ಬಂಟ್ವಾಳ: ಜನಪ್ರಿಯತೆಗೋಸ್ಕರ ಮಹಾರಾಷ್ಟ್ರ ಮುಖ್ಯಮಂತ್ರಿ ಪದೇ ಪದೇ ಗಡಿ ವಿಚಾರವನ್ನು ತೆಗೆಯುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಬಂಟ್ವಾಳದಲ್ಲಿ ಭಾನುವಾರ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಉದ್ಘಾಟನೆಗೆ ಆಗಮಿಸಿದ ಸಂದರ್ಭ, ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಮುಖ್ಯ ಮಂತ್ರಿ ಗಡಿ ಕ್ಯಾತೆ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, ಯಾವ ವ್ಯಕ್ತಿಯ ಜನಪ್ರಿಯತೆ ಕಡಿಮೆಯಾಗುತ್ತದೋ ಆಗ ಆತ ಯಾರು ಬಲಿಷ್ಠ ನಾಗಿರುತ್ತಾನೋ ಅವನಿಗೆ ಬೈಯುತ್ತಾನೆ. ಮಹಾರಾಷ್ಟ್ರ ಮುಖ್ಯಮಂತ್ರಿಯವರ ಪಾಪ್ಯುಲಾರಿಟಿ ಕಡಿಮೆಯಾಗುತ್ತಿದೆ. ಕರ್ನಾಟಕದ ಭೂಮಿ ಬಗ್ಗೆ ಮಾತನಾಡಿದರೆ ಮರಾಠಿಗರು ತನ್ನ ಪರವಾಗಿ ಇರುತ್ತಾರೆ ಎನ್ನುವ ಭ್ರಮೆಯಲ್ಲಿ ಅವರಿದ್ದಾರೆ. ಗಡಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮ ಎಂದರು. ಮಹಾಜನ್ ವರದಿ ರಿಪೋರ್ಟ್ ಕೊಟ್ಟ ಬಳಿಕವೂ ಹುಚ್ಚು ಹೇಳಿಕೆ ಕೊಡುತ್ತಿದ್ದಾರೆ ಎಂದರು.
ಬಸವರಾಜ ಪಾಟೀಲ ಯತ್ನಾಳ್ ಅವರು ಮುಖ್ಯಮಂತ್ರಿ ಬದಲಾವಣೆ ಕುರಿತು ಕೇಳಿದ ಪ್ರಶ್ನೆಗೆ ಕೆಂಡಾಮಂಡಲವಾದ ಈಶ್ವರಪ್ಪ ಅದನ್ನು ಬಿಟ್ಟು ಬೇರೆ ಏನಾದ್ರು ಕೇಳಿ ಉತ್ತರಿಸುತ್ತೇನೆ, ಆ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ ಎಂದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಹಿತ ನಾವೆಲ್ಲರೂ ಇವತ್ತು ಮೀಟಿಂಗ್ ಮಾಡಿದ್ದೇವೆ. ಹಾಗೆಂದು ಅದಕ್ಕೆ ಬೇರೆ ಅರ್ಥ ಕಲ್ಪಿಸಲಾಗುತ್ತದೆಯೇ ಎಂದು ಪ್ರಶ್ನಿಸಿದ ಈಶ್ವರಪ್ಪ, ಬಿಜೆಪಿಯ ಶಾಸಕರು ಪ್ರತ್ಯೇಕ ಸಭೆ ನಡೆಸುವುದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾದ್ದಿಲ್ಲ. ಬಿಜೆಪಿಯಲ್ಲಿ ಮೂಲಬಿಜೆಪಿ, ವಲಸೆ ಬಿಜೆಪಿ ಎಂದಿಲ್ಲ ಅವೆಲ್ಲವೂ ಮಾಧ್ಯಮ ಸೃಷ್ಟಿ ಎಂದವರು ತಿಳಿಸಿದರು. ಈ ಸಂದರ್ಭ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಇದ್ದರು.
Be the first to comment on "ಜನಪ್ರಿಯತೆಗೋಸ್ಕರ ಮಹಾರಾಷ್ಟ್ರ ಸಿಎಂ ಅವರಿಂದ ಗಡಿ ಕ್ಯಾತೆ: ಬಂಟ್ವಾಳದಲ್ಲಿ ಸಚಿವ ಈಶ್ವರಪ್ಪ"