ಬಿ.ಸಿ.ರೋಡ್ ಸರ್ವೀಸ್ ರಸ್ತೆಯಿಂದ ಕೈಕುಂಜೆ ಸಂಪರ್ಕಿಸುವ ಭಾಗದಲ್ಲಿ ಹೊಂಡವೊಂದು ಕಳೆದ ಕೆಲ ತಿಂಗಳಿಂದ ಇದ್ದು, ಅಪಾಯವನ್ನು ಆಹ್ವಾನಿಸುತ್ತಿದೆ. ಸರ್ವೀಸ್ ರಸ್ತೆಯಲ್ಲಿ ಮಂಗಳೂರು ಬಸ್ ನಿಲ್ಲುವ ಜಾಗದಲ್ಲಿ, ಕೈಕುಂಜೆ ಕಡೆಗೆ ತಿರುಗುವ ಭಾಗದಲ್ಲಿ ಹಾಗೂ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎದುರು ಅಪಾಯಕಾರಿ ಹೊಂಡಗಳಿವೆ.
ಇದರ ಕುರಿತು ಸ್ಥಳೀಯ ಸಮಾನ ಮನಸ್ಕ ಸಂಘಟನೆಗಳ ಸದಸ್ಯರು ಹಲವು ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಸರ್ವೀಸ್ ರಸ್ತೆ ನಿರ್ಮಾಣವಾಗುವ ಸಂದರ್ಭವೇ ಹಲವು ಗೊಂದಲಗಳಿಗೆ ಕಾರಣವಾಗಿತ್ತು. ಈಗಲೂ ಮಳೆಗಾಲದಲ್ಲಿ ನೀರು ರಸ್ತೆಯಲ್ಲೇ ಹರಿದು ಸಮಸ್ಯೆಯಾಗುತ್ತದೆ. ಸರಿಯಾದ ಫುಟ್ ಪಾತ್ ಗಳು ಇನ್ನೂ ನಿರ್ಮಾಣವಾಗಿಲ್ಲ. ಇದರೊಂದಿಗೆ ಕೆಲವೆಡೆ ಅರ್ಧಕ್ಕೆ ಕಾಮಗಾರಿ ನಿಲ್ಲಿಸಿ ಮುಂದುವರಿಸಿಲ್ಲ.
ಇದೇ ಮಾರ್ಗದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳ ವಾಹನ ನಿತ್ಯ ಸಂಚರಿಸುತ್ತದೆ. ಪೊಲೀಸ್ ಸ್ಟೇಶನ್, ಮಿನಿ ವಿಧಾನಸೌಧ, ಶಾಸಕರ ಕಚೇರಿ, ತಾಲೂಕು ಪಂಚಾಯತ್ ಕಚೇರಿ, ಮೆಸ್ಕಾಂ, ತೋಟಗಾರಿಕೆ, ಕೃಷಿ, ಎಪಿಎಂಸಿ ಇಲಾಖೆಗಳು, ಕೋರ್ಟ್ ಸಹಿತ ಹಲವು ಕಚೇರಿಗಳಿಗೆ ಹೋಗಬೇಕಾದರೆ ಈ ಹೊಂಡದ ಪಕ್ಕದಲ್ಲೇ ಹೋಗಬೇಕು. ಆದರೆ ತೀರಾ ಸಣ್ಣ ಕೆಲಸವಾದ ಹೊಂಡವನ್ನು ಮುಚ್ಚಿಸಿ ರಸ್ತೆಯನ್ನು ಸುಸ್ಥಿತಿಗೆ ತರುವ ಕಾರ್ಯವನ್ನು ಸಂಬಂಧಪಟ್ಟವರು ನಡೆಸಲು ಮರೆತಿದ್ದಾರೆ. ಅದರ ಪರಿಣಾಮ ಶುಕ್ರವಾರ ಮಹಿಳೆಯೊಬ್ಬರು ದ್ವಿಚಕ್ರವಾಹನದಲ್ಲಿ ಸಂಚರಿಸುವ ಸಂದರ್ಭ ಅನುಭವಿಸಿದ್ದಾರೆ. ಸರ್ವೀಸ್ ರಸ್ತೆಯಿಂದ ಪೊಲೀಸ್ ಸ್ಟೇಶನ್ ರಸ್ತೆ ಕಡೆ ತಿರುಗುವ ವೇಳೆ ಹೊಂಡದಲ್ಲಿ ಆಯತಪ್ಪಿ ವಾಹನ ಬಿದ್ದಿದೆ. ಈಗ ಬಸ್ಸುಗಳ ಸಂಚಾರ ಕಡಿಮೆ. ಸಂಚಾರದಟ್ಟಣೆಯೂ ಇಲ್ಲ. ಹೊಂಡ ಮುಚ್ಚಲು ಇನ್ಯಾವ ಮುಹೂರ್ತ, ಘಳಿಗೆ ಬೇಕೋ ದೇವರೇ ಬಲ್ಲ.
Be the first to comment on "ಬಿ.ಸಿ.ರೋಡ್ ಸರ್ವೀಸ್ ರಸ್ತೆಯ ಸೈಡ್ ಇಂಚಿಂಚೂ ಅಪಾಯಕಾರಿ – ಬಾಯಿತೆರೆದಿದೆ ಹೊಂಡಗಳು"