ಕೊಡಗು ಜಿಲ್ಲೆಯ ಭಾಗಮಂಡಲ ವ್ಯಾಪ್ತಿಯ ತಲಕಾವೇರಿಯಲ್ಲಿ ನಿನ್ನೆ ತಡರಾತ್ರಿ ಸುರಿದ ಮಳೆಗೆ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ಒಂದು ಭಾಗ ಜರಿದು ತಲಕಾವೇರಿಯ ದೇವಸ್ಥಾನದ ಅರ್ಚಕರುಗಳ ಎರಡು ಮನೆ ಮೇಲೆ ಬಿದ್ದಿದೆ.
‘
ಸ್ಥಳದಲ್ಲಿ ದೊರೆತ ಮಾಹಿತಿಯಂತೆ ಒಂದು ಮನೆಯಲ್ಲಿ ವಾಸವಿದ್ದ ನಾರಾಯಣ ಆಚಾರ್ (ಅಂದಾಜು 80 ವರ್ಷ), ಶಾಂತ (ನಾರಾಣ ಆಚಾರ್ ರವರ ಪತ್ನಿ ಅಂದಾಜು 70 ವರ್ಷ), ಆನಂದತೀರ್ಥ ಸ್ವಾಮಿ (ನಾರಾಣ ಆಚಾರ್ ರವರ ಅಣ್ಣ ಅಂದಾಜು 86 ವರ್ಷ) ಮತ್ತು ಇಬ್ಬರು ಸಹಾಯಕ ಅರ್ಚಕರಾದ ಪವನ್ ಮತ್ತು ರವಿಕಿರಣ್ ಸೇರಿ ಒಟ್ಟು 5 ಮಂದಿ ಕಾಣೆಯಾಗಿರುತ್ತಾರೆ ಎಂದು ಕೊಡಗು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣಾ ತಂಡ ಸ್ಥಳಕ್ಕೆ ಭೇಟಿ ನೀಡಿದರೂ ಗುರುವಾರ ಅತೀಯಾದ ಮಳೆ ಮತ್ತು ಮಂಜು ಮುಸುಕಿರುವ ಕಾರಣ ಪರಿಹಾರ ಕಾರ್ಯಾಚರಣೆಯನ್ನು ನಡೆಸಲು ತೊಡಕುಂಟಾಗಿದ್ದು, ನಾಳೆ ಪರಿಹಾರ ಕಾರ್ಯಾಚರಣೆಯನ್ನು ಮುಂದುವರೆಸಲಾಗುವುದು ಎಂದವರು ಹೇಳಿದ್ದಾರೆ. ಭಾಗಮಂಡಲದಿಂದ ತಲಕಾವೇರಿಗೆ ತೆರಳುವ ರಸ್ತೆಯಲ್ಲಿ ಹಲವು ಭಾಗಗಳಲ್ಲಿ ಭೂ ಕುಸಿತ ಉಂಟಾಗಿದ್ದು, ಯಾವುದೇ ವಾಹನಗಳು ತೆರಳಲು ಸಾಧ್ಯವಾಗುತ್ತಿಲ್ಲ. ಲೋಕೋಪಯೋಗಿ ಇಲಾಖೆಯಿಂದ ಮಣ್ಣನ್ನು ತೆರವುಗೊಳಿಸುವ ಕಾರ್ಯ ನಡೆಸಿತು.
ಗುಡ್ಡ ಜರಿದು ನಾಪತ್ತೆಯಾದವರಲ್ಲಿ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಕನಪಾಡಿ ನಿವಾಸಿ ರವಿಕಿರಣ್ (24) ಅವರೂ ಸೇರಿದ್ದಾರೆ. ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಕನಪಾಡಿ ನಿವಾಸಿ ರಾಮಕೃಷ್ಣ ರಾವ್ ಮತ್ತು ರೇಣುಕಾ ದಂಪತಿ ಪುತ್ರ ರವಿಕಿರಣ್ ಸುಮಾರು ಎರಡು ವರ್ಷಗಳಿಂದ ತಲಕಾವೇರಿ ಕ್ಷೇತ್ರದಲ್ಲಿ ಅರ್ಚಕರ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಇವರು ಹುಟ್ಟೂರಿಗೆ ಆಗಮಿಸಿ ಮೇ ಅಂತ್ಯದ ವೇಳೆ ಮರಳಿದ್ದರು. ಪೌರೋಹಿತ್ಯ ಸಹಾಯಕ ವೃತ್ತಿಯನ್ನು ಮಾಡುತ್ತಿದ್ದ ಅವರು ರಾವ್ ದಂಪತಿಯ ಅವಳಿ ಮಕ್ಕಳಲ್ಲಿ ಒಬ್ಬರು.
ತಲಕಾವೇರಿಯಲ್ಲಿ ಗುಡ್ಡ ಕುಸಿತದಿಂದ ಬಂಟ್ವಾಳದ ಕಳ್ಳಿಗೆ ಗ್ರಾಮದ ಕನಪಾಡಿ ನಿವಾಸಿ ರವಿಕಿರಣ ಎಂಬವರು ನಾಪತ್ತೆಯಾಗಿದ್ದು ಈ ಬಗ್ಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ರವರು ಶಾಸಕರಾದ ಕೆ.ಜೆ. ಬೋಪಯ್ಯರವರನ್ನು ಸಂಪರ್ಕಿಸಿ ಘಟನೆಯ ಮಾಹಿತಿಯನ್ನು ಪಡೆದರು.
ರಕ್ಷಣಾ ತಂಡಗಳು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು ಮಳೆಯ ತೀವ್ರತೆ ಹಾಗೂ ಅಲ್ಲಲ್ಲಿ ಗುಡ್ಡಜರಿತದಿಂದ ರಸ್ತೆ ಸಂಪರ್ಕ ಕಡಿತಗೊಂಡು ಕಾರ್ಯಾಚರಣೆಗೆ ಅಡ್ಡಿಯಾಗಿರುವ ಬಗ್ಗೆಯು ಮಾಹಿತಿ ನೀಡಿದರು.
Be the first to comment on "ಅರ್ಚಕರ ಮನೆಗಳ ಮೇಲೆ ಕುಸಿದ ಬ್ರಹ್ಮಗಿರಿ ಬೆಟ್ಟ, ನಾಪತ್ತೆಯಾದವರಲ್ಲಿದ್ದಾರೆ ಬಂಟ್ವಾಳದ ಯುವಕ"