ರಾಜಕೀಯ ಪಕ್ಷಗಳ ವಾಕ್ಸಮರಕ್ಕೆ ವೇದಿಕೆಯಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ

ಜನರಿಗೆ ಕುಡಿಯುವ ನೀರೊದಗಿಸಲು ರೂಪಿಸಲಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಸರಪಾಡಿ ಘಟಕದ ಗೇಟಿನ ಮುಂಭಾಗ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಕಾರ್ಯಕರ್ತರು ಪರಸ್ಪರ ಲೇವಡಿ, ಘೋಷಣೆ, ಪ್ರತಿಘೋಷಣೆಗಳನ್ನು ಕೂಗುತ್ತಾ ಆರೋಪ, ಪ್ರತ್ಯಾರೋಪ, ವಾಕ್ಸಮರಗಳನ್ನು ನಡೆಸಿದ ಘಟನೆ ಬಂಟ್ವಾಳ ತಾಲೂಕಿನ ಸರಪಾಡಿಯಲ್ಲಿ ಶನಿವಾರ ನಡೆಯಿತು.

ಶನಿವಾರ ಬೆಳಗ್ಗೆ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಜಿಪಂ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಎಂ.ಎಸ್.ಮಹಮ್ಮದ್, ಪದ್ಮಶೇಖರ ಜೈನ್ ಸಹಿತ ಜನಪ್ರತಿನಿಧಿಗಳ ಜೊತೆ ಮಾಜಿ ಸಚಿವ ಬಿ.ರಮಾನಾಥ ರೈ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ನೇತೃತ್ವದಲ್ಲಿ ತಂಡ ಸರಪಾಡಿಯಲ್ಲಿರುವ ಘಟಕಕ್ಕೆ ಭೇಟಿ ನೀಡಿದ ಸಂದರ್ಭ ಇದನ್ನು ಬಲವಾಗಿ ವಿರೋಧಿಸಿದ ಬಿಜೆಪಿಯ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ, ಯುವ ಮೋರ್ಚಾ ಕ್ಷೇತ್ರಾಧ್ಯಕ್ಷ ಪ್ರದೀಪ್ ಅಜ್ಜಿಬೆಟ್ಟು, ನರಿಕೊಂಬು ಗ್ರಾಪಂ ಮಾಜಿ ಅಧ್ಯಕ್ಷ ಯಶೋಧರ ಕರ್ಬೆಟ್ಟು ಸಹಿತ ಬಿಜೆಪಿ ಕಾರ್ಯಕರ್ತರು ಧಿಕ್ಕಾರ ಘೋಷಣೆ ಕೂಗಿ ಆಕ್ಷೇಪ ವ್ಯಕ್ತಪಡಿಸಿದರು. ಇದೇ ಹೊತ್ತಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರೂ ಅದೇ ಜಾಗದಲ್ಲಿ ಜಮಾಯಿಸಿ ಘೋಷಣೆ, ಪ್ರತಿಘೋಷಣೆ ಸಹಿತ ಮಾತಿನ ಚಕಮಕಿಯನ್ನು ನಡೆಸತೊಡಗಿದರು. ಎರಡೂ ತಂಡಗಳನ್ನು ನಿಯಂತ್ರಿಸಲು ಬಂಟ್ವಾಳ ಸರ್ಕಲ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್, ಸಬ್ ಇನ್ಸ್ ಪೆಕ್ಟರ್ ಗಳಾದ ಪ್ರಸನ್ನ, ಅವಿನಾಶ್, ಕಲೈಮಾರ್ ಮತ್ತು ರಾಜೇಶ್ ಸಹಿತ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಹರಸಾಹಸಪಟ್ಟರು. ಕೊನೆಗೆ ಸರ್ಕಲ್ ಇನ್ಸ್ ಪೆಕ್ಟರ್ ಮನವೊಲಿಸಿದ ಬಳಿಕ ಪರಿಸ್ಥಿತಿ ತಿಳಿಗೊಂಡಿತು. ಈ ಸಂದರ್ಭ ಸ್ಥಳಕ್ಕೆ ಅಧಿಕಾರಿಗಳು ಆಗಮಿಸಬೇಕು ಎಂದು ಒತ್ತಾಯಿಸಿ, ಕಾಂಗ್ರೆಸ್ ಸದಸ್ಯರು ರೈ ನೇತೃತ್ವದಲ್ಲಿ ಧರಣಿ ಕುಳಿತರು.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಮಾನಾಥ ರೈ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ತಾನು ಸಚಿವನಾಗಿದ್ದಾಗ ಬಂಟ್ವಾಳ ಕ್ಷೇತ್ರಕ್ಕೆ ಒದಗಿಸಿದ್ದೆ. ಇಂದು ಸಾಮಾನ್ಯ ನಾಗರಿಕನಾಗಿ ನಾನು ಘಟಕ ವೀಕ್ಷಣೆಗೆ ಚುನಾಯಿತ ಜನಪ್ರತಿನಿಧಿಗಳ ಜೊತೆಗೆ ಬಂದಿದ್ದೆ. ಆದರೆ ರಾಜಕೀಯ ಕಾರಣಗಳಿಂದ ಪ್ರವೇಶಿಸದಂತೆ ತಡೆಯೊಡ್ಡಲಾಗುತ್ತಿದ್ದು, ಅಧಿಕಾರಿಗಳ ಮೂಲಕ ಜನಪ್ರತಿನಿಧಿಗಳಿಗೂ ಅಗೌರವ ತೋರಲಾಗುತ್ತಿದೆ. ಇದನ್ನು ತಾಪಂ, ಜಿಪಂ ಸಭೆಗಳಲ್ಲೂ ಪ್ರಶ್ನಿಸಲಾಗುತ್ತದೆ ಎಂದರು.

ಜಾಹೀರಾತು

ತಾಲೂಕು ಪಂಚಾಯತ್ ಅಧ್ಯಕ್ಷನ ನೆಲೆಯಲ್ಲಿ ಸರಪಾಡಿ ಬಹುಗ್ರಾಮ ಕುಡಿಯುವ ನೀರಿನ ಘಟಕ‌ ವೀಕ್ಷಣೆಗೆ ಭೇಟಿ ನೀಡಲು ಆಗಮಿಸಿದ ತನಗೆ ಅಡ್ಡಿಪಡಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅವಮಾನ ಎಂದು ಈ ಸಂದರ್ಭ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಹೇಳಿದರು. ಕಳೆದ ಎರಡು ವರ್ಷಗಳಲ್ಲಿ ಉಳಿದ ನಾಲ್ಕು ಬಹುಗ್ರಾಮ ಯೋಜನೆಯ ಘಟಕಗಳನ್ನು ಮಾಜಿ ಸಚಿವ ರಮಾನಾಥ ರೈ ಉಪಸ್ಥಿತಿಯಲ್ಲಿ ವೀಕ್ಷಿಸಿದ್ದೇನೆ, ಆದರೆ ಈ ಬಾರಿ ಅಧಿಕಾರಿಗಳ ಮೆಲೆ ಒತ್ತಡ ಹೇರಿ ವೀಕ್ಷಣೆಗೆ ತಡೆ ಒಡ್ಡಿದೆ ಎಂದರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು

About the Author

Bantwal News
2016 ನವೆಂಬರ್ 10ರಂದು ಆರಂಭಗೊಂಡ ಬಂಟ್ವಾಳದ ಮೊದಲ ವೆಬ್ ಪತ್ರಿಕೆ ಇದು. 25 ಲಕ್ಷಕ್ಕಿಂತಲೂ ಅಧಿಕ ಮಂದಿ ಕೇವಲ 45 ತಿಂಗಳಲ್ಲೇ ಓದಿದ ಜಾಲತಾಣವಿದು. ಸಂಪಾದಕ: ಹರೀಶ ಮಾಂಬಾಡಿ. ಬ್ರೇಕಿಂಗ್ ನ್ಯೂಸ್ ಧಾವಂತದಲ್ಲಿ ಅವಸರದ ಸುದ್ದಿ ಕೊಡದೆ, ಮಾಹಿತಿ ಖಚಿತಗೊಂಡ ಬಳಿಕವಷ್ಟೇ ಪ್ರಕಟಿಸಲಾಗುತ್ತದೆ. ಅತಿರಂಜಿತ ಸುದ್ದಿ ಇಲ್ಲಿಲ್ಲ. ಇದು www.bantwalnews.com ಧ್ಯೇಯ.

Be the first to comment on "ರಾಜಕೀಯ ಪಕ್ಷಗಳ ವಾಕ್ಸಮರಕ್ಕೆ ವೇದಿಕೆಯಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*