ಬಂಟ್ವಾಳ: ಗೂಡಿನಬಳಿಯ ಬಳಕ ಎಂಬಲ್ಲಿ ಮನೆಗೆ ಸೋಮವಾರ ಬೆಳಗ್ಗೆ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಸ್ಥಳಕ್ಕೆ ಬಂಟ್ವಾಳದ ಅಗ್ನಿಶಾಮಕದ ಸಿಬ್ಬಂದಿ ಆಗಮಿಸಲು ಪರದಾಟ ನಡೆಸಿದ ಘಟನೆ ನಡೆದಿದೆ. ಚಾರ್ಲಿ ಡಿಸೋಜಾ ಎಂಬವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ಘಟನೆ ನಡೆದಿದೆ. ಬೆಳಗ್ಗೆ 9.30ಕ್ಕೆ ಅಗ್ನಿ ಅನಾಹುತ ಸಂಭವಿಸಿದ್ದು, ಮನೆಯಲ್ಲಿ ಅನಾರೋಗ್ಯಪೀಡಿತ ಯಜಮಾನ ವಿಜಯ್ ಮತ್ತು ಅವರ ಮಗಳು ಇದ್ದರು. ವಿಜಯ್ ಅವರ ಮಗಳು ಬಟ್ಟೆಯಂಗಡಿ ನಡೆಸುತ್ತಿದ್ದು, ಮನೆಯಲ್ಲಿ ಬಟ್ಟೆಗಳು ಇದ್ದವು. ಬೆಂಕಿ ಅವಘಡದ ವೇಳೆ ಲಕ್ಷಾಂತರ ರೂ ಮೌಲ್ಯದ ಬಟ್ಟೆ, ಗೃಹೋಪಯೋಗಿ ವಸ್ತುಗಳು ಸುಟ್ಟುಹೋಗಿವೆ. ಮನೆ ಯಜಮಾನ ವಿಜಯ್ ಅವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಬಳಿಕ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಬೆಂಕಿ ನಂದಿಸುವ ಕಾರ್ಯವನ್ನು ಮಾಡಲಾಯಿತು. ಸ್ಥಳಕ್ಕೆ ಕಂದಾಯ ಇಲಾಖೆಯ ಗ್ರಾಮಾಡಳಿತಾಧಿಕಾರಿ ಯಶ್ವಿತಾ ಮತ್ತು ಸಿಬ್ಬಂದಿ ಸದಾಶಿವ ಕೈಕಂಬ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಿ.ಸಿ.ರೋಡಿನಿಂದ ರಕ್ತೇಶ್ವರಿ ದೇವಸ್ಥಾನದ ಎದುರು ಭಾಗದಿಂದ ಕೈಕುಂಜೆ ಮೂಲಕ ರೈಲ್ವೆ ಸ್ಟೇಶನ್ ನ ಬದಿಯಲ್ಲಿ ರೈಲ್ವೆ ಸೇತುವೆ ಅಡಿಯಲ್ಲಿ ಮಾರ್ಗವೊಂದಿದ್ದು ಅದು ಅಗಲ ಕಿರಿದಾಗಿದೆ. ಇಲ್ಲಿ ಅಗ್ನಿಶಾಮಕ ವಾಹನ ಸಾಗುವ ವೇಳೆ ಚಕ್ರ ಕುಸಿದು ಪರದಾಟ ಅನುಭವಿಸಬೇಕಾಯಿತು. ಬಳಿಕ ಕ್ರೇನ್ ಬಳಸಿ ಅದನ್ನು ತೆಗೆಸಲಾಯಿತು. ಗೂಡಿನಬಳಿಯ ಬಳಕಕ್ಕೆ ಘನ ವಾಹನ ಹೋಗಲು ಬೇರೆ ಮಾರ್ಗವೇ ಇಲ್ಲವಾಗಿದ್ದು, ರೈಲ್ವೆ ಕ್ವಾರ್ಟಸ್ ಬಳಿ ತಡೆಬೇಲಿ ಹಾಕಲಾಗಿದೆ ಈ ಹಿನ್ನೆಲೆಯಲ್ಲಿ ಬಿ.ಸಿ.ರೋಡಿನಲ್ಲಿ ಈಗಿರುವ ಸ್ಮಶಾನಕ್ಕೆ ತೆರಳುವ ಮಾರ್ಗವನ್ನು ಸುಸ್ಥಿತಿಗೆ ತರುವುದು, ಅಗ್ನಿಶಾಮಕ ವಾಹನ ಸಹಿತ ತುರ್ತು ಸಂದರ್ಭ ಸಾಗುವ ವಾಹನಗಳ ಸಾಗಾಟಕ್ಕೆ ಸೂಕ್ತ ರಸ್ತೆ ನಿರ್ಮಿಸಬೇಕು ಎಂದು ರೈಲ್ವೆ ಸಲಹಾ ಸಮಿತಿ ಸದಸ್ಯ ಕೇಶವ ದೈಪಲ ಒತ್ತಾಯಿಸಿದ್ದಾರೆ.



Be the first to comment on "ಗೂಡಿನಬಳಿ ಬಳಕ: ಮನೆಯೊಂದಕ್ಕೆ ಬೆಂಕಿ, ದಾರಿ ಇಲ್ಲದೆ ಪರದಾಡಿದ ಅಗ್ನಿಶಾಮಕ ವಾಹನ"