ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆಗೆ ಕೆಲವೇ ದಿನ ಬಾಕಿಯಿದ್ದು, ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಅವರು ಮನೆ ಮನೆ ಮಹಾ ಸಂಪರ್ಕ ಅಭಿಯಾನದಲ್ಲಿ ತೊಡಗಿದ್ದಾರೆ.
ಬೆಳಗ್ಗೆ ತನ್ನದೇ ಬೂತ್ ಡೊಂಗರಕೇರಿ ವಾರ್ಡಿನ ಬೂತ್ ಸಂಖ್ಯೆ-117ರಲ್ಲಿ ಮತಯಾಚನೆ ಆರಂಭಿಸಿದ್ದು, ಬಳಿಕ ಕಾರ್ಯಕರ್ತರ ಜೊತೆಗೆ ಬೋಟ್ ಮೂಲಕ ಬೆಂಗ್ರೆ ವಾರ್ಡಿಗೆ ತೆರಳಿದ್ದಾರೆ. ಬೆಂಗ್ರೆಯಲ್ಲಿ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆಗೈದು ಮನೆ ಮನೆ ಭೇಟಿ ಕೈಗೊಂಡಿದ್ದಾರೆ. ಅಲ್ಲಿಂದ ಪಕ್ಷದ ಪ್ರಮುಖರ ಜೊತೆಗೆ ಬಂದರಿನ ಜೈನ ಬಸದಿಗೆ ತೆರಳಿದ ಚೌಟ, ಚುನಾವಣೆಗೆ ಸಿದ್ದತೆ ನಡೆಸುವಂತೆ ಕಾರ್ಯಕರ್ತರಿಗೆ ಸೂಚಿಸಿದ್ದಾರೆ.
ಅಲ್ಲಿಂದ ಕಾವೂರು, ಕುಂಜತ್ ಬೈಲಿಗೆ ತೆರಳಿದ ಕ್ಯಾ.ಬ್ರಿಜೇಶ್ ಚೌಟರಿಗೆ ಕಾರ್ಪೊರೇಟರುಗಳಾದ ಶರತ್ ಕುಮಾರ್, ಸುಮಂಗಲಾ ರಾವ್, ಮಾಜಿ ಕಾರ್ಪೊರೇಟರ್ ಕವಿತಾ ಸನಿಲ್ ಸಾಥ್ ನೀಡಿದ್ದಾರೆ. ಅಲ್ಲಿಯೂ ಹಲವು ಮನೆಗಳಿಗೆ ತೆರಳಿ ಮತಯಾಚನೆ ಮಾಡಿದ್ದಾರೆ. ಪಚ್ಚನಾಡಿಯ ನಾರಾಯಣ ಗುರು ಮಂದಿರದಲ್ಲಿ ಗುರುಪೂಜೆ ಕಾರ್ಯಕ್ರಮ ನಡೆಯುತ್ತಿದ್ದಲ್ಲಿಗೆ ತೆರಳಿ, ಸಮುದಾಯದ ಪ್ರಮುಖರ ಜೊತೆ ಸೇರಿ ಮತ ನೀಡುವಂತೆ ಕೇಳಿಕೊಂಡಿದ್ದಾರೆ.
ಫರಂಗಿಪೇಟೆಯ ಪುದು, ಕುಂಪನಮಜಲು ಬ್ರಿಜೇಶ್ ಚೌಟರ ತಂದೆಯ ಊರಾಗಿದ್ದು, ಹುಟ್ಟಿ ಬೆಳೆದ ಪರಿಸರದಲ್ಲಿ ತನ್ನ ಆಪ್ತರು, ಸಂಬಂಧಿಕರ ಜೊತೆಗೆ ಬೆರೆತಿದ್ದಾರೆ. ಅಲ್ಲಿನ ಆಪ್ತರು ಆಪ್ತವಾಗಿ ಬರಮಾಡಿಕೊಂಡು ತಮ್ಮವರನ್ನು ಗೆಲ್ಲಿಸುವ ಭರವಸೆ ನೀಡಿದ್ದಾರೆ. ಇದೇ ವೇಳೆ, ಕುಂಪನಮಜಲು ಶನೈಶ್ಚರಾಂಜನೇಯ ಮಂದಿರಕ್ಕೆ ತೆರಳಿದ ಚೌಟರು, ತಾನು ಸೇನೆಗೆ ಸೇರುವುದಕ್ಕೂ ಮೊದಲು ಇದೇ ಮಂದಿರದಲ್ಲಿ ಪ್ರಾರ್ಥಿಸಿ ತೆರಳಿದ್ದೆ. ಈ ಮಂದಿರಕ್ಕೂ ನನಗೂ ಭಾವನಾತ್ಮಕ ನಂಟು ಇದೆಯೆಂದು ತಿಳಿಸಿದ್ದಾರೆ.
ಇದೇ ವೇಳೆ, ಆರೆಸ್ಸೆಸ್ ನಾಯಕರಾಗಿದ್ದ ದಿವಂಗತ ಕೊಡ್ಮಾಣ್ ಕಾಂತಪ್ಪ ಶೆಟ್ಟಿಯವರ ಮನೆಗೆ ತೆರಳಿದ ಬ್ರಿಜೇಶ್ ಚೌಟ, ಕಾಂತಪ್ಪ ಶೆಟ್ಟರ ಪತ್ನಿಯ ಆಶೀರ್ವಾದ ಪಡೆದರು. ಬಳಿಕ ತುಂಬೆ ಭಾಗದಲ್ಲಿ ಮನೆಗಳಿಗೆ ತೆರಳಿ ಮತದಾರರ ಆಶೀರ್ವಾದ ಕೇಳಿದರು.
ಸಂಜೆಯ ವೇಳೆಗೆ ಮೂಲ್ಕಿಗೆ ತೆರಳಿದ ಚೌಟರು, ಕೆಆರ್ ಸಿ ನಗರ, ಬಿಜಾಪುರ ಕಾಲನಿ, ಲಿಂಗಪ್ಪಯ್ಯ ಕಾಡು, ಕಾರ್ನಾಡು ಭಾಗದಲ್ಲಿ ಬಿರುಸಿನ ಮತಯಾಚನೆ ಕೈಗೊಂಡರು. ನಾರೀಶಕ್ತಿ ಈ ದೇಶದ ಶಕ್ತಿ, ಪ್ರಧಾನಿ ಮೋದಿಯವರು ನವರಾತ್ರಿಯಲ್ಲಿ ನವದುರ್ಗೆಯರನ್ನು ಆರಾಧಿಸುತ್ತಾರೆ. ಅದೇ ರೀತಿ ಚುನಾವಣೆ ದಿನ ಪ್ರತಿ ಬೂತಿನಲ್ಲಿ ಮೊದಲಿಗೆ ಒಂಬತ್ತು ಮಹಿಳೆಯರು ತೆರಳಿ ಮೋದಿಗೆ ಮತ ಹಾಕಬೇಕೆಂದು ಬ್ರಿಜೇಶ್ ಚೌಟ ಕರೆ ನೀಡಿದರು. ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಸಾಥ್ ನೀಡಿದರು.
ಸಂಜೆಯ ಬಳಿಕ ಮಂಗಳೂರು ನಗರದ ಬೋಳೂರು ವಾರ್ಡ್ ನಲ್ಲಿ ಸುಲ್ತಾನ್ ಬತ್ತೇರಿ ಆಸುಪಾಸಿನಲ್ಲಿ ಶಾಸಕ ವೇದವ್ಯಾಸ ಕಾಮತ್ ಜೊತೆಗೆ ಕ್ಯಾ.ಬ್ರಿಜೇಶ್ ಚೌಟ ರೋಡ್ ಶೋ ನಡೆಸಿದರು. ಕಾರ್ಪೊರೇಟರ್ ಜಗದೀಶ್ ಶೆಟ್ಟಿ ಮತ್ತಿತರರು ಜೊತೆಗಿದ್ದರು. ರಾತ್ರಿಯಾದರೂ ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು, ಮೋದಿ ಅಭಿಮಾನಿಗಳು ಸೇರಿ ಬಿಜೆಪಿ ಅಭ್ಯರ್ಥಿ ಜೊತೆಗೆ ಸಾಥ್ ನೀಡಿದರು.
Be the first to comment on "ಮಂಗಳೂರಿನಲ್ಲಿ ಕ್ಯಾ.ಬ್ರಿಜೇಶ್ ಚೌಟ ಮನೆ ಮನೆ ಮಹಾಸಂಪರ್ಕ ಅಭಿಯಾನ, ಬೋಳೂರಿನಲ್ಲಿ ರೋಡ್ ಶೋ"