ಉತ್ತರ ಪ್ರದೇಶದ ಮಿರ್ಜಾಪುರದ ಧೋರುಪುರದ ಅಭಯ್ ರಾಜ್ ಸಿಂಗ್ (26) ಹಾಗೂ ರಾಜ್ ಪುರದ ಹರಿಶಂಕರ್ ಗಿರಿ(25) ಈಗ ರೈಲ್ವೆ ಪ್ರಯಾಣಿಕರ ಚಿನ್ನಾಭರಣ ಕಳವು ಮಾಡಿದ ವಿಚಾರದಲ್ಲಿ ಮಂಗಳೂರಿನ ಆರ್.ಪಿ.ಎಫ್. ತಂಡಕ್ಕೆ ಸೆರೆಯಾಗಿದ್ದಾರೆ. ರೈಲ್ವೆಯಲ್ಲಿ ಕಳ್ಳತನದ ಘಟನೆಗಳು ಹಲವಾರು ನಡೆಯುತ್ತವೆ. ಆದರೆ ಈ ಕಳ್ಳರ ಕತೆಯೇ ಬೇರೆ. ಇವರು ಉತ್ತರ ಪ್ರದೇಶದಿಂದ ವಿಮಾನದಲ್ಲಿ ಆಗಮಿಸಿ ರೈಲಿನಲ್ಲಿ ಪ್ರಯಾಣಿಕರ ಚಿನ್ನಾಭರಣಗಳನ್ನು ಕದಿಯುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.
ಸೆಪ್ಟೆಂಬರ್ 28ರಂದು ಮಂಗಳೂರು ಮತ್ತು ಸುರತ್ಕಲ್ ನಡುವೆ ಸಂಚಾರ ಮಾಡುತ್ತಿದ್ದ ರೈಲಿನಲ್ಲಿ ಪ್ರಯಾಣಿಕರ ಚಿನ್ನಾಭರಣ ಕಳವು ಮಾಡಲಾಗಿತ್ತು. ಈ ಸಂದರ್ಭ ಸಂಶಯಾಸ್ಪದ ರೀತಿಯಲ್ಲಿ ವರ್ತಿಸುತ್ತಿದ್ದ ಈ ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿತ್ತು. ಆಗ ಇವರು ಕಳ್ಳತನ ಎಸಗಿರುವುದಾಗಿ ಒಪ್ಪಿದ್ದರು. ತಕ್ಷಣ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡ ಆರ್ ಪಿಎಫ್ ತಂಡ ರೈಲ್ವೇ ಪೊಲೀಸರಿಗೆ ಒಪ್ಪಿಸಿದ್ದಾರೆ. ತನಿಖೆ ವೇಳೆ ಆರೋಪಿಗಳು ಉತ್ತರಪ್ರದೇಶದಿಂದ ವಿಮಾನದಲ್ಲಿ ಆಗಮಿಸಿ ರಾತ್ರಿ ವೇಳೆ ಸಂಚರಿಸುವ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಮಲಗಿದ್ದ ವೃದ್ಧ ಹಾಗೂ ಮಹಿಳಾ ಪ್ರಯಾಣಿಕರ ಚಿನ್ನಾಭರಣಗಳನ್ನು ದೋಚಲು ಪ್ಲ್ಯಾನ್ ಮಾಡುತ್ತಿದ್ದರು. ರಾತ್ರಿ ವೇಳೆ ರೈಲಿನ ವೇಗ ಕಡಿಮೆಯಾಗುತ್ತಿದ್ದಂತೆ ಚಿನ್ನಾಭರಣಗಳನ್ನು ಎಳೆದೊಯ್ದು ಬೋಗಿಯಿಂದ ಹೊರಜಿಗಿದು ಪರಾರಿಯಾಗುತ್ತಿದ್ದರು. ಈ ಕೃತ್ಯ ಎಸಗಲು ಅವರು ವಾರಾಂತ್ಯದ ರೈಲನ್ನೇ ಆಯ್ಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
Be the first to comment on "ಈ ಕಳ್ಳರು ವಾರಾಂತ್ಯದ ರೈಲನ್ನೇ ಹುಡುಕಿ ಪ್ರಯಾಣಿಕರ ಸೋಗಿನಲ್ಲಿ ಕಳವು ಮಾಡುತ್ತಿದ್ದರು..ವಿಮಾನದಲ್ಲಿ ಬಂದು ರೈಲಿನಲ್ಲಿ ಕಳವು ಮಾಡುತ್ತಿದ್ದ ಖತರ್ನಾಕ್ ಗಳಿವರು."