ಬಂಟ್ವಾಳ: ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರದ ಶ್ರೀದೇವರ ಪ್ರತಿಷ್ಠಾ ಬ್ರಹ್ಮಕಲಶದ ಅಷ್ಟಮ ವರ್ಧಂತ್ಯುತ್ಸವ ಕಾರ್ಯಕ್ರಮಗಳು ಬುಧವಾರ ನೆರವೇರಿದವು.
ಬೆಳಗ್ಗೆ ವಿವಿಧ ವೈದಿಕ ಕಾರ್ಯಕ್ರಮಗಳು ನಡೆದ ಬಳಿಕ ಮಂಗಳೂರು ಹವ್ಯಕ ಮಂಡಲದ ಸಹಾಯಕ ಪ್ರಧಾನರಾದ ಡಾ. ರಾಜೇಂದ್ರ ಪ್ರಸಾದ್ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಮಾತನಾಡಿದ ಅವರು ಶ್ರೀ ರಾಘವೇಶ್ವರ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ರಚನಾತ್ಮಕ ಕಾರ್ಯಗಳು ನಡೆಯುತ್ತಿದ್ದು, ಕ್ಷೇತ್ರ ಎಲ್ಲರ ಗಮನ ಸೆಳೆಯುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್, ಮಂಗಳೂರು ಮಂಡಲ ಉಪಾಧ್ಯಕ್ಷ ರಮೇಶ್ ನೂಜಿಬೈಲು ಭಾಗವಹಿಸಿ ಶುಭ ಹಾರೈಸಿದರು. ಸೇವಾ ಸಮಿತಿ ಗೌರವಾಧ್ಯಕ್ಷ ಸಿ.ವಿ.ಗೋಪಾಲಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಪಿ.ಶಾಮ ಭಟ್ ಲೆಕ್ಕಪತ್ರ ಮಂಡಿಸಿದರು. ಸೇವಾ ಸಮಿತಿ ಅಧ್ಯಕ್ಷ ರಾಕೋಡಿ ಈಶ್ವರ ಭಟ್ ಅವರು ಕ್ಷೇತ್ರದ ಬೆಳವಣಿಗೆಗೆ ಹಲವರು ನೀಡಿದ ಕೊಡುಗೆಯನ್ನು ಸ್ಮರಿಸಿ ಎಲ್ಲರ ಸಹಕಾರ ಕೋರಿದರು.
ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ ರಾಕೋಡಿ ಸುಬ್ರಹ್ಮಣ್ಯ ಭಟ್ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ತೆಂಗು, ಅಡಕೆ ಮರ ಏರುವ ಬೈಕ್ ಆವಿಷ್ಕರಿಸಿದ ಪ್ರಗತಿಶೀಲ ಕೃಷಿಕ ಕೆ.ಗಣಪತಿ ಭಟ್ ಹಾಗೂ ನೆಟ್ಲ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಎಸ್.ಭಟ್, ನಂದಾವರ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅರವಿಂದ ಪದ್ಯಾಣ ಮತ್ತು ಪಾಕತಜ್ಞ ಶ್ರೀನಿವಾಸ ಮಯ್ಯ ಅವರನ್ನು ಗೌರವಿಸಲಾಯಿತು. ಹವ್ಯಕ ವಲಯ ಕಲ್ಲಡ್ಕ ಅಧ್ಯಕ್ಷ ಯು.ಎಸ್.ಚಂದ್ರಶೇಖರ ಭಟ್ ನೆಕ್ಕಿತರವು, ಸೇವಾ ಸಮಿತಿ ಕೋಶಾಧಿಕಾರಿ ಎಸ್.ಎನ್.ಶ್ರೀಕಾಂತ್, ಸೇವಾ ಸಮಿತಿ ಸದಸ್ಯರು ಹಾಗೂ ಕ್ಷೇತ್ರದ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು. ಅಮೈ ಜನಾರ್ದನ ಭಟ್ ವಂದಿಸಿದರು. ಮುರಳೀಕೃಷ್ಣ ಕುಕ್ಕಿಲ ಕಾರ್ಯಕ್ರಮ ನಿರೂಪಿಸಿದರು. ಸರಸ್ವತಿ ಕಲ್ಲಡ್ಕ ಪ್ರಾರ್ಥಿಸಿದರು.
Be the first to comment on "ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರದಲ್ಲಿ ಪ್ರತಿಷ್ಠಾ ಬ್ರಹ್ಮಕಲಶ ವರ್ಧಂತ್ಯುತ್ಸವ"