಸರಿಸಬೇಕು ಎಂಬ ಶಬ್ದಗಳು ಬರೆದಿರುವುದು ಕಾಣಸಿಗುತ್ತವೆ. ಶಾಲೆಯ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡಲು ಚಿತ್ರಗಳು ಪೂರಕವಾಗಿದೆ.
Be the first to comment on "ಬಾಳ್ತಿಲ ಕಂಟಿಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಜೀವಕಳೆ, ಮಕ್ಕಳ ಸಂಖ್ಯೆ ಈಗ 22"