ಚಾರ್ಮಾಡಿ, ಶಿರಾಡಿ, ಸಂಪಾಜೆ ಘಾಟಿಯಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಬರುವವರಾಗಿದ್ದರೆ ಎಡಬಲ ನೋಡಿಕೊಂಡು ಸಾಗುವುದಷ್ಟೇ ಅಲ್ಲ, ಮುಂದೇನು ಇರುತ್ತದೆ ಎಂಬುದೂ ಗಮನದಲ್ಲಿರಲಿ. ಯಾವುದೇ ಹೊತ್ತಿನಲ್ಲಿ ಕಾಡಾನೆಗಳು ಹೆಜ್ಜೆಹಾಕುತ್ತಿರಬಹುದು.
ದೀಪಾವಳಿ ಸಂದರ್ಭ ವಾಹನಗಳ ಭರಾಟೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸಾಕಷ್ಟು ಇರುವಂತೆಯೇ ಕಾಡಾನೆಗಳೂ ಹೊರಗೆ ಬರುತ್ತಿವೆ. ಕಳೆದ ಎರಡು ಮೂರು ದಿನಗಳ ಅವಧಿಯಲ್ಲಿ ಈ ಭಾಗದಲ್ಲಿ ನಡೆದ ಘಟನೆಗಳನ್ನೇ ಅವಲೋಕಿಸಿದರೆ ಇದು ತಿಳಿಯುತ್ತದೆ. ಸುಳ್ಯ ತಾಲೂಕಿನ ಪಂಜಿಕಲ್ಲು ಎಂಬಲ್ಲಿ ಕಾಡಾನೆಯೊಂದು ಹೆದ್ದಾರಿಯಲ್ಲಿ ನಡೆದುಕೊಂಡು ಬರುತ್ತಿರುವುದನ್ನು ಕಂಡ ಬೈಕ್ ಸವಾರರು ಹಾಗು ಪ್ರಯಾಣಿಕರು ಆತಂಕದಿಂದ ಕೆಲ ಕಾಲ ಅಲ್ಲೇ ವಾಹನ ನಿಲ್ಲಿಸಿದರು.ನವೆಂಬರ್ 10ರಂದು ಬೆಳಗ್ಗೆ ಕಾಡಾನೆಯೊಂದು ಪಂಜಿಕಲ್ಲು ಬಳಿಯ ಮುಖ್ಯರಸ್ತೆಯಲ್ಲಿ ರಾಜಾರೋಷವಾಗಿ ನಡೆದುಕೊಂಡು ಸವಾರಿ ನಡೆಸಿದ್ದು, ಸಾರ್ವಜನಿಕರು ಈ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದರು.
ಜಾಲ್ಸೂರು ಕಾಸರಗೋಡು ಅಂತಾರಾಜ್ಯ ರಸ್ತೆಯಲ್ಲಿ ಏಳು ಕಾಡಾನೆಗಳ ಹಿಂಡು ಕಾಣಿಸಿಕೊಂಡಿದೆ. ಒಂದು ಮರಿಯೂ ಜತೆಗಿತ್ತು. ಹಗಲು ಹೊತ್ತಿನಲ್ಲಿ ಅರಣ್ಯದಲ್ಲಿರುವ ಇವು, ರಾತ್ರಿಯಾಗುತ್ತಿದ್ದಂತೆ ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ, ಮಂಡೆಕೋಲು ಗ್ರಾಮದ ದೇವರಗುಂಡ ಮುರೂರು, ಪಂಜಿಕಲ್ಲು ಗಡಿಭಾಗದಲ್ಲಿ ಸಂಚರಿಸುತ್ತವೆ.
ಕಳೆದ ಒಂದು ವಾರದಿಂದ ಕಡಬದ ಸಿರಿಬಾಗಿಲು ಗ್ರಾಮದ ರೆಂಜಾಳ, ಪೆರ್ಜೆ ಪ್ರದೇಶದಲ್ಲಿ ಕಾಡಾನೆಗಳ ಅಟ್ಟಹಾಸಕ್ಕೆ ಕೃಷಿ ತೋಟಗಳು ನಾಶವಾಗಿವೆ. ಹಿಂಡುಹಿಂಡಾಗಿ ದಾಳಿ ಮಾಡುವ ಕಾಡಾನೆಗಳು ಶೂರಪ್ಪ ಗೌಡ, ಉಮೇಶ ಗೌಡ ಅವರ ತೋಟಕ್ಕೆ ಲಗ್ಗೆ ಇಟ್ಟು, ಫಲ ನೀಡುತ್ತಿರುವ ತೆಂಗು, ಬಾಳೆ, ಅಡಕೆ ಮರಗಳನ್ನು ನಾಶ ಮಾಡಿವೆ.
ನಾವೂರಿನಲ್ಲಿ ಶುಕ್ರವಾರ ಸಂಜೆ ಒಂಟಿ ಸಲಗ ಕಂಡುಬಂದಿತ್ತು. ಸುಮಾರು 15 ಕಿ.ಮೀ ದೂರ ಅದು ಸಂಚರಿಸಿ, ಶನಿವಾರ ಸಂಜೆ ವೇಳೆಗೆ ಚಾರ್ಮಾಡಿ – ಕನಪಾಡಿ ಅರಣ್ಯದತ್ತ ಸಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಒಂಟಿ ಸಲಗವು ಇಂದಬೆಟ್ಟು, ಮೈಂದಡ್ಕ, ಕಾನರ್ಪ ಮೊದಲಾದ ಕಡೆಗಳ ಜನವಾಸ್ತವ್ಯ ಇರುವ ಪ್ರದೇಶಗಳ ಬದಿಯಲ್ಲೇ ಸಾಗಿದೆ.
Be the first to comment on "ರಸ್ತೆಗಳಲ್ಲಿ ಕಾಣಿಸಿಕೊಳ್ಳುತ್ತಿವೆ ಕಾಡಾನೆ…. ವಾಹನ ಸವಾರರೇ ಎಚ್ಚರ!!"